Kamannana Makkalu - A Family Entertainer !

akumar's picture
Tagged:  

ಕಾಮಣ್ಣನ ಮಕ್ಕಳು ಚಿತ್ರದಲ್ಲಿ ಏನಿದೆ? ಇದು ಯಾವ ವರ್ಗಕ್ಕೆ ಸೇರಿದ ಚಿತ್ರ? ಉತ್ತರ ಸ್ವಲ್ಪ ಕಷ್ಟ... ಯಾಕೆಂದ್ರೆ ಇದ್ರಲ್ಲಿ ಎಲ್ಲಾನೂ ಇದೆ. ಕಾಮಿಡಿ ಇದೆ, ಸಾಕಷ್ಟು ಹೊಡೆದಾಟಗಳಿವೆ, ಸೆಂಟಿಮೆಂಟ್‍ಗಂತೂ ಕೊರತೇನೇ ಇಲ್ಲ. ಚಿತ್ರದಲ್ಲಿ ಕಾಮಣ್ಣನಾಗಿ ದೊಡ್ಡಣ್ಣನವರ ಅಮೋಘ ಅಭಿನಯವಿದೆ. ಜೊತೆಗೆ ಸುದೀಪ್ ಮತ್ತು ರಾಕ್ ಲೈನ್ ವೆಂಕಟೇಶ್ ಪೈಪೋಟಿಯಲ್ಲಿ ನಟಿಸಿದ್ದಾರೆ. ಸಾಧು ಕೋಕಿಲಾ ಚೆನ್ನಾಗಿ ನಗಿಸುತ್ತಾರೆ.

ಇದು ಕಾಮಣ್ಣ (ದೊಡ್ಡಣ್ಣ) ಮತ್ತು ಆತನ ಇಬ್ಬರು ಸಾಕು ಮಕ್ಕಳಾದ ರಾಮ (ಸುದೀಪ್) ಮತ್ತು ಕೃಷ್ಣರ (ರಾಕ್ ಲೈನ್ ವೆಂಕಟೇಶ್) ಕಥೆ. ಅಪಘಾತದಲ್ಲಿ ಹೆಂಡತಿ ಮತ್ತು ಮಕ್ಕಳನ್ನು ಕಳೆದುಕೊಂಡು ಸಾಯಲು ಹೊರಟಿದ್ದ ಕಾಮಣ್ಣನನ್ನು ರಾಮ ಮತ್ತು ಕೃಷ್ಣ ಎಂಬಿಬ್ಬರು ಅನಾಥ ಹುಡುಗರು ಉಳಿಸಿ ಒಟ್ಟಿಗೇ ತಂದೆ ಮಕ್ಕಳಂತೆ ಬದುಕುತ್ತಾರೆ. ಕಳ್ಳತನವೇ ಇವರ ವೃತ್ತಿ! ಆದರೆ ಅದೊಂದು ದಿನ ಜ್ಞಾನೋದಯವಾಗಿ ಕಳ್ಳತನವನ್ನು ಬಿಟ್ಟು ಬಿಡಲು ನಿರ್ಧರಿಸುತ್ತಾರೆ. ಇವರಿಗಿರುವ ಒಂದೇ ಒಂದು ಆಸ್ತಿ ಎಂದರೆ ಒಂದು ಡಕೋಟಾ ಲಾರಿ. ಆ ಲಾರಿಯೊಂದಿಗೆ ಊರು ಬಿಟ್ಟು ಪರ ಊರೊಂದನ್ನು ಸೇರುತ್ತಾರೆ. ಅಲ್ಲಿ ಊರಿನ ಪಟೇಲರ ಕುಟುಂಬದಿಂದ ಕಷ್ಟಕ್ಕೊಳಗಾಗಿರುವ ರಮೇಶ್ ಭಟ್ ಕುಟುಂಬದ ಪರಿಚಯವಾಗುತ್ತದೆ. ಜೊತೆಗೆ ಅವರ ಮಗಳು ಕನಕಳನ್ನು ಕೃಷ್ಣ ಇಷ್ಟಪಡುತ್ತಾನೆ. ತಮ್ಮ ಲಾರಿ ಮಾರಿ ಪಟೇಲರಲ್ಲಿ ಆ ಕುಟುಂಬ ಮಾಡಿದ್ದ ಸಾಲವನ್ನು ಕಾಮಣ್ಣನ ಮಕ್ಕಳು ತೀರಿಸುತ್ತಾರೆ. ಕನಕಳ ಜೊತೆ ಮದುವೆಯ ಪ್ರಸ್ತಾಪವೂ ನಡೆಯುತ್ತದೆ. ಆದರೆ ಈ ಮದುವೆಗೆ ಕನಕಳ ಅಪ್ಪ ಒಪ್ಪುವುದಿಲ್ಲ. ಕಾರಣ ಪಟೇಲರ ಮಗಳು ಗಾಯತ್ರಿಯ (ವೈಭವಿ / ದೀಪು) ಮದುವೆ ನಿಂತು ಹೋಗಿ ಆಕೆ ಒಂಟಿಯಾಗಿರಲು ಕನಕಳ ಅಣ್ಣನೇ ಕಾರಣ ಎಂದು ಪಟೇಲರ ನಂಬಿಕೆ. ಅದಕ್ಕೊಂದಿಷ್ಟು ಫ್ಲಾಶ್ ಬ್ಯಾಕ್ ಕಥೆಗಳು! ಹಾಗಾಗಿ ತಮ್ಮ ಮಗಳಿಗಿಲ್ಲದ ಮದುವೆ ಭಾಗ್ಯ ನಿಮ್ಮ ಮಗಳಿಗೂ ಸಿಗಬಾರದು, ಕನಕಳನ್ನು ಯಾರೇ ಮದುವೆ ಆದರೂ ಅವರನ್ನು ಬದುಕಲು ಬಿಡುವುದಿಲ್ಲ ಎಂಬುದು ಪಟೇಲರ ಬೆದರಿಕೆ. ಮುಂದೆ??? ನಮ್ಮ ಕಿಚ್ಚ ಹಿಂದೆ ಮುಂದೆ ನೋಡದೇ ನೇರವಾಗಿ ಹೋಗಿ ಪಟೇಲರ ಮಗಳ ಕೊರಳಿಗೆ ತಾಳಿ ಕಟ್ಟಿ ಬಂದು ಬಿಡುತ್ತಾನೆ.. ಆಮೇಲೇನಾಗುತ್ತೆ??? ನೀವೇ ತೆರೆಯ ಮೇಲೆ ನೋಡಿ...

ಚಿತ್ರದ ಉತ್ತಮ ಅಂಶಗಳು:
* ದೊಡ್ಡಣ್ಣ, ಸುದೀಪ್, ವೆಂಕಟೇಶ್ ಉತ್ತಮ ಅಭಿನಯ.
* "ಹುಲಿ" ಪಾತ್ರದಲ್ಲಿ "ನಟ ಭಯಂಕರ" ಸಾಧು ಕೋಕಿಲ ಮನೋಜ್ಞ ಅಭಿನಯ.
* ಅಲ್ಲಲ್ಲಿ ಬಂದು ಕಚಗುಳಿಯಿಡುವ ಹಾಸ್ಯ ಸನ್ನಿವೇಶಗಳು
* ಒಂದೆರಡು ಭಾವನಾತ್ಮಕ ಸೆಂತಿಮೆಂಟಲ್ ದೃಷ್ಯಗಳು.
* ವೇಗದ ನಿರೂಪಣೆಯ ಬೋರ್ ಹೊಡೆಸದ ಚಿತ್ರದ ಮೊದಲಾರ್ಧ.

ಚಿತ್ರದಲ್ಲಿ ಅಷ್ಟೊಂದು ಹಿಡಿಸದ ಅಂಶಗಳು:
* ಸ್ವಲ್ಪ ಎಳೆದಂತೆ, ಅಲ್ಲಲ್ಲಿ ಸ್ವಲ್ಪ ಸ್ವಲ್ಪ ಬೋರ್ ಹೊಡೆಸಿ, ಕೆಲವೆಡೆಗಳಲ್ಲಿ ನಿಧಾನಗತಿಯಲ್ಲಿ ಸಾಗುವ ಚಿತ್ರದ ಎರಡನೇ ಭಾಗ.
* ಹಾಡುಗಳು, ಹಾಡುಗಳು, ಹಾಡುಗಳು - ಚಿತ್ರದ ಕಪ್ಪು ಚುಕ್ಕೆಗಳು. ಒಂದು ಹಾಡೂ ಅತ್ಯುತ್ತಮವೆಂಬಂತಿಲ್ಲ. ಹಾಡುಗಳ ಸಂಖ್ಯೆಯೂ ಜಾಸ್ತಿಯಾಯಿತು. ವಿದ್ಯಾಸಾಗರ್ ತಮಿಳು ಆವೃತ್ತಿಯ ಟ್ಯೂನನ್ನೇ ಕೆಲವು
ಹಾಡುಗಳಿಗೆ ಉಳಿಸಿಕೊಂಡಿದ್ದಾರೆ.
* ದ್ವಿತೀಯಾರ್ಧದಲ್ಲಿ ಚಿತ್ರಕಥೆ / ನಿರೂಪಣೆಯಲ್ಲಿ ಚಿ. ಗುರುದತ್ ಇನ್ನೊಂದಿಷ್ಟು ಸುಧಾರಣೆ ಮಾಡಬಹುದಿತ್ತು.
* ಒಂದೇ ಹಾಡಿನಲ್ಲಿ ಬಂದು ಹೋಗುವ ಪೂಜಾ ಗಾಂಧಿ ಮೇಕಪ್, ಕಾಸ್ಟ್ಯೂಮ್‍ಗಳು

ಒಟ್ಟಿನಲ್ಲಿ ಇದೊಂದು ಕೌಟುಂಬಿಕ ಚಿತ್ರ. ಹಾಗಂತ ಇದೊಂದು ಅದ್ಭುತ ಚಿತ್ರವೇನೂ ಅಲ್ಲ... ಆದರೂ ಒಂದು ಸಲ ನೋಡ್ಕೊಂಡು ಬರಲೇನೂ ಅಡ್ಡಿ ಇಲ್ಲ. ಕೊನೇ ಪಕ್ಷ ಸುದೀಪ್, ದೊಡ್ಡಣ್ಣ ಮತ್ತು ಸಾದು ಕೋಕಿಲಾರಿಗಾಗಿ.

Over All - 7/10