ಹೊಸ ಬಿಡುಗಡೆಗಳು:
* ಆಕಾಶಗಂಗೆ :- ಸುಮಾರು ಎರಡು ವರ್ಷಗಳಿಂದ ಕಾಯುತ್ತಿದ್ದ ದಿನೇಶ್ ಬಾಬೂ ನಿರ್ದೇಶನದ "ಆಕಾಶ ಗಂಗೆ" ಈ ವಾರ ಬಿಡುಗಡೆಯ ಭಾಗ್ಯ ಒದಗಿ ಬಂದಿದೆ. ಕೆಂಪೇಗೌಡ ರಸ್ತೆಯ "ತ್ರಿಭುವನ್" ಸೇರಿದಂತೆ ರಾಜ್ಯಾದ್ಯಂತ ಜೂನ್ 13 ರಂದು ತೆರೆ ಕಾಣಲಿದೆ. ಮಿಥುನ್ ತೇಜಸ್ವಿ, ಛಾಯಾ ಸಿಂಗ್, ಸ್ಮಿತಾ, ಜಯಂತಿ, ಕೋಮಲ್ ನಟನೆಯ ಈ ಚಿತ್ರಕ್ಕೆ ದೇವಾರವರ ಸಂಗೀತವಿದೆ. ಈಗಾಗಲೇ ಚಿತ್ರದ ಹಾಡುಗಳು ಜನಪ್ರಿಯವಾಗಿದ್ದು ಅಮೃತ ವರ್ಷಿಣಿಯ ನಂತರ ಮತ್ತೊಮ್ಮೆ ಬಾಬು-ದೇವ-ಕೆ.ಕಲ್ಯಾಣ್ ಜೋಡಿ ಒಂದಾಗಿದೆ. ಹಾಗಾಗಿ ವರ್ಷಿಣಿಯ ಮೋಡಿ ಮತ್ತೆ ಆಗುತ್ತದೆಯೋ ಕಾದು ನೋಡಬೇಕು.
* ಚನ್ನ : ಈ ವಾರ ತೆರೆಕಾಣಲಿರುವ ಮತ್ತೊಂದು ಚಿತ್ರ ದೀಪಕ್ ನಟನೆಯ ಚನ್ನ. ಕರ್ನಾಟಕದ ಅತೀ ದೊಡ್ಡ ಚಿತ್ರಮಂದಿರ "ಕಪಾಲಿ"ಯಲ್ಲಿ ತೆರೆ ಕಾಣುತ್ತಿರುವ ಈ ಚಿತ್ರದ ನಿರ್ದೇಶಕರು ಸಿ. ಸಂಪತ್ ಕುಮಾರ್. ಚಂದ್ರೋದಯ(ವಿದ್ಯಾಪೀಠ ಸರ್ಕಲ್), ಅಂಜನ್(ಮಾಗಡಿ ರಸ್ತೆ), ಮುರಳಿ (ಗೋಕುಲ) ಮುಂತಾದ ಕನ್ನಡೇತರ ಚಿತ್ರಮಂದಿರಗಳಲ್ಲಿ ಕೂಡ ಈ ಚಿತ್ರ ಬಿಡುಗಡೆಯಾಗುತ್ತಿರುವುದು ಸಂತಸದ ವಿಷಯ.
* ದರೋಡೆ : ಉದಯ್ ಜಾದೂಗಾರ್ ಮೊಟ್ಟ ಮೊದಲ ಬಾರಿಗೆ ಕಥೆ ಚಿತ್ರ ಕಥೆ ಬರೆದು ನಿರ್ದೇಶಿಸಿರುವ ದರೋಡೆ ಚಿತ್ರ "ಕೈಲಾಶ್" ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತಿದೆ. ಆದರೆ ಚಿತ್ರ ಮಂದಿರದ ಅಭಾವದಿಂದ ಮತ್ತು ಮೊದಲೇ ಮಾಡಿಕೊಂಡಿರುವ ಒಪ್ಪಂದಗಳ ಪ್ರಕಾರ ಇದು ಕೇವಲ ಒಂದು ವಾರ ಮಾತ್ರ ಮಾತ್ರ ಕೈಲಾಷ್‍ನಲ್ಲಿ ಪ್ರದರ್ಶನಗೊಳ್ಳಲಿದೆಯೆಂದು ಚಿತ್ರದ ಜಾಹೀರಾತು ಹೇಳುತ್ತದೆ. ಸುವರ್ಣ ಟಿವಿಯ ನಿರೂಪಕನಾಗಿದ್ದ ವಿನೋದ್ ಚಿತ್ರದ ನಾಯಕ. ಕಳೆದ ವಾರವಷ್ಟೇ ತೆರೆ ಕಂಡಿದ್ದ ನೀನೇ ನೀನೇ ಚಿತ್ರದ ನಾಯಕಿ ಐಶ್ವರ್ಯಾ ನಾಗ್ ಈ ಚಿತ್ರಕ್ಕೂ ನಾಯಕಿ.
ಕಮಲ್ ಹಾಸನ್ ನಟನೆಯ ಹಿಂದೆ-ತಮಿಳು ಚಿತ್ರ ದಶಾವತಾರಂ ಈ ವಾರ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗುತ್ತಿದ್ದು ಕನ್ನಡ ಚಿತ್ರಗಳಿಗೆ ಪೈಪೋಟಿ ನೀಡುವ ಸಂಭವವಿದೆ.
ಮುಂದುವರಿದ ಪ್ರದರ್ಶನ *
ಈ ವಾರ ೫೦ ದಿನಗಳನ್ನು ಪೂರೈಸಲಿರುವ ಅರಮನೆಗೆ ಸಂತೋಷ್‍ನಲ್ಲಿ ಇದು ಕಡೆಯ ವಾರ. ಮುಂದಿನ ವಾರ (ಜೂನ್ ೨೦) ಇಲ್ಲಿಗೆ ಕಾಮಣ್ಣನ ಮಕ್ಕಳು ಬರಲಿದ್ದಾರೆ.
* ಮುಸ್ಸಂಜೆ ಮಾತು ೫ ನೇ ವಾರಕ್ಕೆ (ತ್ರಿವೇಣಿ), ಬಂಧು ಬಳಗ ೨ನೇ ವಾರಕ್ಕೆ (ಅಪರ್ಣಾ), ನೀನೇ ನೀನೇ ಎರಡನೇ ವಾರಕ್ಕೆ (ನರ್ತಕಿ) ಭಡ್ತಿ ಪಡೆದಿವೆ.