೨೦೦೮ ಬಂದು ಆಗಲೇ ಆರು ತಿಂಗಳುಗಳು ಆಗುತ್ತಾ ಬಂತು. ಈ ಅರ್ಧ ವರ್ಷ ಕನ್ನಡ ಚಿತ್ರರಂಗದ ಪಾಲಿಗೆ ಹೇಗೆ? ಗೆದ್ದವರಾರು, ಸೋತವರ್ಯಾರು? ಈ ಆರು ತಿಂಗಳ ಚಿತ್ರರಂಗದ ಏಳು ಬೀಳುಗಳತ್ತ ಒಂದು ಇಣುಕು ನೋಟ!
* ಉತ್ತಮ ಆರಂಭ: ವರ್ಷದ ಆರಂಭ ಒಳ್ಳೆಯ ರೀತಿಯಲ್ಲೇ ಆಯಿತು. ಮೊದಲ ತಿಂಗಳಲ್ಲಿ ತೆರೆಕಂಡ ದರ್ಶನ್ ಅಭಿನಯದ "ಗಜ" ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ "ಗಾಳಿಪಟ" ಚಿತ್ರಗಳು ಶತದಿನೋತ್ಸವವನ್ನಾಚರಿಸಿ ಜಯಭೇರಿ ಬಾರಿಸಿದವು. ಈ ಮೂಲಕ ಯೋಗರಾಜ್ ಭಟ್ಟರಿಗೆ ಮುಂಗಾರು ಮಳೆಯ ನಂತರ ಮತ್ತೊಮ್ಮೆ ಯಶಸ್ಸಿನ ರುಚಿ ತೋರಿಸಿದ ವರ್ಷ ೨೦೦೮!. ಹಾಗೆಯೇ ಹಲವು ಚಿತ್ರಗಳ ಸೋಲಿನ ಸುಳಿಯಿಂದ ದರ್ಶನ್ ಹೊರಬರುವಂತೆ ಮಾಡಿತು ಗಜ.
* ಮಂಕಾದ ನಂತರದ ತಿಂಗಳುಗಳು: ವರ್ಷದ ಆರಂಭದಲ್ಲಿ ಇದ್ದ ಗೆಲುವಿನ ಅಲೆ ಮುಂಬರುವ ಎರಡು ಮೂರು ತಿಂಗಳಲ್ಲಿ ಅಷ್ಟಾಗಿ ಕಂಡು ಬರದೇ ಇರುವುದು ೨೦೦೮ರ ವಿಪರ್ಯಾಸ. ಉತ್ತಮ ಆರಂಭ ಕಂಡರೂ ೫೦ ದಿನ ಪೂರೈಸುವಷ್ಟರಲ್ಲಿ ಚಿತ್ರಗಳು ಸೋತು ಸೊರಗಿ ಚಿತ್ರಮಂದಿರವನ್ನು ತೆರವುಗೊಳಿಸಬೇಕಾದ ದುಸ್ಥಿತಿಗೆ ತಲುಪುವಂತೆ ಮಾಡೀತು ೨೦೦೮! ಪುನೀತ್ ರಾಜ್ ಕುಮಾರ್ ನಟನೆಯ ಬಿಂದಾಸ್ ಆ ಸಾಲಿಗೆ ಸೇರುವ ಮೊದಲ ಚಿತ್ರ. ಚಿತ್ರರಂಗದ ಜೀವಾಳವಾದ ಕರ್ಮ ಭೂಮಿ ಗಾಂಧೀ ನಗರದಲ್ಲಿ ಕೇವಲ ೫೦ ದಿನವನ್ನು ಮಾತ್ರ ಪೂರಸಿದ ಈ ಚಿತ್ರ ೨೦೦೮ ಎತ್ತ ಸಾಗುತ್ತಿದೆ ಎಂಬುದರ ಸೂಚನೆಯನ್ನು ನೀಡಿತು. ಆನಂತರ ಬಂದ ಆಕ್ಸಿಡೆಂಟ್ ಕೂಡ ಇದೇ ಹಾದಿಯಲ್ಲಿ ಸಾಗಿತು. ನಂತರದ ದಿನಗಳಲ್ಲಿ ಸತ್ಯ ಇನ್ ಲವ್ ಕೂಡ ಇದೇ ಫಲಿತಾಂಶ ನೀಡಿ ಸೊರಗಿ ಸುಣ್ಣವಾಗಿದ್ದು ಖೇದಕರ. ನಾಗಶೇಖರ್ ನಿರ್ದೇಶನದ ಅರಮನೆ ಕೂಡ ನಿರೀಕ್ಷಿತ ಯಶಸ್ಸು ಕಾಣದೇ ೫೦ ದಿನಗಳ ಸಾಧಾರಣ ಪ್ರದರ್ಶನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು.
* ಯೋಗೇಶ್‍ಗೆ ಅಚ್ಚರಿಯ ಗೆಲುವು - ದುನಿಯಾದ ಲೂಸ್ ಮಾದ ಯೋಗೇಶ್ ನಟನೆಯ "ನಂದ ನಂದಿತ" ಯಶಸ್ವಿಯಾಗಿ ೧೦೦ ದಿನ ಪೂರೈಸಿ ವರ್ಷದ ನಿಜವಾದ ಅಚ್ಚರಿ!
* ಸುದೀಪ್, ದರ್ಶನ್ ಅದೃಷ್ಟವಂತರು: ದರ್ಶನ್‍ರ ಗಜ ಭಾರೀ ಗೆಲುವು ಕಂಡರೆ ಇಂದ್ರ ಕೂಡ ಗೆಲುವಿನ ಹಾದಿಯಲ್ಲಿದೆ. ಸುದೀಪ್ ನಟನೆಯ ಗೂಳಿ ಸಾಧಾರಣ ಯಶಸ್ಸು ಕಂಡಿತಾದರೂ ಮುಸ್ಸಂಜೆ ಮಾತು ಗೆಲುವಿನ ಹಾದಿಯಲ್ಲಿದೆ. ಕಾಮಣ್ಣನ ಮಕ್ಕಳ ಬಗ್ಗೆಯೂ ಒಳ್ಳೆಯ ಮಾತು ಕೇಳಿ ಬರುತ್ತಿದೆ.
* ಶಿವರಾಜ್ ಕುಮಾರ್ ಪಾಲಿಕೆ ಮತ್ತೊಂದು ಕಹಿ ವರ್ಷ: ೨೦೦೭ ರಲ್ಲಿ ತಾಯಿಯ ಮಡಿಲು, ಸಂತ, ಗಂಡನ ಮನೆ, ಲವ ಕುಶ ಚಿತ್ರಗಳ ಸೋಲಿನಿಂದ ಕಂಗೆಟ್ಟಿದ್ದ ಶಿವಣ್ಣ ಪಾಲಿಗೆ ೨೦೦೮ರ ಪೂರ್ವಾರ್ಧ ಮತ್ತಷ್ಟು ನಿರಾಶೆಯನ್ನುಂಟು ಮಾಡಿತು. ಭಾರೀ ನಿರೀಕ್ಷೆಯ ಸತ್ಯ ಇನ್ ಲವ್ ನಿರೀಕ್ಷಿತ ಯಶಸ್ಸನ್ನು ಪಡೆಯುವಲ್ಲಿ ವಿಫಲವಾದರೆ ಬಂಧು ಬಳಗ ಬಂದ ಮೂರೇ ವಾರಗಳಲ್ಲಿ ಚಿತ್ರಮಂದಿರಗಳಿಂದ ಹೊರ ನಡೆದು ಇನ್ನಿಲ್ಲದಂತೆ ನೆಲಕಚ್ಚಿತು.
* ಪುನೀತ್ ಪಾಲಿಗೂ ನಿರಾಶಾದಾಯಕ: ೨೦೦೮ರ ಪೂರ್ವಾರ್ಧ ಪುನೀತ್ ರಾಜ್ ಕುಮಾರ್ ಪಾಲಿಗೂ ಅಂತಹ ಯಶಸ್ಸನ್ನೇನೂ ತಂದು ಕೊಡಲಿಲ್ಲ. ಬಿಂದಾಸ್ ನಿರೀಕ್ಷಿತ ಗೆಲುವು ಕಾಣುವಲ್ಲಿ ವಿಫಲವಾಗಿದ್ದು ಇದಕ್ಕೆ ಕಾರಣ. ಉತ್ತರಾರ್ಧದಲ್ಲಿ ಪುನೀತ್ ಗೆದ್ದರೆ ಗೆಲ್ಲಬೇಕು. ಕಾರಣ ಯೋಗರಾಜ್ ಭಟ್ಟರಂತಹ ಸ್ಟಾರ್ ನಿರ್ದೇಶಕರ ಸಾಥ್ ಸಿಕ್ಕಿದೆ. ಜೊತೆಗೆ ಪ್ರೇಮ್ ಗರಡಿಯಲ್ಲಿ "ರಾಜ್" ಆಗಿಯೂ ನಟಿಸುತ್ತಿದಾರೆ.
* ಗಣೇಶ್ ಪಾಲಿಗೆ ಸ್ವಲ್ಪ ಸಿಹಿ - ಸ್ವಲ್ಪ ಕಹಿ: ಆರಂಭದಲ್ಲಿ "ಗಾಳಿಪಟ"ದ ಯಶಸ್ಸು ಸಿಹಿಯಾದರೆ "ಅರಮನೆ"ಯಲ್ಲಿ ನಿರೀಕ್ಷಿತ ಯಶಸ್ಸು ಸಿಗದೇ ಸ್ವಲ್ಪ ಕಹಿ ಗಣೇಶನ ಪಾಲಿಗೆ. ಆದರೆ ಉತ್ತರಾರ್ಧ ಗಣೇಶನ ಪಾಲಿಗೂ ವರವಾಗಬಹುದು. ಹೊಸ ಇಮೇಜಿನೊಂದಿಗೆ ನಟಿಸುತ್ತಿರುವ ಬೊಂಬಾಟ್, ಸಂಗಮ, ಸರ್ಕಸ್ ಗಣೇಶನ ಬರಲಿರುವ ಚಿತ್ರಗಳು.
* ವಿಜಯ್ ನಟಿಸಿದ ಅವ್ವ ನೆಲ ಕಚ್ಚಿತು. ಆದರೆ ವಿಜಯ್ ಕೈಲಿ ಸ್ಮಂ ಬಾಲ, ಜಂಗ್ಲೀ ಹೀಗೆ ಗೆಲ್ಲಲರ್ಹವಾದ ಕೆಲ ಚಿತ್ರಗಳಿವೆ.
* ಗಂಗೆ ಬಾರೇ ತುಂಗೆ ಬಾರೇ ಚಿತ್ರ ಸೋಲುವ ಮೂಲಕ ಪ್ರಜ್ವಲ್ ದೇವರಾಜ್‍ಗೂ ಭಾರೀ ನಿರಾಸೆ.
* ನಿರ್ದೇಶಕ ಸೂರಿ ಪಾಲಿಗೂ ಪೂರ್ವಾರ್ಧ ಕಹಿ ಕಹಿ. ಇಂತಿ ನಿನ್ನ ಪ್ರೀತಿಯ ಚಿತ್ರ ಗೆಲ್ಲಲಿಲ್ಲ. ಆದರೆ ನಾಯಕ ಕಿಟ್ಟಿಗೆ ಇದರ ಬಿಸಿ ತಟ್ಟಿದ ಹಾಗೆ ಕಾಣುತ್ತಿಲ್ಲ. ಒಂದಷ್ಟು ಚಿತ್ರಗಳು ಆತನ ಕೈ ಸೇರಿವೆ.
ಒಟ್ಟಿನಲ್ಲಿ ೨೦೦೮ ಉತ್ತಮ ಆರಂಭ ಗೊಂಡರೂ ನಂತರದ ದಿನಗಳಲ್ಲಿ ಹಿರಿ ಕಿರಿಯರೆಂಬ ಭೇದವಿಲ್ಲದೇ ಎಲ್ಲರಿಗೂ ಸೋಲು-ಗೆಲುವಿನ ರುಚಿ ಕಾಣಿಸಿದೆ.. ಇವಿಷ್ಟು ಪೂರ್ವಾರ್ಧದ ಕಥೆಯಾದರೆ, ಉತ್ತರಾರ್ಧ ಹೇಗಿರುತ್ತದೇ ನೋಡೋಣ.

