"ಹಳೆ ಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು" ಎಂಬ ಮಾತು ಕನ್ನಡಚಿತ್ರರಂಗದ ಮಟ್ಟಿಗೆ ಅಕ್ಷರಷಃ ನಿಜ. "ಸತೀ ಸುಲೋಚನಾ" ಟಾಕಿ ಚಿತ್ರದಿಂದ ಆರಂಭಗೊಂಡ
ಯಾತ್ರೆ ಇಂದಿನವರೆಗೂ ನಿರಾತಂಕವಾಗಿ ಸಾಗಿದೆ. ಬದಲಾದ ಕಾಲಕ್ಕೆ ತಕ್ಕಂತೆ ಹೊಸ
ಆಯಾಮಗಳನ್ನು, ಹೊಸತನಗಳನ್ನು ಮೈಗೂಡಿಸಿಕೊಂಡು ನಳನಳಿಸುತ್ತಿರುವ ಕನ್ನಡ ಚಿತ್ರರಂಗದ
ಇತಿಹಾಸದ ಪುಟಗಳು ಕೂಡ ಅಷ್ಟೇ ಶ್ರೀಮಂತವಾಗಿವೆ. ಕನ್ನಡ ಚಿತ್ರರಂಗ ಸಾಗಿ ಬಂದ
ಹಾದಿಯಲ್ಲಿ ಅದೆಷ್ಟೋ ಚಿತ್ರಗಳು ಮೈಲಿಗಲ್ಲುಗಳಾಗಿವೆ. ಜನ ಮಾನಸದಲ್ಲಿ ಇಂದಿಗೂ
ಹಸಿರಾಗಿರುವ ಹಲವಾರು ಚಿತ್ರರತ್ನಗಳಿವೆ. ಅವುಗಳಲ್ಲಿ ಕೆಲವು ಅನರ್ಘ್ಯ ರತ್ನಗಳತ್ತ
ಮತ್ತೊಮ್ಮೆ ಅವಲೋಕಿಸುವ ಕಿರು ಪ್ರಯತ್ನವೇ ಈ "ಗಂಧದಗುಡಿ ಫ್ಲಾಶ್ ಬ್ಯಾಕ್". ಪ್ರತೀ ವಾರ ಒಂದೊಂದು ಮರೆಯಲಾಗದ ಚಿತ್ರದ ಬಗ್ಗೆ ಮಾತಾಡೋಣ.
ಇಂದಿನ ಚಿತ್ರ - "ಹೊಂಬಿಸಿಲು"
ಕಿರು ಮಾಹಿತಿ:
- ಚಿತ್ರ ನಿರ್ಮಾಣ ಸಂಸ್ಥೆ: ನಿರುಪಮಾ ಮೂವಿಸ್
- ಬಿಡುಗಡೆಯಾದ ವರ್ಷ: 1978
- ಪಾತ್ರವರ್ಗ: ವಿಷ್ಣುವರ್ಧನ್, ಆರತಿ, ಲೀಲಾವತಿ, ಶಿವರಾಂ, ಹೆಚ್.ಪಿ. ಸರೋಜಾ, ಎನ್.ಎಸ್.ರಾವ್
- ಸಂಗೀತ: ರಾಜನ್-ನಾಗೇಂದ್ರ
- ಹಿನ್ನೆಲೆ ಗಾಯಕರು: ಎಸ್.ಪಿ. ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ
- ಛಾಯಾಗ್ರಹಣ: ಎಸ್. ರಾಮಚಂದ್ರ
- ನಿರ್ಮಾಪಕ:ಸೋಮ ಸುಂದರ್
- ನಿರ್ದೇಶಕ: ಗೀತಪ್ರಿಯ
1978 ರಲ್ಲಿ ತೆರೆಕಂಡ "ಹೊಂಬಿಸಿಲು" ಮಧುರವಾದ ಹಾಡುಗಳಿಂದ ಕನ್ನಡ ಚಿತ್ರರಸಿಕರ
ಎದೆಯಲ್ಲಿ ಇಂದಿಗೂ ನೆಲೆಸಿರುವ ಒಂದು ಸುಂದರ ಕಲಾಕೃತಿ. ಇದು ನಾಡಿನ ಸುಪ್ರಸಿದ್ದ
ಬರಹಗಾರ್ತಿಯರಲ್ಲೊಬ್ಬರಾದ ಶ್ರೀಮತಿ ಉಷಾ ನವರತ್ನರಾಂ
ಅವರ "ಹೊಂಬಿಸಿಲು" ಕಾದಂಬರಿ ಆಧಾರಿತ ಚಿತ್ರ. ೭೦ರ ದಶಕದಲ್ಲಿ ಈಗಿನ ಹಾಗೆ ಟಿವಿ
ಮಾಧ್ಯಮ ಇರಲಿಲ್ಲ. ಜನ ಕಾದಂಬರಿಗಳನ್ನು, ಪತ್ರಿಕೆಗಳನ್ನು ಪ್ರೀತಿಯಿಂದ ಓದುತ್ತಿದ
ಕಾಲವದು. ಸುಧಾ ವಾರ ಪ್ರತಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗುತ್ತಿದ್ದ ಹೊಂಬಿಸಿಲು ಆ
ಕಾಲಕ್ಕೆ ಸಾಕಷ್ಟು ಜನಪ್ರಿಯವಾಗಿತ್ತು. ಜನ ಪ್ರತೀ ವಾರ ಸುಧಾಗಾಗಿ ಕಾಯುವಂತೆ ಮಾಡಿದ್ದ
ಈ ಧಾರಾವಾಹಿ ನ್ಯಾಯವಾದಿ ಸೋಮಶೇಖರ್ ಅವರ ಮೇಲೂ ತುಂಬಾ ಪ್ರಭಾವ ಬೀರಿತು. ಇದನ್ನು ಯಾಕೆ
ಚಲನಚಿತ್ರವನ್ನಾಗಿಸಬಾರದು ಎಂಬ ಯೋಚನೆ ಬಂದದ್ದೇ ತಡ, ಖ್ಯಾತ ಚಿತ್ರ ಸಾಹಿತಿ,
ನಿರ್ದೇಶಕ ಗೀತಪ್ರಿಯಾಯ ಅವರ ಬಳಿ ಈ ಪ್ರಸ್ತಾಪವನ್ನಿಟ್ಟರು. ಗೀತಪ್ರಿಯಾರಿಗೆ ಕೂಡ ಈ
ಕಥೆ ತುಂಬ ಹಿಡಿಸಿತು! ಆದರೆ ಕಾದಂಬರಿಯಲ್ಲಿರುವ ಸಾಮಾಜಿಕೆ ಕಳಕಳಿಯನ್ನು ಅಷ್ಟೇ
ಪರಿಣಾಮಕಾರಿಯಾಗಿ ದೃಶ್ಯ ಮಾಧ್ಯಮಕ್ಕೆ ತರಬೇಕಾದರೆ ಕೇವಲ ಕಮರ್ಷಿಯಲ್ ದೃಷ್ಟಿಯಿಂದ
ಚಿತ್ರ ಮಾಡಬಾರದು , ಆ ಸ್ವಾತಂತ್ರ ಸಂಪೂರ್ಣ ಇದ್ದರೆ ಮಾತ್ರ ತಾವು ಈ ಚಿತ್ರವನ್ನು
ನಿರ್ದೇಶಿಸಲು ಸಿದ್ದ ಎಂದರು ಗೀತಪ್ರಿಯ. ನಿರ್ಮಾಪಕರೂ ಇವೆಲ್ಲದಕ್ಕೊ ಒಪ್ಪಿದರು. ಆಗ
ಶುರುವಾಯ್ತು ನೋಡಿ ಹೊಂಬಿಸಿಲು!
ಚಿತ್ರದ ಪಾತಗಳ ಆಯ್ಕೆ ಶುರುವಾಯಿತು. ಚಿತ್ರದ ನಾಯಕನ ಪಾತ್ರಕ್ಕೆ ಗೀತಪ್ರಿಯರವರ ಮೊದಲ ಆಯ್ಕೆಯೇ ವಿಷ್ಣುವರ್ಧನ್.
ಆಗ ವಿಷ್ಣುವರ್ಧನ್ ಹೆಚ್ಚಾಗಿ ಆಕ್ಷನ್ ಪ್ರಧಾನ ಚಿತ್ರಗಳಲ್ಲೇ ಹೆಚ್ಚಾಗಿ
ಕಾಣಿಸಿಕೊಳ್ಳುತ್ತಿದ್ದ ಕಾಲ. ಅವರಿಗೂ ಒಂದು ಇಮೇಜ್ ಬದಲಾವಣೆಯ ಅಗತ್ಯವಿತ್ತು. ಹಾಗಾಗಿ
ಈ ಪ್ರಬುದ್ಧ ಪಾತ್ರವನ್ನು ವಿಷ್ಣು ಸವಾಲಾಗಿ ಸ್ವೀಕರಿಸಿದರು. ನಾಯಕಿಯಾಗಿ ಅಂದಿನ
ನಂಬರ್ ವನ್ ನಟಿ ಆರತಿ ಆಯ್ಕೆಯಾದರು.
ಚಿತ್ರದಲ್ಲಿ ವಿಷ್ಣುವರ್ಧನ್ ಮತ್ತು ಆರತಿ ಇಬ್ಬರೂ ಡಾಕ್ಟರ್. ತನ್ನ ನರ್ಸಿಂಗ್
ಹೋಮ್‍ಗಾಗಿ ಓರ್ವ ಸಹಾಯಕ ಡಾಕ್ಟರ್ ಹುಡುಕಾಟದಲ್ಲಿದ್ದ ವಿಷ್ಣುವರ್ಧನ್ ಒಮ್ಮೆ ವೈದ್ಯೆ
ಆರತಿಯನ್ನು ಭೇಟಿಯಾಗುತ್ತಾರೆ. ಮೊದಲ ನೋಟದಲ್ಲೇ ವಿಷ್ಣುವನ್ನು ಮನಸಿನಲ್ಲೇ ಪ್ರೇಮಿಸಲು
ಆರಂಭಿಸುತ್ತಾರೆ. ಆದರೆ ವಿಷ್ಣುಗೆ ಬೇಕಾಗಿರುವುದು ಕೇವಲ ಒಬ್ಬ ಸಹಾಯಕ ವೈದ್ಯೆ ಮಾತ್ರ
ಹೆಂಡತಿ ಅಲ್ಲ ಎಂಬುದನ್ನರಿತು ನಿರಾಸೆಗೊಳಪಡುತ್ತಾರೆ.ಆದರೆ ಕುಟುಂಬದ ಒತ್ತಾಯದ ಮೇರೆಗೆ
ವಿಷ್ಣು ಆರತಿಯನ್ನು ಮದುವೆಯಾಗಬೇಕಾಗುತ್ತದೆ. ಆದರೆ ತಮ್ಮ ವೃತ್ತಿಯಲ್ಲಿ ಉತ್ತಮ
ಸಹೋದ್ಯೋಗಿಗಳಾಗಿ ಎಷ್ಟು ಹತ್ತಿರವಾಗಿರುತ್ತಾರೋ, ದಂಪತಿಗಳಾಗಿ ಅಷ್ಟೇ ದೂರ ದೂರ
ಅಪರಿಚಿತರಂತೆ ಬದುಕುತ್ತಾರೆ. ಇಬ್ಬರ ಅಭಿಪ್ರಾಯಗಳೂ ಭಿನ್ನ. ಹೀಗಿರುವಾಗ ವಿಷ್ಣು
ಮತ್ತೋರ್ವ ಸಹಾಯಕಿಯನ್ನು ಕೆಲಸಕ್ಕೆ ತೆಗೆದುಕೊಳ್ಳುತ್ತಾರೆ. ಕಾಮುಕ ಸ್ವಭಾವದ ಆಕೆ
ವಿಷ್ಣುವನ್ನು ತನ್ನೆಡೆ ಸೆಳೆಯಲು ಯತ್ನಿಸುತ್ತಾಳೆ. ಇದು ದಂಪತಿಗಳ ಮಧ್ಯೆ ಇನ್ನೂ
ದೊಡ್ಡ ಕಂದಕವನ್ನೇ ಸೃಷ್ಟಿಸುತ್ತದೆ. ಕೊನೆಯಲ್ಲಿ ಎಲ್ಲಾ ಸಮಸ್ಯೆಗಳೂ ಒಂದೊಂದು
ಪರಿಹಾರವನ್ನು ಕಂಡುಕೊಂಡು ಚಿತ್ರ ಸುಖಾಂತ್ಯಗೊಳ್ಳುತ್ತದೆ.
ಪುರುಷ ಪ್ರಧಾನ ಸಮಾಜದಲ್ಲಿ ಉದ್ಯೋಗಸ್ಥ ಮಹಿಳೆ ಹೇಗೆಲ್ಲ ಕಷ್ಟಪಡುತ್ತಾಳೆ
ಎಂಬುದನ್ನು ವೈದ್ಯೆಯ ಪಾತ್ರದ ಮೂಲಕ ಸ್ವತಃ ವೈದ್ಯೆಯಾಗಿರುವ ಲೇಖಕಿ ಉಷಾ ನವರತ್ನರಾಂ
ಅಮೋಘಗಾಗಿ ಹೇಳುತ್ತಾರೆ.ಆ ಪಾತ್ರವನ್ನು ಆರತಿ ಅಷ್ಟೇ ಅದ್ಭುತವಾಗಿ ಅಭಿನಯಿದ್ದಾರೆ.
ಗಂಭೀರವಾದ ಈ ಪಾತ್ರದಲ್ಲಿ ವಿಷ್ಣುವರ್ಧನ್ ಪ್ರಬುದ್ಧ ಅಭಿನಯವನ್ನು ನೀಡಿದ್ದಾರೆ. ಕಥೆ
ಸ್ತ್ರೀ ಪಾತ್ರದ ಬಗ್ಗೆ ಸ್ವಲ್ಪ ಹೆಚ್ಚೇ ಮೃದು ಧೋರಣೆಯನ್ನು ಹೊಂದಿದ್ದರೂ
ವಿಷ್ಣುವರ್ಧನ್ ತಮ್ಮ ಶ್ರೇಷ್ಠ ಅಭಿನಯದಿಂದ ತಮ್ಮ ಪಾತ್ರವನ್ನು ಸಂಪೂರ್ಣ
ಮೇಲಕ್ಕೆತ್ತಿದ್ದಾರೆ. ಈ ಚಿತ್ರದ ಅಭಿನಯಕ್ಕೆ ವಿಷ್ಣುವರ್ಧನ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದರು. ಲೀಲಾವತಿ,ಶಿವರಾಂ ಅಭಿನಯ ಕೂಡ ತುಂಬಾ ಚೆನ್ನಾಗಿದೆ. ಎನ್.ಎಸ್.ರಾವ್‍ಗೆ ಚಿತ್ರದಲ್ಲಿ ಗಂಭೀರ ಪಾತ್ರ.
ಚಿತ್ರ ಮೇನಕಾ ಚಿತ್ರಮಂದಿರದಲ್ಲಿ ೫೦ ದಿನಗಳ ಪ್ರದರ್ಶನ ಕಂಡರೆ ಪ್ರಭಾತ್ ಚಿತ್ರಮಂದಿದಲ್ಲಿ (ಇದು ಈಗಿಲ್ಲ) ಒಂದು ವರ್ಷಗಳ ಕಾಲ ಸತತವಾಗಿ ಓಡಿ ದಾಖಲೆಯನ್ನು ನಿರ್ಮಿಸಿತು.
ಚಿತ್ರದ ಯಶಸ್ಸಿನಲ್ಲಿ ಸಿಂಹಪಾಲು ಮಧುರವಾದ ಅರ್ಥಗರ್ಭಿತವಾದ ಹಾಡುಗಳು. ಚಿತ್ರದ
ನಾಲ್ಕು ಹಾಡುಗಳು ಅಂದಿನಿಂದ ಇಂದಿನ ವರೆಗೂ ತಮ್ಮ ಜನಪ್ರಿಯತೆಯನ್ನು ಉಳಿಸಿಕೊಂಡಿವೆ. ಕನ್ನಡದ ಅತ್ಯಧುತ ಅಲ್ಬಂಗಳಲ್ಲಿ "ಹೊಂಬಿಸಿಲು" ಕೂಡ ಒಂದು.
ಚಿತ್ರಕ್ಕೆ ಕನ್ನಡದ ಶ್ರೇಷ್ಠ ಸಂಗೀತ ನಿರ್ದೇಶಕ ಜೋಡಿ ರಾಜನ್-ನಾಗೇಂದ್ರ
ಸಂಗೀತವನ್ನೊದಗಿಸಿದ್ದಾರೆ. ಸಾಹಿತ್ಯ ಗೀತಪ್ರಿಯ ಅವರದು. ಚಿತ್ರದ ಹಾಡುಗಳ ಸಾಹಿತ್ಯ
ಅತ್ಯುತ್ತಮ. ಹ್ಯಾಟ್ಸ್ ಆಫ್ ಟು ರಾಜನ್-ನಾಗೇಂದ್ರ ಮತ್ತು ಗೀತಪ್ರಿಯ.
ಹಾಡುಗಳು:
-
ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು (ಎಸ್.ಪಿ.ಬಾಲಸುಬ್ರಹ್ಮಣ್ಯಂ): ಸಾರ್ವಕಾಲಿಕ ಸೂಪರ್ ಹಿಟ್ ಗೀತೆ. ಪತಿಯಿಂದ ದೂರವಾದ ಪತ್ನಿಗೆ ಸತಿ-ಪತಿಗಳ ಸಂಬಂಧದ ಬಗ್ಗೆ ವಿವರಿಸುವ ಅದ್ಭುತ ಗೀತೆ.
http://www.youtube.com/watch?v=9YshOZX2 ... re=related -
ಹೂವಿಂದ ಹೂವಿಗೆ ಹಾರುವ ದುಂಬಿ, ಏನನು ಹಾಡುತಿಹೆ ನೀ (ಎಸ್.ಜಾನಕಿ): ಜಾನಕಿಯವರ ಮಧುರ ಕಂಠದಲ್ಲಿ ಹೊರಹೊಮ್ಮಿರುವ ಸುಶ್ರಾವ್ಯ ಗೀತೆ.
http://www.youtube.com/watch?v=HPlgWkBFL90 -
ಜೀವ ವೀಣೆ ನೀಡು ಮಿಡಿತದ ಸಂಗೀತ ಭಾವಗೀತೆ ಬಾಳಿನೊಲುಮೆಯ ಸಂಕೇತ (ಎಸ್.ಪಿ.ಬಿ. ಎಸ್.ಜಾನಕಿ):
ಇದಕ್ಕಿಂತ ಬೇರೆ ಯುಗಳಗೀತೆ ಬೇಕೇ? ಈಗಲೂ ಟಿವಿ, ರೇಡಿಯೋದಲ್ಲಿ ಈ ಹಾಡು ಬಂತೆಂದರೆ
ಅದೆಷ್ಟು ಸುಖ, ಅದೆಷ್ಟು ಆನಂದ. ಬಾಲು-ಜಾನಕಿ ಜೋಡಿಯ ಮತ್ತೊಂದು ಅತ್ಯದ್ಭುತ ಗೀತೆ. http://www.youtube.com/watch?v=qyDb7bag9YI - ಮಾಗಿಯ ಚಳಿಯಲ್ಲಿ ಮೈ ಬಿಸಿಯೇಕೋ (ಎಸ್.ಪಿ.ಬಿ. ಎಸ್.ಜಾನಕಿ):
ಈ ಹಾಡಿನ ಸಾಹಿತ್ಯ ಮಾತ್ರ ಆರ್.ಎನ್.ಜಯಗೋಪಾಲ್ ಬರೆದದ್ದು. ಜಾನಕಿಯವರ ಕಂಠದ ಮತ್ತೊಂದು
ಆಯಾಮದ ಕಿರು ಪರಿಚಯ ಈ ಹಾಡಲ್ಲಿ ಆಗಲಿದೆ.ಮಾಧುರ್ಯ ಪ್ರಧಾನ ಹಾಡಾದ್ರಊ ಸೈ,ಈ ರೀತಿಯ
ತುಂಟತನದಹಾಡಾದರೂ ಸರಿ, ಕ್ಯಾಬರೆಆದರೂ ಸರಿ, ಮಕ್ಕಳ ಹಾಡಾದರೂ ಸರಿ, ನಮ್ಮ ಜಾನಕಿ ಕಂಠ
ಅವೆಲ್ಲದಕ್ಕೂ ಹೊಂದಿಕೊಳ್ಳುತ್ತದೆ. ಚಿತ್ರದ ಮತ್ತೊಂದು ಸೂಪರ್ ಸಾಂಗ್.
ಒಂದು ಒಳ್ಳೆಯ ಚಿತ್ರ ತಯಾರಾಗುವ ಕಾಲ ಬಂದರೆ ಎಲ್ಲವೂ ತಾನಾಗಿಯೇ ಜೊತೆಗೂಡುತ್ತವೆ ಎಂಬುದಕ್ಕೆ "ಹೊಂಬಿಸಿಲು" ಅತ್ಯುತ್ತಮ ಉದಾಹರಣೆ. ಇಂತಹ ಪ್ರಯತ್ನವನ್ನು ಜನರೂ ತುಂಬು ಹೃದಯದಿಂದ ಸ್ವೀಕರಿಸುತ್ತಾರೆ ಎಂಬುದನ್ನು ಸಹ ಈ ಚಿತ್ರ ಸಾಬೀತು ಮಾಡಿದೆ.
ಮುಂದಿನ ವಾರ ಮತ್ತೊಂದು ಅತ್ಯುತ್ತಮ ಚಿತ್ರದೊಡನೆ ಮತ್ತೆ ಭೇಟಿಯಾಗೋಣ,
ತಮ್ಮವ,
akumar

