ಈ ಸಂಚಿಕೆಯಲ್ಲಿ ಕನ್ನಡ ಚಿತ್ರರಂಗದಲ್ಲಿ ಹೆಚ್ಚು ಕಾದಂಬರಿ ಆಧಾರಿತ ಚಿತ್ರಗಳನ್ನು ನಿರ್ದೇಶಿಸಿದ ಜೋಡಿ ದೊರೆ-ಭಗವಾನ ಅವರ ಚಿತ್ರಗಳಿಂದ ಹತ್ತು ಸುಮಧುರ ಗೀತೆಗಳನ್ನು ಆಯ್ದುಕೊಂಡಿದ್ದೇನೆ. ಸದಭಿರುಚಿಯ ಚಿತ್ರಗಳನ್ನು ನಿರ್ಮಿಸುವಲ್ಲಿ ಎತ್ತಿದ ಕೈ. ಈ ಜೋಡಿ ಅನುಪಂ ಮೂವೀಸ ಲಾಂಛನದಲ್ಲಿ ಅನೇಕ ಚಿತ್ರಗಳನ್ನು ನಿರ್ಮಿಸಿದ್ದಾರೆ. ರಾಜ್, ಅನಂತನಾಗ, ಲಕ್ಷಿ, ರಾಜನ್ - ನಾಗೇಂದ್ರ, ಉದಯಶಂಕರ್ ಅವರೊಡನೆ ಹೆಚ್ಚಾಗಿ ಕೆಲಸ ಮಾಡಿದ ಜೋಡಿ. ಅನೇಕ ಸುಮಧುರ ಗೀತೆಗಳಿಗೆ ನಾಂದಿ ಹಾಡಿದ ಜೋಡಿ.
೧) ನೀ ಬಂದು ನಿಂತಾಗ , ಚಿತ್ರ : ಕಸ್ತೂರಿ ನಿವಾಸ
ಗಾಯನ : ಪಿ. ಬಿ. ಶ್ರೀನಿವಾಸ್-ಪಿ. ಸುಶೀಲ, ಸಂಗೀತ : ಜಿ. ಕೆ. ವೆಂಕಟೇಶ , ಸಾಹಿತಿ : ಆರ್. ಎನ್. ಜಯಗೋಪಾಲ
ಮೈಸೂರಿನ ಬೃಂದಾವನದಲ್ಲಿ ರಾಜ್-ಆರತಿ ಅಭಿನಯದಲ್ಲಿ ಕಪ್ಪು-ಬಿಳುಪಿನಲ್ಲಿ ಚಿತ್ರಿಸಿದ ಗೀತೆ ಸುಮಾರು ನಲವತ್ತು ವರ್ಷ ಕಳೆದರೂ ಈ ಹಾಡು ತನ್ನ ಹೊಳಪನ್ನು ಕಳೆದುಕೊಂಡಿಲ್ಲಿ. ಹಾಡಿನ ಚರಣದಲ್ಲಿ ಬರುವ “ಬಾರ, ಬಾರ” ಇಂದಿಗೂ ಕೇಳುಗರನ್ನು ಕಾಡುತ್ತಲೇ ಇದೆ. ಹಿಂದಿಯಲ್ಲಿ “ಏ ದಿಲ್ ದೀವನ ಹೈ” ಎನ್ನುವ ಹಾಡು ಮತ್ತು ಈ ಹಾಡಿಗೆ ಸಹಳ ಸಾಮ್ಯವಿದೆ. ಈ ಹಾಡಿನಲ್ಲಿ ಒಂದು ಬಗೆಯ ಸುಮಧುರ ನಶೆಯಿದೆ.
೨) ಆಡಿಸಿ ನೋಡು , ಚಿತ್ರ : ಕಸ್ತೂರಿ ನಿವಾಸ
ಗಾಯನ : ಪಿ. ಬಿ. ಶ್ರೀನಿವಾಸ , ಸಂಗೀತ : ಜಿ. ಕೆ. ವೆಂಕಟೇಶ , ಸಾಹಿತಿ : ಚಿ. ಉದಯಶಂಕರ
ಸರಳವಾದರೂ ಅರ್ಥರ್ಗಭಿತ ಸಾಹಿತ್ಯ ಎಂಥ ಪರಿಣಾಮ ಬೀರಬಹುದು ಎಂಬುದಕ್ಕೆ ಈ ಗೀತೆಯೆ ಸಾಕ್ಷಿ. “ಮೈಯನೆ ಹಿಂಡಿ ನೊಂದರು ಕಬ್ಬು ಸಿಹಿಯ ಕೊಡುವುದು“, “ಗುಡಿಸಲೆ ಆಗಲಿ ಅರಮನೆಯಾಗಲಿ ಆಟ ನಿಲ್ಲದು” – ಉದಯಶಂಕರ ಎಂಬ ದೈತ್ಯ ಪ್ರತಿಭೆ ಕನ್ನಡ ಚಿತ್ರರಂಗದ ಆಧಾರಸ್ತಂಭಗಳಲ್ಲಿ ಒಂದಾಗಿದ್ದರು. ತಮ್ಮ ಸರಳ ನೇರ ಗೀತೆಗಳಿಂದ ಕನ್ನಡ ಹಾಡುಗಳನ್ನು ಮನೆ-ಮನೆ ತಲುಪಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಡಾ. ರಾಜ್ ಚಿತ್ರ ಜೀವನದಲ್ಲಿ ಇದೊಂದು ಮೈಲಿಗಲ್ಲು. ಈ ಹಾಡಿನಲ್ಲಿ ಅವರ ತನ್ಮಯ ಅಭಿನಯ ಅವಿಸ್ಮರಣೀಯ. ರಾಜ್ ನಮ್ಮನ್ನು ಅಗಲಿದಾಗ ಬಹಳ ಕಾಡಿದ ಗೀತೆ. ವಿಶೇಷವೆಂದರೆ ಈ ಹಾಡು ಎರಡು ಬಾರಿ ಬರುತ್ತದೆ. ಮೊದಲ ಬಾರಿಗೆ ಹಾಡು ಬಂದಾಗ ನಾಯಕ ನೋವಿನಲ್ಲೂ ಸ್ಥಿತಪ್ರಙನಾಗಿರುತ್ತಾನೆ. ಎರಡನೇ ಬಾರಿ ಶೋಕಗೀತೆಯಾಗಿ ಮೂಡುತ್ತದೆ. (ಗಾಯನ : ಜಿ. ಕೆ. ವೆಂಕಟೇಶ ). ಪಿ. ಬಿ. ಶ್ರೀನಿವಾಸ ಗಾಯನವನ್ನು ಮರೆಯುವಂತಿಲ್ಲ. ಅವರ ಶಾರೀರ - ರಾಜ್ ಶರೀರದಲ್ಲಿ ಮೂಡಿಬಂದ ಅಭೂತಪೂರ್ವ ಗೀತೆ.
೩) ಒಲಿದ ಜೀವ ಜೊತೆಯಲಿರಲು , ಚಿತ್ರ : ಬೆಂಕಿಯ ಬಲೆ
ಗಾಯನ : ಎಸ್. ಜಾನಕಿ , ಎಸ್. ಪಿ. ಬಿ , ಸಂಗೀತ : ರಾಜನ-ನಾಗೇಂದ್ರ , ಸಾಹಿತಿ : ಚಿ. ಉದಯಶಂಕರ
ಈ ಚಿತ್ರದಲ್ಲಿ ಎರಡು ಗೀತೆಗಳು ನನ್ನಲ್ಲಿ ಗೊಂದಲ ಮೂಡಿಸಿದವು - ಎರಡು ಅತ್ಯುತ್ತಮ ಗೀತೆಗಳು (ಇನ್ನೊಂದು ಬಿಸಿಲಾದರೇನು ಮಳೆಯಾದರೇನು). ಆದರೆ ಈ ಗೀತೆಯನ್ನು ಆಯ್ಕೆಮಾಡಲು ಕಾರಣ ನಾನಿಲ್ಲಿ ಹತ್ತು ಗೀತೆಗಳ ನಿರ್ಭಂಧ ಹಾಕಿರುವುದರಿಂದ). ಅನಂತ-ಲಕ್ಷಿ ಜೋಡಿಯ ಗೀತೆ. ಇಲ್ಲಿನ ಸ್ವರಗಳ ಆಲಾಪನೆ ಬಹಳ ಸುಂದರ. ಎಸ್. ಜಾನಕಿ , ಎಸ್. ಪಿ. ಬಿ ಯವರ ಕಂಠದಲ್ಲಿ ಮೂಡಿಬಂದ ಅತ್ಯುತ್ತಮ ಯುಗಳ ಗೀತೆಗಳಲ್ಲಿ ಇದೂ ಒಂದೂ.
೪) ಮನೆಯನು ಬೆಳಗಿದೆ ಇಂದು , ಚಿತ್ರ : ಚಂದನದ ಗೊಂಬೆ
ಗಾಯನ : ಎಸ್. ಜಾನಕಿ , ಎಸ್. ಪಿ. ಬಿ , ಸಂಗೀತ : ರಾಜನ-ನಾಗೇಂದ್ರ , ಸಾಹಿತಿ : ಚಿ. ಉದಯಶಂಕರ
ಮತ್ತೊಮ್ಮೆ ಅದೇ ಗೊಂದಲ - ಈ ಬಿಂಕ ಬಿಡು ಬಿಡು ಕೂಡ ಇದೇ ಚಿತ್ರದ ಇನ್ನೊಂದು ಸುಂದರ ಗೀತೆ. ಸುಂದರ ಸಂಸಾರದ ಚಿತ್ರಣವನ್ನು ಉದಯಶಂಕರ ಮತ್ತು ರಾಜನ-ನಾಗೇಂದ್ರ ಎಂದೂ ಮರೆಯದ ಹಾಡಾಗಿಸಿದ್ದಾರೆ. ಈ ಹಾಡಿನಲ್ಲಿ ಬರುವ humming ಬಹಳವಾಗಿ ಆಕರ್ಷಿಸುತ್ತದೆ. ಮತ್ತೊಮ್ಮೆ ಅನಂತ-ಲಕ್ಷಿ ಜೋಡಿಯ ಗೀತೆ.
೫) ತೆರೆದಿದೆ ಮನೆ ಓ ಬಾ ಅತಿಥಿ , ಚಿತ್ರ : ಹೊಸ ಬೆಳಕು
ಗಾಯನ : ಎಸ್. ಜಾನಕಿ , ವಾಣಿ ಜಯರಾಂ , ಸಂಗೀತ : ಎಂ. ರಂಗರಾವ್ , ಸಾಹಿತಿ : ಕುವೆಂಪು
ಇಬ್ಬರು ಮಹಾನ ಪ್ರತಿಭೆಗಳ ಕಂಠದಲ್ಲಿ ಮೂಡಿಬಂದ ಗೀತೆ. ನಾಯಕ ಕಿಟಕಿಯಲ್ಲಿ ಪಕ್ಕದ ಮನೆಯಲ್ಲಿ ನಾಯಕಿ ಹಾಡುವ ಗೀತೆ ಆಲಿಸುತ್ತಾನೆ. ಇಲ್ಲಿ ಹೊಂರಾಂಗಣವಿಲ್ಲಿ, ನೃತ್ಯವಿಲ್ಲ, ರಮ್ಯ ಪರಿಸರವಿಲ್ಲ, ಅದ್ದೂರಿ ಸೆಟಗಳಿಲ್ಲ, ಯಾವುದೇ ಅಬ್ಬರದ ಸಂಗೀತವಿಲ್ಲ - ಆದರೂ ೨೮ ವರುಷಗಳ ನಂತರವೂ ಹಾಡು ಸುಂದರ ಮುಂಜಾವಿನ ಎಳೆ ಬಿಸಿಲಿನಲ್ಲಿ ಮಿಂದ ಅನುಭವ ನೀಡುತ್ತದೆ.
೬) ಒಮ್ಮೆ ನಿನ್ನನ್ನು , ಚಿತ್ರ : ಗಾಳಿ ಮಾತು
ಗಾಯನ : ಎಸ್. ಜಾನಕಿ , ಸಂಗೀತ : ರಾಜನ-ನಾಗೇಂದ್ರ , ಸಾಹಿತಿ : ಚಿ. ಉದಯಶಂಕರ
“ಒಮ್ಮೆ ನಿನ್ನನ್ನು ಕಣ್ತುಂಬ ಕಾಣುವಾಸೆ ಎಲ್ಲಿರುವೆ” ಎಂದು ಲಕ್ಷಿ ಹಾಡಿಗೆ ಅಭಿನಯಿಸಿದಾಗ ಆ ಕಣ್ಣುಗಳಲ್ಲಿನ ಹೊಳಪು ಹಚ್ಚ ಹಸಿರಾಗಿ ನೆನಪಿನಲ್ಲಿ ಉಳಿಯುತ್ತದೆ. ಜಾನಕಿ ಎಂಥ ಗೀತೆಯಾದರೂ ಸರಿ ಸುಲಭವಾಗಿ ನಿಭಾಯಿಸಿಬಿಡುತ್ತಾರೆ. “ನಿನ್ನಂತೆ ಯಾರಿಲ್ಲ, ನಿನ್ನಲ್ಲೆ ಮನಸೆಲ್ಲ” ಎಂದು ಚರಣವನ್ನು ನಿಲ್ಲಿಸುವಾಗ ಜಾನಕಿಯವರ ಗಾಯನ ಕೇಳಿ ವಾಹ್ ಎನ್ನದಿರಲಾಗುವುದಿಲ್ಲ.
೭) ಬಾನಲ್ಲೂ ನೀನೆ , ಚಿತ್ರ : ಬಯಲುದಾರಿ
ಗಾಯನ : ಎಸ್. ಜಾನಕಿ , ಸಂಗೀತ : ರಾಜನ-ನಾಗೇಂದ್ರ , ಸಾಹಿತಿ : ಚಿ. ಉದಯಶಂಕರ
ಚಿತ್ರದಲ್ಲಿ ಎರಡು ಬಾರಿ ಬರುವ ಗೀತೆ - ಒಮ್ಮೆ ನೋವಿನಲ್ಲಿ ಮತ್ತೊಮ್ಮೆ ನಲಿವಿನಲ್ಲಿ. ಇಂದು ಅರ್ಥವಿಲ್ಲದ ಗೀತೆಗಳ ಮಧ್ಯೆ ಕಳೆದುಹೋಗುತ್ತಿರುವ ಕನ್ನಡ ಚಿತ್ರರಂಗದಲ್ಲಿ ಈ ಗೀತೆ ಕೇಳಿದಾಗ ಈಗೇಕೆ ಇಂತಹ ಹಾಡುಗಳು ಬಹಳ ವಿರಳವಾಗಿದೆ ಎಂದು ಬೇಸರವಾಗದೇ ಇರದು. ಆಗ ಚಿತ್ರವೊಂದರಲ್ಲಿ ಕೇವಲ ನಾಲ್ಕು-ಐದು ಗೀತೆಗಳಿದ್ದರೂ ಎಲ್ಲವು ಮನಸೂರೆಗೊಳ್ಳುತ್ತಿದ್ದವು. ಈಗ ಹತ್ತರಲ್ಲಿ ಒಂದೋ-ಎರಡು.
೮) ತಂನಂ ತಂನಂ ನನ್ನಿ ಮನಸು ಮಿಡಿಯುತಿದೆ , ಚಿತ್ರ : ಎರಡು ಕನಸು
ಗಾಯನ : ಪಿ. ಬಿ. ಶ್ರೀನಿವಾಸ , ಎಸ್. ಜಾನಕಿ , ಸಂಗೀತ : ರಾಜನ-ನಾಗೇಂದ್ರ , ಸಾಹಿತಿ : ಚಿ. ಉದಯಶಂಕರ
ನನ್ನ ಕಛೇರಿಯಲ್ಲಿ ಒಮ್ಮೆ ಈ ಹಾಡು ಎಲ್ಲರಿಗೂ ಕೇಳಿಸಿದೆ. ಇವರಲ್ಲಿ ಹಲವಾರು ಉತ್ತರ ಭಾರತದವರು. ಮುಂದೆ ನನ್ನ ಬಳಿ ಬಂದು ಹಲವಾರು ಬಾರಿ ಈ ಹಾಡು ಕೇಳಿದರು. ಸುಮಾರು ಜನರು cd ಕೂಡ ಪಡೆದುಕೊಂಡರು. ಆರಂಭದಲ್ಲಿ ಬರುವ ವೀಣೆಯ ನಾದ, ತಂನಂ ತಂನಂ - ಘಲ್ ಘಲ್ ಸದ್ದು, ಚರಣದಿಂದ ಹಾಡು ಮತ್ತೆ ಪಲ್ಲವಿಗೆ ಮರಳುವಾಗ ಬರುವ ಸಂಗೀತ, ಸುಶ್ರಾವ್ಯ ಗಾಯನ ಹಾಡನ್ನು ಅಮರವಾಗಿಸಿದೆ.
೯) ನಾದಮಯ , ಚಿತ್ರ : ಜೀವನ ಚೈತ್ರ
ಗಾಯನ : ಡಾ. ರಾಜಕುಮಾರ್ , ಸಂಗೀತ : ಉಪೇಂದ್ರಕುಮಾರ್ , ಸಾಹಿತಿ : ಚಿ. ಉದಯಶಂಕರ
ಡಾ. ರಾಜಗೆ ರಾಷ್ಟ್ರಪ್ರಶಸ್ತಿ ತಂದುಕೊಟ್ಟ ಗೀತೆ. ತೋಡಿ ರಾಗದಲ್ಲಿ ಕಾಶಿ, ಹರಿದ್ವಾರ, ಹೃಷಿಕೇಶದಂತಹ ರಮಣೀಯ ಪ್ರಕೃತಿ ತಾಣದಲ್ಲಿ ಡಾ. ರಾಜ ತನ್ಮಯರಾಗಿ ಭಕ್ತಿಭಾವದಿಂದ ಹಾಡಿದ ಗೀತೆ. ಚಿತ್ರರಂಗದ ಮಟ್ಟಿಗಂತೂ ಭಕ್ತಿಭಾವದ ಅಭಿನಯದಲ್ಲಿ ರಾಜಗೆ ಅವರೇ ಸಾಟಿ.
೧೦) ಕಣ್ಣೀರ ಧಾರೆ , ಚಿತ್ರ : ಹೊಸ ಬೆಳಕು
ಗಾಯನ : ಡಾ. ರಾಜಕುಮಾರ್ , ಸಂಗೀತ : ಎಂ. ರಂಗರಾವ್ , ಸಾಹಿತಿ : ಚಿ. ಉದಯಶಂಕರ
ಹಿಂದಿಯ “ಎಕ್ ಶೆಹನಷಾ” ಹಾಡನ್ನು ಕೇಳಿ ಬಹಳ ಪ್ರಭಾವಿತರಾದ ಡಾ. ರಾಜಕುಮಾರ್ ಅವರಿಗೆ ಇದು ಬಹಳ ಪ್ರಿಯವಾದ ರಾಗ. ಡಾ. ರಾಜಕುಮಾರ್ ಇದೇ ರಾಗದಲ್ಲಿ ತಮಗೂ ಒಂದು ಹಾಡು ರಚಿಸಿಕೊಡಿ ಎಂದು ಎಂ. ರಂಗರಾವ್ ಬಳಿ ಕೇಳಿಕೊಂಡಾಗ ರಚನೆಯಾದ ಹಾಡು. ಡಾ. ರಾಜಕುಮಾರ್ ಗಾಯನ ಜೀವನದ ಸರ್ವಶ್ರೇಷ್ಟ ಗೀತೆಗಳಲ್ಲಿ ಒಂದು. “ನಾ ನಿನ್ನ ಕಣ್ಣಿಂದ ನೋಡುತಿಹೆ ಸೊಗಸೆಲ್ಲ” ಎಂದು ರಾಜ ಭಾವಪರಶರಾಗಿ ಹಾಡಿದ್ದಾರೆ.
ಸಮಯದ ಗೊಂಬೆಯ “ಕೋಗಿಲೆ ಹಾಡಿದೆ ಕೇಳಿದೆಯ“, ಗಾಳಿಮಾತು ಚಿತ್ರದ “ಬಯಸದೇ ಬಳಿ ಬಂದೆ“, ಬೆಡುಗಡೆಯ ಬೇಡಿ ಚಿತ್ರದ “ನಗುವ ಹೂವೆಲ್ಲವೂ“, ಗಿರಿಕನ್ಯೆಯ “ಏನೆಂದು ನಾ ಹೇಳಲಿ” , ರಡು ಕನಸು ಚಿತ್ರದ “ಎಂದೆಂದೂ ನಿನ್ನನು ಮರೆತು“, “ಪೂಜಿಸಲೇಂದೆ ಹೂಗಳ ತಂದೆ“, “ಬಾಡಿ ಹೋದ ಬಳ್ಳಿಯಿಂದ” ದೊರೆ-ಭಗವಾನ ಅವರ ಚಿತ್ರಗಳ ಇತರ ಸುಮಧುರ ಗೀತೆಗಳು.
Tags: Kannada music world