ಮಿಂಚಿನ ಓಟ - ಮುನ್ನೋಟ....

akumar's picture

ಮಿಂಚಿನ ಓಟ - ಅಂದ ಕೂಡಲೇ ತಕ್ಷಣಕ್ಕೆ ನೆನಪಾಗುವ ಚಿತ್ರ 1980 ರಲ್ಲಿ ತೆರೆಕಂಡ ಶಂಕರ್ ನಾಗ್ ನಿರ್ದೇಶನದ ಚಿತ್ರ. ಈ ಚಿತ್ರದಲ್ಲಿ ಕನ್ನಡ ಚಿತ್ರರಂಗ ಕಂಡ ಇಬ್ಬರು ಪ್ರತಿಭಾವಂತ ಸಹೋದರರಾದ ಅನಂತ್ ನಾಗ್-ಶಂಕರ್ ನಾಗ್ ಒಟ್ಟಿಗೆ ನಟಿಸಿ ಎಲ್ಲರ ಗಮನ ಸೆಳೆದಿದ್ದರು. ಶಂಕರ್ ನಾಗ್ ನಿರ್ದೇಶನದ ಅತ್ಯುತ್ತಮ ಚಿತ್ರಗಳಲ್ಲಿ ಮಿಂಚಿನ ಓಟ ಕೂಡ ಒಂದು ಎಂದರೆ ತಪ್ಪಾಗಲಾರದು. ಚುರುಕಾದ ನಿರೂಪಣೆಯ ಈ ಚಿತ್ರವನ್ನು ಕನ್ನಡಿಗರು ಇನ್ನೂ ಮರೆತಿಲ್ಲ. ಹಾಗಿರುವಾಗಲೇ ಈಗ ಮತ್ತೊಮ್ಮೆ ಅದೇ ಹೆಸರಿನ ಚಿತ್ರವೊಂದು ತೆರೆಗೆ ಬರಲು ಸಿದ್ಧವಾಗಿದೆ. ಈ ಬಾರಿ "ಮಿಂಚಿನ ಓಟ"ದ ರೂವಾರಿ "ಸೈನೈಡ್" ಚಿತ್ರದ ನಿರ್ದೇಶಕ ಎ.ಎಂ.ಆರ್.ರಮೇಶ್.

ಎ.ಎಂ.ಆರ್.ರಮೇಶ್ "ಸೈನೈಡ್ " ಜೊತೆಗೆ ಸಂತೋಷ ಎಂಬ ಚಿತ್ರವನ್ನೂ ನಿರ್ದೇಶಿಸಿದ್ದಾರೆ. ಸೈನೈಡ್‍ನಲ್ಲಿ ರಾಜೀವ್ ಗಾಂಧಿ ಹಂತಕರೆನ್ನಲಾದ ಶಿವರಸನ್-ಶುಭಾರ ಕೊನೆಯ ದಿನಗಳ ನೈಜ ಚಿತ್ರಣವನ್ನು ದೃಶ್ಯ ಕಾವ್ಯವನ್ನಾಗಿಸಿ ಹೀಗೂ ಒಂದು ಚಿತ್ರವನ್ನು ನಿರೂಪಿಸಿ ಗೆಲ್ಲಬಹುದೆಂದು ಚಿತ್ರರಂಗಕ್ಕೆ ತೋರಿಸಿಕೊಟ್ಟ ಪ್ರತಿಭಾವಂತ ನಿರ್ದೇಶಕ ಈ ರಮೇಶ್. ಹತ್ತು ಚಿತ್ರಗಳು ತಂದು ಕೊಡಬಹುದಾದಷ್ಟು ಹೆಸರು, ಜನಪ್ರಿಯತೆಯನ್ನು ಸೈನೈಡ್ ಒಂದೇ ಚಿತ್ರ ರಮೇಶ್‍ಗೆ ತಂದು ಕೊಟ್ಟಿದೆ. ಈಗ ಮತ್ತೊಮ್ಮೆ "ಮಿಂಚಿನ ಓಟ"ದಲ್ಲಿ ತಮ್ಮ ವಿಭಿನ್ನ ಕಥೆ, ಚಿತ್ರಕಥೆಯೊಂದಿಗೆ ಹಾಜರಾಗಿದ್ದಾರೆ ರಮೇಶ್! ಸಾ.ರಾ.ಗೋವಿಂದು ಈ ಚಿತ್ರದ ನಿರ್ಮಾಪಕರು.

ಶಂಕರ್ ನಾಗ್ ನಿರ್ದೇಶನದ "ಮಿಂಚಿನ ಓಟ" ಓಟದಂತೆ ಈ ಚಿತ್ರದಲ್ಲೂ ಕನ್ನಡ ಚಿತ್ರರಂಗದ ಇನ್ನಿಬ್ಬರು ಪ್ರತಿಭಾವಂತ ಸಹೋದರರಾದ ವಿಜಯ ರಾಘವೇಂದ್ರ - ಮುರಳಿ ಒಂದೇ ತೆರೆಯ ಮೇಲೆ ಮಿಂಚಲಿದ್ದಾರೆ. ಹಾಗೆಂದ ಮಾತ್ರಕ್ಕೆ ಆ ಮಿಂಚಿನ ಓಟಕ್ಕೂ ಈ ಮಿಂಚಿನ ಓಟಕ್ಕೂ ಯಾವುದೇ ಸಂಬಂಧವಿಲ್ಲ, ಇದು ಆ ಚಿತ್ರಕ್ಕಿಂತ ಸಂಪೂರ್ಣ ಭಿನ್ನವಾದದ್ದು ಎನ್ನುತ್ತಾರೆ ರಮೇಶ್.

ಮಿಂಚಿನ ಓಟದ ವಿಶೇಷತೆಗಳು:

  • ವಿಭಿನ್ನವಾದ ಕಥೆ, ಅಷ್ಟೇ ವಿಭಿನ್ನವಾದ ಹೊಸತನದ ನಿರೂಪಣೆ. ಅತ್ಯಂತ ಸಾಹಸಿ ಯುವಕರಿಬ್ಬರು ತಮ್ಮ ಗುರಿಯನ್ನು ಸಾಧಿಸಲು ಮತ್ತು ತಮ್ಮ ಪ್ರೀತಿಗಾಗಿ ನಡೆಸುವ ಹುಡುಕಾಟವೇ ಚಿತ್ರದ ಮುಖ್ಯ ಕಥಾವಸ್ತು.
  • ಅತ್ಯಂತ ಕುತೂಹಲಕಾರಿ 40 ನಿಮಿಷಗಳ ಮೈ ನವಿರೇಳಿಸುವ ಕ್ಲೈಮ್ಯಾಕ್ಸ್ ದೃಶ್ಯ. ರಾಷ್ತ್ರೀಯ ಹೆದ್ದಾರಿಯಲ್ಲಿ ವಿಜಯ್-ಮುರಳಿ ಪ್ರಯಾಣ ನಡೆಸುವಾಗ ನಡೆಯುವ ಈ ದೀರ್ಘ ಕ್ಲೈಮ್ಯಾಕ್ಸ್ ಇಡೀ ಚಿತ್ರದ ಪ್ರಮುಖ ಹೈಲೈಟ್; ಚಲಿಸುತ್ತಿರುವ ರೈಲಿಗೆ ಢಿಕ್ಕಿ ಹೊಡೆವುವ ಸನ್ನಿವೇಶವಂತೂ ಕನ್ನಡ ಪರದೆಯಲ್ಲಿ ಹಿಂದೆಂದೂ ತೋರಿಸದ ರೀತಿಯಲ್ಲಿ ಚಿತ್ರಿಸಲಾಗಿದೆ ಎನ್ನುತ್ತಾರೆ ರಮೇಶ್. ಜಾಲಿ ಬಾಸಿನ್ ಈ ಚಿತ್ರಕ್ಕೆ ಸಾಹಸ ಸಂಯೋಜಿಸಿದ್ದಾರೆ.
  • ಚಿತ್ರದ ಮತ್ತೊಂದು ಆಕರ್ಷಣೆ- ಛಾಯಾಗ್ರಹಣ. ಪಿ.ರಾಜನ್ ಚಿತ್ರದ ಛಾಯಾಗ್ರಾಹಕ. ಈ ಮೊದಲು ಇವರು "ಸ್ಮೈಲ್" ಚಿತ್ರಕ್ಕೆ ಕ್ಯಾಮರಾಮ್ಯಾನ್ ಆಗಿದ್ದರು.
  • ಚಿತ್ರದಲ್ಲಿ ಶಿವಾಜಿ, ಗಾಳಿಪಟದಲ್ಲಿ ಬಳಸಿರುವಂತಹ ಸೂಪರ್ 35 mm ಕ್ಯಾಮೆರಾ ಬಳಸಲಾಗಿದೆ. ಇದು ಮಾಮೂಲಿ ಕ್ಯಾಮರಾಗಳಿಗಿಂತ ಹೆಚ್ಚು ಸ್ಪಷ್ಟತೆಯನ್ನು ಒದಗಿಸುತ್ತದೆ. ರಾಜನ್ ಹೇಳುವಂತೆ ಮಿಂಚಿನ ಓಟದಲ್ಲಿ ಬಳಸಿರುವ ಕ್ಯಾಮೆರಾ ಗಾಳಿಪಟದ ಕ್ಯಾಮರಾಕ್ಕಿಂತಲೂ ಒಂದು ಹೆಜ್ಜೆ ಮುಂದು! ಅದಕ್ಕಿಂತಲೂ ಹೆಚ್ಚು ಸ್ಪಷ್ಟತೆ ಇದರಿಂದ ಸಾಧಿಸಲು ಸಾಧ್ಯ! ಬೆಲೆ ಅದಕ್ಕಿಂತ ಕೇವಲ(?) 2 ಕೋಟಿ ಮಾತ್ರ ಹೆಚ್ಚು!!
  • ಮೊದಲ ಬಾರಿಗೆ ವಿಜಯ್ ರಾಘವೇಂದ್ರ - ಮುರಳಿ ನಾಯಕರಾಗಿ ಒಂದೇ ಚಿತ್ರದಲ್ಲಿ. ಈ ಮೊದಲು ಬಾಲನಟರಾಗಿ ಇಬ್ಬರೂ ಒಟ್ಟಿಗೆ ನಟಿಸಿದ್ದರಾದರೂ ನಾಯಕರಾಗಿ ಇದೇ ಮೊದಲು ಮುಖಾ ಮುಖಿ. ಜೊತೆಗೆ ಕನ್ನಡತಿ ಲಕ್ಷ್ಮೀ ರೈ ನಾಯಕಿಯಾಗಿ ನಟಿಸಿದ್ದಾರೆ.
  • ಹಾಸ್ಯಕ್ಕೆ ಈ ಚಿತ್ರದಲ್ಲಿ ವಿಫುಲ ಅವಕಾಶವನ್ನು ನೀಡಲಾಗಿದೆ. ರಂಗಾಯಣ ರಘು - ಉಮಾಶ್ರೀ ಜೊತೆಗಾಗಿ ನಗಿಸಲಿದ್ದಾರೆ. ಜೊತೆಗೆ ಇನ್ನೊಬ್ಬ ನಗೆ ಮಾಂತ್ರಿಕ ಸಾಧು ಕೋಕಿಲ ಕೂಡ ಇದ್ದಾರೆ ಎಂದಮೇಲೆ ಕೇಳಬೇಕೆ?!
  • ಐಟಂ ಸಾಂಗೊಂದಕ್ಕೆ ಸುಮನ್ ರಂಗನಾಥ್ ಹೆಜ್ಜೆ ಹಾಕಿದ್ದಾರೆ!
  • ಈಗಾಗಲೇ ಜನಪ್ರಿಯವಾಗಿರುವ ಹಾಡುಗಳು. ವಿ.ಮನೋಹರ್ ಸಂಗೀತ ಹೊಸತನದಿಂದ ಕೂಡಿದೆ. ಲೀಲಾವತಿ ಬೈಪಡಿತ್ತಾಯ ಮತ್ತು ವಿಜಯ್ ಪ್ರಕಾಶ್ ಕಂಠಸಿರಿಯಲ್ಲಿ ಯಕ್ಷಗಾನ ಭಾಗವತಿಕೆ ಮತ್ತು ಪಾಶ್ಚಾತ್ಯ ಶೈಲಿಯನ್ನು ಒಂದೇ ಹಾಡಿನಲ್ಲಿ ಮೇಳೈಸಿರುವ ವಿನೂತನ ಪ್ರಯತ್ನವನ್ನು ಈಗಾಗಲೇ ಜನ ಮೆಚ್ಚಿಕೊಂಡಿದ್ದಾರೆ.

ಚಿತ್ರ ಇದೇ ಗುರುವಾರ (ಜುಲೈ 10)ರಂದು ರಾಜ್ಯಾದ್ಯಂತ ತೆರೆಕಾಣಲಿದೆ.

ಮಚ್ಚು ಲಾಂಗ್ ಚಿತ್ರಗಳು ಮತ್ತೆ ರಾರಾಜಿಸಲು ಹವಣಿಸುತ್ತಿರುವ ಈ ಸಮಯದಲ್ಲಿ ಓಯಸಿಸ್‍ನಂತೆ ತಂಪೆರೆಯುವ ಕೆಲಸವನ್ನು ಈ "ಮಿಂಚಿ ಓಟ" ಮಾಡಲಿ ಎಂದು ಶುಭ ಹಾರೈಸೋಣ.

ಉತ್ತಮ ಚಿತ್ರಗಳು ಬಂದಾಗ ಕನ್ನಡಿಗರೆಲ್ಲ ನೋಡಿ, ಚಿತ್ರತಂಡದ ಶ್ರಮಕ್ಕೆ ಬೆನ್ನು ತಟ್ಟಿ ಪ್ರೋತ್ಸಾಹಿಸಿ.

ಚಿತ್ರದ ಸಂಪೂರ್ಣ ವಿಮರ್ಶೆಯೊಂದಿಗೆ ಮತ್ತೆ ಭೇಟಿಯಾಗೋಣ -
ತಮ್ಮ,
akumar.reach@gmail.com