ಇನ್ನು ಕೆಲವೇ ದಿನಗಳಲ್ಲಿ ಇಂತಹ ಒಂದು ಪ್ರಕಟಣೆ ನೋಡಿದರೆ ಆಶ್ಚರ್ಯ ಪಡಬೇಡಿ. ಅಥವಾ ಇಷ್ಟರಲ್ಲಾಗಲೇ ಇದು ಪ್ರಕಟವಾಗಿರಬೇಕಿತ್ತೇನೋ... "ಉಪೇಂದ್ರ" ಚಿತ್ರ ಪ್ರಚಾರಕ್ಕಾಗಿ "ಉಪ್ಪಿಯನ್ನು ಹುಡುಕಬಲ್ಲಿರಾ?" ಎಂಬ ಪೋಸ್ಟರ್ ಗಿಮ್ಮಿಕ್ ಒಂದನ್ನು ಬಳಸಲಾಗಿತ್ತು. ಅದು ಈ ಮಟ್ಟಿಗೆ ನಿಜವಾಗಿದ್ದು ವಿಪರ್ಯಾಸವೇ ಸರಿ. ಆಗ ಬರೀ ಪೋಸ್ಟರ್ ಗಳಲ್ಲಿ ಹುಡುಕುತ್ತಿದ್ದ ನಾವು ಈಗ ನಿಜ ಜೀವನದಲ್ಲೂ ಹುಡುಕುವ ಪ್ರಮೇಯ ಬಂದಿದೆ. ಅವರ ಇತ್ತೀಚಿನ ಚಿತ್ರಗಳಿಂದ ಬೇಸತ್ತಿರುವ ಕನ್ನಡ ಪ್ರೇಕ್ಷಕರು "ಕಳೆದೋಗಿರೋ ಅವನನ್ನ ಯಾಕೆ ಹುಡುಕಬೇಕು?" ಎಂದು ಸಿಟ್ಟಾಗಿ ಕೇಳಬಹುದು... ತಪ್ಪೇನಿಲ್ಲ... ನಾವು ಅತ್ಯಂತ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿರುವವರು ನಮ್ಮನ್ನು ನಿರಾಸೆಗೊಳಿಸಿದಾಗ ಹೀಗೆ ಸಿಟ್ಟಾಗೋದು ಸಹಜ. ಅದಲ್ಲದೇ ಉಪ್ಪಿ ಮೊದಲಿನಿಂದಲೂ ಕಾಂಟ್ರವರ್ಷಿಯಲ್ ಸ್ಟಾರ್ ಆಗಿದ್ದವರೇ. ಉಪ್ಪಿ ಪ್ರಸಿದ್ಧಿಯ ಉತ್ತುಂಗದಲ್ಲಿದ್ದಾಗಲೂ ಅಷ್ಟೇ, ಅವರ ಅಭಿಮಾನಿಗಳಷ್ಟೇ ಅವರುನ್ನು ಕಂಡರಾಗದವರೂ ಇದ್ದರು. ಆದರೂ ಬಹಳಷ್ಟು ಜನಕ್ಕೆ ಅವರು ಮೊದಲಿನಂತೆ ಚಿತ್ರ ನಿರ್ದೇಶನಕ್ಕೆ ಮರಳಬೇಕೆಂಬ ಆಸೆ ಎಲ್ಲೋ ಒಂದು ಕಡೆ ಇದ್ದೇ ಇದೆ. ಒಂದೇ ಸಾಲಲ್ಲಿ ಹೇಳಬೇಕೆಂದರೆ "ಯು ಹೇಟ್ ಹಿಮ್ ಆರ್ ಯು ಲವ್ ಹಿಮ್ ಬಟ್ ಯು ಕಾಂಟ್ ಇಗ್ನೋರ್ ಹಿಮ್"
ಅವರು ಯಾಕೆ ಮತ್ತೆ ನಿರ್ದೇಶನಕ್ಕೆ ಮರಳಬೇಕು? ಅವರನ್ನು ಯಾಕೆ ಹುಡುಕಿ ತರಬೇಕು? ಅಂತ ಹೇಳೋದಕ್ಕೆ ಮೊದಲು ಒಂದು ಸಣ್ಣ ಬಿಲ್ಡಪ್... ನಾನು ಅವರ ಮೊದಲಿನಿಂದ ಕೊನೆಯವರೆಗಿನ ಚಿತ್ರಗಳ ಅವಲೋಕನ ಖಂಡಿತ ಮಾಡುತ್ತಿಲ್ಲ... ಅವರು ನಡೆದು ಬಂದ ಹಾದಿಯ ಒಂದು ಪಕ್ಷಿನೋಟ ಅಷ್ಟೆ. ಅವರು ನೆಟ್ಟ ಮೈಲಿಗಲ್ಲುಗಳ ಒಂದು ಹಿನ್ನೋಟ ಅಷ್ಟೆ...
ಹಾಡುಗಳನ್ನು ಬರೆಯುತ್ತಾ ಕಾಶಿನಾಥ್ ಗರಡಿ ಸೇರಿದ ಉಪ್ಪಿಯನ್ನು ಅನಂತನ ಅವಾಂತರದಲ್ಲಿ ಕಡ್ಡಿ ಪೈಲ್ವಾನ್ ಕಾಮಣ್ಣನಾಗಿ ನೋಡಿದವರು ಆತ ಮುಂದೊಂದು ದಿನ ಈ ಎತ್ತರಕ್ಕೆ ಬೆಳೆಯಬಹುದೆಂದು ಕನಸು ಮನಸಿನಲ್ಲಿಯೂ ಎಣಿಸಿರಲಿಕ್ಕಿಲ್ಲ. ಆದರೆ ಅಲ್ಲಿಂದ ಮುಂದೆ ಉಪ್ಪಿ ಎಂದೂ ಹಿಂದಿರುಗಿ ನೋಡಲೇ ಇಲ್ಲ. ಕಥೆಗಾರನಾಗಿ, ಲೇಖಕನಾಗಿ, ಸಹ-ನಿರ್ದೇಶಕನಾಗಿ ಕೊನೆಗೆ ಸ್ವತಂತ್ರ ನಿರ್ದೇಶಕನಾಗಿ ಭಡ್ತಿ ಪಡೆದರು. ಬಹುಷಃ ಕಾಶಿನಾಥ್ ಶಿಶ್ಯ ಎಂಬುದನ್ನು ಪ್ರೂವ್ ಮಾಡಬೇಕಿತ್ತೇನೊ, ಅವರು ಮೊದಲು ಮಾಡಿದ ಚಿತ್ರವೇ "ತರ್ಲೆನನ್ಮಗ". ಅವರ ವಿಭಿನ್ನ ನಿರೂಪಣೆಯ ಒಂದು ಝಲಕ್ ಈ ಚಿತ್ರದಲ್ಲೇ ಕಾಣಿಸಿತು... ಮುಂದೆ ಇನ್ನೂ ಬಹಳಷ್ಟು ಬರುವುದಿತ್ತು. ಈ ಚಿತ್ರ ಇಂದಿಗೂ "ಕಲ್ಟ್ ಕ್ಲ್ಯಾಸಿಕ್" ಎಂದೆನಿಸಿಕೊಂಡಿದೆ. ಅವರು ಮುಂದೆ ನಿರ್ದೇಶಿಸಿದ್ದು ಇನ್ನು ಆರೇ ಚಿತ್ರಗಳಾದರೂ ಉಂಟುಮಾಡಿದ ಸಂಚಲನ ಮಾತ್ರ ಭಾರೀ ಪ್ರಮಾಣದ್ದೇ.
* "ಶ್!!" ನಂತಹ ಯಶಸ್ವಿ ಸಸ್ಪೆನ್ಸ್/ಹಾರರ್ ಚಿತ್ರ ಮಾಡಿ ಮೊದಲ ಚಿತ್ರದ ಯಶಸ್ಸು ಬರೀ ಲಕ್ ಅಲ್ಲ ಎಂಬುದನ್ನು ಸಾಬೀತುಪಡಿಸಿದರು. ಕೊನೆಯವರೆಗೂ ಪ್ರೇಕ್ಷಕನನ್ನು ಹಿಡಿದಿಡುವ ಕಥೆ, ಅನಿರೀಕ್ಷಿತ ತಿರುವುಗಳು ಉತ್ತಮ ಹಿನ್ನೆಲೆ ಸಂಗೀತ, ಒಂದು ಸಸ್ಪೆನ್ಸ್/ಹಾರರ್ ಚಿತ್ರಕ್ಕೆ ಬೇಕಾದ ಸಕಲ ಸರಕುಗಳನ್ನೂ ಅದು ಹೊಂದಿತ್ತು.
* ನೇರ ನಿರೂಪಣೆಯ (ಲೀನಿಯರ್ ಫ಼ಾರ್ಮಾಟ್) ಸೂತ್ರವನ್ನು ಗಾಳಿಗೆ ತೂರಿ ತಮ್ಮ ಬಹಳಷ್ಟು ಚಿತ್ರಗಳಲ್ಲಿ ಪ್ರೇಕ್ಷಕರನ್ನು ಗೊಂದಲಕ್ಕೀಡು ಮಾಡುವ ಅನಿರೀಕ್ಷಿತ ತಿರುವುಗಳುಳ್ಳ ನಿರೂಪಣಾ ಶೈಲಿಯನ್ನು ಬಳಸಿದರು. ಫ಼್ಲ್ಯಾಷ್ ಬಾಕ್ ಗಳನ್ನು ಉಪಯೋಗಿಸಿದ ರೀತಿಯೂ ಒಂದು ಶೈಲಿಯಾಗಿಬಿಟ್ಟಿತು. ಓಂ ಚಿತ್ರ ಇದಕ್ಕೊಂದು ದಿವ್ಯ ನಿದರ್ಶನ.
* ನೈಜ ಚಿತ್ರಣಕ್ಕಾಗಿ ನಿಜ ಜೀವನದ ರೌಡಿಗಳನ್ನೇ ಓಂ ಚಿತ್ರದಲ್ಲಿ ನಟಿಸುವಂತೆ ಮಾಡಿದರು.
* ಎಲ್ಲಾ ಹೊಸಬರೇ ಸೇರಿ ಮಾಡಿದ "ಎ" ಚಿತ್ರ ಕನ್ನಡ ಚಿತ್ರರಂಗದ ಮೈಲಿಗಲ್ಲುಗಳಲ್ಲಿ ಒಂದು. ನಟನೆ ಹಾಗೂ ನಿರ್ದೇಶನ ಎರಡನ್ನೂ ನಿಭಾಯಿಸಿದ ಉಪ್ಪಿ ಈ ಚಿತ್ರದಿಂದ ನಟನಾಗಿಯೂ ಭಧ್ರವಾಗಿ ತಳಊರಿಬಿಟ್ಟರು. ಭೂಷಣ್ ಗೀಚಿ ಯಂತಹ ಪ್ರತಿಭೆಯೊಂದನ್ನು ಈ ಚಿತ್ರದಿಂದ ಪರಿಚಯಿಸಿದರು. ವಿಭಿನ್ನ ಪೋಸ್ಟರ್ ವಿನ್ಯಾಸದ ಟ್ರೆಂಡ್ ಒಂದು ಈ ಚಿತ್ರದಿಂದ ಜನ್ಮ ತಾಳಿತ್ತು. "ಕಡ್ಡಾಯವಾಗಿ ಬುದ್ಧಿವಂತರಿಗೆ ಮಾತ್ರ" ಎಂದಿದ್ದು ಸೊಕ್ಕಿನ ಮಾತು ಎಂದು ಜರಿದವರೆಲ್ಲರೂ ಚಿತ್ರ ನೋಡಿದ ನಂತರ ಮುಗುಮ್ಮಾದರು.
* ಉಪೇಂದ್ರ ಚಿತ್ರದ ಕಥೆ ಚಿತ್ರರಂಗದ ಮಟ್ಟಿಗೆ ಆ ತರಹದ ಏಕೈಕ ಪ್ರಯತ್ನ. ಹಲವಾರು ಪದರಗಳಿದ್ದ ಕ್ಲಿಷ್ಠ ಕಥೆಯನ್ನು ಮತ್ತೆ ತಮ್ಮ ಚತುರತೆಯಿಂದ ತೆರೆಗೆ ತಂದರು ಉಪ್ಪಿ. ಉಪೇಂದ್ರ ಒಂದು ಪಕ್ಕಾ "ಕ್ಲಾಸ್ ಸಬ್ಜೆಕ್ಟ್" ಅದನ್ನು ಹಾಗೇ ತೆರೆಗೆ ತಂದರೆ ಅದು ಮುಳುಗುವುದು ಖಂಡಿತ ಎಂದು ಅರಿತ ಉಪ್ಪಿ ಅದರಲ್ಲಿ "ಮಾಸ್" ಅಂಶಗಳನ್ನೂ, ಮುಂದಿನ ಸಾಲಿನ ಪಡ್ಡೆಗಳಿಗಾಗಿ ಮಸಾಲೆಯನ್ನೂ (ಕೆಲವು ಸನ್ನಿವೇಶಗಳಲ್ಲಿ ಕೊಂಚ ಅತಿರೇಕವೇ) ಸೇರಿಸಿದರು. ಆದರೂ ಕೊನೆಗೆ ಸಂದೇಶ ತಲುಪಿಸುವುದನ್ನು ಮಾತ್ರ ಮರೆಯಲಿಲ್ಲ... ಆ ದೃಷ್ಟಿಯಿಂದ ಅದೊಂದು ೨ಡಿ ಚಿತ್ರವೇ. ಅದೊಂದು ಕ್ಲಾಸ್ ಹಾಗು ಮಾಸ್ ಅಂಶಗಳ ಮುದನೀಡುವ ಮಿಶ್ರಣ. ಅವರ ವಿಭಿನ್ನ ಪೋಸ್ಟರ್ ಗಳ ಪ್ರೀತಿ ಇಲ್ಲೂ ಮುಂದುವರೆಯಿತು. ಈ ಚಿತ್ರ ಜಪಾನ್ ದೇಶದಲ್ಲೂ ಜನಮನ್ನಣೆ ಗಳಿಸಿದ್ದು ಒಂದು ಸಾಧನೆಯೇ ಸರಿ. ಕಲೆಗೆ ಭಾಷಾ ಪರಿಧಿಯಿರುವುದಿಲ್ಲ ಎಂಬುದಕ್ಕೆ ಇದಕ್ಕಿಂತ ನಿದರ್ಶನ ಬೇಕೇ?
* ಕಾವೇರಿ ಸಮಸ್ಯೆಯಂತಹ ಅತೀ ಸೂಕ್ಷ್ಮ ಸಮಸ್ಯೆಯನ್ನು ಅಧಾರವಾಗಿಟ್ಟುಕೊಂಡು ಮಾಡಿದ "ಎಚ್ ಟು ಒ" ಕಥೆ ಬಹುಷಃ ಉಪ್ಪಿಗೆ ಮಾತ್ರ ಸಾಧ್ಯ. ಹಲವಾರು ವಿವಾದಾತ್ಮಕ ವಿಚಾರಗಳನ್ನು ಸಾಂಕೇತಿಕವಾಗಿ ತೋರಿಸಿದ ಚಿತ್ರಕಥೆ ಅವರ ಜಾಣ್ಮೆಗೆ ಸಾಕ್ಷಿ. ಈ ಚಿತ್ರದ ಕ್ಲೈಮಾಕ್ಸ್ ನಾವು ನೋಡಿರುವ ಕೆಲವೇ ಅದ್ಭುತ ಕ್ಲೈಮಾಕ್ಸ್ ಗಳಲ್ಲಿ ಒಂದು.
* ಸೂಪರ್ ಸ್ಟಾರ್ ಚಿತ್ರದಲ್ಲಿ ಬರುವ ಹಲವು ಕ್ಲೈಮಾಕ್ಸ್ ಗಳ ತಂತ್ರ ಯಾವುದೇ ಚಿತ್ರರಂಗದ ಮಟ್ಟಿಗೂ ಹೊಸತೇ.
* ಗುರುಕಿರಣ್, ವೇಣು, ಪ್ರೇಮ, ಕುಮಾರ್ ಗೋವಿಂದ್, ಧಾಮಿನಿ ಇನ್ನೂ ಹಲವು ಪ್ರತಿಭೆಗಳನ್ನು ಹೆಕ್ಕಿ ತೆಗೆದರು. ಓಂ ಚಿತ್ರದಿಂದ ಶಿವಣ್ಣನಿಗೆ ಒಂದು ಹೊಸ ಜನ್ಮವನ್ನೇ ನೀಡಿದ್ದೂ ಆಯಿತು...
* ನಿರ್ದೇಶನ, ನಟನೆ, ನಿರ್ಮಾಣ, ಕಥೆ-ಚಿತ್ರಕಥೆ, ಸಾಹಿತ್ಯ ಹಾಗೂ ಹಿನ್ನೆಲೆ ಗಾಯನ ಎಲ್ಲದರಲ್ಲೂ ತಮ್ಮ ಛಾಪು ಮೂಡಿಸಿದ ಕೆಲವೇ ಕೆಲವರಲ್ಲಿ ಉಪ್ಪಿಯೂ ಒಬ್ಬರು.
ಹಾಗಾದರೆ ಒಂದೂ ಫ಼್ಲಾಪ್ ಚಿತ್ರಗಳೇ ಇಲ್ಲವೇ? ಯಾಕಿಲ್ಲ? ಎರಡೆರಡು ಇವೆ.. ಆಪರೇಷನ್ ಅಂತ ಹಾಗೂ ಸ್ವಸ್ತಿಕ್. ಅನಿರೀಕ್ಷಿತ ತಿರುವುಗಳನ್ನೇ ತನ್ನ ಶೈಲಿಯಾಗಿಸಿಕೊಂಡಿದ್ದ ಉಪ್ಪಿಗೆ ಹೆಚ್ಚಾದರೆ ಅಮೃತವೂ ವಿಷವೇ ಎಂಬ ಸತ್ಯ ಅರಿವಾಗಿದ್ದು ಸ್ವಸ್ತಿಕ್ ಚಿತ್ರದಿಂದ. ಚಿತ್ರದಲ್ಲಿ ತಿರುವುಗಳಿರಬೇಕೆ ಹೊರತು ತಿರುವುಗಳೇ ಚಿತ್ರವಾಗಬಾರದು. ಸ್ವಸ್ತಿಕ್ ತೋಪೆದ್ದು ಹೋಗಿದ್ದು ಹೀಗೇ...
ಉಪ್ಪಿ ನಿರ್ದೇಶನಕ್ಕೆ ಮರಳಬೇಕೆನ್ನುವುದಕ್ಕೆ ಈ ಕ್ರಾಂತಿಗಳ ಪಟ್ಟಿಯೇ ಸಾಕು. ಕನ್ನಡ ಚಿತ್ರರಂಗದ ಪಾಲಿಗೆ ಇವೆಲ್ಲಾ ಹೊಸ ಪ್ರಯತ್ನಗಳೇ. ಕಾಲಕಾಲಕ್ಕೆ ಆತ್ಮವಿಶ್ವಾಸ ತುಂಬಿದ ಯಶಸ್ಸುಗಳೇ. ಇಷ್ಟೆಲ್ಲಾ ಕ್ರಿಯಾಶೀಲತೆ ತೋರಿದ ಉಪ್ಪಿ ನಟನಾಗಿ ಸ್ಟಾರ್ಗಿರಿ ಬಂದ ಮೇಲೆ ನಿರ್ದೇಶನ ಕೈ ಬಿಟ್ಟರು. ಒಂದಾದಮೇಲೊಂದರಂತೆ ರಿಮೇಕ್ ಚಿತ್ರಗಳಲ್ಲಿ ಅಭಿನಯಿಸಲಾರಂಭಿಸಿದರು. ಅವರ ಸಂಭಾವನೆಯ ಗ್ರಾಫ಼್ ಮೇಲೇರತೊಡಗಿತು ಆದರೆ ಕ್ರಿಯಾಶೀಲತೆಯ ಗ್ರಾಫ಼್ ಕೆಳಮುಖವಾಗಿ ಓಡಲಾರಂಭಿಸಿತು. ರಕ್ತಕಣ್ಣೀರು ಚಿತ್ರದ ಸಂಭಾಶಣೆಯಿಂದ ಕೊಂಚ ಆಸೆ ಮೂಡಿಸಿದರಾದರೂ ಅದರ ಹಿಂದೆಯೇ ಓಂಕಾರ, ಪರೋಡಿ, ಉಪ್ಪಿದಾದ, ಮಸ್ತಿಯಂತಹ ಪರಮ ಪಾಪ ಕೃತ್ಯಗಳನ್ನೆಸಗಿದರು. ಬೇಸತ್ತ ಪ್ರೇಕ್ಷಕ ಮಹಾವೈದ್ಯ ಸಾಲು ಸಾಲಾಗಿ "ಫ಼್ಲಾಪ್ ಟ್ರೀಟ್ಮೆಂಟ್"ಗಳನ್ನು ಕೊಟ್ಟ. ಉಹೂಂ... ಏನೂ ಪ್ರಯೋಜನವಾಗಲಿಲ್ಲ. ಗಳಿಸಿದಷ್ಟೇ ವೇಗವಾಗಿ ಅಭಿಮಾನಿಗಳನ್ನು ಕಳೆದುಕೊಂಡರು ಉಪ್ಪಿ.
ಇನ್ನು "ಈಗಲೇ ಉಪ್ಪಿ ನಿರ್ದೇಶನಕ್ಕೆ ಮತ್ತೇಕೆ ಮರಳಿ ಬರಬೇಕು?" ಎನ್ನುವ ವಿಷಯಕ್ಕೆ ಬರೋಣ. ಅದಕ್ಕೂ ಒಂದು ಕಾರಣ ಇದೆ... ಬಹುಷಃ ಈಗಿನ ಸಮಯ ಉಪ್ಪಿಯಂತ ಪ್ರಯೋಗಶೀಲ ನಿರ್ದೇಶಕರಿಗೆ ಹೇಳಿ ಮಾಡಿಸಿದಂತಿದೆ. ಮತ್ತೊಮ್ಮೆ ಚಿತ್ರರಂಗ ಬದಲಾವಣೆಯ ಕಾಲಘಟ್ಟದಲ್ಲಿದೆ. ಹತ್ತು ಹಲವು ಹೊಸ ಪ್ರಯತ್ನಗಳು ನಡೆಯುತ್ತಿವೆ ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ಪ್ರೇಕ್ಷಕರು ಈ ಪ್ರಯತ್ನಗಳನ್ನು ಬೆಂಬಲಿಸುವ ಎಲ್ಲಾ ಲಕ್ಷಣಗಳೂ ಕಾಣಿಸುತ್ತಿವೆ. ಇದು ಉಪ್ಪಿಗೆ ಚಿರಪರಿಚಿತ ಪರಿಸರ. ಒಂಥರಾ ಕುಂಬ್ಳೆಗೆ ಫ಼ಿರೋಜ್ ಷಾ ಕೋಟ್ಲಾ ಪಿಚ್ ಇದ್ದಂಗೆ. ಇಲ್ಲಿ ಉಪ್ಪಿ ಮತ್ತೊಮ್ಮೆ ಯಶಸ್ವಿಯಾಗಿ ಹೊಸತನದ ಸೆಂಚುರಿ ಬಾರಿಸುವ ಎಲ್ಲಾ ಸಾಧ್ಯತೆಗಳಿವೆ. ಸದ್ಯಕ್ಕೆ ಕನ್ನಡ ಚಿತ್ರರಂಗಕ್ಕೆ ಯಶಸ್ಸೆಂಬ ಇಂಜೆಕ್ಟನ್ ನ ದೊಡ್ಡ ಡೋಸ್ ಒಂದು ಬೇಕಾಗಿದೆ ಹಾಗೂ ಉಪ್ಪಿ ಅದನ್ನು ಕೊಡಬಲ್ಲರು. ನೀವೇ ನೋಡಿ, ಅವರು ಎ ಹಾಗೂ ಉಪೇಂದ್ರದಂತಹ ವಿಭಿನ್ನ ಚಿತ್ರಗಳನ್ನು ಮಾಡಿದಾಗ ಕನ್ನಡ ಪ್ರೇಕ್ಷಕರ ಸಮೂಹ ಬಹುಷಃ ಈಗಿನಷ್ಟು ದೊಡ್ಡದಿರಲಿಲ್ಲ. ಕನ್ನಡ ಚಿತ್ರಗಳ ಮಾರುಕಟ್ಟೆ ಇಷ್ಟು ವಿಸ್ತೃತವಾಗಿರಲಿಲ್ಲ. ಆದರೂ ಆ ಚಿತ್ರಗಳು ಗಣನೀಯ ಯಶಸ್ಸು ಸಾಧಿಸಿದವು. ಈಗಿನ ದಿನಗಳಲ್ಲಿ ಕನ್ನಡ ಚಿತ್ರರಂಗದ ಪ್ರೇಕ್ಷಕ ಸಮೂಹ ಬಹಳವೇ ಬೆಳೆದಿದೆ. ಸೈಕೋದಂತಹ ಹೊಸ ಪ್ರಯತ್ನಗಳನ್ನು ಪ್ರೇಕ್ಷಕ ಬೆಂಬಲಿಸುತ್ತಿದ್ದಾನೆ. ಈಗ ಉಪ್ಪಿ ಒಂದು ವಿಭಿನ್ನ ಪ್ರಯತ್ನ ಮಾಡಿ ಗೆಲ್ಲಲು ಕಾಲ ಪಕ್ವವಾಗಿದೆ. ಮೇಲಾಗಿ ಪರಭಾಷಾ ಪ್ರೇಕ್ಷಕರಿಗೆ ಉಪ್ಪಿಯ ಪರಿಚಯವಿದೆ. ಇದು ಅವರನ್ನು ಕನ್ನಡ ಚಿತ್ರಗಳತ್ತ ಸೆಳೆಯುವ ಒಂದು ಹೆಜ್ಜೆಯಾಗಬಹುದು.
ಹಾಗಿದ್ದರೆ ಕೇವಲ ಉಪ್ಪಿಯೊಬ್ಬರಿಂದಲೇ ಇಂತಹ ಒಂದು ಪ್ರಯತ್ನ ಸಾಧ್ಯವೋ? ಎಂದು ನೀವು ಕೇಳಬಹುದು. ಖಂಡಿತಾ ಇಲ್ಲ. ಈ ಲೇಖನ ಉಪ್ಪಿಯ ಮುಖಸ್ತುತಿ ಮಾಡುವ, ಅಥವಾ ಅವರನ್ನು ಹೊಗಳಿ ಹೊನ್ನ ಶೂಲಕ್ಕೇರಿಸುವ ಪ್ರಯತ್ನವಲ್ಲ. ಈ ಪರಿಸ್ಥಿತಿಯ ಲಾಭ ಪಡೆಯಬಲ್ಲ ಅನ್ಯ ನಿರ್ದೇಶಕರೂ ನಮ್ಮಲ್ಲಿ ಇದ್ದಾರೆ ಆದರೆ ಉಪ್ಪಿಯ ಟ್ರ್ಯಾಕ್ ರೆಕಾರ್ಡ್ ಹಾಗೂ ಕನ್ಸಿಸ್ಟನ್ಸಿ ಗಮನಿಸಿದಾಗ ಬಹುಷಃ ಅವರೇ ನಮ್ಮ ಬೆಸ್ಟ್ ಬೆಟ್. ಹಾಗಾಗಿ ಇದು ತನ್ನತನವನ್ನು ಕಳೆದುಕೊಂಡಿರುವ ಒಬ್ಬ ಪ್ರತಿಭಾವಂತ ನಿರ್ದೇಶಕನಿಗೆ ಜನರು ಅವರನ್ನು ಮರೆಯುವ ಮುನ್ನ ಎಚ್ಚೆತ್ತುಕೊಳ್ಳಲು ಕರೆ. ಕೇಳಿದವರಿಗೆ "ಬೇರೆಯವರ ದುಡ್ಡಿನಲ್ಲಿ ಪ್ರಯೋಗ ಮಾಡಲು ಇಷ್ಟವಿಲ್ಲ ಹಾಗಾಗಿ ಸ್ವಂತ ದುಡ್ಡು ಮಾಡಿ ಚಿತ್ರಮಾಡುವೆ ಎಂದರು". ಈ ಸಬೂಬು ಹಳೆಯದಾದಮೇಲೆ "ಚಿತ್ರಕಥೆ ಸಿದ್ಧ ಮಾಡುತ್ತಿದ್ದೇನೆ" ಎಂದು ಶುರು ಮಾಡಿದರು. ಒಂದು ವರ್ಷವಾದರೂ ಯಾವ ಲಕ್ಷಣಗಳನ್ನೂ ಕಾಣದ ಜನ ಮತ್ತೆ ಕೇಳಲು ಶುರು ಮಾಡಿದಾಗ "ಜನಗಳ ನಿರೀಕ್ಷೆಗೆ ತಕ್ಕ ಕಥೆ ಮಾಡಬೇಕು, ಹಾಗಾಗಿ ಸಮಯವಾಗುತ್ತಿದೆ" ಎಂಬ ಜಾರಿಕೆಯ ಉತ್ತರ ಶುರು ಮಾಡಿದ್ದಾರೆ. ಇನ್ನೂ ಎಷ್ಟು ದಿನ ಉಪ್ಪಿ ಈ ಕಣ್ಣಾಮುಚ್ಚಾಲೆ?....
ಕೆಲವೊಮ್ಮೆ ನಾವು ಉಪೇಂದ್ರರಿಂದ ತುಸು ಹೆಚ್ಚೇ ನಿರೀಕ್ಷಿಸುತ್ತಿದ್ದೇವೇನೋ ಎನ್ನಿಸಿದ್ದೂ ಇದೆ.ಪ್ರತಿಯೊಬ್ಬರಿಗೂ ಕ್ರಿಯಾಶೀಲತೆಯ ಒಂದು ಅವಧಿ ಇರುತ್ತದೆ. ಕೊನೆಯವರೆಗೂ ಕ್ರಿಯಾಶೀಲರಾಗಿಯೇ ಉಳಿಯುವುದು ಎಲ್ಲರಿಂದ ಸಾಧ್ಯವಿಲ್ಲ. ಹಾಗೆಯೇ ಉಪ್ಪಿಯ ಕ್ರಿಯಾಶೀಲ ಸಮಯ ಮುಗಿದುಹೋಗಿದೆಯೇ? ಗೊತ್ತಿಲ್ಲ... ಪ್ರತಿ ಔಷಧಿಗೂ ಒಂದು ಎಕ್ಸ್ ಪೈರಿ ದಿನಾಂಕ ಇರುತ್ತದೆ ಅದರ ನಂತರ ಔಷಧಿ ಪರಿಣಾಮಕಾರಿಯಾಗಿರುವುದಿಲ್ಲ ಹಾಗೆಯೇ ಉಪ್ಪಿಯ ಕ್ರಿಯಾಶೀಲತೆ ಎಕ್ಸ್ ಪೈರಿ ದಿನಾಂಕವನ್ನು ದಾಟಿಬಿಟ್ಟಿದೆಯೇ? ಗೊತ್ತಿಲ್ಲ... ಉಪ್ಪಿಯ ಕನಸುಗಳ ಸರಕು ಖಾಲಿಯಾಗಿಬಿಟ್ಟಿದೆಯೇ? ಗೊತ್ತಿಲ್ಲ... ಹಣದ ಭೂತ ಅವರ ಹೆಗಲೇರಿದೆಯೇ? ಗೊತ್ತಿಲ್ಲ... ಗೊತ್ತಿರುವುದು ಒಂದೇ, ಇಂದಿಗೂ ಮನಸ್ಸು ಮಾಡಿದರೆ ಫೀನಿಕ್ಸ್ ಪಕ್ಷಿಯಂತೆ ಬೂದಿಯಿಂದ ಮೈ ಕೊಡವಿ ಎದ್ದು ಬರುವ ಸಾಮರ್ಥ್ಯ ಅವರಲ್ಲಿದೆ ಹಾಗೂ ಬಂದೇ ಬರುತ್ತಾರೆಂಬ ನಂಬಿಕೆ ನನ್ನಲ್ಲಿದೆ...ನೀವೇನಂತೀರಾ?
ನಾನು ಸಣ್ಣವನಾಗಿದ್ದಾಗ ಕಡಿಮೆ ಮಾರ್ಕ್ಸ್ ಬಂದರೆ ಅಥವಾ ಏನಾದರೂ ತರಲೆ ಕೆಲಸ ಮಾಡಿದರೆ ನಮ್ಮಮ್ಮ ಕಿವಿ ಹಿಂಡಿ "ಬರ್ತಾ ಬರ್ತಾ ರಾಯರ ಕುದುರೆ ಕತ್ತೆ ಆಯ್ತಂತೆ" ಅಂತ ಬೈತಿದ್ರು. " ಛೆ ಉಪ್ಪಿಗೂ ಯಾರಾದ್ರು ಹಂಗೆ ಕಿವಿ ಹಿಂಡೋರಿದ್ದಿದ್ರೆ..." ಅಂತ ಇತ್ತೀಚೆಗೆ ಬಹಳ ಅನ್ನಿಸುತ್ತಿದೆ.
ನೀವು ಈ ಲೇಖನ ಓದುವಾಗ ಉಪ್ಪಿ ರಿಡಿಫ಼್.ಕಾಮ್ ನಲ್ಲಿ ಅಭಿಮಾನಿಗಳ ಜೊತೆ ಒಂದು ಸುತ್ತಿನ ಚಾಟ್ ಮಾಡಿ ಮುಗಿಸಿರುತ್ತಾರೆ. ಬಹುಷಃ ನಮ್ಮ ಕೆಲವು ಪ್ರಶ್ನೆಗಳಿಗೆ ಅಲ್ಲಿ ಉತ್ತರ ಸಿಕ್ಕರೂ ಸಿಗಬಹುದು.... ಅಥವಾ ನಮ್ಮ ಪ್ರಶ್ನೆಗಳ ಪಟ್ಟಿ ಇನ್ನೂ ದೊಡ್ಡದಾಗಿ ಬೆಳೆಯಬಹುದು. ಹಾಗಾಗಿದ್ದೇ ಆದರೆ
"ಢಂ ಢಂ... ಉಪ್ಪಿ ಫ಼ಾನ್ಸ್ ಮೈನಸ್ ಒನ್... ಗಾಡ್ ಈಸ್ ಗ್ರೇಟ್... ಗಾಡ್ ಈಸ್ ಗ್ರೇಟ್...."
ಇಂತಿ,
ಶ್ಯಾಮ
