ಬೊಂಬಾಟ್ - ಇದು ಕೇವಲ ಗಣೇಶನ ಆಟ! ಮಿಕ್ಕವರಿಗೆ... ??

akumar's picture
Tagged:  

ಯಾಕೋ ಗಣೇಶಾ, ಈ ರೀತಿಯ ಚಿತ್ರಗಳನ್ನ ಒಪ್ಕೋತೀಯಾ? ಇಮೇಜ್ ಬದಲಾವಣೆ ಮಾಡ್ಕೊಳ್ಳೋದು ಒಳ್ಳೆಯದೇ.. ಹಾಗಂತ ಹಿಂದೆ ಮುಂದೆ ಯೋಚನೆ ಮಾಡದೆ ಚಿತ್ರಕ್ಕೆ ಸಹಿ ಹಾಕೋದು ನಿನ್ನ ಬೆಳವಣಿಗೆಗೆ ಮಾರಕ ಕಣೋ. ಡಿ. ರಾಜೇಂದ್ರಬಾಬು ಯಾವಾಗ ತಮ್ಮ ಓಬೀರಾಯನ ಕಾಲದ ಹಳಸಲು ನಿರೂಪಣೆಯಿಂದ ಹೊರಗೆ ಬರ್ತಾರೆ ಅನ್ನೋದು ಈ ಗಣೇಶ ಏನು.. ಕೈಲಾಸದಲ್ಲಿರೋ ಸ್ವತಃ ಲಾರ್ಡ್ ಗಣೇಶನಿಗೂ ಗೊತ್ತಿಲ್ಲ!

mm

ಈ ಜನಾರ್ದನ ಮಹರ್ಷಿ - ಬಾಬು ಕಾಂಬಿನೇಷನ್ನಿನ ಬಿಂದಾಸ್ ನಲ್ಲಿ ನಮ್ಮ ಪವರ್ ಸ್ಟಾರ್ ಪುನೀತ್ ನಟಿಸಿ ಮಾಡಿದ ತಪ್ಪನ್ನೇ ಈಗ ನಮ್ಮ ಗಣೇಶ ಕೂಡ ಮಾಡಿ ತನ್ನ ಈವರೆಗಿನ ಎಲ್ಲ ಚಿತ್ರಗಳ ಪೈಕಿ ಕಪ್ಪು ಚುಕ್ಕಿಯಾಗುವಂತೆ ಮಾಡ್ಕೊಂಡಿದ್ದು ನಿಜಕ್ಕೂ ಬೇಸರದ ವಿಷಯ!

 

 

bb

 

ವಿದೇಶದಲ್ಲಿ ವಿದ್ಯಾಭ್ಯಾಸ ಮುಗಿಸಿ ಬೆಂಗಳೂರಿಗೆ ಮರಳುನ ನಾಯಕಿ ಶಾಲಿನಿ(ರಮ್ಯಾ) ರಸ್ತೆಯಲ್ಲಿ ಹೊಡೆದಾಡುವ ನಾಯಕ ಆನಂದನನ್ನು (ಗಣೇಶ್) ನೋಡಿ ಅವನೊಬ್ಬ ರೌಡಿ ಎಂದು ಭಾವಿಸುತ್ತಾಳೆ. ಹೊಡೆದಾಡುವ ನಾಯಕನನ್ನು ಮತ್ತೆರಡು ಬಾರಿ ನೋಡುವ ನಾಯಕಿಯ ಮನಸ್ಸಿನಲ್ಲಿ ಅವನೊಬ್ಬ ದೊಡ್ಡ ರೌಡಿ ಎಂದ ಭಾವನೆ ಮರವಾಗಿ ಬೆಳೆಯುತ್ತದೆ. ಆದರೆ ಅವಳಪ್ಪ ಪೋಲಿಸ್ ಕಮಿಷನರ್‍ಗೆ ಗೊತ್ತು ಈತ "ಒಳ್ಳೆಯ ರೌಡಿ.. ಸಮಾಜ ಸೇವಕ ರೌಡಿ" ಎಂದು! ನಗರದ ಮಾಫಿಯಾ ಗ್ಯಾಂಗ್ ಲೀಡರ್‍ನ ಮಗ (ಆದಿ ಲೋಕೇಶ್) ಶಾಲಿನಿಯನ್ನು ಮೋಹಿಸಿ, ಅವಳಿಂದ ಪೆಟ್ಟು ತಿಂದರೂ ಅವಳನ್ನೇ ಮದುವೆಯಾಗುವುದಗಿ ಹಠ ಹಿಡಿದಾಗ ಅವನಪ್ಪ ಮತು ಚಿಕ್ಕಪ್ಪಂದಿರು (ವಿಲನ್ ಬ್ರದರ್ಸ್) ಬಲವಂತವಾಗಿ ಶಾಲಿನಿಯ ಮದುವೆಯನ್ನು ಆದಿಯ ಜೊತೆ ನಿಶ್ಚಯಿಸುತ್ತಾರೆ! ಕಮೀಷನರ್ ಆದರೂ ಕೈಲಾಗದ ಅಪ್ಪ ನಾಯಕನ ಮೊರೆಹೋಗಿ, ಹೇಗಾದರೂ ಮಾಡಿ ನನ್ನ ಮಗಳನ್ನು ಕಾಪಾಡು ಎಂದು ಗೋಗರೆಯುತ್ತಾನೆ! ಚದುರಂಗದಾಟದಲ್ಲಿ ಬಲು ನಿಷ್ಣಾತನಾದ ನಮ್ಮ ನಾಯಕ ಆನಂದ ತನ್ನ ಬುದ್ಧಿಶಕ್ತಿಯನ್ನುಪಯೋಗಿಸಿ ದುಷ್ಟಶಕ್ತಿಯ ಕಪಿಮುಷ್ಠಿಯಿಂದ ನಾಯಕಿಯನ್ನು ಹೇಗೆ ಕಾಪಾಡುತ್ತಾನೆ ಎಂಬುದು ಬೊಂಬಾಟ್ ಅಲಿಯಾಸ್ ಗಣೇಶನ ಆಟದ ಸಾರಾಂಶ!

 

bbb

 

ಕಥೆ ತೀರಾ ಮಾಮೂಲಿ. ಚಿತ್ರಕಥೆ-ನಿರೂಪಣೆಯ ಬಗ್ಗೆ ಹೇಳದೇ ಇರುವುದೇ ಒಳಿತು. ಚದುರಂಗದಾಟದಲ್ಲೇನೂ ಹೊಸತನವಿಲ್ಲ. ವಿಲನ್ ಪಾತ್ರಗಳನ್ನು ಹಾಸ್ಯಗಾರರಂತೆ ಚಿತ್ರಿಸಲಾಗಿದೆ. ಗಡುಸಾದ, ರಾಜ ಗಾಂಭೀರ್ಯದ ಖಳನಟರಾಗಿ ಹೆಸರು ಮಾಡಿರುವ ರಾಹುಲ್ ದೇವ್ ನಂಗೊಂದು ಪಪ್ಪಿ ಕೊಡು ಪ್ಲೀಸ್ ಪ್ಲೀಸ್ ಎಂದು ಗಣೇಶನಲ್ಲಿ ಕೇಳುವುದು ಕೂಡ ನಿರ್ದೇಶಕರ ಪ್ರಕಾರ ಒಂದು ಜೋಕು! ಆದಿ ಲೋಕೇಶ್ ಕೈಲಿ ಹಾಸ್ಯ ಮಾಡಿಸಲು ಯತ್ನಿಸಿ ಇಡೀ ಪಾತ್ರವನ್ನೇ ಹಾಸ್ಯಾಸ್ಪದವನ್ನಾಗಿಸುವಲ್ಲಿ ಬಾಬು-ಮಹರ್ಷಿ ಜೋಡಿ ಯಶಸ್ವಿಯಾಗಿದೆ.ರಮ್ಯಾ ಕೇವಲ ಮೊದಲಾರ್ಧಕ್ಕಷ್ಟೇ ಸೀಮಿತ. ದ್ವಿತೀಯಾರ್ಧದಲ್ಲಿ ಆಕೆ ಬರುವುದೇ ಎರಡು ಮತ್ತೊಂದು ಸೀನ್‍ಗಳಲ್ಲಿ ಮಾತ್ರ. ಮನೋಮೂರ್ತಿಯವರ ಹಾಡುಗಳಲ್ಲಿ ಎರಡು ಹಾಡುಗಳು ಇಂಪಾಗಿದ್ದು ಚಿತ್ರೀಕರಣವೂ ಚೆನ್ನಾಗಿದೆ. ಆಡಿಯೋ ಬಿಡುಗಡೆಗೆ ಮುನ್ನ ಬಹು ಚರ್ಚಿತ ಟೈಟಲ್ ಸಾಂಗ್ ಸಪ್ಪೆಯಾಗಿದೆ. ಇಡೀ ಚಿತ್ರದ ಒಂದೇ ಒಂದು ಆಕರ್ಷಣೆಯ ಪಾತ್ರ ಎಂದರೆ ನಮ್ಮ ಗಣೇಶ್ ಮಾತ್ರ! ಲವರ್ ಬಾಯ್ ಇಮೇಜಿನಿಂದ ಆಕ್ಷನ್ ಹೀರೊ ಆಗುವಲ್ಲಿ ಗಣೇಶ್ ಪಟ್ಟ ಶ್ರಮ ತೆರೆಯ ಮೇಲೆ ಕಾಣುತ್ತದೆ. ಹೊಡೆದಾಟದ ಸನ್ನಿವೇಶಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಅಭಿನಯದ ವಿಚಾರದಲ್ಲಿ ತಮ್ಮ ಎಂದಿನ ಲವಲವಿಕೆ ಇಲ್ಲೂ ಮುಂದುವರಿದಿದೆ. ಆದರೆ ಏನು ಪ್ರಯೋಜನ? ಅವರ ಈ ಎಲ್ಲ ಪ್ರಯತ್ನ ಹೊಳೆಯಲ್ಲಿ ಹುಣಸೆಹಣ್ಣು ತೊಳೆದ ಹಾಗಾಗಿದೆ.

ಕಥೆ, ಚಿತ್ರಕಥೆ,ಲಾಗಿಕ್ ಎಲ್ಲಾ ಬದಿಗಿಡಿ.. ನಮಗೆ ಬೇಕಾಗಿರೋದು ಕೇವಲ ಗಣೇಶನ ಅಭಿನಯ, ಬದಲಾದ ಇಮೇಜಿನ ಚಿತ್ರಣ, ಕೇವಲ ಟೈಂ ಪಾಸ್ ಮಾತ್ರ ಎನ್ನುವವರಿಗೆ ಬೊಂಬಾಟ್ ಹಿಡಿಸಬಹುದು.