ಕೆ. ಎಸ. ನರಸಿಂಹಸ್ವಾಮಿಯವರ ನಿತ್ಯನೂತನ ಪ್ರೇಮಗೀತೆಗಳ ಸಂಕಲನ. ೧೯೪೨ರಲ್ಲಿ ಬೆಡುಗಡೆಯಾಗಿ ೨೭ಕ್ಕೂ ಹೆಚ್ಚು ಮರುಮುದ್ರಣಗಳನ್ನು ಕಂಡ ಕವನ ಸಂಕಲನ.ಸ್ವಾತಂತ್ರ ಪೂರ್ವ ಕಾಲದ ಸಾಮಾಜಿಕ ಬದುಕನ್ನು ಯುವ ಜೋಡಿಯ ಮೂಲಕ ಕವಿ ಇಲ್ಲಿ ತಮ್ಮ ಸರಳ ನೇರ ನುಡಿಗಳಿಂದ ಜನರ ಮನ ತಲುಪಿಸಿದ್ದಾರೆ. ಯುವ ಜೋಡಿಯ ನೋವು-ನಲಿವಿಗೆ ಸ್ಪಂದಿಸುವ ಬಳಿಗಾರ ಚೆನ್ನಯ್ಯನೆಂಬ ಕಾಲ್ಪನಿಕ ಪಾತ್ರದ ಮೂಲಕ ಕವಿ ಅಂದಿನ ಸಾಮಾಜಿಕ ವ್ಯವಸ್ಥೆಯನ್ನು ತನ್ನ ಹಾಡುಗಳ ಮೂಲಕ ಸೆರೆ ಹಿಡಿದಿದ್ದಾರೆ. ಇಲ್ಲಿ “ನವಿಲೂರು” ಮತ್ತು “ಹೊನ್ನೂರು” ಎಂಬ ಕಾಲ್ಪನಿಕ ಊರುಗಳು ಈ ಜೋಡಿಯ ಪ್ರೇಮ, ವಿರಹ, ನೋವುಗಳಿಗೆ ಸಾಕ್ಷಿಯಾಗಿವೆ. ಈ ಗೀತೆಗಳು ಜನಪ್ರಿಯವಾಗಲು ಮುಖ್ಯ ಕಾರಣ ಸರಳ ಸುಂದರ ಸಾಹಿತ್ಯ. ಉದಾಹರಣೆ : “ನವಿಲೂರಿನೊಳಗೆಲ್ಲ ನೀನೆ ಬಲು ಚೆಲುವೆ, ಅದಕ್ಕೆ ನಮಗೀಗ ನಾಳೇನೆ ಮದುವೆ“. ಸಿ.ಅಶ್ವಥ ತಮ್ಮ ಅದ್ಭುತ ಸಂಗೀತದಿಂದ ಕನ್ನಡ ಭಾವ ಗೀತೆಗಳ ಲೋಕದಲ್ಲಿ ಈ ಹಾಡುಗಳ ಮೂಲಕ ಸಂಚಲನ ಉಂಟುಮಾಡಿದರು. ಇಂದು ಕೆ. ಎಸ. ನರಸಿಂಹಸ್ವಾಮಿ ಮತ್ತು ಸಿ.ಅಶ್ವಥ ನಮ್ಮೊಡನಿಲ್ಲದಿದ್ದರೂ ಅವರ ಈ ಗೀತೆಗಳಿಂದ ಕನ್ನಡಿಗರ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ.ನಂತರ ಟಿ. ಎಸ. ನಾಗಾಭರಣ ಈ ಕವನ ಸಂಕಲನವನ್ನು ಆಧರಿಸಿ ಇದೇ ಹೆಸರಿನಲ್ಲಿ ಚಿತ್ರವನ್ನಾಗಿಸಿದರು. ಭಾವ ಗೀತೆಗಳಲ್ಲಿ ಮತ್ತು ಚಿತ್ರದಲ್ಲಿ ಬೇರೆ ಬೇರೆ ಗಾಯಕರು ಹಾಡಿದ್ದರೂ ಸಂಗೀತ ಸಿ.ಅಶ್ವಥ ಅವರದೆ. ಈ ಲೇಖನದಲ್ಲಿ ನಾನು ಚಿತ್ರದಲ್ಲಿ ಅಳವಡಿಸಿದ ಗೀತೆಗಳ ಬಗ್ಗೆ ಬರೆಯುತ್ತೇನೆ.೧) ಸಿರಿಗೆರೆಯ ನೀರಲ್ಲಿ ಬಿರಿದ ತಾವರೆಯಲ್ಲಿ , ಗಾಯನ : ಎಸ. ಪಿ. ಬಾಲಸುಬ್ರಹ್ಮಣ್ಯಂ
ತನ್ನ ನಲ್ಲೆಯ ಹೆಸರನ್ನು ಪ್ರಕೃತಿಯ ಒಂದೊಂದು ಸುಂದರ ಅನುಭೂತಿಯಲ್ಲೂ ಹುಡುಕುವ ನಲ್ಲ. ಉದಾಹರಣೆ : “ಸಿರಿಗೆರೆಯ ನೀರಲ್ಲಿ ಬಿರಿದ ತಾವರೆಯಲ್ಲಿ ಕೆಂಪಾಗಿ ನಿನ್ನ ಹೆಸರು“, “ಜೋಯಿಸರ ಹೊಲದೊಳಗೆ ಕುಣಿವ ಕೆಂಗರುವಿನ ಕಣ್ಣಲ್ಲಿ ನಿನ್ನ ಹೆಸರು“,”ತಾಯ ಮೊಲೆಯಲ್ಲಿ ಕರು ತುಟಿಯಿಟ್ಟು ಚಿಮ್ಮಿಸಿದ ಹಾಲಲ್ಲಿ ನಿನ್ನ ಹೆಸರು” , “ಹೂಬನದ ಬಿಸಿಲಲ್ಲಿ ನರ್ತಿಸುವ ನವಿಲಿನ ದನೆಯಲ್ಲಿ ನಿನ್ನ ಹೆಸರು” – ಹೀಗೆ ಸಾಗುವ ಕಲ್ಪನೆ. ಭಾವಗೀತೆಗಳ ಸಂಕಲನದಲ್ಲಿ ಸ್ವತಃ ಅಶ್ವಥ ಹಾಡಿದರೆ ಚಿತ್ರದಲ್ಲಿ ಎಸ. ಪಿ. ಜೀವ ತುಂಬಿದ್ದಾರೆ.೨) ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ, ಗಾಯನ : ಎಸ. ಪಿ. ಬಾಲಸುಬ್ರಹ್ಮಣ್ಯಂ
ನಲ್ಲೆ ತನ್ನಿಂದ ದೂರ ಸರಿಯುವ ಸಂದರ್ಭದಲ್ಲಿ ನಲ್ಲನ ವಿರಹದ ಮಾತುಗಳು ಇಲ್ಲಿ ಹಾಡಾಗಿ ಮೂಡಿದೆ. ಎಸ. ಪಿ. ಅವರ ಅಮರ ವಿರಹ ಗೀತೆಗಳಲ್ಲಿ ಇದೂ ಒಂದು. “ಅಲೆ ಬಂದು ಕರೆಯುವುದು ನಿನ್ನೊಲುಮೆ ಅರಮನೆಗೆ, ಒಳಗಡಲ ರತ್ನಪುರಿಗೆ” ಮತ್ತು “ನಾಳೆ ಅರ್ಧಾಂಗಿ” ಎನ್ನುವ ಸಾಲುಗಳಲ್ಲಿ ಎಸ. ಪಿ ತಮ್ಮ ಪ್ರೌಢಿಮೆ ಮೆರೆದಿದ್ದಾರೆ. ಇಲ್ಲಿ ಮಧ್ಯದಲ್ಲಿ ಬರುವ ಅಶ್ವಥ ಅವರ ಆಲಾಪನೆ ಅಪರೂಪ.೩) ರಾಯರು ಬಂದರು ಮಾವನ ಮನೆಗೆ, ಗಾಯನ : ರತ್ನಮಾಲಾ ಪ್ರಕಾಶ
ಭಾವಗೀತೆಗಳ ಸಂಕಲನದಲ್ಲಿ ಮತ್ತು ಚಿತ್ರದಲ್ಲಿ ಎರಡರಲ್ಲೂ ಹಾಡಿರುವುದು ರತ್ನಮಾಲಾ ಪ್ರಕಾಶ, ಪತ್ನಿಯನ್ನು ಕಾಣಲು ಆಕೆಯ ತವರಿಗೆ ಬರುವ ಪತಿಯ ಸುಂದರ ಕಲ್ಪನೆ , ಅಲ್ಲಿ ಆತ ಸಿಲುಕುವ ಪೇಚಿನ ಪ್ರಸಂಗದ ಸುಂದರ ದೃಶ್ಯ ಕಾವ್ಯ. ಎಲ್ಲ ಕನ್ನಡಿಗರ ಮನೆ ಮಾತಾಗಿರುವ ಗೀತೆ.೪) ದೀಪವು ನಿನ್ನದೇ ಗಾಳಿಯು ನಿನ್ನದೆ, ಗಾಯನ : ಎಸ.ಜಾನಕಿ
ಈ ಗೀತೆಯನ್ನು ಹಲವಾರು ಗಾಯಕಿಯರು ಹಾಡಿದ್ದರೂ ಥಟ್ಟನೆ ನೆನಪಾಗುವುದು ಜಾನಕಿಯವರ ಹಾಡು. ಹಾಡಿನ ಏರಿಳಿತ ಇದು ಎಷ್ಟು ಕಠಿಣವಾದ ಗೀತೆ ಎಂಬುದಕ್ಕೆ ಸಾಕ್ಷಿ. ಸ್ವಾತಂತ್ರದ ಹೋರಾಟದಲ್ಲಿ ಮುಳುಗಿರುವ ಪತಿಯ ಬಗ್ಗೆ ಆತಂಕಗೊಂಡ ಪತ್ನಿ ಭಗವಂತನಲ್ಲಿ ಮೊರೆಯಿಡುವ ಗೀತೆ. ಸ್ವಾತಂತ್ರ ಪೂರ್ವದಲ್ಲಿ ನಮ್ಮ ನಾಡಿನ ವೀರರು ದೇಶಕ್ಕಾಗಿ ಹೊರಾಡುತ್ತಿರುವಾಗ ಅವರ ಮನೆಯಲ್ಲಿರುವವರ ದುಗುಡದ ಚಿತ್ರಣ.೫) ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹೆನು , ಗಾಯನ : ಎಸ. ಪಿ. ಬಾಲಸುಬ್ರಹ್ಮಣ್ಯಂ
ಸ್ವಾತಂತ್ರ ಸಂಗ್ರಾಮದಲ್ಲಿ ದೂರವಾದ ಪತಿ-ಪತ್ನಿಯರನ್ನು ಬೆಸೆಯಲು ಸೇತುವೆಯಾಗಿ ಬಳೆಗಾರ ಚೆನ್ನಯ್ಯ ಊರೂರು ಅಲೆದು ಪತ್ನಿಯ ನೋವನ್ನು ದೂರದಲ್ಲಿರುವ ಆಕೆಯ ಗಂಡನಿಗೆ ರವಾನಿಸುವ ಗೀತೆ. ಮನುಷ್ಯನಲ್ಲಿ ಸಹಜವಾಗಿ ಇರಬೇಕಾದ ಬಾಂಧವ್ಯಕ್ಕೆ ಉತ್ತಮ ಉದಾಹರಣೆ ನಮ್ಮ ಚೆನ್ನಯ್ಯ. ಮತ್ತೊಬ್ಬರ ಬಗ್ಗೆ ಕಾಳಜಿವಹಿಸಲು ಪುರುಸೊತಿಲ್ಲದ ಈ ಕಾಲದಲ್ಲಿ ಆ ಕಾಲದ ಚೆನ್ನಯ್ಯನ ಆದರ್ಶ ಅನುಕರಣೀಯ. ಇದು ಕಾಲ್ಪನಿಕ ಪಾತ್ರವಾದರೂ ಅಂದಿನ ಸಮಾಜದಲ್ಲಿ ಪರಸ್ಪರರಲ್ಲಿ ಇದ್ದ ಕಾಳಜಿಗೆ ದ್ಯೋತಕವಾಗಿದೆ.೬) ಹಕ್ಕಿಯ ಹಾಡಿಗೆ , ಗಾಯನ : ಎಸ.ಜಾನಕಿ
ಕನ್ನಡ ನಾಡಿನ ಹೆಣ್ಣು ಮಗಳೊಬ್ಬಳು ಪ್ರಕೃತಿಯನ್ನು ವರ್ಣಿಸಿ ಅದರೊಡನೆ ಒಂದಾಗಬಯಸುವ ಪರಿ, ಇಲ್ಲಿನ ಕೊನೆಯ ಸಾಲುಗಳನ್ನು ಗಮನಿಸಬೇಕು “ಮಣ್ಣಿನ ಕೊಡುಗೆಗೆ ನೋವಿಗೆ ನಲಿವಿಗೆ ಕನ್ನಡಿ ಹಿಡಿವಾಸೆ, ಮಾನವ ಹೃದಯದ ಕರುಣೆಗೆ ಒಲವಿಗೆ ದನಿಗೂಡಿಸುವಾಸೆ“. ಎಂಥಹ ಸುಂದರ ಸಾಲುಗಳು, ಯಾವ ಕಾಲವಾದರೂ ಪ್ರಸ್ತುತ ಎನಿಸುವ ಸಾಲುಗಳು. ಎಂಥ ಸಂದರ್ಭದಲ್ಲೂ ನಾವು ಮಾನವನ ಮೂಲಭೂತ ಗುಣಗಳಾದ ಕರುಣೆ-ಒಲವು ಮರೆಯಬಾರದೆಂಬ ಸಂದೇಶ.೭) ಒಂದೆರುಳು ಕನಸಿನಲಿ, ಗಾಯನ : ಎಸ. ಪಿ. ಬಾಲಸುಬ್ರಹ್ಮಣ್ಯಂ , ಎಸ.ಜಾನಕಿ
ಈ ಸಂಕಲನದ ಅತ್ಯಂತ ಜನಪ್ರಿಯ ಯುಗಳ ಗೀತೆ. ಅಶ್ವಥ ಮತ್ತು ರತ್ನಮಾಲಾ ಪ್ರಕಾಶ ಅವರ ಗೀತೆಯನ್ನು ಚಿತ್ರದಲ್ಲಿ ಎಸ. ಪಿ ಮತ್ತು ಜಾನಕಿ ಹಾಡಿದ್ದಾರೆ. ನವಿಲೂರು” ಮತ್ತು “ಹೊನ್ನೂರು” ಇದರಲ್ಲಿ ಯಾವುದು ಚೆನ್ನ ಎಂದು ನಲ್ಲ-ನಲ್ಲೆಯನ್ನು ಛೇಡಿಸುವ ಗೀತೆ.೮) ಕತ್ತಲೆ ತುಂಬಿದ ಬಾನ್ದಳದಂಚಿಗೆ, ಗಾಯನ : ಎಸ. ಪಿ. ಬಾಲಸುಬ್ರಹ್ಮಣ್ಯಂ
ಸ್ವಾತಂತ್ರದ ಹೋರಾಟದಲ್ಲಿ ಪಾಳ್ಗೊಂಡು ಸೆರೆವಾಸ ಅನುಭವಿಸಿ, ಸ್ವಾತಂತ್ರದ ನಂತರ ತನ್ನ ಬಂಧು-ಬಳಗವನ್ನು ಅರಸಿ ಹೊರಟವರ ತುಮುಲವನ್ನು ಬಿಂಬಿಸುವ ಗೀತೆ.”ಕತ್ತಲೆ ತುಂಬಿದ ಬಾನ್ದಳದಂಚಿಗೆ,ಕಾದಿದೆ ಚಂದ್ರಿಕೆ ಬಿಡುಗಡೆಗೆ” – ಇಲ್ಲಿ ತನ್ನ ಪ್ರೀತಿಪಾತ್ರರನ್ನು ಸೇರುವ ತವಕ ವ್ಯಕ್ತನಾಗಿದೆ.೯) ಆಕಾಶಕ್ಕೆದ್ದು ನಿಂತ ಪರ್ವತ ಹಿಮ ಮೌನದಲ್ಲಿ, ಗಾಯನ : ಎಸ. ಪಿ. ಬಾಲಸುಬ್ರಹ್ಮಣ್ಯಂ ಮತ್ತು ಸಂಗಡಿಗರು
ಸ್ವಾತಂತ್ರದ ನಂತರ ದೇಶದ ಪ್ರಜೆಗಳು ಸಂಭ್ರಮಿಸುವ ಗೀತೆ. ತಮ್ಮ ಗೆಲುವನ್ನು ಆಚರಿಸಿದರೂ “ಭಾಷೆ ಬೇರೆ , ಭಾವವೊಂದು ನಾವು ಭಾರತೀಯರು” ಎಂಬ ಸಂದೇಶ ಸಾರುವ ಗೀತೆ.ಇಲ್ಲಿನ ಗೀತೆಗಳ ವಿಸ್ತಾರ ಅಪಾರ - ಸ್ವಾತಂತ್ರ ಪೂರ್ವದಲ್ಲಿನ ಯುವಜನತೆಯ ಕನಸು, ನೋವು-ನಲಿವು, ಸ್ವಾತಂತ್ರದ ಹೋರಾಟ, ಸ್ವಾತಂತ್ರದ ನಂತರದ ಸಂದರ್ಭ ಹೀಗೆ ಇಲ್ಲಿನ canvas ಬಹಳ ವಿಸ್ತಾರ.ಮೈಸೂರು ಮಲ್ಲಿಗೆಯ ಇತರ ಕವನಗಳು (ಚಿತ್ರದಲಿಲ್ಲ)ನಿನ್ನೊಲುಮೆಯಿಂದಲೆ ಬಾಳು ಬೆಳಕಾಗಿರಲು
ಅಕ್ಕಿ ಆರಿಸುವಾಗ
ಬಾರೆ ನನ್ನ ಶಾರದೆ
ನವಿಲೂರಿನೊಳಗೆಲ್ಲ ನೀನೆ ಬಲು ಚೆಲುವ


