ಬೊಂಬಾಟ್ ಆಡಿಯೋ ಬಗ್ಗೆ ನಮ್ ಬೋರಣ್ಣ, ಮಾದಣ್ಣ ಏನಂತಾರೆ ನೋಡೋಣ ಬನ್ನಿ....
ಮಾದ: "ಬೋರಣ್ಣ, ಇದ್ಯಾಕ್ಲಾ ಈ ಅಂಗಡಿ ಮುಂದೆ ಈ ಪಾಟಿ ಜನ ನಿಂತವ್ರೆ? ಏನ್ಲಾ ಇಲ್ಲಿ ಇಸೇಸ ?"
ಬೋರ: "ಓ ಅದಾ, ನಂ ಗಣೇಶಂದು ಹೊಸ ಪಿಚ್ಚರ್ರು ಬೊಂಬಾಟ್ ಅಂತ ಬತ್ತಾ ಇದೆ ಅಂತ ಹೇಳಿರ್ಲಿಲ್ವಾ.. ಅದ್ರದ್ದು ಕ್ಯಾಸೆಟ್ಟು, ಸಿಡಿ. ಬಿಟ್ಟವ್ರೆ ಕಣ್ಲಾ.. ಅದನ್ನ ತಗಳಕೇ ಇರ್ ಬೇಕು ಈ ಪಾಟಿ ಜನ ಸೇರಿರೋದು. "
"ಓ ಹಂಗಾ.. ಅಂದಂಗೆ, ನೀ ಕೇಳಿದ್ಯೇನ್ಲಾ ಹಾಡ್‍ಗಳ್ನಾ ? "
"ಹೂಂ.. ಹೊತ್ತಾರೇನೆ ತಗಂಬಂದು ಕೇಳ್ದೆ ಕಣ್ಲಾ..
"ಹೆಂಗವೆ ?"
"ಭೋ ಪಸಂದಾಗವೆ ಮಾದಣ್ಣಾ, ಮ್ಯೂಸಿಕ್ಕು ಮುಂಗಾರು ಮಳೆ ಮನೋ ಮೂರ್ತಪ್ಪಂದು ಅಂದ್ ಮ್ಯಾಕೆ ಸಂದಾಕಿಲ್ದೆ ಇರಕಾಯ್ತದಾ?. ಬೊಂಬಾಟಾಗದೆ."
"ಲೇ.. ಲೇ.. ಬೋರಣ್ಣ, ನನ್ ಕೈಲಿ ತಡ್ಕಳಕಾಗ್ತಾ ಇಲ್ಲ ಕಣ್ಲಾ... ಯಾವ್ ಯಾವ್ ಹಾಡು ಯಾರ್ಯಾರ್ ಹಾಡವ್ರೆ, ಹೆಂಗೆಂಗವೆ.. ವಸಿ ಡೀಟೈಲಾಗಿ ಹೇಳ್ಲಾ... "
ಹೇಳ್ತೀನಿ, ಆದ್ರೆ ಒಂದ್ ಕಂಡೀಷನ್ನು...."
"ಏನು?"
"ಕೇಳಿದ್ ಮ್ಯಾಲೆ, ಅವ್ರ್ ಇವ್ರ್ ಹತ್ರ ಓಸಿ ಕ್ಯಾಸೆಟ್ ಇಸ್ಕಳ್ದೆ, ದುಡ್ಡು ಕೊಟ್ಟು ತಗಂಡ್ ಕೇಳ್ ಬೇಕು ಅನ್ನೋ ಮಾತಿಗೆ ಒಪ್ಕಂಡ್ರೆ ಮಾತ್ರ ನಾ ಹೇಳೋದು.."
"ಸರಿ ಕಣ್ ಬೋರಣ್ಣ, ಖಂಡಿತ ತಗೋತೀನಿ.. ಅಷ್ಟೇ ಯಾಕಪ್ಪಾ, ಈಗ ನಿನ್ ಎದ್ರಿಗೇ ಇದೇ ಅಂಗಡೀಲೇ ತಗೋತೀನಿ, ಆಯ್ತೇನಪ್ಪಾ?, ಈಗ್ಲಾದ್ರೂ ಹೇಳು.."
"ಸರಿ, ಹೇಳ್ತೀನಿ ಕೇಳು.. ಇದ್ರಾಗೆ ಒಟ್ಟು 5 ಹಾಡುಗಳವೆ, ಒಂದ್ ಒಂದ್ ಹಾಡೂ ಡಿಫರೆಂಟಾಗಿ ಮಾಡವ್ರೆ. ಸೋನು ನಿಗಂ, ಶ್ರೇಯಾ ಇವ್ರೆಲ್ಲ ಹಾಡವ್ರೆ.
ಮೊದಲ್ನೇ ಹಾಡು - "ಐ ಆಮ್ ಸೋ ಬೊಂಬಾಟ್.. ಬಂದ್ರೆ ನಾನು ಬೊಂಬಾಟ್, ನಿಂತ್ರೆ ನಾನು ಬೊಂಬಾಟ್" ಅಂತ. ಟೈಟಲ್ ಸಾಂಗು. ಗುರುಕಿರಣ್ ಹಾಡಿರೋದು ಇದನ್ನ. ಮೊನ್ನೆ ಮೊನ್ನೆ ಮಾದೇಸದಲ್ಲೂ ಗುರು ಇಂಥದ್ದೇ ಒಂದು ಹಾಡು ಹೇಳಿದ್ರು. ಏನ್ ಮ್ಯೂಸಿಕ್ ಕೊಟ್ಟವ್ರೆ ಅಂತೀಯಾ... ನಿಂಗೆ ಫಾಸ್ಟ್ ಸಾಂಗ್ ಅಂದ್ರೆ ಇಷ್ಟ ಅಲ್ವಾ, ನಿಂಗಂತೂ ಈ ಹಾಡು ತುಂಬಾನೇ ಇಷ್ಟ ಆಯ್ತದೆ ಬುಡು. ಕವಿರಾಜ್ ಇದನ್ನ ಬರ್ದವ್ರೆ. ನಂಗಂತೂ ಈ ಹಾಡು ಇಷ್ಟ ಆಗಿದೆ ಕಣ್ಲಾ... ಒಂಥರ ಜೋಶ್, ಧಂ ಅಂತಾರಲ್ಲ ಅದ್ ಇದೆ ಇದ್ರಲ್ಲಿ.. ಕುಣಿಯೋಕೆ ಒಳ್ಳೆ ಹಾಡು.... ನಾನೇನಾರ ಇದಕ್ಕೆ ಮಾರ್ಕ್ ಹಾಕಂಗಿದ್ದಿದ್ರೆ 10 ರಾಗೆ 8 ಕೊಡ್ತಾ ಇದ್ದೆ."
"ಇನ್ನು ಎರಡನೇ ಹಾಡಿನ ಬಗ್ಗೆ ಹೇಳ್ತೀನಿ ಕೇಳು.. "ಸ್ಟ್ರಾಬೆರಿ ಕೆನ್ನೆಯ ಓ ಹುಡುಗಿಯೇ" ಅಂತ. ಕವಿರಾಜ್ ಬರ್ದವ್ರೆ ಈ ಹಾಡ್ನ. ಇದನ್ನ ಹಾಡಿರೋದು ನಮ್ಮ ರಾಜೇಶ್ ಕೃಷ್ಣನ್. ಜೊತೆಗೆ ಸುಪ್ರಿಯಾ ರಾಮಕೃಷ್ಣಯ್ಯ ಕೂಡ ದನಿ ಗೂಡ್ಸಿದಾರೆ. ಸುಪ್ರಿಯಾ ಅಂದ್ರೆ ಯಾರು ಗೊತ್ತಾಗ್ಲಿಲ್ವೇನ್ಲಾ... ಅದೇ ಝೀ ಟಿವಿ ಕನ್ನಡದಾಗೆ ಸ.ರಿ.ಗ.ಮ.ಪ. ಅಂತ ಕಾಂಪಿಟೀಷನ್ನಲ್ಲಿ ಫೈಲಲ್ನಾಗೆ ಗೆದ್ಲಲ್ಲ ಅವ್ಲೇ ಇವ್ಳು. ಆ ಕಾಂಪಿಟೀಷನ್ನಲ್ಲಿ ನಂ ಮನೋಮೂರ್ತಿ ಸಾರ್ ಕೂಡ ಜಡ್ಜ್ ಆಗಿದ್ರು.. ಅದ್ರಗೆ ಗೆದ್ದವ್ರಿಗೆ ತಮ್ ಸಿನಿಮಾದಾಗೆ ಹಾಡೋಕೆ ಛಾನ್ಸ್ ಕೊಡ್ತೀನಿ ಅಂದಿದ್ರು... ಹಾಗಾಗಿ ಸುಪ್ರಿಯಾ ಕೈಲಿ ಹಾಡ್ಸವ್ರೆ ಈ ಹಾಡ್ನ. ಸುಮಾರಾಗೇ ಹಾಡವ್ಳೆ. ಆದ್ರೂ ಇನ್ನೂ ಸ್ವಲ್ಪ ಚಂದಾಗಿ ಹಾಡ್ಬೋದಿತ್ತು. ರಾಜೇಶ್ ಸೂಪರ್! ಕೇಳೊಕೆ ಈ ಹಾಡು ಚಂದಾಗೇನೋ ಐತೆ..ಆದ್ರೆ ತುಂಬಾ ಇಂಗ್ಲೀಸ್ ಪದಗಳನ್ನ ಹಾಕಿ ಬುಟ್ಟವ್ರೆ ಅನ್ನೋದೆ ಬ್ಯಾಸ್ರ.... ಕನ್ನಡದಲ್ಲೇ ಇನ್ನೂ ಚನ್ನಗಿ ಬರೀಬಹುದಿತ್ತು ಅಂತ ನಂಗನ್ನಿಸ್ತಾ ಇದೆ.." 10 ರಾಗೆ 7 ಮಾರ್ಕ್ಸ್ ಧಾರಾಳ್ವಾಗಿ ಕೊಡ್ಬೋದು ಇದಕ್ಕೆ.
"ಏಯ್ ಬುಡು ಬೋರಣ್ಣ, ಅದಕ್ಯಾಕೆ ಬ್ಯಾಸ್ರ ಮಾಡ್ಕೋಬೇಕು.. ಕೃಷ್ಣ ಪಿಚ್ಚರ್ನಾಗೆ ರಾಕ್ ಯೂ ಬಾಡಿ ಥಯ್ಯ ಥಯ್ಯ ಅಂತ ಹಾಡು ಬಂದಾಗ್ಲೂ ನೀ ಇದನ್ನೇ ಹೇಳಿದ್ದೆ.. ಅದನ್ನ ಜನ ಒಪ್ಕೊಂದು ಆ ಹಾಡು ಫೇಮಸ್ ಆಗ್ಲಿಲ್ವೇನ್ಲಾ? ನಮ್ ಜನಕ್ಕೆ ಹಾಡು ಕೇಳೋಕೆ ಚಂದಾಗಿದ್ರೆ ಆಯ್ತು.. ಕನ್ನಡ, ಎಂಗ್ಲೀಸು, ರೀಮೇಕು, ಸ್ವಮೇಕು ಅಂತೆಲ್ಲ ತಲೆ ಕೆಡ್ಸೊಳ್ಳೋಲ್ಲ ಬೋರಣ್ಣ, ನೀನಿನ್ನೂ ಎಲ್ಲೋ ಇದೀಯಾ. "
"ಹೋಗ್ಲಿ ಬಿಡು ಮಾದಣ್ಣ, ಒಳ್ಳೆ ಹಾಡು ಕೊಟ್ಟವ್ರಲ್ಲ, ಅಷ್ಟು ಸಾಕು. ಇನ್ನು ಮೂರನೇ ಹಾಡು ಯಾವುದು ಗೊತ್ತಾ? "ಮಾತಿನಲ್ಲಿ ಹೇಳಲಾರೆನು.. ರೇಖೆಯಲ್ಲಿ ಗೀಚಲಾರೆನು, ಆದರೂನು ಹಾಡದೇನೆ ಉಳಿಯಲಾರೆನು.. ಅಂಥ ರೂಪಸಿ ನನ್ನ ಪ್ರೇಯಸಿ.. ಎಲ್ಲಿ ಇರುವಳೋ ನನ್ನ ಕಾಯಿಸಿ". ಈ ಹಾಡು ಎಷ್ಟ್ ಸೂಪರಾಗಿದೆ ಅಂದ್ರೆ ನಂಗಂತೂ ಮಾತಲ್ಲಿ ಹೇಳಕಾಗ್ತಾ ಇಲ್ಲ.. ಹಾಡು ಬರ್ದಿರೋದು ಯಾರು ಗೊತ್ತೇನ್ಲಾ? ಜಯಂತ್ ಕಾಯ್ಕಿಣಿ ಅವ್ರು. ಅಲ್ಲಾ, ಈ ಸಾರ್ರು ಇಷ್ಟೊಂದು ಹಾಡುಗಳನ್ನ ಬರೀತಾ ಇದ್ರೂ ಅದ್ ಹ್ಯಾಂಗೆ ಪ್ರತೀ ಹಾಡ್ನೂ ಇಷ್ಟು ಚೆನ್ನಾಗಿ ಬರೀತಾರೋ ಅರ್ಥನೇ ಆಗಕಿಲ್ಲ. ಮೊನ್ನೆ ಮೊನ್ನೆ ಮಾದೇಸ ಚಿತ್ರದಾಗೆ ಲಹರಿ ಲಹರಿ ಅಂತ ಬರ್ದಿರೋ ಹಾಡ್ನ ಜನ ಹುಚ್ಚೆದ್ದು ಕೇಳ್ತಾ ಇರೋವಾಗ್ಲೇ ಇಲ್ಲಿ ಮತ್ತೊಂದು ಅಂಥದ್ದೆ ಮೆಲೋಡಿ ಸಾಂಗ್ ಬರ್ದವ್ರಲ್ಲಾ... ಇವ್ರು ನಿಜಕ್ಕೂ ಗ್ರೇಟ್ ಕಣ್ಲಾ. ಹಾಡಿನ ಪಲ್ಲವಿಯ ಕೊನೇ ಎರಡ್ ಲೈನ್ ಅಂತೂ ಮರೆಯೋಕೇ ಆಗ್ತಾ ಇಲ್ಲ ಮಗಾ.. "ಅಂಥ ರೂಪಸಿ.. ನನ್ನ ಪ್ರೇಯಸಿ.. ಎಲ್ಲಿ ಇರುವಳೊ ನನ್ನ ಕಾಯಿಸಿ". ಈ ಹಾಡು ಬಾಯಲ್ಲಿ ಹೇಳೋಕಿಂತ ಅನುಭವಿಸಬೇಕು. ನೀನೇ ಕೇಳಿದ್ರೆ ಮಾತ್ರ ಅನುಭವಿಸಬಹುದು ಆ ಹಾಡ್ನಾಗಿರೋ ಸುಖಾನ.. ನಂ ಗಣೇಶಂಗೆ ಕೂಡ ಈ ಹಾಡು ತುಂಬಾ ಇಷ್ಟ ಆಗೈತಂತೆ. ಹಂಗಂತ ಅವ್ನೆ ಟಿ.ವಿ. ಪೇಪರ್ನಾಗೆಲ್ಲ ಹೇಳ್ಕೊಂಡವ್ನೆ. ಈ ಹಾಡು ಸೂಪರ್ ಡೂಪರ್ ಹಿಟ್ ಆಗೋದ್ರಲ್ಲಿ ಅನುಮಾನಾನೇ ಇಲ್ಲ. ನನ್ ಕಡೆ ಇಂದ ಅಂತೂ ಇದಕ್ಕೆ 9 ಮಾರ್ಕ್ಸು 10 ರಲ್ಲಿ.
"ಅಷ್ಟೊಂದು ಚಂದಾಗಿದೆ ಅಂತೀಯಾ, ಆದ್ರೂ ಒಂದು ಮಾರ್ಕ್ ಕಟ್ ಯಾಕ್ ಮಾಡೋದು?"
"ಓ ಅದಾ? ಈ ಸೋನು ನಿಗಮ್ ತಪ್ಪು ತಪ್ಪಾಗಿ ಕನ್ನಡ ಹೇಳವ್ನೆ ಕಣ್ಲಾ, ಹಾಡದೇನೆ ಅನ್ನೋ ಕಡೆ ಹಾಡಡೇನೆ ಅಂತ ಹೇಳೋದೇನ್ಲಾ ?? ನಂ ಮನೋ ಮೂರ್ತಣ್ಣಂಗೆ ಈ ತಪ್ಪು ಅದ್ ಹೆಂಗ್ ಗೊತ್ತಾಗ್ಲಿಲ್ವೋ ತಿಳೀತಾ ಇಲ್ಲ ಕಣ್ಲಾ... ಇಡೀ ಹಾಡಿಗೆ ಇದು ಒಂದು ಚಿಕ್ಕ ಕಪ್ಪು ಚುಕ್ಕೆ ಆಗ್ ಬುಟ್ಟದೆ...ಅದಕ್ಕೆ ಒಂದು ಮಾರ್ಕ್ ಕಟ್! ಇದೊಂದು ಇಲ್ಲಾಂದ್ರೆ ಸೂಪರ್ ಡ್ಯೂಪರ್ ಹಾಡು!
ಇದೇ ಹಾಡ್ನ ಶ್ರೇಯಾ ಗೋಶಾಲ್ ಕೂಡ ಹೇಳವ್ಳೆ. ಸಾಹಿತ್ಯ ಸ್ವಲ್ಪ ಬೇರೆ ಮಾಡವ್ರೆ.... ಸೋನು ನಿಗಂ ಎಲ್ಲೆಲ್ಲಿ ಮಾಡಕಾಗಲ್ಲ ಅಂತ ಹಾಡವ್ನೋ.. ಶ್ರೇಯಾ ಅವೆಲ್ಲ ಆಯ್ತದೆ ಅಂತ ಹಾಡವ್ಳೆ. "ಮಾತಿನಲ್ಲೂ ಹೇಳಬಲ್ಲೆನು, ರೇಖೆಯಲ್ಲೂ ಗೀಚಬಲ್ಲೆನು" ಅಂತ ಶುರುವಾಯ್ತದೆ ಈ ಹಾಡು ಈ ಹಾಡು ಸೋನು ಹಾಡ್ನಷ್ಟು ಖುಷಿಯಾಗಕಿಲ್ಲ.. ಆದ್ರೂ ಕೇಳೋಕೇನೋ ಚಂದಾಗೇ ಐತೆ... 8 ಮಾರ್ಕ್ ಕೊಡ್ಬೋದು ನೋಡಪ್ಪಾ.
ಇನ್ನು ಕೊನೇದು.. "ಚಿನ್ನ ಹೇಳೆ ಹೇಗಿರುವೆ, ಕಣ್ಣಿಲಲ್ಲೆ ಹಾಡಿರುವೆ, ನಿನ್ನದೊಂದು ನೋಟಕೆ ನಾ ಓಡುತಲೇ ಬಂದಿರುವೆ" ಅಂತ ಶುರುವಾಯ್ತದೆ. ಇದನ್ನ ಸೋನು ನಿಗಂ ಜೊತೆ ಶ್ರೇಯಾ ಗೋಶಾಲ್ ಹಾಡವ್ಳೆ. ಹಾಡಿನ ಸಾಹಿತ್ಯ ಸೂಪರ್. ಮೊದ್ಲೇ ಹೇಳ್ದಂಗೆ ಜಯಂತ್ ಕಾಯ್ಕಿಣಿ ಅಂದ್ ಮ್ಯಾಲೆ ಕೇಳ್ ಬೇಕಾ. ಸೋನು ಶ್ರೇಯಾ ಇಬ್ರೂ ಬೋ ಪಸಂದಾಗಿ ಹಾಡವ್ರೆ... ಮ್ಯೂಸಿಕ್ ಇನ್ನೂ ಸ್ವಲ್ಪ ಚಂದಾಗಿ ಮಾಡ್ಬಹುದಾಗಿತ್ತು ಅಂತ ನನ್ ಅಭಿಪ್ರಾಯ. 10 ರಾಗೆ 7 ಕೊಟ್ಡ್ಬೋದು ನೋಡಪ್ಪ..."
"ತುಂಬಾ ಥ್ಯಾಂಕ್ಸ್ ಮಗಾ... ನಾನ್ ಈವಾಗ್ಲೇ ಕ್ಯಾಸೆಟ್ ತಗೊಂಡ್ ಕೇಳ್ತೀನಿ....."
***************************************************
ಬೋರಣ್ಣ, ಮಾದಣ್ಣ ಹೇಳಿದ್ದು ಕೇಳಿದ್ರಿ ತಾನೆ? ನೀವೂ ಅಷ್ಟೇ.. CD / ಕ್ಯಾಸೆಟ್ ಖರೀದಿ ಮಾಡಿ ಹಾಡುಗಳನ್ನು ಕೇಳಿ ಆನಂದಿಸಿ. ಪೈರಸಿ ನಿಲ್ಲಿಸಿ, ನಮ್ಮ ಕನ್ನಡ ಆಡಿಯೋವನ್ನು ಬೆಂಬಲಿಸಿ.
ತಮ್ಮ,
ಅ.ಕುಮಾರ್
akumar.reach@gmail.com
ಇದರ ಕಲರ್ ಆವೃತ್ತಿ ಗಂಧದಗುಡಿ ಚರ್ಚಾವೇದಿಕೆಯಲ್ಲಿ ಲಭ್ಯ.
http://www.gandhadagudi.com/forum/viewtopic.php?f=1&t=2869&st=0&sk=t&sd=...

