ಪೃಥ್ವಿ… ಎಲ್ಲವೂ ಇದೆ, ಆದ್ರೂ ಏನೋ ಮಿಸ್ಸಿಂಗ್!

ಅಂತೂ ಬಹುಕಾಲದ ನಂತರ ಒಂದು ಸಿನಿಮಾ ವಿಮರ್ಶೆ ಬರೆಯುವ ಕಾಲ ಒದಗಿ ಬಂದಿದೆ. ಈ ಬಾರಿಯ ಚಿತ್ರ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ – ಪಾರ್ವತಿ ಅಭಿನಯದ “ಪೃಥ್ವಿ”.

ಚಿತ್ರ ಒಂಥರ ವಿಭಿನ್ನವಾಗಿದೆ. ಈ ವಿಭಿನ್ನತೆಗೆ ಮೊದಲ ಕಾರಣ ಜೇಕಬ್ ವರ್ಗಿಸ್ ಆಯ್ದುಕೊಂಡಿರುವ ಕಥೆ! ಪ್ರಸಕ್ತ ಕರ್ನಾಟಕ ರಾಜಕೀಯದಲ್ಲಿ ಧೂಳೆಬ್ಬಿಸಿರುವ ಬಳ್ಳಾರಿ ಗಣಿ ರಾಜಕೀಯದ ಮೇಲೆ ಯಥಾವತ್ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದಾರೆ ಜೇಕಬ್. ಇಡೀ ಸರ್ಕಾರವನ್ನೇ ಕಪಿ ಮುಷ್ಠಿಯಲ್ಲಿಟ್ಟುಕೊಂಡು ರಾಜ್ಯದ ಸಂಪತ್ತನ್ನು ದೋಚುವ ಗಣಿ ರಾಜಕೀಯದ ವ್ಯವಸ್ಥೆಯನ್ನು ಒಬ್ಬ ಜಿಲ್ಲಾಧಿಕಾರಿ ಹೇಗೆ ಎದುರಿಸಿ ಗೆಲ್ಲುತ್ತಾನೆ ಎಂಬುದು ಚಿತ್ರದ ಸಾರಾಂಶ. ಕನ್ನಡದಲ್ಲಿ ಈ ರೀತಿಯ ಪ್ರಯತ್ನಗಳು ವಿರಳ. ಸದಾ ಸಿದ್ಧ ಸೂತ್ರಗಳಿಗೇ ಜೋತು ಬೀಳುತ್ತಿದ್ದ ನಮ್ಮ ಚಿತ್ರ ಬ್ರಹ್ಮರು ಈ ಬಾರಿ ಒಂದು ವಿಭಿನ್ನ ವಸ್ತುವನ್ನು ಆಯ್ದುಕೊಂಡಿರುವುದಕ್ಕೆ ಮುಕ್ತ ಮನಸ್ಸಿನ ಸ್ವಾಗತ!

ಪುನೀತ್ ರಾಜ್ ಕುಮಾರ್ ಜಿಲ್ಲಾಧಿಕಾರಿಯ ಪಾತ್ರ ಚಿತ್ರದ ಜೀವಾಳ! ಆ ಪಾತ್ರವನ್ನು ಅತ್ಯಂತ ಸಮರ್ಥವಾಗಿ, ಪರಿಣಾಮಕಾರಿಯಾಗಿ ನಿಭಾಯಿಸಿದ್ದಕ್ಕೆ ಪುನೀತ್ ಗೆ ಫುಲ್ ಮಾರ್ಕ್ಸ್! ಮಿಲನ ಚಿತ್ರದಲ್ಲಿ ಹೆಂಗಳೆಯರ ಫೇವರೆಟ್ ಆಗಿದ್ದ ಪಾರ್ವತಿಯ ಪಾತ್ರ ಇಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ. ಜಿಲ್ಲಾಧಿಕಾರಿಯ ಹೆಂಡತಿಯಾಗಿ ಆತ ಆಫೀಸಿಗೆ ಹೋಗುವಾಗ ಬಾಗಿಲ ತನಕ ಬರುವುದು, ಸಂಜೆ ವಾಪಾಸ್ ಬಂದಾಗ ಬರ ಮಾಡಿಕೊಂಡು ಊಟ ಹಾಕುವುದು ಅಲ್ಲೊಮ್ಮೆ ಇಲ್ಲೊಮ್ಮೆ ಕಣ್ಣೀರು ಸುರಿಸುವುದು ಬಿಟ್ಟರೆ ಪಾರ್ವತಿಯ ಪಾತ್ರಕ್ಕೆ ಹೆಚ್ಚಿನ ಮಹತ್ವವೇನೂ ಇಲ್ಲ! ಖಳ ನಾಯಕ ನಾಗೇಂದ್ರ ಪಾತ್ರಧಾರಿ ಮಾತ್ರ ಸೂಪರ್! ಉಳಿದ ಪಾರ್ತಧಾರಿಗಳಾದ ಅವಿನಾಶ್,   ಸಿ.ಆರ್.ಸಿಂಹ ಅಲ್ಲೊಮ್ಮೆ ಇಲ್ಲೊಮ್ಮೆ ಬಂದು ಹೋಗುತ್ತಾರೆ ಅಷ್ಟೇ!

ಪೃಥ್ವಿ ಚಿತ್ರದ ಮೊದಲರ್ಧ ತಿಳಿ ಹಾಸ್ಯ ಮಿಶ್ರಿತ ಚುರುಕಾದ ನಿರೂಪಣೆಯಿಂದ ಕೂಡಿದೆ. ದ್ವಿತೀಯಾರ್ಧ ತುಂಬ ನಿಧಾನಗತಿಯಲ್ಲಿ ಸಾಗುತ್ತದೆ. ಆದರೂ ಚಿತ್ರದ ಕಥೆಯಲ್ಲೇ ಬಿಗಿತನ ಇದ್ದ ಕಾರಣ ಚಿತ್ರ ಪರಿಣಾಮಕಾರಿಯಾಗಿ ಬಂದಿದೆ ಎನ್ನಬಹುದು! ಚಿತ್ರ ನೋಡಿದ ಮಂದಿ ನಮ್ಮ ರಾಜಕೀಯ ವ್ಯವಸ್ಥೆಯನ್ನು ಇನ್ನಷ್ಟು ಬೈದು ಶಪಿಸುವುದು ಗ್ಯಾರಂಟಿ! ಇದೊಂದು ಭಿನ್ನ ಕಥಾನಕವುಳ್ಳ ಸದಭಿರುಚಿಯ  ಚಿತ್ರ ಎಂದು ಧಾರಾಳವಾಗಿ ಹೇಳಬಹುದು.

ಈ ಚಿತ್ರದಲ್ಲಿ ಎಲ್ಲವೂ ಇವೆ.. ಆದರೂ ಏನೋ ಕೊರತೆ, ಏನೋ ಇಲ್ಲವೆಂಬ ಭಾವನೆ.. ಏನದು ಏನದು.. ಅಂತ ಹುಡುಕುತ್ತ ಹೊರಟರೆ ಸಿಗುವ ಮೊದಲ ಉತ್ತರ “ಮನರಂಜನೆ“! ಹೌದು, ಒಬ್ಬ ಸಾಮಾನ್ಯ ಪ್ರೇಕ್ಷಕ ಏಕೆ ಸಿನಿಮಾ ಮಂದಿರಕ್ಕೆ ಹೋಗುತ್ತಾನೆ? ತನ್ನ ದೈನಂದಿನ ಜಂಜಾಟವನ್ನು ಮರೆತು ಹಾಯಾಗಿ ಎರಡೂವರೆ ಗಂಟೆ ಸಿನಿಮಾವನ್ನು ಸಂಪೂರ್ಣವಾಗಿ ಆಸ್ವಾದಿಸಿಕೊಂಡು ಬರಲು. ದಿನ  ಬೆಳಗಾದರೆ ಪೇಪರ್, ಟಿವಿ ಚಾನೆಲ್‍ಗಳಲ್ಲಿ ಓದಿ ಓದಿ ಬೇಸತ್ತು ವಾಕರಿಕೆ ಬಂದಿರುವ ಅದೇ  ರಾಜಕೀಯವೆಂಬ ರಸ ಹೀನ ವಿಷಯವನ್ನು ಅಷ್ಟೇ ರಸ ಹೀನವಾಗಿ ತೋರಿಸಿದರೆ ಹೇಗೆ ತಾನೇ ಇಷ್ಟವಾಗುತ್ತದೆ ಹೇಳಿ? ಪೃಥ್ವಿಯ ವಿಷಯದಲ್ಲಿ ಆಗಿರುವುದೂ ಇದೇ. ದ್ವಿತೀಯಾರ್ಧ ತೀರ ನಿಧಾನ ಮತ್ತು ನೀರಸ ನಿರೂಪಣೆ. ಹಾಸ್ಯದ ಕೊರತೆ, ತೀರಾ ಸಾಧಾರಣವೆನಿಸುವ ಸಂಗೀತ ಮತ್ತು ಅತ್ಯಂತ  ಪೇಲವ  ಕ್ಲೈಮ್ಯಾಕ್ಸ್ ಚಿತ್ರದ ಋಣಾತ್ಮಕ ಅಂಶಗಳು.

ಈ ಚಿತ್ರಕ್ಕೆ ಇಷ್ಟೊಂದು ಹಾಡುಗಳ ಅಗತ್ಯ ಇತ್ತಾ? ಚಿತ್ರ ಶುರುವಾಗುವಾಗಲೇ ಯಾರದೋ ಮದುವೆಗೆ ಒಂದು ಹಾಡು, ನಾಯಕ-ನಾಯಕಿಯ ನಿಶ್ಚಿತಾರ್ಥಕ್ಕೆ ಒಂದು ಹಾಡು, ಮದುವೆ ಆದಾಗ ಮತ್ತೊಂದು ಹಾಡು, ಮಗು ಆಗುವಾಗ ಮಗದೊಂದು ಹಾಡು, ಪಿಕ್ ನಿಕ್ಕಿಗೆ ಒಂದು ದುಃಖಕ್ಕೆ ಮತ್ತೊಂದು.. ಉಸ್ಸಪ್ಪ.. ಈ ರೀತಿಯ ಚಿತ್ರಗಳಿಗೆ ಇಷ್ಟೊಂದು ಹಾಡುಗಳು ಬೇಕಿರಲಿಲ್ಲ. ಅದೂ ಒಂದೂ ನೆನಪಿನಲ್ಲಿ ಉಳಿಯದ ಸಾಧಾರಣವಾದ ಹಾಡುಗಳು.. ಇದೇ ಕಥೆಯನ್ನು ಇನ್ನಷ್ಟು ಸ್ವಾರಸ್ಯಕರವಾಗಿ ನಿರೂಪಿಸುವ ಅವಕಾಶ ನಿರ್ದೇಶಕರಿಗಿತ್ತು. ಆದರೆ ಆ ಕೆಲಸ ಆಗಿಲ್ಲ.

ಒಟ್ಟಿನಲ್ಲಿ ಚಿತ್ರವೊಂದರ ಸಾಮಾಜಿಕ ಮೌಲ್ಯಗಳನ್ನು ಗಣನೆಗೆ ತೆಗೆದುಕೊಂಡರೆ ಪೃಥ್ವಿ ಅತ್ಯುತ್ತಮ ಚಿತ್ರ! ಮನರಂಜನೆಯನ್ನೂ ಸೇರಿಸಿ ಗಣನೆಗೆ ತೆಗೆದುಕೊಂಡರೆ ಇನ್ನಷ್ಟು ಉತ್ತಮವಾಗಿಸಬಹುದಿತ್ತು ಎನ್ನಬಹುದು…

3/5