ಈ ಸಂಚಿಕೆಯಲ್ಲಿ ಹಿರಿಯ ಗಾಯಕ ಯೇಸುದಾಸ್ ಅವರು ಹಾಡಿರುವ ಹತ್ತು ಗೀತೆಗಳನ್ನು ಆಯ್ದುಕೊಂಡಿದ್ದೇನೆ. ತಮ್ಮ ವಿಶೇಷ ಕಂಠದಿಂದ ಐದು ದಶಕಗಳ ಕಾಲ ಗಾಯನದ ಹಲವಾರು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಇವರು ಕನ್ನಡ, ತಮಿಳು, ತೆಲುಗು, ಮಲಯಾಳಿ, ಹಿಂದಿ ಹೀತೆ ಹಲವಾರು ಭಾಷೆಗಳಲ್ಲಿ ಹಾಡಿದ್ದಾರೆ. ಪ್ರತಿ ವರ್ಷ ರಾಮನವಮಿಗೆ ಅವರ ಗಾಯನವನ್ನು ಕೇಳಿ ಸವಿಯುವ ಅವಕಾಶ ಬೆಂಗಳೂರಿನ ನಾಗರೀಕರಿಗೆ ಲಭ್ಯವಿದೆ.ಯೇಸುದಾಸ್ ಕನ್ನಡದಲ್ಲಿ ಹೆಚ್ಚಾಗಿ ಹಾಡಿದ್ದು ವಿಷ್ಣುವರ್ಧನ ಅವರಿಗೆ
೧) ಮರೆಯದಿರು ಅ ಶಕ್ತಿಯ, ಚಿತ್ರ : ಪಿತಾಮಹ, ಸಂಗೀತ : ಉಪೇಂದ್ರಕುಮಾರ್- ಎಂ.ರಂಗರಾವ , ರಚನೆ : ಚಿ.ಉದಯಶಂಕರ್
ಮನುಷ್ಯ ತನ್ನ ಅಂತರಾಳದ ಅಂಕೆಯನ್ನು ಮೀರಿ ನಡೆಯಬಾರದು , ಇಲ್ಲಿ ಅಗೋಚರ ಶಕ್ತಿಯನ್ನು ವಿಧಿ,ಹರಿ,ಹರ ಏನು ಬೇಕಾದರು ಅನ್ನಬಹುದು , ಈ ಶಕ್ತಿಯ ಕೈಯಲ್ಲಿನ ಸೂತ್ರದ ಗೊಂಬೆಗಳು ನಾವು ಎನ್ನುವ ಸಂದೇಶ ಸಾರುವ ಗೀತೆ. ಯೇಸುದಾಸ್ ಅವರಿಗೆ ಹೇಳಿ ಮಾಡಿಸಿದ ಗೀತೆ.
೨) ಯಾರೆ ನೀನು ಚೆಲುವೆ, ಚಿತ್ರ : ನಾನು ನನ್ನ ಹೆಂಡ್ತಿ, ಸಂಗೀತ : ಶಂಕರ್-ಗಣೇಶ, ರಚನೆ : ಹಂಸಲೇಖ
ಯೇಸುದಾಸ್ ಹಾಡಿರುವ ಹಾಡುಗಳ ಪೈಕಿ ಬಹಳ ವಿಭಿನ್ನವಾದ ಪ್ರಯತ್ನ. ಈ ಗೀತೆಯಲ್ಲಿ Guitar ಬಳಕೆ ಬಹಳ ಸಮರ್ಪಕ. ಸದಾ ಹಚ್ಚ ಹಸಿರಾಗಿರುವ ಪ್ರೇಮ ಗೀತೆ. ಈ ಚಿತ್ರವೇ ಹಂಸಲೇಖ ಅವರಿಗೆ ಮುಂದೆ ಪ್ರೇಮ ಲೋಕ ಚಿತ್ರದ ಸಂಗೀತ ನಿರ್ದೇಶನಕ್ಕೆ ದಾರಿ ಮಾಡಿ ಕೊಟ್ಟಿತು ಎಂದರೆ ತಪ್ಪಾಗಲಾರದು.
೩) ಜೋ ಜೋ ಲಾಲಿ, ಚಿತ್ರ : ಚಿನ್ನ ನಿನ್ನ ಮುದ್ದಾಡುವೆ, ಸಂಗೀತ : ಸಲೀಲ ಚೌಧುರಿ, ರಚನೆ : ಆರ. ಎನ. ಜಯಗೋಪಾಲ್
ಇದು ಚಿತ್ರ ಗೀತೆಯೇ ಇರಬಹುದು – ಆದರೆ ಅದ್ಭುತ ಲಾಲಿ ಹಾಡು. ಕಂದನನ್ನು ಮಲಗಿಸಲು ತಂದೆ ಹಾಡುವ ಗೀತೆ ಅಜರಾಮರ. ಕೇಳುತ್ತಿದ್ದರೆ ಕಂದಮ್ಮಗಳು ಸೊಂಪಾದ ನಿದಿರೆಗೆ ಜಾರುವುದರಲ್ಲಿ ಅನುಮಾನವೇ ಇಲ್ಲ.ಸಲೀಲ ಚೌಧುರಿ ಕನ್ನಡದಲ್ಲಿ ಅಪರೂಪಕ್ಕೆ ಸಂಗೀತೆ ನೀಡಿದ ಚಿತ್ರ.
೪) ಎಲ್ಲೆಲ್ಲು ಸಂಗೀತವೇ, ಚಿತ್ರ : ಮಲಯ ಮಾರುತ, ಸಂಗೀತ : ವಿಜಯಭಾಸ್ಕರ, ರಚನೆ : ಚಿ.ಉದಯಶಂಕರ್
ಈ ಚಿತ್ರದಲ್ಲು ಒದ್ದಕ್ಕಿಂತ ಒಂದು ಸುಮಧುರ ಗೀತೆಗಳಿದ್ದು ಅದರಲ್ಲಿ ಹಲವು ಗೀತೆಗಳನ್ನು ಯೇಸುದಾಸ್ ಹಾಡಿದ್ದಾರೆ. “ಶಾರದೆ ದಯತೋರಿದೆ”, “ನಟನವಿಶಾರದ ನಟಶೇಖರ”, “ಮಲಯ ಮಾರುತ ಗಾನ” ಹೀಗೆ ಹಲವಾರು. ಶಾಸ್ತ್ರೀಯ ಶೈಲಿಯ ಗಾಯನದಲ್ಲಿ ಪಳಗಿದ ಯೇಸುದಾಸ್ ಅವರಿಗೆ ಹೇಳಿ ಮಾಡಿಸಿದ ಗೀತೆಗಳು. ಆಯ್ಕೆಗೋಸ್ಕರ ಈ ಗೀತೆಯನ್ನು ಆರಿಸಿದ್ದೇನೆ.
೫) ಟು ಟು ಟು ಬೇಡಪ್ಪ, ಚಿತ್ರ ; ಪ್ರೇಮಮಯಿ, ಸಂಗೀತ : ಆರ್. ಸುದರ್ಶನ, ರಚನೆ : ವಿಜಯನಾರಸಿಂಹ
ಹಲವರಿಗೆ ಗೊತ್ತಿಲ್ಲದ ವಿಷಯ. ತಮ್ಮ ಚಿತ್ರಗೀತೆಯ ಗಾಯನದ ಆರಂಭದ ದಿನಗಳಲ್ಲಿ ಯೇಸುದಾಸ್ ಡಾ.ರಾಜಕುಮಾರ್ ಅವರಿಗೂ ಒಂದು ಗೀತೆಯನ್ನು ಹಾಡಿದ್ದಾರೆ. ಇದರ ನಂತರ ಅವರು ರಾಜ ಅವರಿಗೆ ಹಾಡಿದ್ದು ಬಹಳ ಕಡಿಮೆ. ಮಗು ಮತ್ತು ಆತನ ಚಿಕ್ಕಪ್ಪನ ನಡುವಿನ ಮಧುರ ಬಾಂಧವ್ಯವನ್ನು ಹಾಡಿನ ಮೂಲಕ ತೋರಿಸಲಾಗಿದೆ.
೬) ನಗುವಿನ ಅಳುವಿನ ಸಂಕೋಲೆ , ಚಿತ್ರ ; ದೇವರ ಕಣ್ಣು, ಸಂಗೀತ : ಟಿ. ಜಿ. ಲಿಂಗಪ್ಪ, ರಚನೆ : ಚಿ.ಉದಯಶಂಕರ್
“ನಿನ್ನ ನೀನು ಮರೆತರೇನು ಸುಖವಿದೆ” ಮುಂತಾದ ಹಲವಾರು ಸುಮಧುರ ಗೇತೆಗಳನ್ನು ಒಳಗೊಂಡ ಈ ಚಿತ್ರದಲ್ಲಿ ಯೇಸುದಾಸ್ ಅವರ ಕಂಠದಲ್ಲಿ ಮೂಡಿಬಂದ ಶೋಕ ಗೀತೆ.
೭) ಪಾರಮಾರ್ಥ ತತ್ವ, ಚಿತ್ರ : ಗಾನಯೋಗಿ ಪಂಚಾಕ್ಷರಿ ಗವಾಯಿ, ಸಂಗೀತ : ಹಂಸಲೇಖ, ರಚನೆ : ಸರ್ಪಭೂಷಣ
ಮಹಾನ ಗಾಯಕರಾದ ಎಸ.ಪಿ.ಬಿ, ರಾಜ್, ಚಿತ್ರ ಹಾಡಿರುವ ಅಮೋಘ ಗೀತೆಗಳಿರುವ ಈ ಸಂಗೀತಮಯ ಚಿತ್ರದಲ್ಲಿ ಯೇಸುದಾಸ್ ಅವರ ಕಾಣಿಕೆಯೂ ಇದೆ. ಕನ್ನಡ ಚಿತ್ರ ಸಂಗೀತಕ್ಕೆ ವಿಶೇಷ ಮನ್ನಣೆ ತಂದುಕೊಟ್ಟ ಈ ಚಿತ್ರ ಮತ್ತು ಇದರ ಸಂಗೀತ ಸದಾ ಅಮರ.
೮) ಬೇಲೂರ ಶಿಲೆಯ ಬೆಡಗೊ, ಚಿತ್ರ : ಹೆಂಡ್ತಿ ಬೇಕು ಹೆಂಡ್ತಿ, ಸಂಗೀತ : ಎಂ. ರಂಗರಾವ್, ರಚನೆ : ಆರ. ಎನ. ಜಯಗೋಪಾಲ್
ಯೇಸುದಾಸ್ ಅವರ ಕಂಠದಲ್ಲಿ ಮೂಡಿಬಂದ ಮತ್ತೊಂದು ಸುಮಧುರ ಪ್ರೇಮಗೀತೆ. ಅನಂತನಾಗ ಅವರ ಮೇಲೆ ಚಿತ್ರಿತವಾದ ಗೀತೆ.
೯) ಹೇ ಶಿಲ್ಪಿ, ಚಿತ್ರ : ರಾಗ ತಾಳ, ಸಂಗೀತ : ಎಂ. ರಂಗರಾವ್, ರಚನೆ : ನಂದಗೋಪಾಲ ರೆಡ್ಡಿ
ಈ ಹಾಡು ಇನ್ನೂ ಕೇಳಿಲ್ಲವೇ, ಹಾಗಿದ್ದರೆ ಬೇಲೂರಿನ ಸೊಬಗು ವರ್ಣಿಸುವ ಈ ಸುಂದರ ಗೀತೆಯನ್ನು ತಕ್ಷಣ ಕೇಳಿ. ಚಿತ್ರ ಹೆಚ್ಚು ಸುದ್ದಿ ಮಾಡದಿದ್ದರೂ ಈ ಹಾಡು ಮಾತ್ರ ಬಹಳ ಸುಮಧುರ.. ಯೇಸುದಾಸ್ ಅವರ ಕಿರೀಟದಲ್ಲಿ ಮತ್ತೊಂದು ಗರಿ.
೧೦) ಆ ಕರ್ಣನಂತೆ ನೀ ದಾನಿಯಾದೆ, ಚಿತ್ರ ; ಕರ್ಣ, ಸಂಗೀತ : ಎಂ. ರಂಗರಾವ್, ರಚನೆ : ಚಿ.ಉದಯಶಂಕರ್
ಕರ್ಣ ಚಿತ್ರದ ಈ ಗೀತೆ ಬಹಳ ಪರಿಣಾಮಕಾರಿಯಾಗಿ ಮೂಡಿ ಬಂತು. ಈಗಲೂ ಯಾವುದೇ ವಾಹಿನಿಯಲ್ಲಿ ಪ್ರಸಾರವಾದರೂ ಕೇಳಬೇಕೆನಿಸುವ ಗೀತೆ. ಈ ಗೀತೆಯ ನೋವಿನ ಛಾಯೆ ಬಹಳ ಕಾಲ ನೆನಪಿನಲ್ಲಿ ಉಳಿಯುವಂತೆ ಮಾಡುತ್ತದೆ..

