ನಿಜ ಹೇಳುತ್ತೇನೆ ಮೊಗ್ಗಿನ ಮನಸು ನೋಡಲು ಹೋಗಿದ್ದು ಕೇವಲ ಹಾಡುಗಳಿಗೋಸ್ಕರ. ಮನೋಮೂರ್ತಿಯವರ ಸಂಗೀತ ನಿರ್ದೇಶನದ ಮೂರ್ನಾಲ್ಕು ಹಾಡುಗಳು ನನಗೆ ತುಂಬಾ ಇಷ್ಟವಾಗಿದ್ದವು. ಗೆಳೆಯ ಬೇಕು, ಐ ಲವ್ ಯೂ, ಮೊಗ್ಗಿನ ಮನಸಲಿ ಹಾಡುಗಳು ಇಷ್ಟವಾಗಿದ್ದವು. ನಿರ್ದೇಶಕ ಶಶಾಂಕ್ರಿಂದ ನನಗೆ ವಿಶೇಷ ನಿರೀಕ್ಷೆಯೇನೂ ಇರಲಿಲ್ಲ. ಶಶಾಂಕ್ ಬಗ್ಗೆ ಅಂತಹ ನಂಬಿಕೆಯೂ ಇರಲಿಲ್ಲ.ಹತ್ತರ ಜೊತೆಗೆ ಹನ್ನೊಂದು ಎಂಬ ಭಾವನೆ ಇತ್ತು. ಆದರೆ ಚಿತ್ರ ನೋಡಿ ಹೊರಬಂದ ಮೇಲೆ ನನ್ನಲ್ಲಿ ಶಬ್ಧಗಳೇ ಇಲ್ಲ!. ಅಬ್ಬಾ, ಎಂತಹ ಚಿತ್ರ! Oh My God!!.. I really dont have enough words after watching this movie! "ಮೊಗ್ಗಿನ ಮನಸು" ಈ ವರ್ಷದ ಅತ್ಯುತ್ತಮ ಚಿತ್ರವಾಗುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ!
ಇತ್ತೀಚಿಗೆ ಬರುತ್ತಿರುವ ಚಿತ್ರಗಳ ಕಥೆಗೂ ಚಿತ್ರದ ಶೀರ್ಷಿಕೆಗೂ ತಲೆ ಬುಡ ಸಂಬಂಧ ಇರುವುದಿಲ್ಲ. ಆದರೆ ಮೊಗ್ಗಿನ ಮನಸು ಎಂಬ ಶೀರ್ಷಿಕೆ ಚಿತ್ರದ ಕಥೆಗೆ ಹೇಳಿ ಮಾಡಿಸಿದಂತಿದೆ. ಇದು ಹೆಚ್ಚು ಕಡಿಮೆ ಹದಿಹರೆಯದ ಹುಡುಗ ಹುಡುಗಿಯರೆಲ್ಲರ ಕಥೆ. "ಹುಚ್ಚು ಕೋಳಿ ಮನಸು ಅದು ಹದಿನಾರರ ವಯಸು..." ಎಂಬ ಕವಿವಾಣಿಯಂತೆ ಹದಿನಾರರ ವಯಸ್ಸು ಕಡಿವಾಣವಿಲ್ಲದ ಹುಚ್ಚು ಕುದುರೆಯಂತೆ. ಸರಿ ತಪ್ಪುಗಳೇನೆಂಬ ತಿಳುವಳಿಕೆಯಿಲ್ಲದೇ ಬಿಸಿರಕ್ತದ ಹುಮ್ಮಸ್ಸಿನಲ್ಲಿ ಹಾದಿ ತಪ್ಪುವ ವಯಸ್ಸದು. ಆ ಹದಿವಯಸ್ಸಿನ ನಾಲ್ವರು ಹುಡುಗಿಯರನ್ನು ವಸ್ತುವಾಗಿಟ್ಟುಕೊಂಡು ಶಶಾಂಕ್ ಮೊಗ್ಗಿನ ಮನಸು ಚಿತ್ರವನ್ನು ತೆರೆಯ ಮೇಲೆ ಅತ್ಯದ್ಭುತವಾಗಿ ರೂಪಿಸಿದ್ದಾರೆ. ಆ ಮೂಲಕ ಚಿತ್ರ ವೀಕ್ಷಿಸುವ ಎಲ್ಲರ ಹೃದಯಕ್ಕೂ ಲಗ್ಗೆ ಇಡುವ ಕೆಲಸ ಮಾಡಿದ್ದಾರೆ.
ಪ್ರೀತಿ ವಾತ್ಸಲ್ಯದ ಗಂಧ ಗಾಳಿಯೇ ಗೊತ್ತಿರದ ಕ್ರೂರಿ ಅಪ್ಪನಿಂದಾಗಿ ಮನೆಯೆಂದರೆ ನರಕ, ಜೈಲು ಎಂದು ಭಾವಿಸಿ ಸದಾ ತನ್ನ ಗೆಳೆಯನೊಂದಿಗೇ ವಾಸಿಸುವ ಮೊದಲನೆಯ ಹುಡುಗಿ(ಮಾನಸಿ), ತನ್ನ ಅಕ್ಕನನ್ನು ನಂಬಿಸಿ ಮದುವೆಯಾಗಿ ನಂತರ ವೇಶ್ಯಾವಾಟಿಕೆಗೆ ತಳ್ಳಿ ಮೋಸ ಮಾಡಿದ ಯುವಕನೊಬ್ಬನ ಮೇಲಿನ ಸಿಟ್ಟಿಗಾಗಿ ಗಂಡಸರನ್ನು ಟೈಂ ಪಾಸ್‍ಗೆ ಬಳಸಿ ಹಿಂಡಿ ಹೀರಿ ಬಿಸಾಡಿ ಸೇಡು ತೀರಿಸಿಕೊಳ್ಳುವ ಎರಡನೆಯ ಹುಡುಗಿ (ಸಂಗೀತಾ ಶೆಟ್ಟಿ), ನಗರದ ಥಳುಕು ಬಳುಕಿನ ಬದುಕಿನ ಅರಿವೇ ಇಲ್ಲದೇ ಹಳ್ಳಿಯಿಂದ ನಗರಕ್ಕೆ ಬಂದು ಇಲ್ಲಿನ ಬಣ್ಣದ ಬದುಕಿನ ಸುಳಿಯಲ್ಲಿ ಬೀಳುವ ಮುಗ್ಧ ಹುಡುಗಿ (ಶುಭಾ ಪೂಂಜ) - ಈ ಮೂರು ಮೊಗ್ಗಿನ ಮಸಸಿನ ಗೆಳತಿಯರ ಜೊತೆ ಯಾವುದು ಸರಿ ಯಾವುದು ತಪ್ಪು ಎಂಬುದನ್ನು ನಿರ್ಧರಿಸಲಾಗದೇ ತಾನೂ ಕೂಡ ಮನಸೆಂಬ ಮರ್ಕಟ ಆಡಿಸಿದಂತೆ ಆಡುವ ಚಿತ್ರದ ಪ್ರಧಾನ ನಾಯಕಿ ಚಂಚಲಾ (ರಾಧಿಕಾ ಪಂಡಿತ್) ಚಿತ್ರದ ನಾಲ್ಕು ಮೊಗ್ಗಿನ ಮಸಸುಗಳು! ನಿಜವಾದ ಪ್ರೀತಿ ಪ್ರೇಮ ಏನೆಂಬುದರ ಅರಿವಿರದ ಈ ನಾಲ್ಕು ಅಪಕ್ವ ಹುಡುಗಿಯರ ಹುಚ್ಚು ಮನಸಿನ ಹತ್ತು ಹಲವಾರು ಘಟನೆಗಳನ್ನು ಶಶಾಂಕ್ ಅತ್ಯಂತ ಪರಿಣಾಮಕಾರಿಯಾಗಿ ಬಿಗುವಾದ ಚಿತ್ರಕಥೆಯ ಜೊತೆ ನಿರೂಪಿಸಿದ್ದಾರೆ.
ಚಿತ್ರಕಥೆ ನಿರೂಪಣೆ ಎಲ್ಲೂ ಹಳಿ ತಪ್ಪುವುದಿಲ್ಲ. ಅದು ಚಿತ್ರದ ಮೊದಲನೇ ಗೆಲುವು! ಮನೋಮೂರ್ತಿಯವರ ಹಿನ್ನೆಲೆ ಸಂಗೀತ ಮತ್ತು ಮಾಧುರ್ಯ ಭರಿತ ಹಾಡುಗಳು ಚಿತ್ರದ ಇನ್ನೊಂದು ಪ್ರಮುಖ ಆಕರ್ಷಣೆ!. ಗೆಳೆಯ ಬೇಕು, ಮತ್ತು ಮಳೆ ಬರುವ ಹಾಗಿದೆ ಹಾಡುಗಳು ಕಿವಿಗಷ್ಟೇ ಅಲ್ಲ,ಕಣ್ಣಿಗೂ ಆನಂದವುಂಟುಮಾಡುವಂತೆ ಚಿತ್ರೀಕೃತಗೊಂಡಿವೆ.ಗರಿ ಗರಿ ಮತ್ತು ಯಾಕಿಂಗಾಡ್ತಾರೋ ಈ ಹುಡುಗರು ಹಾಡುಗಳು ಚಿತ್ರದಲ್ಲಿ ನಾಪತ್ತೆ!ಆದರೆ ನಿರ್ದೇಶಕರ ಈ ನಿರ್ಧಾರ ಸರಿಯೆನಿಸುತ್ತದೆ.ಎಲ್ಲಾ ೧೦ ಹಾಡುಗಳನ್ನೂ ಚಿತ್ರಿಸಿದ್ದರೆ ಅದು ಕಥೆಯ ಓಟಕ್ಕೆ ತುಸು ಭಂಗ ತಂದೀತೆಂದುಈ ಎರಡು ಹಾಡುಗಳಿಗೆ ಕೊಕ್ ಕೊಟ್ಟಿರಬಹುದು. ಇವೆರಡರ ಜೊತೆಗೆ ಓಂ ಓಂಕಾರ ಹಾಡನ್ನು ಚಿತ್ರಿಸಿರದಿದ್ದರೂ ನಷ್ಟವೇನೂ ಇರಲಿಲ್ಲ. ಉಳಿದ ಹಾಡುಗಳೆಲ್ಲ ಕಥೆಗೆ ಪೂರಕವಾಗಿವೆ!
ಅಭಿನಯದ ವಿಷಯಕ್ಕೆ ಬಂದರೆ ಚಿತ್ರದ ಪ್ರಧಾನ ನಾಯಕಿ ರಾಧಿಕಾ ಪಂಡಿತ್‍ಗೆ ಫುಲ್ ಮಾರ್ಕ್ಸ್!. ಮೊದಲ ಚಿತ್ರವಾದರೂ ಯಾವ ನುರಿತ ನಟಿಗೂ ಕಡಿಮೆಯಿಲ್ಲದಂತಹ ಅಮೋಘವಾದ ಅಭಿನಯ ಈಕೆಯದು! ಮಾನಸಿ ಮತ್ತು ಸಂಗೀತಾ ಶೆಟ್ಟಿ ತಮಗಿರುವ ಅಲ್ಪ ಅವಕಾಶವನ್ನೇ ಚೆನ್ನಾಗಿ ಬಳಸಿಕೊಂಡಿದ್ದಾರೆ.ಶುಭಾ ಪೂಂಜ ಇನ್ನೂ ಸ್ವಲ್ಪ ಚೆನ್ನಾಗಿ ಮಾಡಬಹುದಿತ್ತು! ಆದರೂ ಆಕೆಯ ಮುಗ್ಧ, ಪೆದ್ದು ಪೆದ್ದಾದ ಮಾತುಗಳು ಕೆಲವೆಡೆ ಖುಷಿಕೊಡಿತ್ತವೆ! ನಟರಲ್ಲಿ ಯಶ್ ಉತ್ತಮ ಅಭಿನಯ ನೀಡಿ ಎಲ್ಲರ ಮೆಚ್ಚುಗೆ ಗಳಿಸುತ್ತಾರೆ. ಈ ಹುಡುಗನಿಗೆ ಬೆಳ್ಳಿ ತೆರೆಯ ಮೇಲೆ ಇದು ಮೊದಲ ಅನುಭವವಾದರೂ "ಪ್ರೀತಿ ಇಲ್ಲದ ಮೇಲೆ" ಸೇರಿದಂತೆ ಕಿರುತೆರೆಯ ಧಾರವಾಹಿಗಳಲ್ಲಿ ನಟಿಸಿದ ಅನುಭವವಿದೆ. ಚಿತ್ರದಲ್ಲಿ ಅಲ್ಲಲ್ಲಿ ಬರುವ ಶರಣ್ ಹಾಸ್ಯ ತುಂಬಾ ಖುಷಿ ಕೊಡುತ್ತದೆ. ಚಿತ್ರದಲ್ಲಿ ಈ ಹಾಸ್ಯದ ತುಣುಕುಗಳನ್ನು ಅಳವಡಿಸಿರುವ ರೀತಿ ತುಂಬಾ ಭಿನ್ನವಾದ ಕಲ್ಪನೆ! ಉಳಿದ ಇಬ್ಬರು ನಾಯಕರು ಪರವಾಗಿಲ್ಲ ಅಷ್ಟೇ. ಜೈ ಜಗದೀಶ್, ಸುಧಾ ಬೆಳವಾಡಿ, ತುಳಸಿ, ವಿಜಯಕಾಶಿ, ಚಿತ್ರಾ ಶೆಣೈ ಎಂದಿನಂತೆ ಪುಟ್ಟ ಪಾತ್ರವಾದರೂ ನ್ಯಾಯ ಒದಗಿಸಿದ್ದಾರೆ.
ಚಿತ್ರದ ಮತ್ತೊಂದು ಪ್ರಮುಖ ಪ್ಲಸ್ ಪಾಯಿಂಟ್ ಸಂಭಾಷಣೆ! ಪ್ರೇಕ್ಷಕರಿಂದ ಶಿಳ್ಳೆ ಗಿಟ್ಟಿಸಿಕೊಳ್ಳುವ ಕೆಲವು ಅತ್ಯುತ್ತಮ ಸಂಭಾಷಣೆಯಿಂದ ಚಿತ್ರ ಮತ್ತಷ್ಟು ಹತ್ತಿರವಾಗುತ್ತದೆ! ಶಿಕ್ಷಕರ ದಿನದಂದು ತನ್ನ ಶಿಕ್ಷಕನನ್ನೇ ಮೋಹಿಸಿ ಪ್ರೇಮ ಪತ್ರ ಕೊಡುವ ಹುಡುಗಿಗೆ ಶಿಕ್ಷಕನ ಪಾತ್ರಧಾರಿ ರಾಜೇಶ್ ಹೇಳುವ ಸಂಭಾಷಣೆ, ಯಶ್-ರಾಧಿಕಾ ಪಂಡಿತ್ ನಡುವಿನ ಕೆಲವು ಸಂಭಾಷಣೆಗಳು ಚಿತ್ರದ ಅತ್ಯುತ್ತಮ ಸಂಭಾಷಣೆಗಳಲ್ಲಿ ಕೆಲವು.ರಾಜೇಶ್ ಪಾತ್ರ ತುಂಬ ಆಪ್ತವಾಗುತ್ತದೆ.
ಕನ್ನಡಕ್ಕೆ ಮತ್ತೋರ್ವ ಪ್ರತಿಭಾನ್ವಿತ ನಿರ್ದೇಶಕ ಸಿಕ್ಕಿದ್ದಾರೆ! ಈ ಮೊದಲು ಸಿಕ್ಸರ್
ಚಿತ್ರದಲ್ಲಿ ಶಶಾಂಕ್ ಎಂಬ ನಿರ್ದೇಶಕ ಸಿಕ್ಸರ್ ಬಾರಿಸಿದ್ದಾರೋ ಇಲ್ಲವೋ ಗೊತ್ತಿಲ್ಲ
ಆದರೆ ಮೊಗ್ಗಿನ ಮನಸಿನಲ್ಲಿ ಒಂದಲ್ಲ, ನೂರಾರು ಸಿಕ್ಸರ್‍ಗಳನ್ನು ಬಾರಿಸುವುದಂತೂ ಖಚಿತ! ನಿರ್ಮಾಪಪ ಇ. ಕೃಷ್ಣಪ್ಪನವರ ಅದೃಷ್ಟ ಮತ್ತೆ ಖುಲಾಯಿಸುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ. ಇದಕ್ಕೆ ಸಾಕ್ಷಿ ಮುಂಗಾರು ಮಳೆಯ ನಂತರ ಮತ್ತೊಮ್ಮೆ ಜನ ಸಾಗರದಲ್ಲಿ ತುಂಬಿ ತುಳುಕಿ ಹೌಸ್ ಫುಲ್ ಬೋರ್ಡ್ ತೂಗಾಡಿಸಿಕೊಂಡಿದ್ದ ಕೆ.ಆರ್.ಪುರಂನ ಕೃಷ್ಣ ಚಿತ್ರಮಂದಿರ!
ಮೊಗ್ಗಿನ ಮನಸು ಎಲ್ಲರೂ ನೋಡಲೇ ಬೇಕಾದ ಚಿತ್ರ! ಚಿತ್ರದ ಉಪ ಶೀರ್ಷಿಕೆ ಹೇಳುವಂತೆ ಇದು ಹೃದಯದ ಮೇಲೆ ಪರಿಣಾಮ ಬೀರುವ ಚಿತ್ರ,ಆದರೆ ಕೇವಲ ಹುಡುಗರ ಹೃದಯ ಮಾತ್ರವಲ್ಲ, ಚಿತ್ರ ನೋಡಿದ, ಹೃದಯವಿರುವ ಎಲ್ಲ ಪ್ರೇಕ್ಷಕರ ಹೃದಯವನ್ನೂ ಕಲಕುವ ಚಿತ್ರ!
ಇಂತಹ ಅತ್ಯುತ್ತಮ ಚಿತ್ರದ ಹಿಂದೆ ಇರುವ ಕೃಷ್ಣಪ್ಪ,ಶಶಾಂಕ್, ಮನೋಮೂರ್ತಿ ಮತ್ತು ಚಿತ್ರದ ಎಲ್ಲ ತಂತ್ರಜ್ಞರಿಗೂ, ಕಲಾವಿದರಿಗೂ ಧನ್ಯವಾದಗಳು!
Visit moggina manasu official website on:
http://www.gandhadagudi.com/mogginamanasu

