ಇದು ಥ್ರಿಲ್ಲಿಂಗ್ ಸರ್ಕಸ್ !
Published on January 15, 2009 by admin · No Comments
ಅದೇ ಮಚ್ಚು, ಲಾಂಗು ರಕ್ತ ಸಿಕ್ತ ಕಥೆಯನ್ನು ಬಿಟ್ಟು, ಅದೇ ಅಳುಮುಂಜಿ ಅಡಗೂಲಜ್ಜಿಯ ಪುರಾಣವನ್ನು ಬದಿಗಿರಿಸಿ, ಅದೇ ಬೆಟ್ಟ, ಕಾಡು, ನದಿಗಳ ಸುತ್ತ ತಿರುಗಾಡುವ ಲವ್ ಸ್ಟೋರಿಯ ಮೊರೆಹೋಗದೆ, ಒಂದು ವಿಭಿನ್ನವಾದ ಕಥೆಯನ್ನು ಪ್ರಯೊಗಿಸುವ ಧೈರ್ಯಮಾಡಿದ್ದಕ್ಕೆ ನಿರ್ಮಾಪಕ, ನಿರ್ದೇಶಕ ದಯಾಳ್‍ಗೆ ಧನ್ಯವಾದಗಳು!
ಹುಡುಗಾಟದ ಹುಡುಗರು ಮಾಡುವ ಒಂದು ತಮಾಷೆ ನಂತರ ಹೇಗೆ ದೊಡ್ಡ ಸಮಸ್ಯೆಯಾಗುತ್ತದೆ ಮತ್ತು ಆ ಸಮಸ್ಯೆಗೆ ಕಾರಣರಾದ ಹುಡುಗರೇ ಅದನ್ನು ಹೇಗೆ ಸರಿಪಡಿಸುತ್ತಾರೆ ಎಂಬುದು ಚಿತ್ರದ ಸಾರಾಂಶ. ಸದಾ ಒಂದಿಲ್ಲೊಂದು ತಮಾಷೆ ಮಾಡಿ ಮಜಾ ತೆಗೆದುಕೊಳ್ಳುವುದು ಈ ಹುಡುಗರ ಹವ್ಯಾಸ. ಯಾರದ್ದೋ ಹೆಸರಲ್ಲಿ ಫೋನ್ ಮಾಡಿ ಕುರಿ ಮಾಡುವುದು, ಪಕ್ಕದ ಮನೆ ಅಂಕಲ್ ಬೇರೊಬ್ಬ ಆಂಟಿ ಜೊತೆ ಇರುವುದನ್ನು ಅವನ ಹೆಂಡತಿಗೆ ಪತ್ರ ಬರೆದು ತಿಳಿಸಿ ಮೋಜು ಪಡುವುದು ಇವೆಲ್ಲ ಇವರ ಹಾಬಿಗಳು! ಇಂತಹ ಹುಡುಗರು ಒಮ್ಮೆ ನ್ಯೂಸ್ ಪೇಪರ್ ನಲ್ಲಿ ಓದಿದ ಒಂದು ಸುದ್ದಿಯಿಂದ ಉತ್ಸಾಹ ಪಡೆದು ರೈಲ್ವೇ ಸ್ಟೇಷನ್ ಮಾಸ್ಟರ್‍ಗೆ ಒಂದು ಪತ್ರ ಬರೆಯುತ್ತಾರೆ! ಏನಂತ??ಅದರಿಂದ ಮುಂದೆ ಏನೆಲ್ಲಾ ಆಗುತ್ತದೆ.. ಆ ಪತ್ರ ಏನೆಲ್ಲ ಸರ್ಕಸ್ ಮಾಡಿಸುತ್ತದೆ.. ಇದೇ ಸರ್ಕಸ್ ಚಿತ್ರದ ಕಥೆ!
ಕನ್ನಡದಲ್ಲಿ ಇತ್ತೀಚಿನ ದಿನಗಳಲ್ಲಿ ಬರುತ್ತಿರುವ ಕಥೆಗೆ ಹೋಲಿಸಿದರೆ ಇದು ಭಿನ್ನ, ವಿಶಿಷ್ಟ.ಆದರೆ ಕಥೆಯನ್ನು ಇನ್ನಷ್ಟು ಉತ್ತಮವಾಗಿ ನಿರೂಪಿಸಬಹುದುತ್ತು. ಒಂದು ಹೊಸತನ ಭರಿತ ಥ್ರಿಲ್ಲಿಂಗ್ ಕಥೆಗೆ 75 ರಿಂದ 80% ನ್ಯಾಯವನ್ನು ಮಾತ್ರ ದಯಾಳ್ ಒದಗಿಸಿದ್ದಾರೆ. ಇನ್ನುಳಿದ 20-25% ನಿರೂಪಣೆಯಲ್ಲಿ ಯಾಕೋ ಸ್ವಲ್ಪ ಎಡವಿದ ಲಕ್ಷಣ ಕಂಡುಬರುತ್ತದೆ.
ಗಣೇಶ್ ಈ ಹಿಂದಿನ ಚಿತ್ರಗಳಂತೆ ಇಲ್ಲಿ ಲವರ್ ಬಾಯ್ ಅಲ್ಲ, ತ್ಯಾಗರಾಜನೂ ಅಲ್ಲ. ಇದುವರೆಗೆ ಮಾಡಿದ ಪಾತ್ರಗಳಲ್ಲಿ ಇದು ಭಿನ್ನ! ಗಣೇಶ್ ಅಭಿನಯಕ್ಕೆ ಭಾವನೆಗಳನ್ನುತೋರಿಸುವ ರೀತಿಗೆ ಎರಡು ಮಾತಿಲ್ಲ! ಫುಲ್ ಮಾರ್ಕ್ಸ್ ಕೊಡಲೇ ಬೇಕು. ನಾಯಕನ ಗೆಳೆಯರು ಪರವಾಗಿಲ್ಲ.ನಾಯಕಿಗೆ ಅಷ್ಟೇನೂ ಅವಕಾಶವಿಲ್ಲ. ಆದರೂ ಆಕೆಗೆ ಕೊಟ್ಟ ಪಾತ್ರವನ್ನು ಚೆನ್ನಾಗಿಯೇ ಮಾಡಿದ್ದಾಳೆ. ಹಾಸ್ಯ ಇನ್ನಷ್ಟು ಬೇಕಿತ್ತು.ನಗೆ ಮಾಂತ್ರಿಕ ಸಾಧು ಕೋಕಿಲ ಇದ್ದರೂ ನಗೆಯ ಕೊರತೆ ಇದೆ. ಯೋಗರಾಜ್ ಭಟ್ರು ಪೆನ್ ಹಿಡಿದಿದ್ದರೂ ಸಂಭಾಷಣೆ ಅತ್ಯುತ್ತಮ ಎಂದು ಬೀಗುವಂತಿಲ್ಲ. ಉಳಿದ ಕಲಾವಿದರೆಲ್ಲಆಟಕ್ಕುಂಟು ಲೆಕ್ಕಕ್ಕಿಲ್ಲ.
ಚಿತ್ರದ ಮೊದಲರ್ಧ ಮಂದ ನಿರೂಪಣೆಯಿಂದ ಅಲ್ಲಲ್ಲಿ ಬೋರ್ ಹೊಡೆಸುತ್ತದೆ. ಮಧ್ಯಂತರದ ವೇಳೆ ಕಥೆ ಕುತೂಹಲಕಾರೀ ತಿರುವುಪಡೆದುಕೊಳ್ಳುವ ಮೂಲಕ ಜನ ಕುರ್ಚಿಯ ತುದಿಗೆ ಬಂದು ಕೂರುವಂತೆ ಮಾಡುತ್ತದೆ. ಎರಡನೇ ಭಾಗ ಮೊದಲರ್ಧಕ್ಕಿಂತ ಉತ್ತಮ. ಕಥೆಯ ತಿರುವುಗಳು ಜನರಲ್ಲ ಥ್ರಿಲ್ ಹೆಚ್ಚಿಸುತ್ತವೆ.ಓಡುವ ರೈಲಿನ ಹೊರಭಾಗದಲ್ಲಿ ಗಣೇಶ್ ಬೋಗಿಯಿಂದ ಬೋಗಿಗೆ ಜಿಗಿಯುವ ದ್ರಷ್ಯವಂತೂ ಮೈ ನವಿರೇಳಿಸುತ್ತದೆ! ಹಿನ್ನೆಲೆ ಸಂಗೀತ ಸೂಪರ್!
ಒಟ್ಟಿನಲ್ಲಿ – ಉತ್ತಮ ಪ್ರಯತ್ನ. ವಿಭಿನ್ನ ಪ್ರಯೋಗ. ಥ್ರಿಲ್ಲಿಂಗ್ ಕಥೆ, ಉತ್ತಮ ಹಾಡುಗಳು ಚಿತ್ರದ ಹೈಲೈಟ್ಸ್. ನನ್ನ ಪ್ರಕಾರ ಗಾಳಿಪಟದ ನಂತರ ಬಂದ ಗಣೇಶ್ ಚಿತ್ರಗಳ ಪೈಕಿ ಇದು ಎಲ್ಲಕ್ಕಿಂತ ಉತ್ತಮ ಎನ್ನಬಹುದು. ಎಲ್ಲರೂ ಒಂದು ಸಲ ಧಾರಾಳವಾಗಿ ನೋಡಬಹುದು. ಗಣೇಶ್ ಅಭಿಮಾನಿಗಳು ಪದೇ ಪದೇ ನೋಡಿದರೂ ಆಶ್ಚರ್ಯವಿಲ್ಲ!
7.5/10