ಇತ್ತೀಚಿನ ಕನ್ನಡ ಚಿತ್ರರಂಗದ ಬೆಳವಣಿಗೆಗಳ ಮೇಲೆ ಒಂದು ಕಣ್ಣಿಟ್ಟಿರುವ ಯಾರಿಗಾದರು ಇಂತಹ ಒಂದು ಪ್ರಶ್ನೆ ಮೂಡಿರಬಹುದು. ಹಾಗನ್ನಿಸಿದ್ದರೆ ಅಥವಾ ಹೌದೆನ್ನಿಸಿದ್ದರೆ ಖಂಡಿತವಾಗಿಯೂ ಸರಿ. ಹೌದು!!! "ಮಳೆ" ಬಂದು ಹೋದ ಮೇಲೆ ಮತ್ತೊಮ್ಮೆ ಕನ್ನಡ ಚಿತ್ರರಂಗದ "ದುನಿಯಾ"ದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ನಮ್ಮೆಲ್ಲರಿಗೂ ಗೊತ್ತಿರುವಂತೆಯೇ, ಹೀಗಾಗುತ್ತಿರುವುದು ಇದೇ ಮೊದಲ ಬಾರಿಯೇನಲ್ಲ... ಹಾಗು ಕೊನೆಯ ಬಾರಿಯೂ ಅಲ್ಲ. ಈ ಬದಲಾವಣೆಯ ಗಾಳಿ ಹಿಂದೆಯೂ ಬೀಸಿತ್ತು... ಮುಂದೆಯೂ ೧೦೦% ಬೀಸುತ್ತದೆ... ಮತ್ತೆ ಮತ್ತೆ ಬೀಸುತ್ತಲೇ ಇರುತ್ತದೆ... ಒಂದು ಪ್ರಸಿಧ್ಧ ಹೇಳಿಕೆಯೇ ಇಲ್ಲವೆ? "ಈ ನಶ್ವರ ಜಗತ್ತಿನಲ್ಲಿ ಬದಲಾವಣೆಯೊಂದೇ ಶಾಶ್ವತ". ಆದರೆ ಈ ಬಾರಿ ಅದು ಹೀಗೆ ಸಣ್ಣಗೇ ಬೀಸಿ ತಣ್ಣಗೇ ಮಾಯವಾಗುತ್ತದೋ ಅಥವಾ ದೊಡ್ಡ ಬಿರುಗಾಳಿಯಾಗಿ ಬೆಳೆದು ಹಳಸು ಜಡಗಳನ್ನು ಕಿತ್ತೆಸೆಯುತ್ತದೆಯೋ? ಎಂಬುದೇ ಯಕ್ಷ ಪ್ರಶ್ನೆಯಾಗಿದೆ.
ಇತ್ತೀಚಿನ (ಕಳೆದ ಎರಡು ದಶಕಗಳು) ಇತಿಹಾಸ ಮತ್ತೊಮ್ಮೆ ಮೆಲುಕು ಹಾಕಿದರೆ, ಮೊದಲನೆಯದರ ಸಾಧ್ಯತೆಯೇ ಹೆಚ್ಚು. ಫ಼್ಲ್ಯಾಷ್ಬಾಕ್ ಇಂದನೇ ಶುರುಮಾಡೋಣ... ಮತ್ತೊಮ್ಮೆ ನಿಮ್ಮ ಗಮನಕ್ಕೆ, ನಾನು ಪರಿಗಣಿಸುತ್ತಿರುವ ಕಾಲಘಟ್ಟ ಕಳೆದ ೨೦-೨೫ ವರ್ಷಗಳು ಮಾತ್ರ(ಅದಕ್ಕಿಂತ
ಮೊದಲಿನ ಚಿತ್ರರಂಗ ಹಾಗು ಚಿತ್ರಗಳ ಬಗ್ಗೆ ನನಗೆ ಅಶ್ಟಾಗಿ ತಿಳಿದಿಲ್ಲ)...
ಎಲ್ಲಕ್ಕಿಂತ ಮೊದಲು ನೆನಪಿಗೆ ಬರೋ ಹೆಸರು ದಿ. ಶಂಕರ್ ನಾಗ್. ಮಿಂಚಿನ ಓಟ, ಜನ್ಮ ಜನ್ಮದಾ ಅನುಬಂಧ, ಆಕ್ಸಿಡೆಂಟ್, ಒಂದು ಮುತ್ತಿನ ಕಥೆ, ಗೀತ ಚಿತ್ರಗಳಿಂದ ಚಿತ್ರ ನಿರ್ದೇಶನಕ್ಕೆ ಹೊಸ ಆಯಾಮವನ್ನೇ ಸೃಷ್ಠಿಸಿದರು. ಅವರ ನೋಡಿ ಸ್ವಾಮಿ ನಾವಿರೋದು ಹೀಗೆ ಇಂದಿಗೂ ಅಂತರ್ಜಾಲದಲ್ಲಿ ಸಾವಿರಾರು ಬಾರಿ ವೀಕ್ಷಿಸಲ್ಪಡುತ್ತಿದೆ. ಅವರ ಕಥಾಪ್ರಧಾನ ಚಿತ್ರಗಳಲ್ಲಿರುತ್ತಿದ್ದ ಸಮಾಜಿಕ ಕಳಕಳಿ ಪ್ರಶಂಸರ್ಹನೀಯ. ಪುಟ್ಟಣ್ಣನವರ ನಂತರ ಅವರ ಜಾಗ ತುಂಬಬಲ್ಲಂತಹ ಪ್ರತಿಭೆ ಇದ್ದಂತಹ ಅತ್ಯಂತ ಅರ್ಹ ನಿರ್ದೇಶಕ ಶಂಕರ್ ನಾಗ್. ಕೇವಲ ಚಿತ್ರರಂಗಕ್ಕಷ್ಟೇ ಸೀಮಿತವಾಗದೇ, ಕಿರುತೆರೆ ಹಾಗೂ ರಂಗಭೂಮಿಗೂ ಅವರ ಕೊಡುಗೆ ಅಪಾರ... ಕರ್ನಾಟಕದ ಹೊರಗೂ ಕನ್ನಡ ಚಿತ್ರರಂಗಕ್ಕೆ ಮನ್ನಣೆ, ಗೌರವ ತಂದುಕೊಟ್ಟ ಕೀರ್ತಿ ನಮ್ಮ ಶ್ಂಕರ್ ನಾಗ್ ಅವರದು. ಆದರೆ ಈ ಬದಲಾವಣೆಯ ಬೀಜವನ್ನು ಹೆಮ್ಮರವಾಗದಂತೆ ಆ ಕ್ರೂರ ವಿಧಿ ತಡೆದೇಬಿಟ್ಟಿತು...
ಅಪರಿಚಿತ ಚಿತ್ರದಿಂದ ಅಪಾರ ನಿರೀಕ್ಷೆ ಹುಟ್ಟಿಸಿದ ಕಾಶಿನಾಥ್ ಹಲವಾರು ಹೊಸ ಪ್ರಯತ್ನಗಳನ್ನು ಮಾಡಿದರು. ಅವರ ಚಿತ್ರಗಳಲ್ಲಿ ಸದಾ ಒಂದು ಸಂದೇಶ ಅಡಕವಾಗಿರುತ್ತಿತ್ತು. ವರದಕ್ಷಿಣೆಯಂತಹ ಸಾಮಾಜಿಕ ಪಿಡುಗುಗಳನ್ನು ಕಿತ್ತೊಗೆಯುವ ಪ್ರಯತ್ನಗಳನ್ನೂ ತಮ್ಮ ಚಿತ್ರಗಳಿಂದ ಮಾಡಿದರು. ಯಾರೂ ಮುಟ್ಟದ ಸೆಕ್ಸ್ ಕಾಮಿಡಿ ಚಿತ್ರ ಪ್ರಕಾರವನ್ನು ಪ್ರಯೋಗಶೀಲತೆಯೊಂದಿಗೆ ಉಪಯೋಗಿಸಿದ ಏಕೈಕ ಕನ್ನಡ ನಿರ್ದೇಶಕ ಕಾಶಿನಾಥ್. ಕೋಣೆಯ ನಾಲ್ಕು ಗೋಡೆಗಳ ಮಧ್ಯೆ, ಮುಚ್ಚಿದ ಬಾಗಿಲುಗಳ ಹಿಂದೆಯಷ್ಟೇ ಚರ್ಚಿಸಲ್ಪಡುತ್ತಿದ್ದ ಲೈಂಗಿಕ ಸಮಸ್ಯೆಗಳಂತಹ ವಿಚಾರಗಳನ್ನು ಚಿತ್ರಗಳ ಮೂಲಕ ಚರ್ಚಿಸಿದ ಮೊದಲಿಗ ಕಾಶಿನಾಥ್. ಆದರೆ ಬರೀ "ಪೋಲಿ ನಿರ್ದೇಶಕ" ಎಂಬ ಹಣೆಪಟ್ಟಿಯೇ ಅವರಿಗೆ ಖಾಯಂ ಆಗಿದ್ದು ವಿಪರ್ಯಾಸ. ಬಹುಷಃ ಆ ಸಮಯಕ್ಕೆ ಕಾಶಿನಾಥ್ ಬಹಳವೇ ಅಡ್ವಾನ್ಸ್ಡ್ ಆಗಿಬಿಟ್ಟರೇನೋ... ಇವತ್ತಿನ ಮುಂದುವರೆದ ಸಮಾಜದಲ್ಲಿ ಅವರ ಸೆಕ್ಸ್ ಕಾಮಿಡಿಗಳು ಹೆಚ್ಚಿನ ಪ್ರೇಕ್ಷಕರನ್ನು ಪಡೆವ ಎಲ್ಲಾ ಸಾಧ್ಯತೆಗಳೂ ಇತ್ತು.. ಹೀಗೆ ಮತ್ತೊಬ್ಬ ಬದಲಾವಣೆಯ ಹರಿಕಾರ ಮಸುಕಾಗಿ ಹೋದ...
ಹೊಸತನಕ್ಕಾಗಿ, ಬದಲಾವಣೆಗಾಗಿ ತುಡಿಯುತ್ತಿದ್ದ ಪ್ರೇಕ್ಷಕನಿಗೆ ಮತ್ತೊಮ್ಮೆ ಮೃಷ್ಠಾನ್ನ ಬಡಿಸಿದವರು ವಿ.ರವಿಚಂದ್ರನ್. ಇವರನ್ನು ಹೆಜ್ಜೆ ಹೆಜ್ಜೆಗೂ ಬೆಂಬಲಿಸಿದವರು ಹಂಸಲೇಖ. ಪ್ರೇಮಲೋಕ ತೋರಿಸಿದ ಈ ಕಿಂದರಿಜೋಗಿ ಅದ್ಧೂರಿತನಕ್ಕೆ ಇನ್ನೊಂದು ಹೆಸರಾಗಿಬಿಟ್ಟ. ಕನ್ನಡ ಚಿತ್ರರಂಗಕ್ಕೆ ಅದ್ಧೂರಿ ಕನಸುಗಳನ್ನು ಕಾಣಲು ಕಲಿಸಿದ್ದೇ ಈ ಕಲಾವಿದ. ರಿಮೇಕ್ ಚಿತ್ರಗಳನ್ನು ನಮ್ಮತನ ಬೆರೆಸಿ ಹೇಗೆ ಮಾಡಬಹುದೆಂದು ತೋರಿಸಿದ್ದೇ ಈ ರಣಧೀರ. ರಿಮೇಕ್ ಚಿತ್ರಗಳಲ್ಲಿ ಅವರ ಕೈ ಹಿಡಿದ ಪ್ರೇಕ್ಷಕ, ಅದೇ ಅದ್ಧೂರಿ ಸ್ವಮೇಕ್ ಚಿತ್ರಗಳಲ್ಲಿ ಅವರ ಕೈ ಬಿಟ್ಟುಬಿಟ್ಟ. ಏಕಾಂಗಿಯಂತಹ ವಿಭಿನ್ನ ಪ್ರಯತ್ನ ಇನ್ನಿಲ್ಲದಂತೆ ನೆಲ ಕಚ್ಚಿತು. ಈ ಬಾರಿ ಈ ಬದಲಾವಣೆಯ ಬಿರುಗಾಳಿಯನ್ನು ತಡೆದು ನಿಲ್ಲಿಸಿದ್ದು ಬೇರ್ಯಾರೋ ಅಲ್ಲ... ನಾವೇ ಪ್ರೇಕ್ಷಕರು... ಆದರೂ ಬದಲಾವಣೆಯ ಮಟ್ಟಿಗೆ, ಚಿತ್ರ ನಿರ್ಮಾಣದ ಮಟ್ಟಿಗೆ ಅತ್ಯಂತ ಹೆಚ್ಚು ಕಾಲ ಬೀಸಿದ ಬದಲಾವಣೆಯ ಗಾಳಿ ರವಿ-ಹಂಸಲೇಖ ಜೋಡಿ.... ನಾದ ಬ್ರಹ್ಮನನ್ನು ತೊರೆದ ಏಕಾಂಗಿ ರವಿ ಮಂಕಾಗಿದ್ದೂ ನಿಜ...
ಮತ್ತೊಮ್ಮೆ ಈ ಬದಲಾವಣೆಯ ಬಿರುಗಾಳಿ ಎಬ್ಬಿಸಿದ್ದು ಬುದ್ಧಿವಂತ ಉಪೇಂದ್ರ. ತಮ್ಮ ವಿಭಿನ್ನ ನಿರೂಪಣೆ, ಪ್ರೇಕ್ಷಕನ ನಿರೀಕ್ಷೆ ಸುಳ್ಳಾಗಿಸುವ ಕಥಾ ತಿರಿವುಗಳು ಹಾಗು ತಿವಿದು ಖುಷಿ ಕೊಡುವ ಸಂಭಾಷಣೆಗಳಿಂದ ಹೊಸ ವ್ಯಾಖ್ಯಾನ ಬರೆದ ಚತುರ ಉಪ್ಪಿ. ವಿಭಿನ್ನತೆ ಹಾಗೂ ಕಮರ್ಶಿಯಲ್ ಅಂಶಗಳ ಮಿಶ್ರಣ ಹದವನ್ನು ಉಪ್ಪಿಯಷ್ಟು ಬಹುಶಃ ಇನ್ನ್ಯಾರೂ ಕೈಗೂಡಿಸಿಕೊಂಡಿಲ್ಲ. ರೌಡಿಸಂ, ಹಾರರ್, ಲವ್ ಇನ್ನೂ ಹಲವಾರು ಪ್ರಕಾರಗಳನ್ನು ಉಪ್ಪಿ ಯಶಸ್ವಿಯಾಗಿ ನಿಭಾಯಿಸಿದರು. ಬದಲಾವಣೆಯ ಈ ಹಡಗೂ ರಿಮೇಕ್ ಸುಳಿಗೆ ಸಿಕ್ಕು ಛಿದ್ರವಾಯಿತು. ಉಪ್ಪಿಗೂ ತಗುಲಿತು ರಿಮೇಕ್ ರೋಗ... ಅಭಿನಯದ ಮಟ್ಟಿಗೆ....
ಇವರಲ್ಲದೆ ಇನ್ನೂ ಹಲವರು ಕಾಲ ಕಾಲಕ್ಕೆ ಹೊಸ ಪ್ರಯತ್ನಗಳನ್ನು ಮಾಡುತ್ತಿದ್ದರು. ನಾಗಾಭರಣ, ರಾಜೇಂದ್ರ ಸಿಂಗ್ ಬಾಬು, ದಿನೇಶ್ ಬಾಬು ಮತ್ತು ಹಲವರು ಕೆಲ ನೆನಪಿಡುವಂತಹ ಚಿತ್ರಗಳನ್ನು ಕೊಟ್ಟರಾದರು ದೊಡ್ಡ ಮಟ್ಟದ ಬದಲಾವಣೆ ತರುವಲ್ಲಿ ಅಷ್ಟು ಯಶಸ್ವಿಯಾಗಲಿಲ್ಲ. ಗಿರೀಶ್ ಕಾಸರವಳ್ಳಿಯಂತಹವರು ಸೀರಿಯಸ್ ಕಲಾ ಚಿತ್ರಗಳಿಗೇ, ಪ್ರಶಸ್ತಿಗಳಿಗೇ ಸೀಮಿತವಾಗಿಬಿಟ್ಟರು... ಅವರ ಚಿತ್ರಗಳು ಸಾಮಾನ್ಯ ಪ್ರೇಕ್ಷಕರನ್ನು ಅಷ್ಟಾಗಿ ಇನ್ನೂ ತಲುಪದಿರುವುದು ವಿಷಾದಕರ. ಪರಭಾಷಾ ಚಿತ್ರರಂಗದಷ್ಟು ಕ್ರಿಯಾಶೀಲವಲ್ಲದ ಕನ್ನಡ ಚಿತ್ರರಂಗ ಸಿದ್ಧ ಸೂತ್ರಗಳಿಗೆ, ರಿಮೇಕ್ ರೋಗಕ್ಕೆ ಅಂಟಿಕೊಂಡು ಮತ್ತೊಮ್ಮೆ ಸೊರಗತೊಡಗಿತು....
ಇದಿಷ್ಟು ಫ಼್ಲ್ಯಾಷ್ ಬಾಕ್. ಈಗ ಮತ್ತೆ ಬ್ಯಾಕ್ ಟು ಇಂದಿನ ಸಮಯ. ಸಾಮಾನ್ಯವಾಗಿ ಭಾರೀ ಮಳೆ ಬಂದ ನಂತರ ಸುತ್ತಮುತ್ತಲಿನ ಪರಿಸರ, ರಸ್ತೆ ಬೀದಿಗಳು ಎಲ್ಲವೂ ಈ ಮಳೆಯಲ್ಲಿ ಮಿಂದು ಹೊಸದಾಗಿ ಕಂಗೊಳಿಸುತ್ತವೆ. ಶುಭ್ರವಾಗಿ ಕಾಣತೊಡಗುತ್ತವೆ. ಹಳೆಯ ಕಸ ಕೊಚ್ಚಿ ಹೋಗುತ್ತದೆ. ಮಳೆಯ ಇಂತಹ ಕೆಲಸವನ್ನು ಮುಂಗಾರು ಮಳೆ ಹಾಗೂ ದುನಿಯಾ ಚಿತ್ರಗಳು ಕನ್ನಡ ಚಿತ್ರರಂಗಕ್ಕೆ ಮಾಡಿವೆ. ಈ ಮಳೆ ನೀರಿಗೆ ಸಿಕ್ಕಿ ಸಾಂಡಲ್ ವುಡ್ ನ ಹಳೆಯ ಕೆಲ ಸೂತ್ರಗಳು ಕೊಚ್ಚಿ ಹೋಗಿವೆ. ಹೊಸ ಪ್ರತಿಭೆಗಳ ಭಾರೀ ಪ್ರವಾಹವೇ ಗಾಂಧೀನಗರದತ್ತ ಹರಿದು ಬರುತ್ತಿದೆ. ಹೊಸ ಕಥೆಗಳಿಂದ ಹಿಡಿದು ಪ್ರಚಾರ ತಂತ್ರದ ಹಲವಾರು ಹೊಸ ಪ್ರಯತ್ನಗಳಿಗೆ ಕನ್ನಡ ಚಿತ್ರರಂಗ ಸಾಕ್ಷಿಯಾಗುತ್ತಿದೆ. ಬರೀ ಕನ್ನಡಿಗರಲ್ಲದೆ ಕನ್ನಡೇತರ ಜನರೂ ಕನ್ನಡ ಚಿತ್ರಗಳೆಡೆಗೆ ಬೆರಗುಗಣ್ಣಿನಿಂದ ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಪಿವಿಆರ್ ನಂತಹ ಮಲ್ಟಿಪ್ಲೆಕ್ಸ್ ಚಿತ್ರಮಂದಿರದಲ್ಲಿ ಒಂದು ವರ್ಷ ಪೂರೈಸಿ ಮುಂಗಾರು ಮಳೆ ಹಾಗೂ ಮಿಲನ ಚಿತ್ರಗಳು ಹೊಸ ಚರಿತ್ರೆಯನ್ನೇ ಸೃಷ್ಠಿಸಿವೆ. ಹರಿದು ಬಂದ ಹಣದ ಹೊಳೆ ನೋಡಿ ಕಾರ್ಪೊರೇಟ್ ಸಂಸ್ಥೆಗಳು ಕನ್ನಡ ಚಿತ್ರ ನಿರ್ಮಾಣಕ್ಕೆ ಧುಮುಕಿವೆ. ರಿಯಲ್ ಎಸ್ಟೇಟ್ ಉದ್ಯಮಿಗಳಿಗಂತೂ ಚಿತ್ರನಿರ್ಮಾಣ ಈಗ ಸೈಡ್ ಬಿಸ್ನೆಸ್. ಕನ್ನಡ ಚಿತ್ರರಂಗವೂ ಇವರಿಗೆ ದಿಡ್ಡಿ ಬಾಗಿಲನ್ನು ತೆರೆದೇ ಇಟ್ಟಿದೆ. ಒಂದು ದೃಷ್ಠಿಯಲ್ಲಿ ನೋಡಿದರೆ ಇದು ಒಳ್ಳೆಯದೇ. ಸಂಪೂರ್ಣ ಚಿತ್ರಗಳ ಮೇಲೆ ಅವಲಂಬಿತ ನಿರ್ಮಾಪಕರು ಸಿದ್ಧ ಸೂತ್ರಗಳಿಗೇ ಅಂಟಿಕೊಳ್ಳುವುದು ಹೆಚ್ಚು. ಹೆಚ್ಚಿನ ರಿಸ್ಕ್ ಇಲ್ಲದೆ ಹಾಕಿದ ಹಣ ವಾಪಾಸ್ ಪಡೆಯುವುದೇ ಅವರ ಮುಖ್ಯ ಉದ್ದೇಶ. ಇದರಲ್ಲಿ ತಪ್ಪೇನೂ ಇಲ್ಲ. ಅದೇ ಉಳಿದವರಾದರೆ ಸಂಪೂರ್ಣ ಇದರ ಮೇಲೇ ಅವಲಂಬಿಸಿರುವುದಿಲ್ಲ. ಇದರಿಂದ ಹೊಸ ಹೊಸ ಪ್ರಯತ್ನಗಳಿಗೆ ಅವಕಾಶಗಳು ಹೆಚ್ಚಿರುತ್ತವೆ. ಚಲನಚಿತ್ರ ಸಂಗೀತವೂ ಈ ಹೊಸ ಪ್ರಯತ್ನಗಳಿಂದ ಹೊರತಾಗಿಲ್ಲ. ಮನೋಮೂರ್ತಿಯವರು ಬರೀ ಸಂಗೀತದಿಂದಲೇ ಚಿತ್ರಗಳನ್ನು ಯಶಸ್ವಿಯಾಗಿಸಿ ತೋರಿಸಿದ್ದಾರೆ. ಒಂದೇ ಹಾಡಿನಿಂದ ರಘು ದಿಕ್ಷಿತ್ ಸಮಸ್ತ ಕನ್ನಡಿಗರ ಮನಸೂರೆಗೊಡಿದ್ದಾರೆ. ಗುರುಕಿರಣ್, ಅರ್ಜುನ್, ರಿಕಿ ಕೇಜ್ ಹಾಗೂ ಎಮಿಲ್ ರಂತಹವರು ವಿಭಿನ್ನ ಸಂಗೀತದಿಂದ ಸಂಚಲನ ಉಂಟುಮಾಡಿದ್ದಾರೆ. ಕೃಷ್ಣ, ಸತ್ಯ ಹೆಗಡೆ, ವೇಣು ಹಾಗೂ ರಾಮಚಂದ್ರ ಕ್ಯಾಮೆರಾವನ್ನೆ ಕುಂಚದಂತೆ ಬಳಸಿ ಪರದೆಯ ಮೇಲೆ ಮೋಡಿ ಮಾಡುತ್ತಿದ್ದಾರೆ. ಯೋಗರಾಜ್ ಭಟ್, ಸೂರಿ, ಪ್ರಕಾಶ್, ಚೈತನ್ಯ, ಚಂದ್ರು, ಶಶಾಂಕ್ ಅವರಂತಹ ಹಲವಾರು ಭರವಸೆಯ ನಿರ್ದೇಶಕರು ಕನ್ನಡ ಚಿತ್ರರಂಗಕ್ಕೆ ಸಿಕ್ಕಿದ್ದಾರೆ. ಇನ್ನೂ ಹಲವರು ಗೆಲ್ಲುವ ಭರವಸೆಯೊಂದಿಗೆ ಸಾಲುಗಟ್ಟಿ ನಿಂತಿದ್ದಾರೆ. ಇವರೊಂದಿಗೆ ಎಂದೂ ಹೊಸತನಕ್ಕೆ ಹಂಬಲಿಸುವ ಪ್ರೇಮ್ ಹಾಗೂ ಉಪ್ಪಿಯಂತಹ ಹಳೆಯ ಹುಲಿಗಳೂ ಇದ್ದಾರೆ. ಪ್ರೇಮ್ ಜೋಗಿಯ ಮೂಲಕ ಒಂದು ಚಿತ್ರಕ್ಕೆ ಪ್ರಾಚಾರ ಹೇಗೆ ಮಾಡಬೇಕು ಎಂಬುದನ್ನು ತೋರಿಸಿಕೊಟ್ಟರೆ, ಇಂದ್ರಜಿತ್ ಲಂಕೇಶ್ ಬರೀ ಪ್ರಚಾರದಿಂದಲೇ ಒಂದು ಸಾಮಾನ್ಯ ಚಿತ್ರವನ್ನು ಹೇಗೆ ಎತ್ತಬಹುದೆಂದು ತೋರಿಸಿಕೊಟ್ಟಿದ್ದಾರೆ. ಇಂದಿನ ಹೊಸ ನಿರ್ದೇಶಕರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅಂತರ್ಜಾಲವನ್ನು ಚಿತ್ರ ಪ್ರಾಚಾರಕ್ಕಾಗಿ ಪರಿಣಾಮಕಾರಿಯಾಗಿ ಬಳಸಿಕೊಳ್ಳಿತ್ತಿದ್ದಾರೆ. ಅರವಿಂದ್ ಕೌಶಿಕ್ ಬ್ಲಾಗ್ ಶುರುಮಾಡುವುದರೊಂದಿಗೆ ಈ ನಿಟ್ಟಿನಲ್ಲಿ ಒಂದು ಹೊಸ ತಂತ್ರವನ್ನು ಹುಟ್ಟು ಹಾಕಿದ್ದಾರೆ. ದೇವದತ್ತ ಸೈಕೋ ಚಿತ್ರದ ಮೂಲಕ ಒಂದು ಚಿತ್ರದ ಬಗ್ಗೆ ಮೂಡಿಸಬಹುದಾದ ಕುತೂಹಲವನ್ನೂ ಅದರ ಪ್ರಮಾಣವನ್ನೂ ಪ್ರೂವ್ ಮಾಡಿ ತೋರಿಸಿದ್ದಾರೆ. ಗಣೇಶ್, ವಿಜಯ್, ಪ್ರಜ್ವಲ್, ಅಜಯ್ ಇನ್ನೂ ಹಲವಾರು ಹೊಸ ಮುಖಗಳು ಏಕಾಂಗಿಯಾಗಿಯೇ ಕೇವಲ ತಮ್ಮ ಹೆಸರಿನ ಬಲದ ಮೇಲೇ ಒಂದು ಚಿತ್ರವನ್ನು ಗೆಲ್ಲಿಸುವ ಮಟ್ಟಕ್ಕೆ ಬೆಳೆದಿದ್ದಾರೆ. ದಿನೇ ದಿನೇ ಹೊಸ ಮುಖಗಳ ಪರಿಚಯ ಕನ್ನಡ ಚಿತ್ರರಂಗದ ಪಾಲಿಗೆ ಸಾಮಾನ್ಯವಾಗಿಬಿಟ್ಟಿದೆ. ಕಿರುತೆರೆಯಿಂದ ಹಿರಿತೆರೆಗೆ ಭಡ್ತಿ ಪಡೆಯುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ.
ಹರಿದು ಬರುತ್ತಿರುವ ಈ ಹೊಸಬರಲ್ಲಿ ಎಷ್ಟು ಜೊಳ್ಳು ಪ್ರತಿಭೆಗಳಿವೆಯೋ? ಎಷ್ಟು ಜನರನ್ನು ಪ್ರೇಕ್ಷಕ ಮಹಾಪ್ರಭು ಸಾರಾಸಗಟಾಗಿ ತಿರಸ್ಕರಿಸುತ್ತಾನೋ? ಎಷ್ಟು ಜನ ಇಲ್ಲೇ ತಳ ಊರುವರೋ? ಕಾಲವೇ ಹೇಳಬೇಕು.ಒಟ್ಟಿನಲ್ಲಿ ಚಿತ್ರ ನಿರ್ಮಾಣದ ಪ್ರತಿ ವಿಭಾಗದಲ್ಲೂ ಮತ್ತೊಮ್ಮೆ ಬದಲಾವಣೆಯ ಗಾಳಿ ಬೀಸತೊಡಗಿದೆ. ಈ ಬಾರಿಯಾದರೂ ಇದು ಬಿರುಗಾಳಿಯಾಗಿ ಕನ್ನಡ ಚಿತ್ರರಂಗವನ್ನು ಮಂಚೂಣಿಯಲ್ಲಿ ನಿಲ್ಲಿಸುವುದೇ ಕಾದು ನೋಡಬೇಕು....
