girgitle

SANJU WEDS GEETHA IN HEAVEN!!!

SANJU WEDS GEETHA IN HEAVEN!!!

ಕಥಾ ಹಂದರ:

ಸಂಜು ಮತ್ತು ಗೀತಾ…

ಸೇರ ಬೇಕು ಅಂತ….

ಬರೆದಾಗಿದೆ ಇಂದು ಬ್ರಹ್ಮನು…

ಬ್ರಹ್ಮ ಬರೆದ ಪ್ರೇಮ ಕಥೆ ಕಡೆಗೂ ಸೇರುವುದು ಅವನ ಆಸ್ಥಾನದಲ್ಲಿಯೇ! “ಗಗನವೇ ಭಾಗಿ”ಯಾಗಿ ಮದುವೆ ನೆರವೇರಿಸುವ ಸುಂದರ ಕಲ್ಪನೆ.

ಜೀವನದ ಅನಿರೀಕ್ಷಿತ ತಿರುವುಗಳಗೆ ಸಿಲುಕಿ ನಲುಗುವ ಒಂದು ಸುಂದರ ಪ್ರೇಮ ಕಾವ್ಯ “ಸಂಜು ವೆಡ್ಸ್ ಗೀತಾ”


ವಿಮರ್ಶೆ:


ಕನ್ನಡದಲ್ಲಿ ಸದಾ ಒಂದೇ ಬಗೆಯ ಸಿನಿಮಾಗಳನ್ನು ನೋಡಿ ನೋಡಿ ಬೆಸತ್ತಿರುವ ಪ್ರೇಕ್ಷಕನಿಗೆ  ”ಸಂಜು ವೆಡ್ಸ್ ಗೀತಾ” ಹತ್ತಿರವಾಗುತ್ತದೆ. ಮಚ್ಚು ಲಾಂಗು ಮಾಡುವ ಕೆಲಸವನ್ನು ಇಲ್ಲಿ ಮಳೆ ಮಾಡಿದೆ. ನಾಗಶೇಖರ್ ಮಳೆಯನ್ನು ಚಿತ್ರದುದ್ದಕ್ಕು ಬಳಸಿಕೊಂಡಿದ್ದಾರೆ. ಸ್ವಲ್ಪ ಜಾಸ್ತಿಯಾಗಿಯೇ ಬಳಸಿಕೊಂಡಿದ್ದಾರೆ ಎಂದರೆ ತಪ್ಪಾಗಲಾರದು. ಮುಂಗಾರು ಮಳೆ ಚಿತ್ರದ ನಂತರ ಇಂತಹದ್ದೊಂದು ಭಾವನೆಗಳ ಉದ್ವೇಗವಿರುವ ಚಿತ್ರ ಬಂದಿರಲಿಲ್ಲ. ಪ್ರೇಕ್ಷಕನಿಗೆ ಇಲ್ಲಿ ಹಸಿರಿನ ಹಬ್ಬದೂಟವನ್ನೇ ಬಡಿಸಿದ್ದಾರೆ.


ಕಥೆ-ಚಿತ್ರಕಥೆ-ಸಂಭಾಷಣೆ-ನಿರ್ದೇಶನ:


ಇಂತಹದ್ದೊಂದು ಸತ್ಯ ಕಥೆಯನ್ನು ಸಿನಿಮಾ ಮಾಡಿರುವ ನಿರ್ದೇಶಕರ ಸಾಹಸವನ್ನು ಮೆಚ್ಚಲೇ ಬೇಕು. ಕಥೆಗಳಿಲ್ಲ ಎಂದು ಕೊರಗುವ ನಮ್ಮ ಗಾಂಧಿನಗರದ ಮಂದಿಗೆ ಕಥೆ ಹುಡುಕಿರುವ ನಾಗಶೇಖರ್ ವೈಖರಿ ಮಾದರಿಯಾಗಿ ನಿಲ್ಲುತ್ತದೆ. ಸಿನಿಮಾ ಪ್ರಾರಂಭದಲ್ಲಿ ಬಹಳ ನಿಧಾನಗತಿಯಿಂದ ಸಾಗಿದರೂ ನಂತರದಲ್ಲಿ ತನ್ನ ವೇಗವನ್ನು ಸಂಪಾದಿಸುತ್ತದೆ. ಆದರೆ, ದ್ವಿತೀಯಾರ್ಧದಲ್ಲಿ ಜೈಲ್ ದೃಶ್ಯಗಳು ಸ್ವಲ್ಪ ಬೋರ್ ಹೊಡಿಸುವುದಂತು ಸತ್ಯ. ೧೯೯೭ ರ ವಾತಾವರಣವನ್ನು ಮತ್ತಷ್ಟು ಸಮರ್ಥವಾಗಿ ಸೃಷ್ಟಿಸಬಹುದಾಗಿತ್ತು. ಸಂಭಾಷಣೆ ಬಹಳ ಸರಳವಾಗಿ ಮೂಡಿ ಬಂದಿದೆ.ಹಾಸ್ಯ ಸನ್ನಿವೇಷಗಳಲ್ಲಿ ಸಂಭಾಷಣೆ ಹೆಚ್ಚಾಗಿಯೇ ಕೆಲಸಮಾಡಿದೆ. ಎಲ್ಲೂ,ಯಾವುದನ್ನು ಅತೀರೇಕವಾಗದಂತೆ ನಿರ್ದೇಶಕರು ನೋಡಿಕೊಂಡಿದ್ದಾರೆ. ಆದರೆ, ಜೈಲ್ ನಲ್ಲಿ ಖೈದಿಗಳು ಮಾಡುವ ನೃತ್ಯ ಇಂತಹ ಒಂದು ಸುಂದರ ಚಿತ್ರಕ್ಕೆ ಕಪ್ಪು ಚುಕ್ಕೆಯಂತಿದೆ. ಅಲ್ಲಿ ವರೆಗು ನಾಗಶೇಖರ್ ನಿರ್ಮಿಸಿದ್ದ ವಾತಾವರಣ ಅದೊಂದು ಹಾಡಿನಿಂದ ಹಾಳಾಗುತ್ತದೆ. ಈ ಹಾಡಿನಿಂದ ಚಿತ್ರಕ್ಕೆ ಕಿಂಚಿತ್ತು ಉಪಯೋಗವಿಲ್ಲದಿದ್ದರೂ ಅದನ್ನು ಬಳಸಿರುವುದು ಏಕೆ ಎಂದು ತಿಳಿಯುವುದಿಲ್ಲ. ಎಲ್ಲಾ ಕಲಾವಿದರಿಂದ ಚೆನ್ನಾಗಿಯೇ ಕೆಲಸ ಮಾಡಿಸಿಕೊಂಡಿದ್ದಾರೆ. ಚಿತ್ರದ ಕೆಲವು ದೃಶ್ಯಗಳಲ್ಲಿ ನಾಗಶೇಖರ್ ಒಬ್ಬ ಭರವಸೆಯ ಸೃಜನಶೀಲ ನಿರ್ದೇಶಕ ಎಂಬುದನ್ನು ತೋರಿಸಿದ್ದಾರೆ. ಉದಾಹರಣೆಗೆ,

೧. ಸಂಜು ಗೀತಾಳಿಗೆ ಅವನ ಪ್ರೀತಿಯನ್ನು ವ್ಯಕ್ತಪಡಿಸಿದ ದೃಶ್ಯ

೨. ವಿರಾಮದ ಮುನ್ನ ಗೀತಾಳ ಮಾವನ ಎಂಟ್ರಿ

೩. ಗೀತಾಳಿಗೆ ನೆನಪು ಬರಲು ಬಸ್ ಸ್ಟಾಪ್ ನಲ್ಲಿ ಸಂಜು ಪೋಲಿಸ್ ಕಂಗಾವಲಲ್ಲಿ ಪರಿತಪಿಸುವ ರೀತಿ

ಚಿತ್ರದ ಕ್ಲೈಮಾಕ್ಸ್ ನಿಂದಾಗಿ ಅಚ್ಚರಿ ಮೂಡಿಸಿದ್ದಾರೆ. ಈ ಕಥೆಗೆ ಮತ್ಯಾವ ಅಂತ್ಯವೂ ಇಷ್ಟು ಪರಿಣಾಮವಾಗಿ ಕಾಣುತ್ತಿರಲಿಲ್ಲ.

ಛಾಯಗ್ರಹಣ-ಸಂಗೀತ:

ಇವೆರಡು ಚಿತ್ರದ ಬಹುದೊಡ್ಡ ಆಸ್ತಿ. ಪ್ರಾರಂಭದಿಂದ ಕಡೆಯವರೆಗೂ ಸಿನಿಮಾದ ಪ್ರತಿಯೊಂದು ದೃಶ್ಯವೂ ಒಂದೊಂದು ಪೆಂಟಿಂಗ್ ನಂತೆ ಕಾಣುವುದಂತೂ “ಸತ್ಯ”! ಸತ್ಯ ಹೆಗಡೆ ಮತ್ತೊಮ್ಮೆ ತಾನೊಬ್ಬ ಉತ್ತಮ ಛಾಯಗ್ರಾಹಕನೆಂದು ತೋರಿಸಿದ್ದಾರೆ. ಮಳೆಯ ಪ್ರತಿಯೊಂದು ಹನಿಗೂ ಜೀವ ನೀಡಿದ್ದಾರೆ. ಎಲ್ಲೂ ಕಣ್ಣಿಗೆ ಕುಕ್ಕುವ ಬಣ್ಣಗಳನ್ನು ಅವರು ಬಳಿಸಿಲ್ಲ. ಜೈಲ್ ದೃಶ್ಯಗಳನ್ನು ಸೆಪಿಯಾ ವರ್ಣದಲ್ಲಿ ಚಿತ್ರಿಸಿದ್ದಾರೆ. ಹಾಡುಗಳು ವಿಷಯಕ್ಕೆ ಬರುವುದಾದರೆ, ಛಾಯಗ್ರಹಣ-ಸಂಗೀತ ದೊಡ್ಡ ಪೈಪೋಟಿಗೆ ನಿಲ್ಲುತ್ತದೆ. ಯಾವುದು ಹೆಚ್ಚು ಯಾವುದು ಕಮ್ಮಿ ಅಂತ ಹೇಳುವುದು ಕಷ್ಟ. ಜೆಸ್ಸಿ ಗಿಫ್ಟ್ ಸಂಗೀತ ಪ್ರೇಕ್ಷಕರ ಶಹಬ್ಬಾಸ್ ಗಿರಿಗೆ ಪಾತ್ರವಾಗುವುದಂತೂ ಸತ್ಯ. “ಗಗನವೆ ಬಾಗಿ”,” ಸಂಜು ಮತ್ತು ಗೀತಾ” ಕನ್ನಡದ ಹಿಟ್ ಗೀತೆಗಳಿಗೆ ಸೇರಿವೆ. ಸಿನಿಮಾ ಮುಗಿದ ಮೇಲೂ ಗುನುಗವಂತೆ ಈ ಹಾಡುಗಳಿವೆ. ಇನ್ನು ಚಿತ್ರಕ್ಕೆ ಹಿನ್ನೆಲೆ ಸಂಗೀತ ಒದಗಿಸಿರುವ ಸಾಧು ಕೋಕಿಲ ಅವರನ್ನು ಇಲ್ಲಿ ನೆನಯಲೇ ಬೇಕು. ಮೊದಲಾರ್ಧದಲ್ಲಿ ಕಿವಿಗೆ ತಂಪು ನೀಡಿದ್ದಾರೆ ಸಾಧು. ಆದರೆ, ಚಿತ್ರದ ಕೊನೆಯ ಭಾಗದಲ್ಲಿ ಅಲ್ಲಲ್ಲಿ ಸ್ವಲ್ಪ ಹಿನ್ನಲೆ ಸಂಗೀತ ಜೋರಾಗಿ ಡೈಲಾಗ್ ಕೇಳುವುದಿಲ್ಲ.

ಅಭಿನಯ:

ಅಭಿನಯ ವಿಷಯಕ್ಕೆ ಬಂದರೆ ರಮ್ಯ ಅಗ್ರ ಸ್ಥಾನ ಪಡೆಯುತ್ತಾರೆ. ರಮ್ಯ ಚಿತ್ರರಂಗದಿಂದ ದೂರ ಸರಿಯುವ ನಿರ್ಧಾರ ತಪ್ಪು ಎಂದು ಈ ಚಿತ್ರ ನೋಡಿದ ಪ್ರತಿ ಪ್ರೇಕ್ಷಕನು ಹೇಳುತ್ತಾನೆ. ಗೀತಾಳ ಪಾತ್ರಕ್ಕೆ ಜೀವ ತುಂಬಿ ಅಭಿನಯಿಸಿದ್ದಾರೆ.”ಅಮೃತಧಾರೆ”ಯಲ್ಲಿ ಅವರು ಕಳೆದುಕೊಂಡ ಪ್ರಶಸ್ತಿ ಈ ಚಿತ್ರ ಹಿಂದಿರುಗಿಸಬಹುದೇನೋ..!! ಕಿಟ್ಟಿ ರಮ್ಯ ಅಭಿನಯಕ್ಕೆ ಪೈಪೋಟಿ ನೀಡುವಂತೆ ಅಭಿನಯಿಸಿದ್ದಾರೆ. ಸೆಂಟಿಮೆಂಟ್ ದೃಶ್ಯಗಳಲ್ಲೂ ಸೈ ಎನಿಸಿಕೊಂಡಿದ್ದಾರೆ.ಇನ್ನುಳಿದಂತೆ, ಸುಹಾಸಿನಿ,ಜೈ ಜಗದೀಶ್, ಶರತ್ ಲೋಹಿತಾಶ್ವ, ಉಮಾಶ್ರೀ ಅವರವರ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರ್‍ಎ. ಪೋಷಕ ವರ್ಗದಲ್ಲಿ ಶರಣ್ ಹಾಗೂ ಅರುಣ್ ಸಾಗರ್ ಅಭಿನಯಕ್ಕೆ ಹಾಟ್ಸ್ ಆಫ್!! ಶರಣ್ ಚೆನ್ನಾಗಿ ನಗಿಸಿದರೆ, ಅರುಣ್ ಭಯ ಹುಟ್ಟಿಸುತ್ತಾರೆ!!


ಒಟ್ಟಾರೆ, “ಸಂಜು ವೆಡ್ಸ್ ಗೀತಾ” ಒಂದು ಸುಂದರ ಪ್ರಯತ್ನ. ಚಿತ್ರಮಂದಿರ ದಿಂದ ಹೊರ ಬರುವಾಗ ಒಂದಿಷ್ಟು ಯೋಚನೆಗಳನ್ನು ಹುಟ್ಟುಹಾಕುವಲ್ಲಿ ಚಿತ್ರ ಗೆದ್ದಿದೆ. ಚಿತ್ರ ಮನಸ್ಸಿನ ಒಳಗೆ ಹೋಗಿ ಕುಳಿತಿಕೊಳ್ಳುತ್ತದೆ. “ಸಂಜು ವೆಡ್ಸ್ ಗೀತಾ” ಇನ್ ಹಾರ್ಟ್ಸ್!!ಚಿತ್ರ ಹುಟ್ಟುಹಾಕಿದ ಕ್ರೇಜ್ ಅನ್ನು ಚಿತ್ರ ಕಾಪಾಡಿಕೊಂಡಿದೆ

BEAAAAAUUUUUUUUUUUUUTTTYYYYYYYYYYYYYYYYYY!!!


ಗಿರ್-ಗಿಟ್ಲೆ ಮಾರ್ಕ್ಸ್: 8.5/10


-”ಗಾಂಧಿನಗರದ ಗಿರ್-ಗಿಟ್ಲೆ” ಪುನೀತ್ ಬಿ ಎ