ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಲಿ (KFCC) ಗೆ ಇಂದು ನಡೆದ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು ಜಯಮಾಲಾ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ! ಈ ಮೂಲಕ ಈ ಪ್ರತಿಷ್ಠಿತ ಸ್ಥಾನಕ್ಕೆ ಆಯ್ಕೆಯಾದ ಮೊಟ್ಟ ಮೊದಲ ಮಹಿಳಾ ಅಧ್ಯಕ್ಷೆ ಎಂಬ ಹೆಗ್ಗಳಿಕೆ ಗಿರಿಕನ್ಯೆ ಜಯಮಾಲಾಗೆ! ಇಲ್ಲಿಯವರೆಗೆ ತಲ್ಲಂ ನಂಜುಂಡ ಶೆಟ್ಟಿ KFCC ಅಧ್ಯಕ್ಷರಾಗಿದ್ದು, ಶೀಘ್ರದಲ್ಲೇ ಜಯಮಾಲಾ ಅಧಿಕಾರವಹಿಸಿಕೊಳ್ಳಲಿದ್ದಾರೆ!
KFCC ನಿಯಮದ ಪ್ರಕಾರ ಈ ಬಾರಿಯ ಅಧ್ಯಕ್ಷ ಸ್ಥಾನ ನಿರ್ಮಾಕರ ಸಂಘಕ್ಕೆ ಸಿಗಬೇಕಾಗಿತ್ತು. (ಕಳೆದ ಬಾರಿ ಇದು ಪ್ರದರ್ಶಕರ ಸಂಘಕ್ಕೆ ದಕ್ಕಿತ್ತು.). ಬಾ.ಮಾ. ಹರೀಶ್ ಮತ್ತು ಜಯಮಾಲಾ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತಾದರೂ ಪರಿಸ್ಥಿತಿ ಈ ಬಾರಿ ಜಯಮಾಲಾ ಅವರಿಗೇ ಹೆಚ್ಚು ಪ್ರಶಸ್ತವಾಗಿತ್ತು.
ಉಪಾಧ್ಯಕ್ಷರಾಗಿ ರಾಕ್ ಲೈನ್ ವೆಂಕಟೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಜೊತೆಗೆ ವಿ.ಎಚ್.ಸುರೇಶ್, ಎಚ್,ಟಿ.ಆನಂದ್ ಕೂಡ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಸಾ.ರಾ.ಗೋವಿಂದು ಅವರಿಗೆ ಖಜಾಂಚಿ ಸ್ಥಾನ ಲಭಿಸಿದೆ.
ಜಯಮಾಲಾ ಹಾದಿ ಸುಗಮವಾಗಿಯೇನೂ ಆಗಿಲ್ಲ. ಕೆ.ಎಫ್.ಸಿ.ಸಿ. ಅಧ್ಯಕ್ಷರಾಗುವ ಮೂಲಕ ಜಯಮಾಲಾ ಮೇಲೆ ಗುರುತರ ಜವಾಬ್ದಾರಿಗಳಿವೆ. ಪ್ರಸಕ್ತ ಕನ್ನಡ ಚಿತ್ರರಂಗ ಪರಭಾಷಾ ಚಿತ್ರಗಳ ದಾಳಿಗೆ ಸಿಲುಕಿ ತತ್ತರಿಸಿ ಹೋಗುತ್ತಿದೆ. ಕನ್ನಡ ಚಿತ್ರಗಳಿಗೆ ಎಲ್ಲೆಡೆ ಚಿತ್ರಮಂದಿರಗಳ ಅಭಾವ. ಅದರಲ್ಲೂ ಕೆಂಪೇಗೌಡ ರಸ್ತೆಯಲ್ಲಿ ಒಂದು ಚಿತ್ರಮಂದಿರವನ್ನು ಗಿಟ್ಟಿಸಿಕೊಳ್ಳಲು ಹರಸಾಹಸವನ್ನೇ ಪಡಬೇಕಾದ ಸ್ಥಿತಿಯಿದೆ. ನಾಯಕಿಯರಿಗೆ ಮಾತ್ರ ಸೀಮಿತವಾಗಿದ್ದ ಆಮದು ಪ್ರವೃತ್ತಿ ಇತೀಚೆಗೆ ಪೋಷಕ ಪಾತ್ರಗಳಿಗೂ ವ್ಯಾಪಿಸುತ್ತಿದೆ. ಹೀಗಾಗಿ ಚಿತ್ರರಂಗವನ್ನೇ ನಂಬಿ ಬದುಕುತ್ತಿರುವ ಸ್ಥಳೀಯ ಕಲಾವಿದರಿಗೆ ದಿಕ್ಕೇ ಕಾಣದಾಗುತ್ತಿದೆ ಎಂಬ ಕೂಗೂ ಇದೆ. ಹೀಗೆ ಚಿತ್ರರಂಗದ ಸಮಸ್ಯೆಗಳು ಹನುಮಂತನ ಬಾಲದಂತೆ ಬೆಳೆಯುತ್ತಲೇ ಇವೆ. ಸ್ವತಃ ನಟಿ, ನಿರ್ಮಾಪಕಿ ಮತ್ತು ನಿರ್ದೇಶಕಿಯೂ ಆಗಿರುವ ಜಯಮಾಲಾ ಈ ಎಲ್ಲ ಸಮಸ್ಯೆಗಳಿಗೆ ಹೇಗೆ ಸ್ಪಂದಿಸುತ್ತಾರೆ, ಚಿತ್ರರಂಗವನ್ನು ಈ ಸಮಸ್ಯೆಗಳ ಸುಳಿಯಿಂದ ಹೊರತರಲು ಯಾವ ಯಾವ ಕ್ರಮ ಕೈಗೊಳ್ಳಲಿದ್ದಾರೆ ಎಂಬ ಕುತೂಹಲ ಎಲ್ಲರನ್ನೂ ಕಾಡುತ್ತಿದೆ.
ಜಯಮಾಲಾ ತಮ್ಮ ಈ ಹೊಸ ಕರ್ತವ್ಯವನ್ನು ಸಮರ್ಥವಾಗಿ ನಿಭಾಯಿಸಲಿ ಎಂಬುದು ನಮ್ಮ ಹಾರೈಕೆ.
ಅಭಿನಂದನೆಗಳು ಜಯಮಾಲಾ ಮ್ಯಾಡಂ!
ಚಲನಚಿತ್ರ ವಾಣಿಜ್ಯ ಮಂಡಲಿ ಚುನಾವಣೆ: ಜಯಮಾಲಾಗೆ ಜಯದ ಮಾಲೆ!

By akumar - Posted on June 28th, 2008
Tagged:
