ಟೇಬಲ್ ಮೇಲೆ ಹೊಸ ಸಿನಿಮಾ ಒಂದರ ಪತ್ರಿಕಾಗೋಷ್ಟಿಯ ಇನ್ವಿಟೇಷನ್ ಇತ್ತು...ಡೇಟ್ ನೋಡಿದೆ... ಅವತ್ತಿಂದೇ. ರಜದ ಮೇಲೆ ಬೆಂಗ್ಳೂರ್ ಗೆ ಬಂದಿದ್ದೆ.. ಮಾಡಕ್ಕೆ ಅಂಥಾ ಕೆಲಸ ಏನೂ ಇರ್ಲಿಲ್ಲ.. ನಾನೂ ಇದುವರೆಗೂ ಯಾವ್ ಪತ್ರಿಕಾಗೋಷ್ಟಿಗೂ ಹೋಗಿರ್ಲಿಲ್ಲ..ಸೋ ಹೋಗಿ ನೋಡಣ ಅಂದ್ಕೊಂಡೆ... ಸರಿ ಪತ್ರಿಕಾಗೋಷ್ಟಿಯ ಇನ್ವಿಟೇಷನ್ ಹಿಡ್ಕೊಂಡು ಹೊರಟೆ. ಈ ಬೆಂಗ್ಳೂರ್ ಟ್ರ್ಯಾಫಿಕ್ ಚಕ್ರವ್ಯೂಹ ಭೇಧಿಸಿ ಅಲ್ಲಿಗೆ ಹೋಗೋ ಅಷ್ಟೊತ್ತಿಗೆ ಒಂದು ಹದಿನೈದು ನಿಮಿಷ ಲೇಟ್ ಆಗಿತ್ತು. ಆಗ್ಲೇ ಒಂದಿಷ್ಟು ಜನ ಪತ್ರಕರ್ತರೆಲ್ಲ ಬಂದಾಗಿತ್ತು. ಇನ್ನೂ ಕೆಲವ್ರು ಬರ್ತಾ ಇದ್ರು. ಸರಿ ನಾನೂ ಒಂದು ಜಾಗ ಹುಡುಕ್ಕೊಂಡು ಕೂತ್ಕೊಂಡೆ. ಸಿನಿಮಾದವ್ರು ಅಷ್ಟೊಂದು ಜನ ಇದ್ದಂಗೆ ಕಾಣ್ಲಿಲ್ಲ. ಯಾರೋ ಒಬ್ರು ಎದ್ರುಗಡೆ ಇದ್ದಿದ್ ಸಣ್ಣ ಸ್ಟೇಜ್ ಮೇಲೆ ಕೂತಿದ್ರು. ನೋಡಕ್ಕೆ ಪ್ರೊಡ್ಯೂಸರ್ ತರ ಇದ್ರು. ಅವ್ರ್ ಹಿಂದೆ ಗನ್ ಹಿಡ್ಕೊಂಡು ಇಬ್ರು ಬಾಡಿಗಾರ್ಡ್ಸ್ ಇದ್ರು. ಇದೇನಪ್ಪಾ ಹಿಂದಿ ಸಿನಿಮಾದವ್ರಿಗೆ ಅಂಡರ್ ವರ್ಲ್ಡ್ ಅವರು ಧಮ್ಕಿ ಹಾಕೋ ಹಾಗೆ ನಮ್ ಕನ್ನಡ ಸಿನಿಮಾದವ್ರಿಗೂ ಧಮ್ಕಿಗಳು ಬರಕ್ಕೆ ಶುರು ಆಯ್ತಾ ಅಂತ ಡೌಟ್ ಆಯ್ತು. ಸರಿ ಇನ್ನೇನು ಪತ್ರಿಕಾಗೋಷ್ಠಿ ಶುರು ಆಗತ್ತಲ್ಲಾ ಗೊತ್ತಾಗತ್ತೆ ಬಿಡು ಅಂಥ ಸುಮ್ನಾದೆ. ಪತ್ರಕರ್ತರೆಲ್ಲಾ (ಪ) ಬಂದ್ರು. ಪ್ರೊಡ್ಯೂಸರ್ (ಪ್ರೊ) ಮಾತಾಡಕ್ಕೆ ರೆಡಿ ಆದ್ರು. ಹೆಸ್ರು ಅದೆಂಥದೋ ರೆಡ್ಡಿ ಅಂತಿತ್ತು... ತೆಲುಗು ಮಿಕ್ಸ್ ಕನ್ನಡದಲ್ಲೇ ಮಾತು...
ಪ್ರೊ : ಬಂದಿರೋ ಪತ್ರಕರ್ತರಿಗೆಲ್ಲ ವೆಲ್ಕಮ್ಮು ... ನನಗು ಸುತ್ತಿ ಬಳ್ಸಿ ಮಾತಾಡಕ್ಕೆ ಬರಲ್ಲ ಸೋ ಸೀದಾ ಟಾಪಿಕ್ ಶುರು ಮಾಡ್ತಿನು. ಇದು ಎಲ್ಲಾ ಹೊಸುಬ್ರೇ ಸೇರ್ಕಂಡು ಮಾಡ್ತಿರೋ ಫಿಲಿಮ್ಮು ಸಾ.. ಡೈರೆಕ್ಟ್ರು ಬಿಟ್ಟು ಎಲ್ಲಾ ಫಸ್ಟ್ ಟೈಮು.
ಪ : ಸರಿ, ಇದೇನು ಬಾಡಿಗಾರ್ಡ್ಸ್ ಗನ್ ಹಿಡ್ಕೊಂಡು ನಿಂತಿದಾರೆ.. ಆಗ್ಲೆ ಅಂಡರ್ ವರ್ಲ್ಡ್ ಅವ್ರಿಂದ ಧಮ್ಕಿ ಏನಾದ್ರು ಶುರು ಆಗಿದಿಯಾ?
ಪ್ರೊ : ಅಯ್ಯಯ್ಯೋ ಇಲ್ಲಾ ಸಾರ್...ನಾದಿ ಗಣಿ ಬಿಜ್ನಸ್ಸು...ಈಗ ಗಣಿ ಧಣಿಗಳೆಲ್ಲಾ ಹಿಂಗೆ ಬಾಡಿಗಾರ್ಡ್ಸ್ ಇಟ್ಕೊಂಡಿರ್ತಾರು.. ಸುಮ್ನೆ ಬಿಲ್ಟಪ್ಪು...
ಪ್ರೊ : ಇವ್ರು ನನ್ ಫ್ರೆಂಡು.. ಇವ್ರೇ ಕೋ ಪ್ರೊಡ್ಯೂಸರ್ರು
ಅಂತ ಪಕ್ಕ ಕೂತೋರ್ನು ಪರಿಚಯ ಮಾಡ್ಕೊಟ್ಟ್ರು. ಅವ್ರೇ ಕಂಟಿನ್ಯೂ ಮಾಡಿದ್ರು...
ಪ್ರೊ : ಸಾ ಅದೇನಾಯ್ತು ಅಂದ್ರೆ ಬಿಜ್ನಸ್ ಸ್ವಲ್ಪ ನುಕ್ಸಾನ್ ಆಗೋಯ್ತು... ಅದಕ್ಕೆ ಇಲ್ಲಿ ಫ್ರಾಫಿಟ್ ಅಗತ್ತೆ ಅಂದ್ರು ನಮ್ ಫ್ರೆಂಡು..ಟ್ರೈ ಮಾಡಣ ಅಂಥ ಶುರು ಮಾಡಿದೀವಿ ಸಾ... ಡೈರೆಕ್ಟ್ರಿಗೆ ಅಶೋಕ ಹೋಟೆಲ್ಲಲ್ಲಿ ರೂಂ ಮಾಡ್ಕೊಟ್ಟು ಕಥೆ ಮಾಡ್ಸಿದೀವಿ (ಏಸಿ ರೂಮು ಅಂಥ ಸೇರ್ಸಿದ್ರು ಕೋ ಪ್ರೊಡ್ಯೂಸರ್)... ಅವರು "ಫ್ರೆಶ್ ಕಾನ್ಸೆಪ್ಟು ಮಾಡಿದಾರು... ಹೊಸ ತರ ಕಥೆ ಮಾಡಿದಾರು"
ಸಧ್ಯ ಇದೊಂದು ಬಾಕಿ ಇತ್ತು ನೋಡಿ... ಗಣಿ ಧಣಿಗಳೂ ಎಂಟ್ರಿ ಕೊಟ್ಟು ಇಂಡಸ್ಟ್ರಿ ಪಾವನವಾಯ್ತು ಅನ್ಕೊಂಡೆ. ಪತ್ರಕರ್ತರು ಪ್ರಶ್ನೆಗಳ ಫೈರಿಂಗ್ ಶುರು ಮಾಡಿದ್ರು...
ಪ : ದುಡ್ ಮಾಡಕ್ಕೆ ಬಂದಿರದು ಅಂಥ ಓಪನ್ನಾಗೇ ಹೇಳ್ತಿದೀರ... ಹೋಗ್ಲಿಬಿಡಿ... ಲಾಸ್ ಆಯ್ತು ಅಂತೀರಾ ಇದಕ್ಕೆ ದುಡ್ಡು ಎಲ್ಲಿಂದ ಹಾಕ್ತೀರ?
ಪ್ರೊ : ನೇನು ಎಲ್ಲಾ ಓಪನ್ನೇ ಸಾ... ಇದಕ್ಕೆ ಹಾಕ್ತಿರದು ಎಲ್ಲಾ ಬ್ಲ್ಯಾಕ್ ಮನಿ ಸಾ.. ಬಟ್ ಇದನ್ನ ಎಲ್ಲೂ ಬರೀಬೇಡಿ.. ನಾದಿ ರಿಕ್ವೆಸ್ಟು..
ಪ : ಸರಿ ಸರಿ ಬಿಡಿ ಅದನ್ನೆಲ್ಲಾ ಕಟ್ಕೊಂಡು ನಮಿಗೇನು... ಸರಿ ಡೈರೆಕ್ಟ್ರು ಹೀರೋ ಹೀರೋಯಿನ್ ಎಲ್ಲಾ ಎಲ್ಲಿ? ಎಲ್ಲಾ ಹೊಸುಬ್ರು ಟೈಮಿಗೆ ಕರೆಕ್ಟಾಗಿ ಬರದಲ್ವ?
ಪ್ರೊ : ಎಲ್ಲಾ ಬಂದಿದಾರೆ ಸಾ... ಬಟ್ ಸಿನಿಮಾ ರಿಲೀಸ್ ಆಗೋ ತಂಕ ಅವ್ರು ಯಾರು ಅಂತ ಯಾರಿಗೂ ಹೇಳಲ್ಲ... ತೋರಿಸೋದಿಲ್ಲ... ಈಗ ಅದೇ ಅಲ್ವಾ ಸಾ ಟ್ರೆಂಡು.. ಮೊನ್ನೆ ಒಂದ್ ಸಿನಿಮಾದವ್ರು ಹೀರೋ ಹೀರೋಯಿನ್ ಮಾತ್ರ ಸೀಕ್ರೆಟ್ ಆಗಿ ಇಟ್ಟಿದ್ರು... ನಾವು ಎಲ್ಲಾರ್ನು ಸೀಕ್ರೆಟ್ ಆಗಿಟ್ಟಿದೀವಿ.. ಇದೆಲ್ಲಾ ನಿಮ್ಗೆ ಹೇಳ್ಬೇಕಲ್ಲ ಅದಕ್ಕೆ ನೇನು ಬಂದಿದಿನಿ.. ಇಲ್ಲಾ ಅಂದ್ರೆ ನೇನೂ ಬರ್ತಿರ್ಲಿಲ್ಲ...
ಪ : ರೀ ಅವ್ರು ಮಾಡಿದ್ ಸಿನಿಮಾ ಹಂಗಿತ್ತು ರಿ... ಅದು ಕಥೆಗೆ ಪೂರಕವಾಗಿತ್ತು ಅದಕ್ಕೆ ಹಂಗ್ ಮಾಡಿದ್ರು... ನಿಮ್ ತರ ಅಲ್ಲ... ಹೀಗಿದ್ರೆ ನಮ್ಮನ್ನ್ಯಾಕ್ರಿ ಕರ್ಸಿದೀರ? ಇದೆಲ್ಲಾ ಬಿಟ್ಟು ಕರೀರಿ ಅವ್ರನ್ನ... ಇಲ್ಲಾ ಅಂದ್ರೆ ಚೆನಾಗಿರಲ್ಲ ನೋಡಿ...
ಹಿರಿಯ ಪತ್ರಕರ್ತರೆಲ್ಲಾ ಗಲಾಟೆ ಶುರು ಮಾಡಿದ್ ನೋಡಿ ಬೇರೆ ದಾರಿ ಇಲ್ದೇ ಡೈರೆಕ್ಟ್ರು (ಡೈ), ಹೀರೋ ಮತ್ತು ಹೀರೋಯಿನ್ ನ ಕರೆದ್ರು... ಅವ್ರೆಲ್ಲಾ ಬಂದು ಕೂತ್ಮೇಲೆ ಡೈರೆಕ್ಟ್ರಿಂದ ಶುರು ಆಯ್ತು ಮತ್ತೊಮ್ಮೆ ಪ್ರಶ್ನೋತ್ತರ ರೌಂಡ್ ಟು...
ಡೈ : ನನ್ ಹೆಸ್ರು ಸೂರ್ಯಚಂದ್ರ ಸಾರ್...
ಪ : ಆ... ಭಲಾ ಭಲಾ, ಹೆಸ್ರು ತುಂಬಾ ಡಿಫರೆಂಟ್ ಆಗಿದೆ...ಸೂರ್ಯನಾರಾಯಣ ಕೇಳಿದ್ವಿ, ಚಂದ್ರಶೇಕರ ಕೇಳಿದ್ವಿ.. ಸೂರ್ಯಚಂದ್ರ ಫಸ್ಟ್ ಟೈಮ್ ಕೇಳ್ತಿರದು..
ಡೈ :ಅದು ನನ್ ಒರಿಜಿನಲ್ ಹೆಸ್ರಲ್ಲ ಸಾರ್.. ಈ ಹೀರೋ ಹೀರೋಯಿನ್ ಎಲ್ಲಾ ಸಿನಿಮಾಕ್ಕೋಸ್ಕರ ಹೆಸ್ರು ಚೇಂಜ್ ಮಾಡ್ಕೊತಾರಲ್ಲ ಸಾರ್.. ಹಂಗೆ ನಾನೂ ಯಾಕ್ ಮಾಡ್ಕೊಬಾರ್ದು ಅಂತ ಚೇಂಜ್ ಮಾಡ್ಕೊಂಡಿದಿನಿ ಸಾರ್... ಹೊಸ ಟ್ರೆಂಡು ಸಾರ್... ಒಂತರಾ ನಾನು ಸೂರ್ಯಂತರ ಹಾಟು... ಚಂದ್ರಂತರ ಕೂಲು... ಹೆಂಗಿದೆ ಸಾರ್?
ವಾಹ್ ವಾಹ್ ಡಿಫರೆಂಟ್ ತಿಂಕಿಂಗು... ನಮ್ಗೂ ಇಂತವ್ರೆ ಬೇಕು...ಏನ್ ಬೇಕಾದ್ರು ಇಟ್ಕೊಳ್ಳಿ ನಮ್ ಅಪ್ಪಂದ್ ಮನೇದು ಏನ್ ಹೋಗ್ಬೇಕು ಅಂತ ಹೇಳಣಾ ಅನ್ನಿಸ್ತು.. ಹೆಂಗೋ ಕಂಟ್ರೋಲ್ ಮಾಡ್ಕಂಡು ಎಲ್ಲಾ ಸುಮ್ನಾದ್ವಿ...
ಪ : ಡೈರೆಕ್ಟ್ರೇ ನಿಮ್ ಬಗ್ಗೆ, ಕಥೆ ಬಗ್ಗೆ ಸ್ವಲ್ಪ ಹೇಳಿ...ಇದೇನು ಫಸ್ಟ್ ಸಿನಿಮಾನ ನಿಮ್ಗೆ?
ಡೈ : ಇಲ್ಲಾ ಸಾರ್ ಇದಕ್ಕೂ ಮುಂಚೆ ಬಹಳ ಜನದತ್ರ ಅಸ್ಸಿಸ್ಟೆಂಟ್ ಆಗಿ ಕೆಲ್ಸ ಮಾಡಿದೀನಿ... ಒಂದ್ ಸಿನಿಮಾ ಹಂಡ್ರೆಡ್ ಡೇಸ್ ಓಡಿದೆ ಸಾರ್...
ಒಂದಿಷ್ಟು ಹೆಸ್ರು ಹೇಳಿ ಇಂತವ್ರುಗೆಲ್ಲಾ ಅಸ್ಸಿಸ್ಟೆಂಟ್ ಆಗಿದ್ದೆ ಅಂದ ಪುಣ್ಯಾತ್ಮ... ಅದ್ರಲ್ಲಿ ಒಬ್ರು ಹೆಸ್ರುನ್ನೂ ನಾವ್ಯಾರೂ ಕೇಳೇಯಿರ್ಲಿಲ್ಲ..
ಪ : ಅದ್ಯಾವ್ ಹೆಸ್ರೂ ನಾವ್ ಕೇಳೇ ಇಲ್ಲ... ಹೋಗ್ಲಿ ಬಿಡಿ.. ಅದ್ಯಾವ್ದು ಹಂಡ್ರೆಡ್ ಡೇಸ್ ಸಿನಿಮಾ?
ಡೈ : ಅದೇ ಸಾರ್.. "ಏನೋ ಮೋಹ ಏಕೋ ದಾಹ" ಅಂತ... ಅದಾದ್ಮೇಲೆ...
ಅವ್ರ ಮಾತನ್ನ ಅರ್ಧಕ್ಕೇ ಕಟ್ ಮಾಡಿದ್ರು ಹಿರಿಯ ಪತ್ರಕರ್ತರೊಬ್ಬರು...
ಪ : ಸರಿ ಸರಿ ಬಿಡಿ ನಮ್ಗೊಂದು ಐಡಿಯಾ ಬಂತು,,, ಆಮೇಲಿಂದೆಲ್ಲಾ ಬೇಡ... ಕಥೆ ಬಗ್ಗೆ ಹೇಳಿ...
ಡೈ : ಸಾರ್ ಕಥೆ ಬಂದು ತುಂಬಾ ಫ್ರೆಶ್ ಕಾನ್ಸೆಪ್ಟು ಸಾರ್... ಲೇಟೆಸ್ಟ್ ಕಥೆ ಸಾರ್.. ಒಂದು ವರ್ಷ ಕೂತ್ಕೊಂಡು ಮಾಡಿರೋ ಕಥೆ ಸಾರ್... ಹೊಸಾ ತರ ಕಥೆ ಸಾರ್..
ಪ : ಗುಡ್ ಗುಡ್... ಕಥೆ ರಿಮೇಕೋ ಸ್ವಮೇಕೋ?
ಡೈ : ಅಯ್ಯಯ್ಯೋ ಸ್ವಮೇಕ್ ಸಾರ್.. ಫುಲ್ ಹೊಸಾ ಕಥೆ ಸಾರ್... ಲವ್ವು, ಸಸ್ಪೆನ್ಸು, ರೌಡಿಸಮ್, ಮದರ್ ಸೆಂಟಿಮೆಂಟ್ ಎಮೋಶನ್, ಆಕ್ಷನ್ ಎಲ್ಲಾ ಇದೆ ಸಾರ್.
ಪ : ಓಕೆ ಓಕೆ ಚಿತ್ರಕ್ಕೆ ಹೆಸ್ರೇನಾದ್ರು ಇಟ್ಟಿದೀರೋ?
ಡೈ : ಹೂಂ ಸಾರ್.. ಚಿತ್ರದ ಹೆಸರು "ಚಿತ್ರಾನ್ನ ಚಿತ್ರಾನ್ನ"
ಪ : ಅದೇನು? ಈ ಹಿಟ್ ಹಾಡುಗಳಿಂದ ಒಂದ್ ಲೈನ್ ತೆಗ್ದು ಹೆಸ್ರಿಡ್ತಾರಲ್ಲ ಹಂಗಾ?
ಡೈ : ಅದೂ ಒಂದು ಕಾರಣ... ಬಟ್ ಮೈನ್ ಆಗಿ ಬೇರೆ ಕಾರಣ ಸಾರ್... ಆಗ್ಲೆ ಹೇಳಿದ್ನಲ್ಲ ಸಾರ್..ಒಂದ್ ವರ್ಷ ಕೂತ್ಕೊಂಡು ಮಾಡಿದ್ ಕಥೆ ಸರ್ ಇದು...ನೂರು, ನೂರೈವತ್ತು ಸೀಡಿ, ಡಿವಿಡಿ ನೋಡಿ ಮಾಡಿರೊ ಕಥೆ ಸಾರ್ ಇದು.. ಎಲ್ಲಾ ಮಿಕ್ಸ್ ಮಾಡಿ ಮಾಡಿರೋದು ನೋಡಿ ಅದಕ್ಕೆ ಚಿತ್ರಾನ್ನ ಹೆಸ್ರು ತುಂಬಾ ಚೆನಾಗಿ ಸೂಟ್ ಆಗತ್ತೆ ಅಂತ...ಫ್ರೆಶ್ಶು... ಹೊಸ ಕಾನ್ಸೆಪ್ಟು.. ಅದಕ್ಕೆ...
ಪ : ರೀ ತಮಾಷೆ ಮಾಡ್ತೀರೇನ್ರಿ... ಕೇಳಿದ್ರೆ ಸ್ವಮೇಕ್ ಅಂತೀರಾ? ಕಾಪಿ ಮಾಡಿದ್ದೆಲ್ಲಾ ಹೇಗ್ರಿ ಸ್ವಮೇಕ್ ಆಗತ್ತೆ?
ಡೈ : ಅಯ್ಯೋ ಸಾರ್ ಒಂದ್ ಕಡೆಯಿಂದ ಕಾಪಿ ಮಾಡಿದ್ರೆ ಅದು ಕಾಪಿ ಸಾರ್ ತುಂಬ ಕಡೆಯಿಂದ ಕಾಪಿ ಮಾಡಿದ್ರೆ ಅದನ್ನ ರಿಸರ್ಚು ಅಂತಾರೆ ಸಾರ್... ಹಂಗಾಗಿ ಇದು ರಿಸರ್ಚು ಸಾರ್..
ಆಹಾ ಎಂಥಾ ಮಾತು ಎಂಥಾ ಮಾತು... ಕೇಳಿ ಜನ್ಮ ಪಾವನವಾಯ್ತು... ಈ ಬುಧ್ಧಿನೇ ಕಥೆ ಮಾಡಕ್ಕೆ ಕರ್ಚು ಮಾಡಿದ್ರೆ... ಹೀಗೇ ಇನ್ನು ಏನೇನೋ ಬರ್ತಿತ್ತು ಮನ್ಸಲ್ಲಿ... ಅಷ್ಟರಲ್ಲಿ ಡೈರೆಕ್ಟರ್ ಹತ್ರ ತಲೆ ಚಚ್ಕೊಂಡಿದ್ದು ಸಾಕು ಅಂತ ಪತ್ರಕರ್ತರೆಲ್ಲ ಹೀರೋಯಿನ್ (ಹೀ) ಕಡೆ ಮುಖ ಮಾಡಿದ್ರು. ಅವರ ಅಮ್ಮನೂ ಪಕ್ಕದಲ್ಲೇ ಕೂತಿದ್ರು. ಮಾತು ಶುರು ಮಾಡೋಕೆ ಮುಂಚೆ ಅವಳ ಕಿವಿಲಿ ಏನೋ ಹೇಳಿದ್ರು... ಬಹುಷಃ ಏನು ಮಾತಾಡ್ಬೇಕು ಅಂತ ಹೇಳಿದ್ರು ಅನ್ಸತ್ತೆ.
ಆಕೆ ತಾನು ಮುಂಬಯಿ ಯಿಂದ ಬಂದವ್ಳು ಮಾಡೆಲ್ಲು ಅಂತ ಹೇಳ್ಕೊಂಡ್ಲು... ಮುಂಬಯಿ ಅಂದ್ಮೇಲೆ ಕನ್ನಡ ಎಲ್ಲಿ ಬರತ್ತೆ.. ಇಂಗ್ಲೀಷು ಹಿಂದಿಲೇ ಪ್ರಶ್ನೆ ಉತ್ತರ ಎಲ್ಲಾ... ನಾನು ಇಲ್ಲಿ ಕನ್ನಡಾನುವಾದ ಮಾಡಿ ಬರಿತಿದಿನಿ...
ಪ : ಯಾವ್ ಜಾಹೀರಾತಿಗೆ ಮಾಡೆಲ್ ಆಗಿದ್ರಿ ಮೇಡಮ್?
ಹೀ : ಅದೇ ಸಾರ್ ಸ್ಕೂಟಿ ಜಾಹೀರಾತಲ್ಲಿ ನಾನೇ ಮಾಡಿರದು...
ಪ : ಅಯ್ಯೋ ಅದ್ರಲ್ಲಿ ಇದ್ದಿದ್ದು ಪ್ರೀತಿ ಜಿಂಟಾ ಅಲ್ವಾ? ನೀವು ನೋಡಿದ್ರೆ ನಾನು ಮಾಡಿದ್ದು ಅಂತೀರಾ...
ಹೀ : ಅದ್ರಲ್ಲಿದ್ದಿದ್ದು ಅವ್ರೇ... ಬಟ್ ನಾನೂ ಇದ್ದೆ.. ಅದ್ರಲ್ಲಿ ಹಿಂದೆ ತುಂಬಾ ಜನ ನಿಂತಿರ್ತಾರಲ್ಲ ಅದ್ರಲ್ಲಿ ನಾನೂ ಒಬ್ಳು... ಆ ತರ ತುಂಬಾ ಆಡ್ ಗಳಲ್ಲಿ ಹಿಂದೆ ನಿಂತು ಕ್ರೌಡ್ಅಲ್ಲಿ ನಿಂತು ಮಾಡೆಲಿಂಗ್ ಮಾಡಿದೀನಿ...
ಆಹಾ.. ಅಮ್ಮಾ ಮಾಡೆಲ್ಲಮ್ಮ ನೀನು ನನ್ ಕಣ್ ತೆರೆಸಿದ್ ದೇವತೆ ಕಣಮ್ಮ... ಛೆ ನಾನು ಇಶ್ಟು ದಿನ ಕೇಳ್ದೋರಿಗೆ ನಾನು ಇಂಜಿನಿಯರ್ ಅಂತ ಹೇಳ್ತಿದ್ದೆ.. ಛೆ ಈಗ ನೋಡಿದ್ರೆ ನಾನು ಸಿನಿಮಾ ಸ್ಟಾರು.. ಗಣೇಶ್ "ಮುಂಗಾರು ಮಳೆ" ಲಿ ಮಡಿಕೇರಿ ಮಾರ್ಕೆಟ್ ನಲ್ಲಿ ಪೂಜನ ನಿಲ್ಸಿ ಮಾತಾಡುಸ್ತಾರಲ್ಲ ಅವಾಗ ಹಿಂದೆ ಛತ್ರಿ ಹಿಡ್ಕೊಂಡು ತುಂಬಾ ಜನ ನಿಂತಿರ್ತಾರಲ್ಲ ಅದ್ರಲ್ಲಿ ನಾನೂ ಒಬ್ಬ... ಸೋ ಅವ್ಳು ಮಾಡೆಲ್ ಆದ್ರೆ ನಾನೂ ಸಿನಿಮಾ ಸ್ಟಾರು... ನನ್ನ ಮೊದಲ ಸಿನಿಮಾನೇ ಸಿಲ್ವರ್ ಜುಬ್ಲೀ...ಕೇಳ್ರಪ್ಪಾ ಕೇಳ್ರಿ....
ಪ : ಆಯ್ತು ಬಿಡಿ.. ಅದೆಲ್ಲಾ ಸೆಕೆಂಡರಿ... ಎಲ್ಲಕ್ಕಿಂತ ಮುಖ್ಯವಾಗಿ ನಿಮಗೆ ಆಕ್ಟಿಂಗ್ ಬರತ್ತಾ? ಇದಕ್ಕು ಮುಂಚೆ ಅಭಿನಯಿಸಿ ಅನುಭವ ಇದಿಯಾ?
ಹೀ : ಖಂಡಿತ ಇದೆ. ನಾನು ಸಣ್ಣವಳಿದ್ದಾಗಿಂದ ನಾಟಕಗಳಲ್ಲಿ ಆಕ್ಟ್ ಮಾಡ್ತಿದೀನಿ... ಐದನೇ ಕ್ಲಾಸ್ ನಲಿದ್ದಾಗ ಒಂದು ನಾಟಕದಲ್ಲಿ ಆಲದ ಮರದ ಪಾತ್ರ ಮಾಡಿದ್ದೆ... ಅದಕ್ಕೆ "ಬೆಸ್ಟ್ ಮರ" ಅವಾರ್ಡ್ ಬಂದಿತ್ತು. ಅದಾದ್ಮೇಲೆ ಯಾವ್ದೇ ನಾಟಕದಲ್ಲಿ ಮರ, ಗಿಡ, ಕಲ್ಲು ಬಂಡೆ ಪಾರ್ಟ್ ಇದ್ರೂನೂ ನಾನೇ ಮಾಡ್ತಿದ್ದಿದ್ದು...
ವಾಹ್.. "ಬೆಸ್ಟ್ ಮರ" ಅವಾರ್ಡ್ ತೊಗೊಳೋದು ಏನ್ ಸಾಮಾನ್ಯನೇನ್ರಿ? ಮರದ ತರ ಸ್ಟಿಲ್ ಆಗಿ ನಿಲ್ಲೋದು ತಮಾಷೆನಾ? ಅದೂ ಒಂದು ಕಲೆ.. ಅ"ಮರ" ಕಲೆ...
ಪ : ಸೋ ಹಾಗಿದ್ರೆ ಇದ್ರಲ್ಲೂ ಮರ ಅಥವಾ ಗಿಡದ ಪಾತ್ರನೇ ಮಾಡ್ತಿದೀರಾ?
ಈ ಪ್ರಶ್ನೆ ಕೇಳ್ತಿದ್ದಂಗೆ ಅವರಮ್ಮ ಕಿವಿಲಿ ಮತ್ತೆ ಏನೋ ಗುಸು ಗುಸು ಅಂತ ಹೇಳಿಕೊಟ್ರು....
ಹೀ :ಇಲ್ಲ ಇಲ್ಲ...ಇದ್ರಲ್ಲಿ ನನ್ನ ಪಾತ್ರ ತುಂಬ ಡಿಫರೆಂಟಾಗಿದೆ... ಗಾರಂಟಿ ಬ್ರೇಕ್ ಸಿಗತ್ತೆ...ತುಂಬಾ ಸಿಂಪಲ್ ಮತ್ತು ಮುಗ್ಧ ಹಳ್ಳಿ ಹುಡುಗಿ ಪಾತ್ರ...
ಮತ್ತೆ ಅವರಮ್ಮ ಕಿವಿಲಿ ಪಿಸುಮಾತು ಉಸುರಿದರು....
ಹೀ : ಹಾಂ ಇನ್ನೊಂದು ವಿಷಯ... ನಾನು ಮೊದಲೇ ಹೇಳ್ಬಿಟ್ಟಿದ್ದೆ... ನಾನು ಸುಮ್ ಸುಮ್ನೆ ಎಲ್ಲಾ ಎಕ್ಸ್ಪೋಸ್ ಮಾಡಲ್ಲ ಅಂತ... ಕಥೆಗೆ ಅವಶ್ಯಕತೆ ಇದ್ರೆ ಮಾತ್ರ ಮಾಡೋದು ಅಂತ... ಸೋ ಇದ್ರಲ್ಲಿ ಬರೀ ಒಂದೇ ಒಂದು ಬಿಕಿನಿ ಸೀನ್ ಇದೆ ಅಷ್ಟೆ...
ಪ : ಹಳ್ಳಿ ಹುಡುಗಿ ಅಂತೀರ... ಎಕ್ಸ್ಪೋಸ್ ಮಾಡಲ್ಲ ಅಂತೀರ... ಮತ್ತೇನದು ಬಿಕಿನಿ ಸೀನು?
ಹೀ : ಹೇಳಿದ್ನಲ್ಲ ಕಥೆಗೆ ಅವಶ್ಯಕತೆ ಇದ್ರೆ ಮಾತ್ರ ಅಂತ... ಅದು ಹಳ್ಳಿ ಹುಡುಗಿ ಕನಸಲ್ಲಿ ಕೆರೆಗೆ ಈಜಕ್ಕೆ ಹೋಗಿರ್ತಾಳೆ... ಆಗೇನು ಸೀರೆ ಉಟ್ಕೊಂಡು ಈಜಕ್ಕಾಗತ್ತಾ? ಅದೇನ್ ಹಂಗೆ ಕೇಳ್ತೀರ? ಹಳ್ಳಿಯವ್ರು ಬಿಕಿನಿ ಹಾಕ್ಬಾರ್ದ?
ಪ : ಏನಾರು ಹಾಕ್ಕೋಮ್ಮ ನಮಗ್ಯಾಕೆ ಅದೆಲ್ಲ... ಅದೇನೋ ಹೇಳ್ತಾರಲ್ಲ ಮಾಡ್ದೋರ್ ಪಾಪ ಆಡ್ದೋರ್ ಬಾಯಲ್ಲಿ ಅಂತ...
ಇನ್ನು ಇವ್ಳು ಯಾವ್ ಲೆವೆಲ್ ಗೆ ಡೇಂಜರ್ ಅಂತ ಗೊತ್ತಾದ್ಮೇಲೆ ಇವ್ಳು ಸವಾಸ ಸಾಕು ಅಂತ ಪತ್ರಕರ್ತರು ಹೀರೋನ (ಹೀ) ಏನಾದ್ರೂ ಕೇಳಣ ಬರಿಯೋಅಂತದು ಏನಾದ್ರು ಸಿಗಬಹುದು ಅಂತ ಶುರು ಮಾಡಿದ್ರು. ಹೀರೋನ ನೋಡಿ ಅವರು ಗಾರಂಟಿ ಪ್ರೊಡ್ಯೂಸರ್ ಮಗನೋ, ಅಳಿಯನೋ ಭಾವಮೈದ್ನನೋ ಅಂತ ಗೆಸ್ ಮಾಡೋದು ಅಷ್ಟೇನು ಕಷ್ಟ ಆಗ್ಲಿಲ್ಲ... ಆದ್ರೂ ಕೇಳೋಣ ಅಂತ ಒಬ್ರು ಪರ್ತಕರ್ತರು ಕೇಳೇಬಿಟ್ರು...
ಪ : ನೀವು ಪ್ರೊಡ್ಯೂಸರ್ ಮಗನೋ? ಅಳಿಯನೋ? ಭಾವಮೈದ್ನನೋ?
ಹೀ : ಇಲ್ಲ ಸಾರ್ ಹದ್ಯಾವ್ದೂ ಅಲ್ಲ..
ಪ : ಒಹ್ ಬಹಳ ದಿನ ಆದ್ಮೇಲೆ ಪ್ರೊಡ್ಯೂಸರ್ ಒಬ್ರು ತಮ್ಮ ಸಂಭಂದಿಕರಲ್ಲದ ಒಬ್ಬರನ್ನ ಹೀರೋ ಆಗಿ ಪರಿಚಯಿಸ್ತಾ ಇದಾರೆ... ಒಳ್ಳೇದು..
ಹೀ : ಅಂಗಲ್ಲ ಸಾರ್ ಹದು.. ಇವ್ರು ನಮ್ಮಪ್ಪನ್ ಅತ್ರ ಸಾಲ ಮಾಡಿದ್ರು.. ತೀರ್ಸಿರ್ಲಿಲ್ಲ.. ಸೋ ಆ ದುಡ್ಡು ಸಿನಿಮಾಗೆ ಆಕಿ ನನ್ನೇ ಯೀರೋ ಮಾಡಕ್ಕೆ ನಮ್ಮಪ್ಪನೇ ಏಳಿದ್ದು...ಅಂಗಾಗಿ ನನ್ನೇ ಯೀರೋ ಆಗಿ ತೊಗೊಳ್ದೇ ಬೇರೆ ದಾರಿ ಇರ್ಲಿಲ್ಲ...
ಪ : ಓಹೋ ಸರಿ ಸರಿ... ಎಲ್ಲಿ ನಿಮ್ಮಪ್ಪ ಬಂದಿಲ್ವಾ?
ಹೀ : ಇಲ್ಲಾ ಸಾರ್ ಅದು ಸ್ವಲ್ಪ ಕಿರಿಕ್ ಹಾಗೋಯ್ತು... ಮೊನ್ನೆ ಇಂಗೇ ನಮ್ ತೋಟದ ಮನೇಲಿ ಮಾತಾಡ್ತಾ ಕೂತಾಗ ಅಲ್ಲಿ ಬಂದಿದ್ದವ್ರು ಒಬ್ರು ಈ ಸಿನಿಮಾ ಬಗ್ಗೆ ಬೇಡ್ದಿದ್ದಿದ್ದು ಹೇನೋ ಏಳ್ಬಿಟ್ರು ಅದಕ್ಕೆ ನಮ್ಮಪ್ಪ ಸಿಟ್ಟಾಗಿ ಅವ್ರುನ್ನ ಅಲ್ಲೇ ಶೂಟ್ ಮಾಡ್ಬಿಟ್ರು... ಈಗ ಪೋಲೀಸ್ ನಮ್ಮಪ್ಪನ್ನ ಹುಡುಕ್ತಿದಾರೆ ಹದಕ್ಕೆ ಅವ್ರು ಅಂಡರ್ ಗ್ರೌಂಡ್ ಆಗಿದಾರೆ... ಸೋ ಬರಕ್ಕಾಗ್ಲಿಲ್ಲ...
ಅಯ್ಯಪ್ಪಾ... ಇದನ್ನ ಕೇಳಿ ಅಲ್ಲಿದ್ದವ್ರಿಗೆಲ್ಲಾ ಮೀಟ್ರು ಆಫ್.. ಅಪ್ಪಿ ತಪ್ಪಿ ನಾವೇನಾದ್ರು ಹೇಳಿ, ಈ "ತಂದೆಗೆ ತಕ್ಕ ಮಗ" ಆಮೇಲೆ ನಮ್ಮುನ್ನೂ ಢುಂ ಅನ್ಸಿ ಹೊಗೆ ಹಾಕುಸ್ಬುಟ್ರೆ ಅಂತ.. ಯಾಕಪ್ಪಾ ರಿಸ್ಕು ಸುಮ್ನೆ ಇನ್ನೊಂದ್ ಪ್ರಶ್ನೆ ಕೇಳಿ ಜಾಗ ಖಾಲಿ ಮಾಡಣ ಅಂದುಕೊಂಡು ಕಡೇ ಪ್ರಶ್ನೆ ಕೇಳಿದ್ರು...
ಪ : ಇದರಲ್ಲಿ ನಿಮ್ಮ ರೋಲ್ ಹೆಂಗಿದೆ?
ಹೀ : ತುಂಬಾ ಪವರ್ ಫುಲ್ ರೋಲು ಸಾರ್. ತುಂಬಾ ಸ್ಕೋಪ್ ಇದೆ. ಹಷ್ಟೇ ಹಲ್ಲ ಸಾರ್ ನಂಗೇ ಅಂತಾನೇ ಮೂರು ಆಡು ಇದೆ ಸಾರ್ ಸಿನಿಮಾದಲ್ಲಿ...
ಪ : ಹೌದಾ.. ಆಡು, ಕುರಿ ಎಲ್ಲಾ ಬಳಸಕ್ಕೆ ತುಂಬಾ ಪರ್ಮಿಷನ್ ಎಲ್ಲಾ ತೊಗೋಬೇಕಲ್ವಾ.. ಅದು ಅಲ್ದೇ ಪ್ರಾಣಿಗಳನ್ನೆಲ್ಲಾ ಉಪಯೋಗ್ಸಿದ್ರೆ ಸೆನ್ಸಾರ್ ಟೈಮಲ್ಲಿ ಕಷ್ಟ ಆಗಲ್ವ?
ಹೀ : ಅಯ್ಯೋ ಪ್ರಾಣಿ ಅಲ್ಲ ಸಾರ್ ನಾನು ಏಳಿದ್ದು.. ಆಡು ಆಡು ಸಾರ್... ಸಾಂಗ್ಸು.. ಬರೀ ನಂಗೆ ಅಂತಾನೇ ಮೂರು ಸಾಂಗ್ಸ್ ಇದೆ ಸಾರ್..
ಹೀ : ಸಾರ್ ಇಲ್ಲಿ ನನ್ ಟಾಲೆಂಟ್ ತೋರ್ಸಿ ದೊಡ್ಡ ಎಸ್ರು ಮಾಡ್ಬೇಕು ಅಂತಿದೀನಿ... ನಿಮ್ ಹಾಶೀರ್ವಾದ ಬೇಕು ಸಾರ್...
ಧನ್ಯೋಸ್ಮಿ...ಆಹಾ ಇಂತ ಶುದ್ಧ ಕನ್ನಡ ಕೇಳಿ ಎಷ್ಟೋ ದಿನ ಆಗೋಗಿತ್ತು... ಬರೀ ನಾವಷ್ಟೆ ಯಾಕೆ ದೇವ್ರು ಇಡೀ ಕನ್ನಡ ಜನತೇನೇ ನಿಮ್ಗೆ ಹಾಶೀರ್ವಾದ.. ಥೂ ಅಲ್ಲ ಅಲ್ಲ ಆಶೀರ್ವಾದ ಮಾಡ್ತಾರೆ... ಡೌಟೇ ಇಲ್ಲ... ಇಷ್ಟೆಲ್ಲಾ ಟ್ಯಾಲೆಂಟ್ ತೋರ್ಸಿದ್ರೆ ಸುಮ್ನೆ ಬಿಡ್ತಾರ? ಅಂತ ಧೈರ್ಯ ಹೇಳ್ಬೋದಾಗಿತ್ತು.. ಯಾಕ್ ಸುಮ್ನೆ ಅಂತ ಸುಮ್ನಾದ್ವಿ... ಇನ್ನೂ ಯಾರ್ಯಾರ್ ಬಂದು ಇನ್ನೆಷ್ಟು ಟಾರ್ಚರ್ ಕೊಡ್ತಾರಪ್ಪಾ ಅಂತ ಒಳಗೊಳಗೇ ಹೆದ್ರಿಕೆ ಆಗ್ತಿತ್ತು... ಅದೂ ಅಲ್ದೇ ಇನ್ನು ಸ್ವಲ್ಪ ಹೊತ್ತು ಅಲ್ಲೇ ಇದ್ರೆ "ಗುಂಡಿಗೆ" (ಗನ್ನಿಂದು, ಬಾಟ್ಲಿದು ಎರಡೂ) ಬಲಿಯಾಗೋ ಚಾನ್ಸೂ ಇತ್ತು... ಅದಕ್ಕೆ ಆದಷ್ಟು ಬೇಗ ಅಲ್ಲಿಂದ ಸಿಂಕ್ ಆಗಣ ಅಂತ ಹೊರಟು ನಿಂತೆ...ಅಷ್ಟರಲ್ಲಿ ಧಡಾರ್ ಅಂತ ಏನೋ ಬಿದ್ದಿದ್ ಸೌಂಡ್ ಆಯ್ತು....
ಇಲ್ಲಾರೀ ಅಲ್ಲೇನೋ ಆಗ್ಲಿಲ್ಲ.. ಬೀಳ್ಲಿಲ್ಲ... ನಾನು ಹಾಸಿಗೆಯಿಂದ ಬಿದ್ದಿದ್ದೆ... ಹೂಂ ರಿ ಇಷ್ಟೊತ್ತು ನಡೆದಿದ್ದೆಲ್ಲ ಕನಸು ಸಧ್ಯ... ಕನಸಾ ಅದು? ಅಲ್ಲಲ್ಲ ರುದ್ರ ಭೀಕರ ದುಸ್ವಪ್ನ... ಶಿವ ಶಿವಾ...ನಮ್ಮಜ್ಜಿ ಹೇಳ್ತಿದ್ದಿದ್ದು ನೆನಪಾಯ್ತು.. ಬೆಳಗಿನ ಜಾವ ನೋಡಿದ್ ಕನಸು ನಿಜ ಆಗತ್ತೆ ಅಂತ.. ಸೋ ಮುಖ ತೊಳೆಯೋದ್ರು ಮನೆ ಹಾಳಾಯ್ತು ಅಂತ ಎದ್ದವ್ನೆ ಲಾಪ್ ಟಾಪ್ ತೆಗೆದು ಇರೋ ಬರೋ ಸಿನಿಮಾ ಸೈಟ್ ಎಲ್ಲಾ ಒಂದ್ ಸಲ ನೋಡಿ ಹಾಕ್ಬಿಟ್ಟೆ... ಅಪ್ಪಿ ತಪ್ಪಿ ಇಂತದೆಲ್ಲಾದ್ರು ಆಗೋಗ್ಬಿಟ್ಟಿದಿಯಾ ಅಂತ.. ಸಧ್ಯ ಎಲ್ಲೂ ಆ ತರ ಏನ್ ನ್ಯೂಸ್ ಇರ್ಲಿಲ್ಲ...
ಇಂತಹದ್ದೇನಾದ್ರು ಒಂದು ನಿಜವಾಗಿ ನಡೆದಿದ್ದೇ ಆದರೆ ಅದಕ್ಕಿಂತ ದುರದೃಶ್ಟಕರ ಬೆಳವಣಿಗೆ ಬಹುಷಃ ಬೇರೊಂದಿಲ್ಲ.... ತಾಯಿ ಭುವನೇಶ್ವರಿ ನೀನೇ ಕಾಪಾಡಮ್ಮ...
