ದೇವರಲ್ಲಿ ನಂಬಿಕೆಯಿಲ್ಲದ ನಾಯಕ. ಆತನಿಗೆ ದೈವ ಭಕ್ತ ತಾಯಿ ಮತ್ತು ಹೆಂಡತಿ. ನಾಯಕನಿಗೆ ಆಗದವರಿಬ್ಬರಿಂದ ಅವನ ಪುಟ್ಟ ಮಗಳ ಮೇಲೆ ಮಾಟ ಮಂತ್ರ ಪ್ರಯೋಗ! ಇದರಿಂದ ಆ ಹುಡುಗಿಯ ಚಿತ್ರ ವಿಚಿತ್ರ ನಡವಳಿಕೆ. ಗಂಡಸರ ದ್ವನಿಯಲ್ಲಿ ಕೂಗಾಟ, ಗಾಳಿಯಲ್ಲಿ ಹಾರಾಟ! ಡಾಕ್ಟರ್‍ಗಳಿಂದ ಸಮಸ್ಯೆ ಬಗೆಹರಿಯದಾಗ ಮಾಟ ಬಿಡಿಸುವ ಮಂತ್ರವಾದಿಯ ಮೊರೆ. ಆತನಿಂದ ಸಮಸ್ಯೆ ನಿವಾರಣೆ. ಇದು ನಮ್ಮ ಸುದೀಪ್ ನಟಿಸಿರುವ ಫೂಂಕ್ ಚಿತ್ರದ ಕಥಾ ಸಾರಾಂಶ!
ನಾಸ್ತಿಕ ಸಿವಿಲ್ ಎಂಜಿನಿಯರ್ ಪಾತ್ರದಲ್ಲಿ ಸುದೀಪ್ ಅಭಿನಯ ಸೂಪರ್. ಸುದೀಪ್ ಮಗಳಾಗಿ ಎಹ್ಸಾಸ್ ಚನ್ನಾ ಅಭಿನಯ ಮತ್ತೂ ಸೂಪರ್. ಆದರೆ ಸುದೀಪ್ ಈ ರೀತಿಯ ಮೂಢನಂಬಿಕೆಯ ಚಿತ್ರದಲ್ಲಿ ನಟಿಸಲು ಒಪ್ಪಿದ್ದು ಸರಿಯಾದ ಆಯ್ಕೆ ಅನ್ನಿಸುವುದಿಲ್ಲ. ಕ್ಲೈಮ್ಯಾಕ್ಸ್ ನಲ್ಲಿ ಭಾನಾಮತಿಯ ಶಕ್ತಿ ಸುದೀಪ್‍ನನ್ನು ಗಾಳಿಯಲ್ಲಿ ಹಾರಿಸಿ ಗೋಡೆಗೆ ಅಪ್ಪಳಿಸಿ ಕೆಳಗೆ ಬೀಳಿಸುವಾಗ, ಕನ್ನಡದ ರಫ್ ಅಂಡ್ ಸ್ಟಫ್ ಕಿಚ್ಚ ಈ ರೀತಿಯ ಅಸಹಾಯಕ ಪಾತ್ರ ಮಾಡಬೇಕಾಗಿತ್ತಾ ಅನಿಸುತ್ತದೆ. ಅಸಲಿಗೆ ರಾಂ ಗೋಪಾಲ್ ವರ್ಮಾರ "ಭಯಾನಕ" ಚಿತ್ರ ಫೂಂಕ್‌ನಲ್ಲಿ ಭಯವೇ ಆಗುವುದಿಲ್ಲ. ಬದಲಿಗೆ ಕೆಲವೊಂದು ಕಡೆ ನಗೆ ಬರುತ್ತದೆ. ಕೆಲವೊಂದು ಕಡೆ ಮೂಢನಂಬಿಕೆಯ ಪರಮಾವಧಿ ಎನ್ನಿಸುತ್ತದೆ.
ನಾಸ್ತಿಕ ನಾಯಕನಿಗೆ ಮಂತ್ರವಾದಿ ಕೇಳುವ ಪ್ರಶ್ನೆ – "ನಿನಗೆ ಜ್ವರ ಬಂದರೆ ಏನು ಮಾಡ್ತೀಯಾ?" ನಾಯಕ – "ಕ್ರೋಸಿನ್ ತೆಗೆದುಕೊಳ್ಳುತ್ತೇನೆ". ಮಂತ್ರವಾದಿ – "ಯಾಕೆ?" ನಾಯಕ – "ಕ್ರೋಸಿನ್ ತೆಗೆದುಕೊಂಡರೆ ಜ್ವರ ಹೋಗುತ್ತದೆ ಎಂಬ ನಂಬಿಕೆಯಿಂದ". ಮಂತ್ರವಾದಿ – "ಕ್ರೋಸಿನ್‍ನನ್ನು ಹೇಗೆ ನಂಬುತ್ತೆತ್ತೀಯೋ ಹಾಗೆಯೇ ದೇವರನ್ನೂ ಕೂಡ ನಂಬು."! ಇದು ನಾಸ್ತಿಕತೆ ಆಸ್ತಿಕತೆಗಳ ನಡುವೆ ರಾಂ ಗೋಪಾಲ್ ವರ್ಮಾ ಕಂಡುಕೊಂಡ ಸಾಮ್ಯತೆ!
ಚಿತ್ರದ ಹಿನ್ನೆಲೆ ಸಂಗೀತ ಹಾರರ್ ಚಿತ್ರಕ್ಕೆ ಅನುಕೂಲವಾಗುವಂತೆ ಚೆನ್ನಾಗಿಯೇನೋ ಬಂದಿದೆ. ಆದರೆ ಈ ಚಿತ್ರದ ಮೂಲಕ ರಾಂ ಗೋಪಾಲ್ ವರ್ಮಾ ಇಲ್ಲಿ ಏನು ಹೇಳಲು ಹೊತಟಿದ್ದಾರೋ ಗೊತ್ತಾಗ್ತಾ ಇಲ್ಲ. ಮಾಟ ಮಂತ್ರ, BLACK MAGIC ನಂತಹ ಮೂಢನಂಬಿಕೆಗಳನ್ನು ನಂಬಬೇಕು ಎಂಬುದನ್ನು ಚಿತ್ರ ಸಾರಿದಂತಿದೆ.ಇದು ಇಂದಿನ ಪ್ರಜ್ಞಾವಂತ ಸಮಾಜಕ್ಕೆ ಎಷ್ಟರ ಮಟ್ಟಿಗೆ ಹಿಡಿಸುವುದೋ ಕಾದು ನೊಡಬೇಕು.