ಅಮೃತ ಮಹೋತ್ಸವವಲ್ಲ.. ಇದು ಹಾಲಾಹಲದ ವರ್ಷ!

Published on March 10, 2009 by admin   ·   No Comments
ಮೊನ್ನೆ ಮೊನ್ನೆ ಕನ್ನಡ ಚಿತ್ರರಂಗ 75 ವರ್ಷಗಳನ್ನು ಪೂಸೈಸಿದ್ದಕ್ಕಾಗಿ ಅತ್ಯಂತ ಸಂಭ್ರಮದಿಂದ ಅಮೃತ ಮಹೋತ್ಸವವನ್ನು ಆಚರಿಸಲಾಯಿತು. ಹಿರಿಕಿರಿಯರೆನ್ನುವ ಭೇದವಿಲ್ಲದೇ ಸಕಲರೂ ಅಲ್ಲಿ ಬಂದು ಹಾಡಿ, ಕುಣಿದು ನಲಿದಾಡಿದರು. ಶುಭಕೋರಲು ನೆರೆರಾಜ್ಯದ ನಟ ನಟಿಯರೂ ಬಂದರು! ಒಟ್ಟಿನಲ್ಲಿ ಚಿತ್ರರಂಗ ಪಟ್ಟ ಹರ್ಷಾನಂದಗಳಿಗೆ ಪಾರವೇ ಇರಲಿಲ್ಲ.ಆದರೆ ಚಿತ್ರರಂಗದ ಇಂದಿನ ಸ್ಥಿತಿಯತ್ತ ಒಮ್ಮೆ ಯೊಚಿಸಿದರೆ ಸಾಕು ಈ ಸಂಭ್ರಮ ಕಳಚಿ ಬೀಳುತ್ತದೆ….

ಏನಾಗುತ್ತಿದೆ ನಮ್ಮ ಚಿತ್ರರಂಗಕ್ಕೆ?

ಮುಂಗಾರು ಮಳೆ, ದುನಿಯಾ ಚಿತ್ರಗಳ ನಂತರ ಚಿತ್ರರಂಗ ಫೀನಿಕ್ಸ್ ನಂತೆ  ಎದ್ದು ನಿಂತಿತ್ತು. ಇದರ ಪರಿಣಾಮ ಮಿತಿಮೀರಿದ ಸಂಖೆಯಲ್ಲಿ ಚಿತ್ರಗಳು ಬರಲಾರಂಭಿಸಿವು. 100ಕ್ಕೂ ಹೆಚ್ಚು ಚಿತ್ರಗಳು ಒಂದರ ಹಿಂದಿಂದರಂತೆ ತೆರೆಕಾಣಲಾರಂಭಿಸಿದವು. ಚಿತ್ರರಂಗದ ಗಂಧಗಾಳಿಯೇ ಇಲ್ಲದವರೂ ತಾವೂ ಒಂದು ಕೈ ನೋಡಿಯೇ ಬಿಡೋಣ ಎಂದು ಚಿತ್ರ ನಿರ್ಮಾಣ, ನಿರ್ದೇಶನ, ನಟನೆಗೆ ಇಳಿದರು. ಆದರೆ ಫಲಿತಾಂಶಮಾತ್ರ ಶೂನ್ಯ!  

2008 ಬಾಣಲೆ.. 2009 ಬೆಂಕಿ ?

2008ರಲ್ಲಿ ಯಾವ ಚಿತ್ರವೂ ಅಬ್ಬಬ್ಬ ಅನ್ನುವಷ್ಟರ ಮಟ್ಟಿಗೆ ದೊಡ್ಡ ಯಶಸ್ಸನ್ನು ಕಾಣಲೇ ಇಲ್ಲ. ಬೆರಳೆಣಿಕೆಯಷ್ಟು ಚಿತ್ರಗಳು ಹಾಗೂ ಹೀಗೂ ನೂರರಗಡಿ ದಾಟಿ ಉಸ್ಸಪ್ಪ ಸಧ್ಯ ಹಾಕಿದ ಕಾಸು ಬಂತಲ್ಲ ಎಂದು ನಿಟ್ಟುಸಿರು ಬಿಡುವಷ್ಟು ಮಾತ್ರ ಯಶಸ್ಸು ಕಂಡವು. ಸುಮಾರು ಶೇಕಡಾ 90 ಚಿತ್ರಗಳು ಸೋಲುವ ಮೂಲಕ ಚಿತ್ರರಂಗಕ್ಕೆಸುಮಾರು 300ಕೋಟಿಯಷ್ಟು ನಷ್ಟವನ್ನುಂಟು ಮಾಡಿದವು!  ಹೊಸವರ್ಷದಲ್ಲಾದರೂ ಪರಿಸ್ಥಿತಿ ಸುಧಾರಿಸೀತೇನೋ ಎಂಬ ಚಿತ್ರರಂಗದ ಆಸೆ ಮಣ್ಣು ಪಾಲಾಗುತ್ತಿದೆ…. 2009ರಲ್ಲಿ ಚಿತ್ರರಂಗದ ಸ್ಥಿತಿ ಬಾಣಲೆಯಿಂದ ಬೆಂಕಿಗೆ ಬಿದ್ದ ಹಾಗಾಗಿದೆ!

ಇದಕ್ಕೆ ಕಾರಣಗಳೇನಿರಬಹುದು?

ಈ ಪ್ರಶ್ನೆಯನ್ನು ಗಾಂಧೀನಗರದ ಚಿತ್ರ ಬ್ರಹ್ಮರನ್ನು ಕೇಳಿದರೆ ಬಗೆ ಬಗೆಯ ಉತ್ತರಗಳು ಸಿಗುತ್ತವೆ..

  • ವಿಶ್ವಾದ್ಯಂತ ತಲೆದೋರಿರುವ ಆರ್ಥಿಕ ಬಿಕ್ಕಟ್ಟು ಸಾರ್. ಇದು ನಮ್ಮ ಇಂಡಸ್ಟ್ರಿ ಮೇಲೂ ಪ್ರಭಾವ ಬೀರಿದೆ… ಜನ ಊಟ ಒಂದು ಮಾಡ್ಕೊಂಡಿದ್ರೆ ಸಾಕು ಅನ್ನೋ ಸ್ಥಿತಿ ನಿರ್ಮಾಣ ಆಗಿದೆ.. ಹೀಗಿರುವಾಗ ಜನ ಚಿತ್ರಮಂದಿರದ ಕಡೆ ಹೇಗೆ ಬರ್ತಾರೆ ಹೇಳಿ?
  • ಥಿಯೇಟರ್ ಬಾಡಿಗೆ ಬೇರೆ ಜಾಸ್ತಿ ಆಯ್ತು ಸ್ವಾಮೀ.. ಮುಂಚೆ ಎಲ್ಲ 20-30 ರೂಪಾಯಿ ಇದ್ದ ಕಡೆ ಈಗ 60-70ರೂ ಆಗಿದೆ!..
  • ಮಕ್ಕಳಿಗೆ ಪರೀಕ್ಷೆ ಸಮಯ,ಯುವಕರಿಗೆ ಕ್ರಿಕೆಟ್ ಸಮಯ, ಜೊತೆಗೆ ಚುನಾವಣೆ ಬೇರೆ…
  • ಪರಭಾಷಾ ಚಿತ್ರಗಳ ಪೈಪೋಟಿ..
ಹೀಗೆ ಕಾರಣಗಳ ದೊಡ್ಡ ಪಟ್ಟಿ ಸಿಗುತ್ತಾ ಹೋಗುತ್ತದೆ… ಆದರೆ ಒಬ್ಬ ಪುಣ್ಯಾತ್ಮ ನಿರ್ಮಾಪಕ, ನಿರ್ದೇಶಕನೂ ನಾವು ಮಾಡ್ತಾ ಇರೀ ಸಿನಿಮಾದಲ್ಲೇ ಏನೋ ಕೊರತೆ ಇದೆ.. ನಮ್ಮಲ್ಲಿ ಸೃಜನ ಶೀಲತೆಯ ಕೊರತೆ ಇದೆ.. ಅನ್ನೋ ಮಾತನ್ನು ಹೇಳುವುದಿಲ್ಲ! ನಮ್ಮ ಸೋಲು ಇರುವುದೇ ಅಲ್ಲಿ.  ಸೋಲಿನ ಪರಾಮರ್ಶೆ ನಡೆಯುತ್ತದೆ..ಆದರೆ ಸೋಲಿನ ನಿಜವಾದ ಕಾರಣ ಯಾರಿಗೂ ಬೇಕಿಲ್ಲ.. ಎಲ್ಲರೂ ಬೇರೊಬ್ಬರ ತಪ್ಪಿನಿಂದ, ವ್ಯವಸ್ಥೆಯಲ್ಲಿರುವ ಲೋಪದಿಂದ ತಮ್ಮ ಚಿತ್ರ ಓಡುತ್ತಿಲ್ಲ ಎನ್ನುತ್ತಾರೆಯೇ ಹೊರತು ತಾವು ಮಾಡಿದ ಚಿತ್ರದಲ್ಲಿರುವ ಕೊರತೆಯ ಬಗ್ಗೆ ಹೆಚ್ಚು ಗಮನ ಹರಿಸುವುದಿಲ್ಲ….

ಮೇಲೆ ಹೇಳಿದ ಎಲ್ಲ ಅಂಶಗಳೂ ಈ ಸೋಲಿಗೆ ಸ್ವಲ್ಪ ಮಟ್ಟಿಗೆ ಕಾರಣಗಳಿರಬಹುದು. ಆದರೆ ಅದೆಲ್ಲಕ್ಕಿಂತ ದೂಡ್ಡ ಕಾರಣಇಂದಿನ ನಮ್ಮ ಚಿತ್ರಗಳು ಜನರನ್ನು ಆಕರ್ಷಿಸಲು ವಿಫಲವಾಗುತ್ತಿರುವುದು!

ಆರ್ಥಿಕ ಮುಗ್ಗಟ್ಟು, ಹೆಚ್ಚಿದ ಥಿಯೇಟರ್ ಬಾಡಿಗೆಗಳೇಮುಖ್ಯ ಕಾರಣಗಳಾಗಿದ್ದರೆ ಅದು ಎಲ್ಲಾ ಭಾಷಾ ಚಿತ್ರಗಳನ್ನೂ ಕಾಡಬೇಕಿತ್ತು? ತೆಲುಗು ಚಿತ್ರ ಅರುಂಧತಿ 7 ವಾರಗಳಿಂದ ಸುಮಾರು 8-9 ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ನಮ್ಮ ಕನ್ನಡ ಚಿತ್ರಗಳು ಒಂದು ವಾರ ಓಡಲೂ ಹೆಣಗಾಡುವ ಉತ್ತರಹಳ್ಳಿಯ ವೈಭವಿ ಚಿತ್ರಮಂದಿರದಲೂ ಈ ಚಿತ್ರ ಸತತ 7ವಾರ ಓಡುತ್ತದೆ. ತಮಿಳು ಚಿತ್ರಗಳೂ ಇದಕ್ಕೆ ಹೊರತಾಗಿಲ್ಲ. ಹಾಗಾದರೆ ಆ ಚಿತ್ರಗಳಿಗಿಲ್ಲದ ಆರ್ಥಿಕ ಮುಗ್ಗಟ್ಟು ನಮಗ್ಯಾಕೆ ಸ್ವಾಮಿ?

ಅಮೃತ ಮಹೋತ್ಸವದ ವರ್ಷವಲ್ಲ… ಇದು ಹಾಲಾಹಲದ ವರ್ಷ!
2009 ಬಂದು ಆಗಿದ್ದು ಎರಡೂವರೆ ತಿಂಗಳು ಮಾತ್ರ. ಆದರೆ ಆಗಲೇ 33 ಚಿತ್ರಗಳು ತೆರೆಕಂಡಿವೆ! ಈ 33ರಲ್ಲಿ ಯಾವ ಚಿತ್ರವೂ ಸೂಪರ್ ಹಿಟ್ ಅಲ್ಲ! ಕೇವಲ ಎರಡು ಚಿತ್ರಗಳ ಸಾಧಾರಣ ಮಟ್ಟದ ಯಶಸ್ಸನ್ನು ಬಿಟ್ಟರೆ ಮಿಕ್ಕೆಲ್ಲ ಚಿತ್ರಗಳ ಪರಿಸ್ಥಿತಿ ಶೋಚನೀಯ! ಭಾರೀ ನಿರೀಕ್ಷೆಯ ಚಿತ್ರಗಳೆಲ್ಲ ಎರಡರಿಂದ ಮೂರು ವಾರಗಳಲ್ಲೇ ಎತ್ತಂಗಡಿಯಾಗುತ್ತಿವೆ!

  • ದಯಾಳ್ ತಮ್ಮ ಜೀವನದ ಮಹತ್ವಾಕಾಂಕ್ಷೆಯ ಚಿತ್ರ ಎಂದೇ ಬಿಂಬಿಸಿದ್ದ ಸರ್ಕಸ್ ಓಡಿದ್ದು ಮೂರೇ ಮೂರು ವಾರ !
  • ಸುಮಾರು ನಾಲ್ಕು ನೂರು ದಿನಗಳ ನಂತರ ತೆರೆಕಂಡ ಡಾ.ವಿಷ್ಣುವರ್ಧನ್ ಅಭಿನಯದ ಚಿತ್ರ ನಂ ಯಜಮಾನ್ರು ನಾಲ್ಕು ವಾರವೂ ಒಡಲಾಗದೇ ಕೇವಲ ಎರಡೇ ಎರಡು ವಾರದಲ್ಲಿ ಚಿತ್ರಮಂದಿರದಿಂದ ಹೊರನಡೆಯುತ್ತಿದೆ!ಇದಕ್ಕಿಂತ ದೌರ್ಭಾಗ್ಯ ಬೇಕೆ?
  • ಬಿಡುಗಡೆಗೂ ಮುನ್ನ ನಿರೀಕ್ಷೆ ಮೂಡಿಸಿದ್ದ ಬಿರುಗಾಳಿ ಠುಸ್ ಎಂದಿದೆ.
    ವೆಂಕಟನ ಸಂಕಟ ಕೇಳುವವರೇ ಇಲ್ಲ. ಗುಲಾಮ ಲಗಾಮು ಹೊಡೆದು ಯಾವುದೋ ಕಾಲವಾಯ್ತು. ಉಳಿದ
    ಕೆಲವು ಚಿತ್ರಗಳು ಯಾವಾಗ ಬಂದವೋ ಯಾವಾಗ ಹೋದವೋ ದೇವರೇ ಬಲ್ಲ!
ಅಲ್ಲಿಗೆ 2009ರ ಆರಂಭದಲ್ಲೇ ಚಿತ್ರರಂಗದಲ್ಲಿ ನಡುಕ
ಶುರುವಾಗಿದೆ. ಈಗಾಗಲೇ ಹಲವಾರು ನಿರ್ಮಾಪಕರು ಚಿತ್ರರಂಗದ ಸಹವಾಸವೇಬೇಡ ಎಂದು ಬೇರೆ
ದಾರಿ ಹುಡುಕಿಕೊಳ್ಳುತ್ತಿದ್ದಾರೆ. ಉಳಿದವರು ರೀಮೇಕ್ ಮೊರೆ ಹೋಗುತ್ತಿದ್ದಾರೆ. ಈಗಾಗಲೇ ತಮಿಳು, ತೆಲುಗು, ಹಿಂದಿಯ ಹೆಚ್ಚಿನ ಎಲ್ಲಾ ಹಿಟ್ ಚಿತ್ರಗಳನ್ನೂ ರೀಮೇಕ್ ಮಾಡಲು ಹೊರಟಿದ್ದಾರೆ.. ಸುದೀಪ್, ಪುನೀತ್, ಗಣೇಶ್, ದರ್ಶನ್, ಉಪೇಂದ್ರ, ಪ್ರೇಂ ಎಲ್ಲರೂ ರೀಮೇಕ್ ದಾರಿ ಹಿಡಿದಿದ್ದಾರೆ.
ಇದು ಹೀಗೆಯೇ ಮುಂದುವರಿದರೆ ಕನ್ನಡ ಚಿತ್ರರಂಗ
ಇತಿಹಾಸದ ಪುಟಗಳನ್ನು ಸೇರುವ ದಿನ ದೂರವಿದ್ದಂತೆ ಕಾಣಿತ್ತಿಲ್ಲ.
ಅಮೃತ ಮಹೋತ್ಸವದ ವರ್ಷವೇ ಚಿತ್ರರಂಗದ ಪಾಲಿಗೆ ಹಾಲಾಹಲದ ವರ್ಷವಾಗಿರುವುದು ಖೇದಕರ!

 

Readers Comments (0)




Please note: Comment moderation is enabled and may delay your comment. There is no need to resubmit your comment.

Author Info