ಯಾತ್ರೆ ಇಂದಿನವರೆಗೂ ನಿರಾತಂಕವಾಗಿ ಸಾಗಿದೆ. ಬದಲಾದ ಕಾಲಕ್ಕೆ ತಕ್ಕಂತೆ ಹೊಸ
ಆಯಾಮಗಳನ್ನು, ಹೊಸತನಗಳನ್ನು ಮೈಗೂಡಿಸಿಕೊಂಡು ನಳನಳಿಸುತ್ತಿರುವ ಕನ್ನಡ ಚಿತ್ರರಂಗದ
ಇತಿಹಾಸದ ಪುಟಗಳು ಕೂಡ ಅಷ್ಟೇ ಶ್ರೀಮಂತವಾಗಿವೆ. ಕನ್ನಡ ಚಿತ್ರರಂಗ ಸಾಗಿ ಬಂದ
ಹಾದಿಯಲ್ಲಿ ಅದೆಷ್ಟೋ ಚಿತ್ರಗಳು ಮೈಲಿಗಲ್ಲುಗಳಾಗಿವೆ. ಜನ ಮಾನಸದಲ್ಲಿ ಇಂದಿಗೂ
ಹಸಿರಾಗಿರುವ ಹಲವಾರು ಚಿತ್ರರತ್ನಗಳಿವೆ. ಅವುಗಳಲ್ಲಿ ಕೆಲವು ಅನರ್ಘ್ಯ ರತ್ನಗಳತ್ತ
ಮತ್ತೊಮ್ಮೆ ಅವಲೋಕಿಸುವ ಕಿರು ಪ್ರಯತ್ನವೇ ಈ "ಗಂಧದಗುಡಿ ಫ್ಲಾಶ್ ಬ್ಯಾಕ್". ಪ್ರತೀ ವಾರ ಒಂದೊಂದು ಮರೆಯಲಾಗದ ಚಿತ್ರದ ಬಗ್ಗೆ ಮಾತಾಡೋಣ.
ಇಂದಿನ ಚಿತ್ರ - "ಸನಾದಿ ಅಪ್ಪಣ್ಣ"
ಕಿರು ಮಾಹಿತಿ:
- ಚಿತ್ರ ನಿರ್ಮಾಣ ಸಂಸ್ಥೆ:ಆನಂದ ಲಕ್ಷ್ಮಿ ಎಂಟರ್‍ಪ್ರೈಸಸ್
- ಬಿಡುಗಡೆಯಾದ ವರ್ಷ: 1977
- ಪಾತ್ರವರ್ಗ: ನಟ ಸಾರ್ವಭೌಮ ಡಾ. ರಾಜ್ ಕುಮಾರ್, ಜಯಪ್ರದಾ, ಅಶೋಕ್, ಬಾಲಕೃಷ್ಣ,
ಎಮ್.ಎನ್.ಲಕ್ಷ್ಮೀದೇವಿ, ತೂಗುದೀಪ ಶ್ರೀನಿವಾಸ್, ಸಂಪತ್, ಪಾಪಮ್ಮ - ಸಂಗೀತ: ಜಿ.ಕೆ.ವೆಂಕಟೇಶ್
- ಗೀತ ಸಾಹಿತ್ಯ:ಚಿ. ಉದಯಶಂಕರ್
- ಶಹನಾಯಿ ವಾದನ:ಭಾರತ ರತ್ನ ಉಸ್ತಾದ್ ಬಿಸ್ಮಿಲ್ಲಾ ಖಾನ್
- ಹಿನ್ನೆಲೆ ಗಾಯಕರು: ಡಾ. ರಾಜ್ ಕುಮಾರ್, ಎಸ್.ಜಾನಕಿ, ಡಾ. ಪಿ.ಬಿ.ಶ್ರೀನಿವಾಸ್
- ಛಾಯಾಗ್ರಹಣ:ಆರ್. ಚಿಟ್ಟಿಬಾಬು
- ನೃತ್ಯ ನಿರ್ದೇಶನ: ಉಡುಪಿ ಜಯರಾಂ
- ನಿರ್ಮಾಪಕ:ವಿಕ್ರಂ ಶ್ರೀನಿವಾಸ್
- ನಿರ್ದೇಶಕ: ವಿಜಯ್
"ಕರೆದರೂ ಕೇಳದೇ.. ಸುಂದರನೆ ಏಕೆ ನನ್ನಲ್ಲಿ ಈ ಮೌನ", "ರಾಗ ಅನುರಾಗ,ಶುಭಯೋಗ ಸೇರಿದೆ" ಆಹಾ, ಎಂಥಹ ಮಧುರವಾದ ಹಾಡುಗಳು. ಕನ್ನಡಿಗರುಈ ಹಾಡುಗಳನ್ನು ಎಂದಿಗಾದರೂ ಮರೆಯಲು ಸಾಧ್ಯವೇ? "ಸನಾದಿ ಅಪ್ಪಣ್ಣ" ಚಿತ್ರದ ಹಾಡುಗಳಿವು. ಕೃಷ್ಣಮೂರ್ತಿ ಪುರಾಣಿಕ್ ಅವರ ಕಾದಂಬರಿಯನ್ನು ನಿರ್ದೇಶಕ ವಿಜಯ್ 1977 ರಲ್ಲಿ ಚಲನಚಿತ್ರವನ್ನಾಗಿಸಿದರು. ಶಹನಾಯಿ ಮಾಂತ್ರಿಕ ಭಾರತರತ್ನ ಉಸ್ತಾದ್ ಬಿಸ್ಮಿಲ್ಲಾ ಖಾನ್ ಈ ಚಿತ್ರಕ್ಕೆ ಶಹನಾಯಿ ಒದಗಿಸಿರುವುದು ಚಿತ್ರದ ಪ್ರಮುಖ ಆಕರ್ಷಣೆಗಳಲ್ಲೊಂದು. ಡಾ. ರಾಜ್ ಕುಮಾರ್ ಅವರೇ ಸ್ವತಃ ಶಹನಾಯಿ ನುಡಿಸಿದ್ದಾರೋ ಎಂಬಂತೆ ಶಹನಾಯಿ ವಾದಕ ಅಪ್ಪಣ್ಣನ ಪಾತ್ರದಲ್ಲಿ ರಾಜ್ ಪರಕಾಯ ಪ್ರವೇಶ ಮಾಡಿರುವುದು ಇಡೀ ಚಿತ್ರದ ಜೀವಾಳ. ಇದಕ್ಕಾಗಿ ಡಾ. ರಾಜ್ ಕುಮಾರ್ ಡಾ.ಬಿಸ್ಮಿಲ್ಲಾ ಖಾನ್ ಅವರ ಬಳಿಯಲ್ಲಿ ಹಲವಾರು ದಿನಗಳ ಕಾಲ ತರಬೇತಿ ಪಡೆದಿದ್ದರು. ಇದು ಪಾತ್ರದ ಬಗ್ಗೆ ಡಾ. ರಾಜ್ ತೋರಿಸುತ್ತಿದ್ದ ಶ್ರದ್ಧೆಯನ್ನು ತೋರುತ್ತದೆ. ಹೀಗಾಗಿಯೇ ಅಪ್ಪಣ್ಣನ ಪಾತ್ರ ಕನ್ನಡ ಚಿತ್ರರಂಗದಲ್ಲಿ ಮರೆಯಲಾಗದ ಪಾತ್ರವಾಗಿ ನಿಲ್ಲುತ್ತದೆ.
ಚಿತ್ರದ ಹಾಡುಗಳು ಇಂದಿಗೂ ಜನಪ್ರಿಯ. ಚಿತ್ರದ
ಹಾಡುಗಳು ಅಂದಿನಿಂದ ಇಂದಿನ ವರೆಗೂ ತಮ್ಮ ಜನಪ್ರಿಯತೆಯನ್ನು ಉಳಿಸಿಕೊಂಡಿವೆ. ಕನ್ನಡದ ಅತ್ಯಧುತ ಅಲ್ಬಂಗಳಲ್ಲಿ "ಸನಾದಿ ಅಪ್ಪಣ್ಣ" ಕೂಡ ಒಂದು.
ಚಿತ್ರಕ್ಕೆ ಕನ್ನಡದ ಶ್ರೇಷ್ಠ ಸಂಗೀತ ನಿರ್ದೇಶಕ ಜಿ.ಕೆ.ವೆಂಕಟೇಶ್ ಸಂಗೀತವನ್ನೊದಗಿಸಿದ್ದಾರೆ. ಸಾಹಿತ್ಯ ಚಿ. ಉದಯಶಂಕರ್ ಅವರದು. ಚಿತ್ರದ ಹಾಡುಗಳ ಸಾಹಿತ್ಯ
ಅತ್ಯುತ್ತಮ.
ಹಾಡುಗಳು:
-
ಕರೆದರೂ ಕೇಳದೇ ಸುಂದರನೆ ಏಕೆ ನನ್ನಲ್ಲಿ ಈ ಮೌನ
-
(ಎಸ್. ಜಾನಕಿ): ಉಸ್ತಾದ್ ಬಿಸ್ಮಿಲ್ಲಾ ಖಾನ್ ಅವರ ಶಹನಾಯಿ ವಾದನವನ್ನು ಈ ಹಾಡಿನಲ್ಲಿ ಆಸ್ವಾದಿಸಬಹುದು. ಎಸ್. ಜಾನಕಿಯವರ ಕಂಠಕ್ಕೆ ಎಂಥವರೂ ಮಾರು ಹೋಗಲೇಬೇಕು. ತೆರೆಯ ಮೇಲೆ ಆ ಹಾಡಿಗೆ ಡಾ. ರಾಜ್ ಸಾಕ್ಷಾತ್ ಬಿಸ್ಮಿಲ್ಲಾ ಖಾನ್ ಅವರೇ ಆಗಿ ಸನಾದಿ ನುಡಿಸಿದ್ದಾರೆ, ಮತ್ತು ಜಯಪ್ರದಾ ನೃತ್ಯ ಮಾಡಿದ್ದಾರೆ. ಅತ್ಯದ್ಭುತ ಗೀತೆ.
http://www.youtube.com/watch?v=t25swRdGHak
-
ರಾಗ ಅನುರಾಗ ಶುಭಯೋಗ ಕೂಡಿದೆ (ಡಾ. ರಾಜ್ ಕುಮಾರ್, ಎಸ್.ಜಾನಕಿ): ಡಾ. ರಾಜ್ ಕುಮಾರ್-ಎಸ್.ಜಾನಕಿಯವರ ಮಧುರ ಕಂಠದಲ್ಲಿ ಹೊರಹೊಮ್ಮಿರುವ ಸುಶ್ರಾವ್ಯ ಯುಗ ಗೀತೆ. http://www.youtube.com/watch?v=yy_ffUCQ_Nc
-
ನಿನಗಾಗಿ ಓಡೋಡಿ ಬಂದೆ (ಡಾ. ರಾಜ್ ಕುಮಾರ್):
ಡಾ. ರಾಜ್ ಕುಮಾರ್ ಕಂಠದಲ್ಲಿ ಹೊರಹೊಮ್ಮಿರುವ ಅದ್ಭುತವಾದ ವಿರಹ ಗೀತೆ. ಅತ್ಯದ್ಭುತ ಗೀತೆ. ಸಾಹಿತ್ಯ ಬ್ರಹ್ಮ ಉದಯಶಂಕರ್ ಅತ್ಯುತ್ತಮವಾದ ಸಾಲುಗಳನ್ನು ಬರೆದಿದ್ದಾರೆ. ರಾಜ್ ಕುಮಾರ್ ಮತ್ತು ಜಯಪ್ರದಾರವರ ಮನೋಜ್ಞ ಅಭಿನಯವನ್ನು ಪದಗಳಲ್ಲಿ ವರ್ಣಿಸುವುದು ಕಷ್ಟ. http://www.youtube.com/watch?v=WJcwZ_Rce8U
-
ನಾನೆ ತಾಯಿ ನಾನೆ ತಂದೆ ನಿನ್ನ ಪಾಲಿಗೆ (ಡಾ. ಪಿ.ಬಿ.ಶ್ರೀನಿವಾಸ್):ಪಿ.ಬಿ.ಶೀನಿವಾಸ್ ಕಂಠಸಿರಿಯ ಮರೆಯಾರದ ಹಾಡು. ಈ ಹಾಡಿನಲ್ಲಿ ಬಾಲ ನಟನಾಗಿ ಪುನೀತ್ ರಾಜ್ ಕುಮಾರ್ ಅವರನ್ನು ಕಾಣಬಹುದು.
ಸನಾದಿ ಅಪ್ಪಣ್ಣ DVD ಗಳು ಲಭ್ಯ. ಕಲಾಭಿಮಾನಿಗಳು ಕೊಂಡು ನೋಡಿ ಆನಂದಿಸಬಹುದು.
ಮುಂದಿನ ವಾರ ಮತ್ತೊಂದು ಅತ್ಯುತ್ತಮ ಚಿತ್ರದೊಡನೆ ಮತ್ತೆ ಭೇಟಿಯಾಗೋಣ,
ತಮ್ಮವ,
akumar

