ಹಾಡು ಹಳೆಯದಾದರೇನು ಭಾವ ನವನವೀನ – ಭಾಗ ೧

Published on March 26, 2010 by Gopi Krishna   ·   No Comments

ಈ ಹೊಸ ಮಾಲಿಕೆಯಲ್ಲಿ ಆಯ್ದ ನಿರ್ದೇಶಕ/ಸಂಗೀತ ನಿರ್ದೇಶಕ/ಗಾಯಕ/ಗಾಯಕಿ/ಗೀತ ರಚನೆಕಾರ/ತಂತ್ರಙ್ನರ ಹತ್ತು ಪ್ರಮುಖ ಗೀತೆಗಳನ್ನು ವಿಷ್ಲೇಷಿಸುವ ಪ್ರಯತ್ನ. ಇಲ್ಲಿ ನೂರಾರು ಗೀತೆಗಳಿರಬಹುದು ಆದರೆ ನನ್ನನ್ನು ಹೆಚ್ಚಾಗಿ ಸೆಳೆದ ಹತ್ತು ಗೀತೆಗಳನ್ನು ಮಾತ್ರ ಆರಿಸಿಕೊಂಡಿದ್ದೇನೆ. ಕ್ಯಾಸೆಟ್ / ಸಿಡಿ ಮಾರಾಟ, ಜನಪ್ರಿಯತೆ ಇಲ್ಲಿ ಮಾನದಂಡವಲ್ಲ. ಈಗಲೂ ಮನದಂಗಳದಲ್ಲಿ ಹಚ್ಚ ಹಸಿರಾಗಿ ಸದಾ ಕಾಡುವ ಗೀತೆಗಳಿಗೆ ಹೆಚ್ಚು ಪ್ರಾಶಸ್ತ್ಯ. ಭಿನ್ನಾಭಿಪ್ರಾಯಗಳಿರುವುದು ಸಹಜ. ಸಮಯದ ಅಭಾವದಿಂದ ಆಯ್ಕೆಯನ್ನು ಹತ್ತು ಗೀತೆಗಳಿಗೆ ಸೀಮಿತಗೊಳಿಸಿದ್ದೇನೆ. ಗೀತೆಗಳು ಯಾವುದೇ order ನಲ್ಲಿ ಇರುವುದಿಲ್ಲ.

ಈ ಸಂಚಿಕೆಯಲ್ಲಿ ಕನ್ನಡ ಚಿತ್ರರಂಗದ ಧೀಮಂತ ನಿರ್ದೇಶಕ ಪುಟ್ಟಣ್ಣ ಕಣಗಾಲ ಅವರ ಚಿತ್ರಗಳಿಂದ ಹತ್ತು ಸುಮಧುರ ಗೀತೆಗಳನ್ನು ಆಯ್ದುಕೊಂಡಿದ್ದೇನೆ. . ಸಂಗೀತ, ಸಾಹಿತ್ಯ ಚಿತ್ರಕಥೆಗೆ ಪೂರಕವಾಗಿದ್ದು ತಮ್ಮ ಚಿತ್ರಗಳಲ್ಲಿ ಗೀತೆಗಳನ್ನು ಎಂದೂ ಬಲವಂತದಿಂದ ಸೇರಿಸಿದವರಲ್ಲ . ಈ ಸುಮಧುರ ಗೀತೆಗಳನ್ನು ಅಷ್ಟೇ ಸುಂದರ ಪರಿಸರದಲ್ಲಿ ಚಿತ್ರಿಸಿದ ಕೀರ್ತಿ ಇವರದು. ಹೆಣ್ಣಿನ ವಿವಿಧ ಭಾವನೆಗಳನ್ನು ತಮ್ಮ ಚಿತ್ರದ ಗೀತೆಗಳ ಮೂಲಕ ವಿಶಿಷ್ಟವಾಗಿ ಬಿಂಬಿಸಿದ್ದಾರೆ. ಪುಟ್ಟಣ್ಣನವರ ಯಶಸ್ಸಿನ ಹಿಂದೆ ವಿಜಯಭಾಸ್ಕರ್ ಸಂಗೀತ ಮತ್ತು ವಿಜಯ ನಾರಸಿಂಹ ಅವರ ಸಾಹಿತ್ಯದ ಕಾಣಿಕೆ ಅಪಾರ.

) ಹಾಡು ಹಳೆಯದಾದರೇನು ಭಾವ ನವನವೀನ - ಚಿತ್ರ : ಮಾನಸ ಸರೋವರ

ಜಿ. ಎಸ್.ಶಿವರುದ್ರಪ್ಪ ಅವರ ರಚನೆ, ವಿಜಯಭಾಸ್ಕರ್ ಸಂಗೀತ, ವಾಣಿಜಯರಾಂ ಅವರ ಗಾಯನ. ಎಂಥ ಸುಂದರ ಸಾಲುಗಳು. ಸುಮಾರು ಏಳು ವರ್ಷಗಳ ಹಿಂದೆ ಬರಹದಲ್ಲಿ ನಾನು ಬರೆದ ಮೊದಲ ಸಾಲುಗಳು. ಈಗಲೂ ಈ ಹಾಡು ಎಲ್ಲಿ ಕೇಳಿಬಂದರು ಮುಗಿಯುವವರೆಗೂ ಕೇಳಿಯೇ ಮುಂದಿನ ಕೆಲಸ. ಒಂದು ಬಗೆಯ ಮಾಂತ್ರಿಕ ಶಕ್ತಿ ಈ ಗೀತೆಯಲ್ಲಿದೆ. ಚರಣದಲ್ಲಿ ನಾಲ್ಕು ಸಾಲುಗಳು ಮಾತ್ರ, ಆದರೆ ಎಲ್ಲ ಹಮ್ಮು ಬಿಮ್ಮು , ಭೇಧ-ಭಾವವನ್ನು, ನೋವು ಮರೆಸುವ ಶಕ್ತಿ ಈ ಹಾಡಿಗಿದೆ. ಈ ಸಾಲುಗಳು ಎಂದಿಗೂ ನಿತ್ಯ ಸತ್ಯ.

ಹಾಡು ಹಳೆಯದಾದರೇನು ಭಾವ ನವನವೀನ

ಎದೆಯ ಭಾವ ಹೊಮ್ಮುವುದಕ್ಕೆ ಭಾಷೆ ಒರಟು ಯಾನ

ಹಮ್ಮು ಬಿಮ್ಮು ಒಂದು ಇಲ್ಲ ಹಾಡು ಹೃದಯ ತೆರೆದಿದೆ

ಹಾಡಿನಲ್ಲಿ ಲೀನವಾಗಲೆನ್ನ ಮನವು ಕಾಡಿದೆ

ಹಳೆಯ ಹಾಡು ಹಾಡು ಮತ್ತೆ ಅದನ್ನೆ ಕೇಳಿ ತಣಿಯುವೆ

ಹಳೆಯ ಹಾಡಿನಿಂದ ಹೊಸತು ಜೀವನ ಕಟ್ಟುವೆ

) ವಿರಹ ನೂರು ನೂರು ತರಹ - ಚಿತ್ರ : ಎಡಕಲ್ಲು ಗುಡ್ಡಾದ ಮೇಲೆ

ಗಾಯಕಿ : ಪಿ. ಸುಶೀಲ, ಸಂಗೀತ : ಎಂ.ರಂಗರಾವ್, ಸಾಹಿತಿ : ವಿಜಯ ನಾರಸಿಂಹ

ವಿರಹದ ನೋವನ್ನು ಸುಂದರವಾಗಿ ಬಿಂಬಿಸುವ ಗೀತೆ. ಈ ಗೀತೆ slow poison ಇದ್ದ ಹಾಗೆ. ಮತ್ತೆ ಮತ್ತೆ ಕೇಳಬೇಕೆನಿಸುವ ಗೀತೆ. ಈ ಗೀತೆಯ ಮದ್ಯದಲ್ಲಿ ಸರಿಗಮಪಎನ್ನುವ ಆಲಾಪನೆ ಬಹಳ ಸುಂದರವಾಗಿ ಹಾಡಿನೊಂದಿಗೆ ಸಮಾಗಮಗೊಂಡಿದೆ. ಈ ಗೀತೆಯನ್ನು ಮಡಕೇರಿಯಲ್ಲಿ ಅಷ್ಟೇ ಪರಿಣಾಮಕಾರಿಯಾಗಿ ಚಿತ್ರಸಿದ್ದಾರೆ.

) ಗಗನವು ಎಲ್ಲೋ ಭೂಮಿಯು ಎಲ್ಲೋ - ಚಿತ್ರ : ಗೆಜ್ಜೆ ಪೂಜೆ

ಗಾಯಕಿ :ಎಸ್. ಜಾನಕಿ , ಸಂಗೀತ : ವಿಜಯಭಾಸ್ಕರ್, ಸಾಹಿತಿ : ಆರ್. ಎನ್. ಜಯಗೋಪಾಲ

ಬಹಳ ಕ್ಲಿಷ್ಟಕರವಾದ ಗೀತೆ. ಸತತವಾಗಿ ಮೇಲುಸ್ತರದಲ್ಲಿ ಹಾಡಬೇಕಾದ ಗೀತೆ. ಜಾನಕಿಯವರ ಕಂಠ ಇಲ್ಲಿ ಅದ್ಭುತ. ಪ್ರಿಯಕರ ಒಲಿದ ಸಂತಸದಲ್ಲಿ ನಾಯಕಿ ಸಂತೋಷದಿಂದ ಹಾಡುವ ಗೀತೆ. ಈಗಲೂ ಯಾವುದೇ reality show Final ನಲ್ಲಿ ಸ್ಪರ್ಧೆ ತೀವ್ರಗೊಂಡಾಗ ಈ ಹಾಡಿನ ಮೂಲಕ ಗಾಯಕಿಯರನ್ನು ಪರೀಕ್ಷಿಸಲಾಗುತ್ತದೆ.

) ಮಂದಾರ ಪುಷ್ಪವು ನೀನು - ಚಿತ್ರ : ರಂಗನಾಯಕಿ

ಗಾಯಕ : ಜಯಚಂದ್ರನ್ , ಸಂಗೀತ : ಎಂ. ರಂಗರಾವ್, ಸಾಹಿತಿ : ವಿಜಯ ನಾರಸಿಂಹ

ಧುಮ್ಮಿಕ್ಕುವ ಜಲಪಾತದಂತೆ ಹರಿದು ಬರುವ ಹಾಡು. ನದಿಯು ವೇಗವಾಗಿ ಧುಮುಕಿ ರಭಸವಾಗಿ ಹರಿದುಹೋದಂಥ ಅನುಭವ ನೀಡುವ ಹಾಡು. ಪಲ್ಲವಿಯ ಕೊನೆಯಲ್ಲಿ ಬರುವ “ರಾಣಿ,ರಾಣಿ,ರಾಣಿ,ರಾಣಿ,ರಾಣಿ… ನಿನ್ನ ಎಂದೋ ಮೆಚ್ಚಿದ್ದೆ ನಾನು” ಆಹ್ಲಾದಕರವಾದ ಅನುಭವ ನೀಡುತ್ತದೆ. ಈ ಗೀತೆಯನ್ನು ಸಹ ನದಿಯ ದಡದಲ್ಲಿ ಚಿತ್ರಸಿದ್ದಾರೆ.

) ಬಾರೆ ಬಾರೆ ಚಂದದ ಚೆಲುವಿನ ತಾರೆ - ಚಿತ್ರ : ನಾಗರಹಾವು

ಗಾಯಕ : ಪಿ. ಬಿ. ಶ್ರೀನಿವಾಸ್ , ಸಂಗೀತ : ವಿಜಯಭಾಸ್ಕರ್, ಸಾಹಿತಿ : ವಿಜಯ ನಾರಸಿಂಹ

ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಮೊದಲ ಬಾರಿ Slow motion ನಲ್ಲಿ ಚಿತ್ರಿಸಿರುವ ಗೀತೆ. ಅಮೇರಿಕದ Texas ಮೂಲದ ಗೀತೆಯನ್ನು ಸ್ಪೂರ್ಥಿಯನ್ನಾಗಿಸಿ ರಚನೆಗೊಂಡ ಹಾಡು. Haunting melody ಗೆ ಇದು ಅತ್ಯುತ್ತಮ ಉದಾಹರಣೆ.

ಬಾರೆ ಬಾರೆ ಚೆಂದದ ಚೆಲುವಿನ ತಾರೆ
ಬಾರೆ ಬಾರೆ ಒಲವಿನ ಚಿಲುಮೆಯ ಧಾರೆ ||

ಕಣ್ಣಿನ ಸನ್ನೆಯ ಸ್ವಾಗತ ಮರೆಯಲಾರೆ
ಚೆನ್ದುಟಿ ಮೇಲಿನ ಹೂನಗೆ ಮರೆಯಲಾರೆ
ಅಂದದ ಹೆಣ್ಣಿನ ನಾಚಿಕೆ ಮರೆಯಲಾರೆ
ಮೌನ ಗೌರಿಯ ಮೋಹದ ಕೈ ಬಿಡಲಾರೆ ||

ಕೈಬಳೆ ನಾದದ ಗುಂಗನು ಅಳಿಸಲಾರೆ
ಮೈಮನ ಸೋಲುವ ಮತ್ತನು ಮರೆಯಲಾರೆ
ರೂಪಸಿ ರಂಭೆಯ ಸಂಗವ ತೊರೆಯಲಾರೆ
ಮೌನ ಗೌರಿಯ ಮೋಹದ ಕೈ ಬಿಡಲಾರೆ ||

೬) ಈ ಸಂಭಾಷಣೆ – ಚಿತ್ರ : ಧರ್ಮಸೆರೆ

ಗಾಯನ : ಎಸ್. ಜಾನಕಿ , ಎಸ್. ಪಿ. ಬಿ , ಸಂಗೀತ : ಉಪೇಂದ್ರಕುಮಾರ್ , ಸಾಹಿತಿ : ವಿಜಯನಾರಸಿಂಹ

ಕೇವಲ ಮೂರು ನಿಮಿಷದಲ್ಲಿ ಮುಗಿಯುವ ಈ ಸುಂದರ ಯುಗಳ ಗೀತೆ. ಅಯ್ಯೋ ಇಷ್ಟು ಬೇಗ ಮುಗಿಯಿತಲ್ಲ ಎಂದೆನಿಸಿದರೆ ಆಶ್ಚರ್ಯವಿಲ್ಲ. ಈ ಹಾಡಿನಲ್ಲಿ ಬರುವ ಪದಗಳು ಹೆಚ್ಚು ಗೀತೆಗಳಲ್ಲಿ ಬಳಕೆಯಾಗಿಲ್ಲ – ಉದಾಹರಣೆ : ಸುಲಲಿತ, ಲಾಸ್ಯ, ಶೃಂಗಾರ ಭಾವ ಗಂಗ

೭) ಭಾರತ ಭೂಶಿರ ಮಂದಿರ ಸುಂದರಿ – ಚಿತ್ರ : ಉಪಾಸನೆ

ಗಾಯಕಿ :ಎಸ್. ಜಾನಕಿ , ಸಂಗೀತ : ವಿಜಯಭಾಸ್ಕರ್, ಸಾಹಿತಿ : ವಿಜಯನಾರಸಿಂಹ

ಚಿತ್ರದ ಕ್ಲೈಮಾಕ್ಸನಲ್ಲಿ ಬರುವ ಈ ಗೀತೆಯನ್ನು ಕನ್ಯಾಕುಮಾರಿಯ ರುದ್ರಸಮುದ್ರ ತೀರದಲ್ಲಿ ಚಿತ್ರಸಿದ್ದಾರೆ. ಭೋರ್ಗರೆಯುವ ಸಮುದ್ರದ ಅಲೆಗಳು ಈ ಹಾಡಿನ ಸಂಗೀತ, ಗಾಯನದೊಂದಿಗೆ ಮಿಳಿತಗೊಂಡಿದೆ. ಅರ್ಥಗರ್ಭಿತ ಸಾಹಿತ್ಯ, ಸಂಗೀತ ಮೈಗೂಡಿಸಿಕೊಂಡಿರುವ ಗೀತೆ.

೮) ಮೂಡಲ ಮನೆಯ ಮುತ್ತಿನ ನೀರಿನ – ಚಿತ್ರ : ಬೆಳ್ಳಿ ಮೋಡ

ಗಾಯಕಿ :ಎಸ್. ಜಾನಕಿ , ಸಂಗೀತ : ವಿಜಯಭಾಸ್ಕರ್

ದ.ರ.ಬೇಂದ್ರೆಯವರ ರಚನೆಯನ್ನು ಜಾನಕಿ/ವಿಜಯಭಾಸ್ಕರ್ ಮತ್ತು ಪುಟ್ಟಣ್ನನವರು ಸುಂದರ ದೃಶ್ಯ ಕಾವ್ಯವಾಗಿಸಿದ್ದಾರೆ. ಬೆಳ್ಳಿತೆರೆಯ ಮೇಲೆ ಬೆಳ್ಳಿ ಮೋಡದ ಈ ಹಾಡು ಇಂದಿಗೂ,ಎಂದಿಗೂ ಅಪ್ಪಟ ಬಂಗಾರವಾಗಿ ಮಿನುಗುತ್ತಿದೆ.

೯) ಮಾನಸ ಸರೋವರ – ಚಿತ್ರ : ಮಾನಸ ಸರೋವರ

ಗಾಯಕರು : ಎಸ್. ಜಾನಕಿ ಮತ್ತು ಎಸ್. ಪಿ. ಬಿ , ಸಂಗೀತ : ವಿಜಯಭಾಸ್ಕರ್, ಸಾಹಿತಿ : ವಿಜಯನಾರಸಿಂಹ

ಚಿತ್ರದ Title track ಹಾಡನ್ನು ವೀಕ್ಷಿಸದವರನ್ನು ಕೂಡ ಸುಂದರ ಮಾನಸ ಸರೋವರದತ್ತ ಕೊಂಡೊಯ್ಯುತ್ತದೆ. ಈ ಹಾಡಿನ ಸಾಲುಗಳು ಸದಾ ನೆನಪಿನಂಗಳದ ಸರೋವರದಲ್ಲಿ ನೆಲೆಸಿರುತ್ತದೆ.

“ಸತ್ಯ ಸುಂದರ ಜೀವನ ರಂಗ, ನಿತ್ಯ ನಿರ್ಮಲ ಅಂತರಂಗ”, “ಸಂತಸ ಲೀಲೆಯ ಹಂಸವಿಹಾರ, ಸ್ವರ್ಗ ಸೀಮೆಯ ಕೌಸ್ತುಭಹಾರ”,”ಅನುಪಮ ಲೋಕದ ಜೀವ ಗಂಗ”, “ಆನಂದ ನೀಡುವ ರಾಗತರಂಗ”, “ಸೌಂದರ್ಯ ಲಹರಿಯ ಮಧುರ ಸಂಚಾರ” – ಅಪರೂಪದ ಅದ್ಭುತ ಸಾಹಿತ್ಯ. Hats off to ವಿಜಯನಾರಸಿಂಹ. ಕನ್ನಡ ಚಿತ್ರರಂಗ ಕಂಡ ಧೀಮಂತ ಗೀತ ರಚನೆಕಾರ.

೧೦) ಕನ್ನಡ ನಾಡಿನ ರಸಿಕರ ಮನವ- ಚಿತ್ರ : ರಂಗನಾಯಕಿ

ಗಾಯಕ :ಎಸ್. ಪಿ. ಬಿ , ಸಂಗೀತ: ಎಂ. ರಂಗರಾವ್, ಸಾಹಿತಿ: ಕಣಗಾಲ ಪ್ರಭಾಕರ ಶಾಸ್ತೀ

ರಂಗನಾಯಕಿಯನ್ನು ಪತಿಯೊಡನೆ ಬೀಳ್ಕೊಡುವ ಈ ನೋವು – ದುಃಖ ಮಿಶ್ರಿತ ಗೀತೆಯನ್ನು ಎಸ್. ಪಿ ಬಹಳ ಭಾವುಕರಾಗಿ ಹಾಡಿದ್ದಾರೆ. ಈ ಗೀತೆಯ ಕೊನೆಯ ಸಾಲನ್ನು ಕೊಂಚ ಬದಲಿಸಿದರೆ “ನಿಮ್ಮ ಹೃದಯ ಹಸಿರಾಗಿರಲಿ, ನಿಮ್ಮ ನೆನಪು ಸವಿಯಾಗಿರಲಿ” – ಹೌದು ಪುಟ್ಟಣ್ಣನವರು ತಮ್ಮ ಚಿತ್ರಗಳೊಂದಿಗೆ ಇನ್ನು ನಮ್ಮೊಡನಿದ್ದಾರೆ.

Tags: 

Readers Comments (0)




Please note: Comment moderation is enabled and may delay your comment. There is no need to resubmit your comment.

Author Info