ಅಂತೂ ಇಂತೂ ಪ್ರೀತಿ ಏನೋ ಬಂತು. ಆದರೆ...

akumar's picture
Tagged:  

ಹೆಸರು ಶಿವು (ಆದಿತ್ಯ ಬಾಬು). ಜವಾಬ್ದಾರಿಯುತ ತಂದೆಯ ಬೇಜವಾಬ್ದಾರಿಯುತ ನಿರುದ್ಯೋಗಿ ಮಗ. ಇಂಜಿನಿಯರಿಂಗ್ ಓದಿದ್ದರೂ ಸರಿಯಾಗಿ ಇಂಗ್ಲೀಷ್ ಮಾತಾಡಲು ಬರದ ಇವನಿಗೆ ಎಷ್ಟು ಅಲೆದರೂ ಕೆಲಸ ಮಾತ್ರ ಸಿಗೋಲ್ಲ. ಈ ಕಾರಣಕ್ಕಾಗೆ ಅಪ್ಪ ಮಗನಿಗೆ ದಿನವೂ ಜಗಳ ಮಾತ್ರ ತಪ್ಪಿದ್ದಲ್ಲ. ಅಂತೂ ಇಂತೂ ಒಂದು ದಿನ ನಮ್ಮ ಶಿವುಗೆ ಒಂದು ಸಾಫ್ಟ್‍ವೇರ್ ಕಂಪನಿಯಲ್ಲಿ ಕೆಲಸ ಸಿಗುತ್ತದೆ. ಪ್ರಾಜೆಕ್ಟ್ ಮ್ಯಾನೇಜರ್ ಪ್ರೀತಿ (ರಮ್ಯಾ) ಎಂದರೆ ಶಿವುಗೆ ತುಂಬಾ ಪ್ರೀತಿ! ಆದರೆ ಆಕೆ ಮಾತ್ರ ತುಂಬಾ ಸ್ಟ್ರಿಕ್ಟ್! ಶಿವುಗಂತೂ ದಿನವೂ ಅವಳದೇ ಕನಸು. ತನ್ನ ಪ್ರೀತಿಯ ವಿಚಾರವನ್ನು ಅವಳಿಗೆ ಹೇಳಲು ತನ್ನ ಸ್ನೇಹಿತರ ಸಹಾಯವನ್ನೆಲ್ಲ ಪಡೆದರೂ ಏನೂ ಪ್ರಯೋಜನವಾಗದಾಗ ಕೊನೆಗೊಂದು ದಿನ "ಐ ಲವ್ ಯೂ" ಅಂತ ಧೈರ್ಯ ಮಾಡಿ ತಾನೇ ಹೇಳಿಬಿಡುತ್ತಾನೆ. ಆದರೆ ಪ್ರೀತಿ ಇದಕ್ಕೊಪ್ಪದೇ ಚೆನ್ನಾಗಿ ಬಯ್ಯುತ್ತಾಳೆ. ಅಲ್ಲದೇ ತನಗೆ ಈಗಾಗಲೇ ಮದುವೆ ನಿಶ್ಚಯವಾಗಿದೆ ಎಂದೂ ಹೇಳುತ್ತಾಳೆ. ಅವಳನ್ನು ಮರೆಯಲಾಗದ ಶಿವು ಹುಚ್ಚನಂತೆ ವರ್ತಿಸಿದಾಗ ಮಗನ ನೋವನ್ನು ಕಾಣಲಾಗದ ಅಪ್ಪ ಪ್ರೀತಿಯ ಬಳಿ ಹೋಗಿ ಶಿವು ಅವಳನ್ನು ಪ್ರೀತಿಸುವ ವಿಚಾರ ಹೇಳಿ ಮದುವೆಯಾಗುವಂತೆ ಕೇಳಿಕೊಳ್ಳುತ್ತಾನೆ. ಆದರೆ ಪ್ರೀತಿ ಶಿವು ಮತ್ತು ಅವನ ಅಪ್ಪ ಇಬ್ಬರಿಗೂ ಕಪಾಳ ಮೋಕ್ಷ ಮಾಡುತ್ತಾಳೆ. ಇದೇ ನೋವಿನಲ್ಲಿ ಅಪ್ಪ ಕೊನೆಯುಸಿರೆಳೆಯುತ್ತಾನೆ... ಮಗ ಒಬ್ಬಂಟಿಯಾಗಿ ಸಂಪೂರ್ಣ ಕುಸಿದುಹೋಗುತ್ತಾನೆ. ಸ್ನೇಹಿತನ ದುಃಖ ನೋಡಲಾಗದ ಶಿವುನ ಗೆಳೆಯ ಆತನನ್ನು ತನ್ನೂರಿಗೆ ಕರೆದುಕೊಂಡು ಹೋಗುತ್ತಾನೆ... ಅಲ್ಲಿ ಕಾದಿರುತ್ತದೆ ನಿಜವಾದ ಆಘಾತ... ಶಿವುನ ಸ್ನೇಹಿತ ಮದುವೆಯಾಗುತ್ತಿರುವ ಹುಡುಗಿ ಮತ್ಯಾರೂ ಅಲ್ಲ.. ಇದೇ ಪ್ರೀತಿ ಎಂದು ಗೊತ್ತಾಗುತ್ತದೆ.... ಇಲ್ಲಿಗೆ ಇಂಟರ್‍ವಲ್! ಕಥೆ ಮುಂದೆನಾಗುತ್ತದೆ... ತೆರೆಯ ಮೇಲೆ ನೀವೇ ನೋಡಿ.

ಇಂಟರ್‍ವಲ್ ನಂತರ ಚಿತ್ರದ ಮತ್ತೊಂದು ಮಜಲು ತೆರೆದುಕೊಳ್ಳುತ್ತದೆ. ಮೊದಲಾರ್ಧಕ್ಕೂ ಕೊನೆಯಾರ್ಧಕ್ಕೂ ತುಂಬ ವ್ಯತ್ಯಾಸಗಳಿವೆ. ಮೊದಲಾರ್ಧ ಸಾಫ್ಟ್‍ವೇರ್ ಥಳುಕು ಬಳುಕಿನ ಮಧ್ಯೆ ನಡೆದರೆ ದ್ವಿತೀಯಾರ್ಧ ಹಳ್ಳಿಯ ತುಂಬಿದ ಕುಟುಂಬದ ಮಧ್ಯೆ ನಡೆಯುತ್ತದೆ. ಚಿತ್ರದ ನಿಜವಾದ ಮಜಾ ಸಿಗುವುದೇ ದ್ವಿತೀಯಾರ್ಧದಲ್ಲಿ. ನಗೆಮಾಂತ್ರಿಕ ರಂಗಾಯಣ ರಘು ಪ್ರವೇಶವಾಗುವುದೇ ಇಂಟರ್‍ವಲ್ ನಂತರ!

 

aa

 

ಅಭಿನಯದ ವಿಚಾರದಲ್ಲಿ ನಾಯಕ ಆದಿತ್ಯ ಬಾಬು ಸಂಪೂರ್ಣ ವಿಫಲವಾಗುತ್ತಾರೆ. ಇಡೀ ಚಿತ್ರದ ಜೀವಾಳವೇ ನಾಯಕ ಶಿವು ಪಾತ್ರ. ಆದರೆ ಆದಿತ್ಯ ಬಾಬು ಅಭಿನಯ ಕೃತಕವೆನಿಸುತ್ತದೆ. ಜೊತೆಗೆ ಇವರ ಹೇರ್ ಸ್ಟೈಲ್ ಕೂಡ ಇವರಿಗೆ ಹೊಂದುವುದಿಲ್ಲ. ಶಿವು ಪಾತ್ರ ಮಾತ್ರ ಎಲ್ಲರಿಗೂ ಆಪ್ತವಾಗುತ್ತದೆ. ಅಷ್ಟು ಒಳ್ಳೆಯ ಪಾತ್ರಕ್ಕೆ ಆದಿತ್ಯ ಮಾಡಿದ ಅಭಿನಯ ಏನೇನೂ ಸಾಲದು. ಈ ಚಿತ್ರವೇನಾದರೂ ವಿಫಲವಾದರೆ ಅದಕ್ಕೆ 80% ಕಾರಣ ಆದಿತ್ಯ ಅಭಿನಯ ಎಂದರೆ ತಪ್ಪಾಗಲಾರದು. ರಮ್ಯಾ ಕೆಲವು ಕಡೆ ಓವರ್ ಆಕ್ಟ್ ಅನ್ನಿಸಿದರೂ ಆದಿತ್ಯನಿಗಿಂತ ಓಕೆ. ಪೋಷಕ ಪಾತ್ರಗಳಲ್ಲಿ ಲೋಕನಾಥ್,ಶ್ರೀನಿವಾಸ ಮೂರ್ತಿ ಒಳ್ಳೆಯ ಅಭಿನಯ ಮಾಡಿದ್ದಾರೆ. ನಗಿಸಲು ರಂಗಾಯಣ ರಘು, ಮಂಡ್ಯ ರಮೇಶ್ ಇದ್ದಾರೆ. ಕೆಲವೊಂದು ಕಾಮಿಡಿ ದೃಶ್ಯಗಳಿಗೆ ಇಡೀ ಚಿತ್ರಮಂದಿರವೇ ಬಿದ್ದು ಬಿದ್ದು ನಗುತ್ತದೆ.

ಎರಡು ಹಾಡುಗಳು ಸೂಪರ್. "ಮೊದಲ ಸಲ" ಮತ್ತು "ಮಂದಾರ ಮಂದಾರ" ಹಾಡುಗಳು ಮತ್ತೆ ಮತ್ತೆ ಕೇಳುವಂತಿವೆ. "ಅಂತೂ ಇಂತೂ ನಿಜವಾಯಿತು" ಪ್ಯಾಥೋ ಸಾಂಗ್ ಒಮ್ಮೆ ಗುರುಕಿರಣ್ ದ್ವನಿಯಲ್ಲಿ ಮತ್ತೊಮ್ಮೆ ಹರಿಹರನ್ ಧ್ವನಿಯಲ್ಲಿ ಕಾಡುತ್ತದೆ.

ಇದು ತೆಲುಗಿನ ಸೂಪರ್ ಹಿಟ್ ಚಿತ್ರ "ಆದವಾರಿ ಮಾಟಲುಕು ಅರ್ಧಲೇ ವರುಲೆ"ಯ ಕನ್ನಡ ಅವತರಣಿಕೆ. ಈಗಾಗಲೇ ಯಶಸ್ಸನ್ನು ಕಂಡಿರುವ ಚಿತ್ರದ ರೀಮೆಕ್ ಆದ ಕಾರಣ ಚಿತ್ರಕಥೆ ನಿರೂಪಣೆ ಚೆನ್ನಾಗಿಯೇ ಬಂದಿದೆ. ಮುಖ್ಯವಾಗಿ ಚಿತ್ರದಲ್ಲಿ ಒಂದು ಫೀಲ್ ಇದೆ. ಶಿವು ಪಾತ್ರಕ್ಕೆ ತೆರೆಯ ಮೇಲೆ ನೋವಾಗುತ್ತಿದ್ದರೆ ವೀಕ್ಷಕರೂ ನೋವನ್ನುಪಡುತ್ತಾರೆ. ವೀಕ್ಷಕರನ್ನು ಪಾತ್ರಗಳಲ್ಲಿ ತಲ್ಲೀನಗೊಳಿಸುವಲ್ಲಿ ಚಿತ್ರ ಸಫಲವಾಗಿದೆ. ಮೊದಲಾರ್ಧ ಸ್ವಲ್ಪ ಅಲ್ಲಲ್ಲಿ ಬೋರ್ ಆದರೂ ದ್ವಿತೀಯಾರ್ಧ ಒಳ್ಳೆಯ ಮನರಂಜನೆಯನ್ನು ಕೊಡುತ್ತದೆ.

ಒಟ್ಟಿನಲ್ಲಿ ಇದೊಂದು ಕೌಟುಂಬಿಕ ಪ್ರೇಮಕಥಾ ಚಿತ್ರ. ಎಲ್ಲಿಯೂ ಅಶ್ಲೀಲತೆ, ಹಿಂಸೆ ಇಲ್ಲ. ಹಾಸ್ಯ ಸಾಕಷ್ಟಿದೆ. ಎರಡು ಉತ್ತಮ ಹಾಡುಗಳಿವೆ. ಫೀಲ್ ಉಂಟುಮಾಡುವ ಕಥೆಯಿದೆ. ಆದರೆ ಆ ಮಟ್ಟದ ಅಭಿನಯ ಮಾತ್ರ ಇಲ್ಲ. ಆ ವಿಚಾರದಲ್ಲಿ ಮಾತ್ರ ಚಿತ್ರ ನಿರಾಸೆಯನ್ನುಂಟು ಮಾಡುತ್ತದೆ.

6/10