ಭಾಗ ಎರಡರಲ್ಲಿ ರಾಜನ್-ನಾಗೇಂದ್ರ ಅವರ ಇತರ ಗೀತೆಗಳನ್ನು ಆಯ್ದುಕೊಂಡಿದ್ದೇನೆ.
೧) ಆಸೆಯ ಭಾವ, ಚಿತ್ರ : ಮಾಂಗಲ್ಯ ಭಾಗ್ಯ , ರಚನೆ : ವಿಜಯನಾರಸಿಂಹ, ಗಾಯನ : ಎಸ್. ಪಿ. ಬಿ
ಸದಭಿರುಚಿಯ ಕನ್ನಡ ಪ್ರೇಕ್ಷಕ ಈ ಗೀತೆ ಮತ್ತು ಇದರ ಸಾಹಿತ್ಯವನ್ನು ಎಂದೂ ಮರೆಯುವುದಿಲ್ಲ. “ನನ್ನದೇ ಸ್ಪಂದನ ನಿನ್ನದೇ ಚೇತನ“, “ಹೆಜ್ಜೆಯ ಭಾವಕ್ಕೆ ಹಂಸವೇ ನಾಚಿದೆ” – ವಿಜಯನಾರಸಿಂಹ ಅವರ ಸಾಹಿತ್ಯ ಅಜರಾಮರ.
೨) ಗಿಲ್ ಗಿಲ್ ಗಿಲ್ ಗಿಲ್ ಗಿಲಕ , ಚಿತ್ರ : ರತ್ನಮಂಜರಿ ,ರಚನೆ : ಹುಣಸೂರು ಕೃಷ್ಣಮೂರ್ತಿ , ಗಾಯನ : ಎಸ್. ಜಾನಕಿ
ಈಗಲೂ ಈ ಹಾಡಿನ ತಾಳಕ್ಕೆ ಚಪ್ಪಾಳೆ ತಟ್ಟುವ ಜನರು ಹಲವಾರು. Foot tapping number ಗೆ ಇದು ಒಳ್ಳೆಯ ಉದಾಹರಣೆ. ಜಾನಕಿಯವರ ಗಾಯನ, ರಾಗ ಸಂಯೋಜನೆ, ಸಾಹಿತ್ಯ ಎಲ್ಲವೂ ವಿಶೇಷ. ಜಾನಕಿಯವರ Range ಗೆ ಇದು ಉತ್ತಮ ಉದಾಹರಣೆ.
೩) ಒಲಿದ ಜೀವ ಜೊತೆಯಲಿರಲು , ಚಿತ್ರ : ಬೆಂಕಿಯ ಬಲೆ, ರಚನೆ : ಚಿ. ಉದಯಶಂಕರ, ಗಾಯನ : ಎಸ್. ಜಾನಕಿ , ಎಸ್. ಪಿ. ಬಿ
ಈ ಚಿತ್ರದಲ್ಲಿ ಎರಡು ಗೀತೆಗಳು ನನ್ನಲ್ಲಿ ಗೊಂದಲ ಮೂಡಿಸಿದವು - ಎರಡು ಅತ್ಯುತ್ತಮ ಗೀತೆಗಳು (ಇನ್ನೊಂದು ಬಿಸಿಲಾದರೇನು ಮಳೆಯಾದರೇನು). ಆದರೆ ಈ ಗೀತೆಯನ್ನು ಆಯ್ಕೆಮಾಡಲು ಕಾರಣ ನಾನಿಲ್ಲಿ ಹತ್ತು ಗೀತೆಗಳ ನಿರ್ಭಂಧ ಹಾಕಿರುವುದರಿಂದ). ಅನಂತ-ಲಕ್ಷಿ ಜೋಡಿಯ ಗೀತೆ. ಇಲ್ಲಿನ ಸ್ವರಗಳ ಆಲಾಪನೆ ಬಹಳ ಸುಂದರ. ಎಸ್. ಜಾನಕಿ , ಎಸ್. ಪಿ. ಯವರ ಕಂಠದಲ್ಲಿ ಮೂಡಿಬಂದ ಅತ್ಯುತ್ತಮ ಯುಗಳ ಗೀತೆಗಳಲ್ಲಿ ಇದೂ ಒಂದೂ.
೪) ಮನೆಯನು ಬೆಳಗಿದೆ ಇಂದು , ಚಿತ್ರ : ಚಂದನದ ಗೊಂಬೆ, ರಚನೆ : ಚಿ. ಉದಯಶಂಕರ, ಗಾಯನ : ಎಸ್. ಜಾನಕಿ , ಎಸ್. ಪಿ. ಬಿ
ಮತ್ತೊಮ್ಮೆ ಅದೇ ಗೊಂದಲ - ಈ ಬಿಂಕ ಬಿಡು ಬಿಡು ಕೂಡ ಇದೇ ಚಿತ್ರದ ಇನ್ನೊಂದು ಸುಂದರ ಗೀತೆ. ಸುಂದರ ಸಂಸಾರದ ಚಿತ್ರಣವನ್ನು ಉದಯಶಂಕರ ಮತ್ತು ರಾಜನ-ನಾಗೇಂದ್ರ ಎಂದೂ ಮರೆಯದ ಹಾಡಾಗಿಸಿದ್ದಾರೆ. ಈ ಹಾಡಿನಲ್ಲಿ ಬರುವ humming ಬಹಳವಾಗಿ ಆಕರ್ಷಿಸುತ್ತದೆ. ಮತ್ತೊಮ್ಮೆ ಅನಂತ-ಲಕ್ಷಿ ಜೋಡಿಯ ಗೀತೆ.
೫) ಬಾನಲ್ಲೂ ನೀನೆ , ಚಿತ್ರ : ಬಯಲುದಾರಿ, ರಚನೆ : ಚಿ. ಉದಯಶಂಕರ, ಗಾಯನ : ಎಸ್. ಜಾನಕಿ
ಚಿತ್ರದಲ್ಲಿ ಎರಡು ಬಾರಿ ಬರುವ ಗೀತೆ - ಒಮ್ಮೆ ನೋವಿನಲ್ಲಿ ಮತ್ತೊಮ್ಮೆ ನಲಿವಿನಲ್ಲಿ. ಇಂದು ಅರ್ಥವಿಲ್ಲದ ಗೀತೆಗಳ ಮಧ್ಯೆ ಕಳೆದುಹೋಗುತ್ತಿರುವ ಕನ್ನಡ ಚಿತ್ರರಂಗದಲ್ಲಿ ಈ ಗೀತೆ ಕೇಳಿದಾಗ ಈಗೇಕೆ ಇಂತಹ ಹಾಡುಗಳು ಬಹಳ ವಿರಳವಾಗಿದೆ ಎಂದು ಬೇಸರವಾಗದೇ ಇರದು. ಆಗ ಚಿತ್ರವೊಂದರಲ್ಲಿ ಕೇವಲ ನಾಲ್ಕು-ಐದು ಗೀತೆಗಳಿದ್ದರೂ ಎಲ್ಲವು ಮನಸೂರೆಗೊಳ್ಳುತ್ತಿದ್ದವು. ಈಗ ಹತ್ತರಲ್ಲಿ ಒಂದೋ-ಎರಡು. ಈ ಚಿತ್ರದ ಮಿಕ್ಕ ಗೀತೆಗಳು ಬಹಳ ಜನಪ್ರಿಯ ಗೀತೆಗಳು - “ಕನಸಲೂ ನೀನೆ“, “ನಲ್ಲೆ ಎಲ್ಲಿರುವೆ“
೬) ಬೆಳದಿಂಗಳೊಂದು ಹೆಣ್ಣಾಗಿ, ಚಿತ್ರ : ಪ್ರೇಮಾನುಬಂಧ, ರಚನೆ : ಚಿ. ಉದಯಶಂಕರ, ಗಾಯನ : ಎಸ್. ಪಿ. ಬಿ
ಶ್ರೀನಾಥ-ಮಂಜುಳ ಜೋಡಿಯ ಜನಪ್ರಿಯ ಗೀತೆ. ಮತ್ತದೇ ಗೊಂದಲ - ಈ ಚಿತ್ರ “ಹೊಸ ಹೊಸ ಬಯಕೆಯ ಮಿಂಚಿನಲ್ಲಿ” ಹಾಡು ಕೂಡ ಅತ್ಯುತ್ತಮ ಯುಗಳ ಗೀತೆ ಆದರೆ ಈ ಹಾಡಿನಲ್ಲಿನ ಏರಿಳಿತವೇ ಅದನ್ನು ಆಯ್ಕೆ ಮಾಡುಲು ಕಾರಣ.
೭) ನೀ ನುಡಿಯದಿರಲೇನು ಬಯಲಾಗಿಹುದು ಎಲ್ಲ, ಚಿತ್ರ : ಮರಳಿ ಗೂಡಿಗೆ, ರಚನೆ : ಪ್ರೋ. ನಿಸಾರ್ ಅಹಮದ್, ಗಾಯಕ : ಎಸ. ಪಿ. ಬಿ
ಪಶ್ಚಾತ್ತಾಪದಿಂದ ಬೆಂದ ನಾಯಕಿಗೆ ಸಾಂತ್ವನ ಹೇಳುವ ಗೀತೆ. “ನೀ ನುಡಿಯದಿರಲೇನು ಬಯಲಾಗಿಹುದು ಎಲ್ಲ, ಕಣ್ಣಂಚಿನ ಕೊನೆಯ ಭಾವದಲ್ಲಿ“, “ಅರೆಘಳಿಗೆ ಸುಖ ಸ್ವಪ್ನ ಬರಲಾರದೆನ್ನೊಡನೆ, ವಾಸ್ತವತೆ ಗಹಗಹಿಸಿ ಸೆಳಿಯುತಿಹುದು“, “ಮರೆತೆಲ್ಲ ಕೊನೆಗೊಮ್ಮೆ ಮನ ಬಿಚ್ಚಿ ನಕ್ಕು ಬಿಡು ಬೇರೆ ದಾರಿಯ ನಾವು ಹಿಡಿಯಬಹುದು“. ವಾಸ್ತವತೆಯನ್ನು ಮರೆಯದೆ ಹೊಸ ದಾರಿಯನ್ನು ಹುಡುಕುವ ಪ್ರಯತ್ನ - ಪ್ರೋ. ನಿಸಾರ್ ಅಹಮದ್ ಅವರ ಅಮರ ಗೀತೆ.ಎಸ. ಪಿ. ಅವರ ಅತ್ಯುತ್ತಮ ಗೀತೆಗಳಲ್ಲಿ ಒಂದು.
೮) ನಲಿವ ಗುಲಾಬಿ ಹೂವೆ, ಚಿತ್ರ : ಆಟೋ ರಾಜ, ರಚನೆ : ಚಿ. ಉದಯಶಂಕರ, ಗಾಯನ : ಎಸ್. ಪಿ. ಬಿ
ರಾಜನ್-ನಾಗೇಂದ್ರ ಅವರ ಸಂಗೀತದಲ್ಲಿ ಬಂದ ಶ್ರೇಷ್ಟ ಶೋಕ ಗೀತೆಗಳಲ್ಲಿ ಒಂದು. ಆಗ ತಾನೇ ಚಿತ್ರರಂಗ ಪ್ರವೇಶಿಸಿದ್ದ ಶಂಕರನಾಗ್ ಅವರಿಗೆ ಉತ್ತಮ ಬ್ರೇಕ ನೀಡಿದ ಚಿತ್ರ. ಈಗಲೂ ಶಂಕರ ಅವರನ್ನು ನೆನೆದಾಗ ನೆನಪಾಗುವುದು ಈ ಗೀತೆ. “ನನ್ನ ಆಸೆ ಹಣ್ಣಾಗಿ” ಕೂಡ ಈ ಚಿತ್ರದ ಉತ್ತಮ ಯುಗಳ ಗೀತೆ.
೯) ತೇರ ಏರಿ ಅಂಬರದಾಗೆ ನೇಸರ ನಗುತಾನೆ, ಚಿತ್ರ : ಪರಸಂಗದ ಗೆಂಡೆತಿಮ್ಮ, ರಚನೆ : ದೊಡ್ಡರಂಗೇಗೌಡ, ಗಾಯನ : ಎಸ್. ಪಿ. ಬಿ
ಮೂಲತಃ ಈ ಚಿತ್ರದಲ್ಲಿ ನಿರ್ದೇಶಕರಿಗೆ ಹಾಡು ಸೇರಿಸುವ ಕಲ್ಪನೆ ಇರಲಿಲ್ಲ. ಕೊನೆ ಘಳಿಗೆಯಲ್ಲಿ ಆದ ಬದಲಾವಣೆಯಿಂದ ಸೇರ್ಪಡೆಗೊಂಡವು ಹಾಡುಗಳು. ಎಲ್ಲ ಜಾನಪದ ಶೈಲಿಯ ಗೀತೆಗಳಿರುವ ಈ ಚಿತ್ರ ರಾಜನ್-ನಾಗೇಂದ್ರ ಅವರ ವೃತ್ತಿ ಜೀವನದ ಒಂದು ಮೈಲಿಗಲ್ಲಾಯಿತು. ಅವರ ವೈವಿಧ್ಯತೆಗೆ ಸಾಕ್ಷಿಯಾಯಿತು.
೧೦) ಹೊಸ ಬಾಳಿಗೆ ನೀ ಜೊತೆಯಾದೆ, ಚಿತ್ರ : ನಾ ನಿನ್ನ ಬಿಡಲಾರೆ, ರಚನೆ : ಚಿ. ಉದಯಶಂಕರ, ಗಾಯನ : ಎಸ್. ಜಾನಕಿ , ಎಸ್. ಪಿ. ಬಿ
ಮತ್ತೊಮ್ಮೆ ಎಸ್. ಜಾನಕಿ , ಎಸ್. ಪಿ. ಬಿ-ಗಾಯನದ ಮತ್ತು ರಾಜನ್-ನಾಗೇಂದ್ರ ಸಂಗೀತದ ಮಧುರ ಗೀತೆ. ಈ ನಾಲ್ವರು ಜೋಡಿ ಕನ್ನಡದಲ್ಲಿ ನೂರಾರು ಸುಮಧುರ. ಜನಪ್ರಿಯ ಗೀತೆಗಳನ್ನು ನೀಡಿದ್ದಾರೆ. ಇವರೆಲ್ಲರನ್ನು ನೆನಯುವ ಪ್ರಯತ್ನ ಈ ಲೇಖನದಿಂದ.
