ಕಾಸರವಳ್ಳಿಯವರ ಕನಸೆಂಬ ಕುದುರೆ

Published on September 18, 2009 by govinda   ·   No Comments

ಉಮಾಶ್ರೀ ಅವರ ಗುಲಾಬಿ ಟಾಕೀಸ್ ಪಾತ್ರಕ್ಕೆ ರಾಷ್ಟ್ರ ಪ್ರಶಸ್ತಿ ಸಿಕ್ಕಿರುವುದು ಹಸಿರಾಗಿರುವಾಗಲೇ, ಕಾಸರವಳ್ಳಿ ಅವರು ಮತ್ತೊಂದು ಚಿತ್ರದ ತಯಾರಿಯನ್ನು ಮಾಡಿಕೊಂಡು ಚಿತ್ರೀಕರಣಕ್ಕೆ ಹೊರಡುತಿದ್ದಾರೆ. ಚಿತ್ರದ ಹೆಸರು “ಕನಸೆಂಬ ಕುದುರೆಯ ಬೆನ್ನೇರಿ”. ಇದು ಅಮರೇಶ ನುಗಡೋಣಿ ಅವರ “ಸವಾರಿ” ಕಥೆಯ ಅಳವಡಿಕೆ. ಚಿತ್ರದಲ್ಲಿ ಉಮಾಶ್ರೀ ಅವರಿಗೆ ಪ್ರಮುಖವಾದ ಒಂದು ಪಾತ್ರವಿದೆ. ಈ ಚಿತ್ರದಲ್ಲಿ ಎಲ್ಲರಿಗೂ ಆಶ್ಚರ್ಯವಾಗುವಂತಹ ವಿಚಾರವೆಂದರೆ, ಈ ಚಿತ್ರದ ನಾಯಕನ ಪಾತ್ರವನ್ನು ನಿರ್ವಹಿಸಲು ಕಾಸರವಳ್ಳಿ ಬಿರಾದಾರ ಅವರನ್ನು ಆಯ್ಕೆ ಮಾಡಿದರುವುದು.

ಕಾಸರವಳ್ಳಿ ಅವರ ಮಟ್ಟಿಗಂತೂ ಇದು ಆಶ್ಚರ್ಯವಾದ ವಿಚಾರವೇನಲ್ಲ. ಹಲವು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ಸರಿಯಾದ ಪಾತ್ರಗಳು ಸಿಗದಿದ್ದ ಉಮಾಶ್ರೀ ಅವರಿಗೆ ಗುಲಾಬಿ ಪಾತ್ರ ನೀಡಿದ್ದರು. ಕನ್ನಡದಲ್ಲಿ ಹಾಸ್ಯ ಕಲಾವಿದರನ್ನು ಚಿತ್ರೀಕರಿಸುವ ರೀತಿ ಬಹಳ ಕೀಳು ಮಟ್ಟದಲ್ಲಿ ಇರುತ್ತದೆ. ಹಾಸ್ಯ ಕಲಾವಿದರಾದ ಮೈಕಲ್ ಮಧು, ಬಿರಾದಾರ, ಹೊನ್ನವಳ್ಳಿ ಕೃಷ್ಣ ಅವರನ್ನು ಕೆಟ್ಟ ಅಭಿರುಚಿಯ ನಿರ್ದೇಶಕರು ಕೀಳು ಮಟ್ಟದಲ್ಲೇ ತೋರಿಸಿದರು. ಈಗ ಕಾಲ ಕೂಡಿ ಬಂದಿದೆ. ಬಿರಾದಾರ ಅವರಿಗೆ ತಮ್ಮ ಜೀವಮಾನದ ಕನಸಿನ ಪಾತ್ರವೇ ಸಿಕ್ಕಿದೆ ಎನ್ನಬಹುದು.

ವಿ. ಮನೋಹರ್ ಅವರನ್ನು ಈ ಬಾರಿ ಕಾಸರವಳ್ಳಿ ಸಂಗೀತ ನಿರ್ದೇಶಕರಾಗಿ ನೇಮಿಸಿಕೊಂಡಿದ್ದಾರೆ. ಶೇಶಾದ್ರಿ ಅವರ ಮುನ್ನುಡಿ ಚಿತ್ರದ ಹಾಡುಗಳನ್ನು ಕೇಳಿ ಮೆಚ್ಚಿ, ವಿ. ಮನೋಹರ್ ಅವರನ್ನು ಆಯ್ಕೆ ಮಾಡಿದ್ದಾರೆ. ವಿ. ಮನೋಹರ್, ಕನ್ನಡ ಚಿತ್ರ್ರಂಗ ಕಂಡ ಉತ್ತಮ ಗುಣಮಟ್ಟದ ಮತ್ತು ಕನ್ನಡಸ ಜಾನಪದ ಸೊಗಡನ್ನು ಸೂಕ್ಷ್ಮವಾಗಿ ಬಲ್ಲ ಸಂಗೀತ ನಿರ್ದೇಶಕ. ಜನುಮದ ಜೋಡಿ ಮೂಲಕ ಹೊಸ ದಾಖಲೆಯನ್ನೇ ಬರೆದವರು. ಓ ಮಲ್ಲಿಗೆ ಚಿತ್ರದ ಸರಳ ಹಾಡುಗಳಿಂದ ಮನವನ್ನು ಗೆದ್ದವರು. ದುನಿಯಾದಲ್ಲಿ ಕೂಡ ಸರಳ ಹಾಡುಗಳನ್ನು ನೀಡಿದರು. ಆದರೆ ಅದೇಕೋ ಕನ್ನಡದ ನಿರ್ಮಾಪಕ ನಿರ್ದೇಶಕರು ಮುಂಗಾರು ಮಳೆಯ ಯಶಸ್ಸಿನಿಂದ ಮನೋ ಮೂರ್ತಿ ಅವರನ್ನು ಅಪ್ಪಿಕೊಂಡ ಹಾಗೆ, ಇವರಿಗೆ ಸೂಕ್ತ ಅವಕಾಶಗಳನ್ನು ನೀಡಲೇ ಇಲ್ಲ.

ಈ ಹಿಂದೆ ನಾಯಿ ನೆರಳು ಮತ್ತು ಗುಲಾಬಿ ಟಾಕೀಸ್ ಅನ್ನು ನಿರ್ಮಾಣ ಮಾಡಿದ್ದ ಬಸಂತ್ ಕುಮಾರ್ ಪಟೇಲ್ ಅವರೇ ಈ ಚಿತ್ರವನ್ನೂ ಸಹ ನಿರ್ಮಿಸುತ್ತಿದಾರೆ. ಚಿತ್ರದಲ್ಲಿ ಗುಡೀಗೇರಿ ಬಸವರಾಜು ಅವರು ಕೂಡ ಒಂದು ಪಾತ್ರದಲ್ಲಿ ನಟಿಸುತ್ತಿದ್ದಾರೆ. ಛಾಯಾಗ್ರಹಣ ಎಚ್. ಎಮ್. ರಾಮಚಂದ್ರ ಅವರದ್ದು. ಕಾಸರವಳಿ, ಕನ್ನಡ ಕಂಡ ಉತ್ತಮ ನಿರ್ದೇಶಕರಲ್ಲೊಬ್ಬರು. ಅವರ ಚಿತ್ರದಲ್ಲಿ ನಟಿಸಿದ – ಜಯಮಾಲಾ, ಸೌಂದರ್ಯ, ಪೂಜ ಲೋಕೇಶ್, ಉಮಾಶ್ರೀ ಎಲ್ಲರೂ ರಾಜ್ಯ ರಾಷ್ತ್ಟ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಈ ಚಿತ್ರದಿಂದ ಬಿರಾದಾರ್ ಮತ್ತು ಮನೋಹರ್ ಅವರಿಗೆ ಪ್ರಶಸ್ತಿ ಬಂದರೂ ಆಶ್ಚರ್ಯವಿಲ್ಲ… ಅದನ್ನು ನೋಡಿ, “ಪತ್ರಕರ್ತ-ಸಿನಿಮಾ ಕಥೆಗಾರ” ಒಬ್ಬರು ತೆಗಳಿದರೂ ಆಶ್ಚರ್ಯವಿಲ್ಲ!

Readers Comments (0)

Comments are closed.

Author Info

Author: govinda

A film n music lover who wishes to watch the films like how others do not wish to watch.