ಗಂಧದಗುಡಿ ಫ್ಲ್ಯಾಶ್ ಬ್ಯಾಕ್ 6 : ರಂಗನಾಯಕಿ
Published on November 24, 2008 by Akumar · No Comments
"ಹಳೆ ಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು" ಎಂಬ ಮಾತು ಕನ್ನಡಚಿತ್ರರಂಗದ ಮಟ್ಟಿಗೆ ಅಕ್ಷರಷಃ ನಿಜ. "ಸತೀ ಸುಲೋಚನಾ" ಟಾಕಿ ಚಿತ್ರದಿಂದ ಆರಂಭಗೊಂಡ ಯಾತ್ರೆ ಇಂದಿನವರೆಗೂ ನಿರಾತಂಕವಾಗಿ ಸಾಗಿದೆ. ಬದಲಾದ ಕಾಲಕ್ಕೆ ತಕ್ಕಂತೆ ಹೊಸ ಆಯಾಮಗಳನ್ನು, ಹೊಸತನಗಳನ್ನು ಮೈಗೂಡಿಸಿಕೊಂಡು ನಳನಳಿಸುತ್ತಿರುವ ಕನ್ನಡ ಚಿತ್ರರಂಗದ ಇತಿಹಾಸದ ಪುಟಗಳು ಕೂಡ ಅಷ್ಟೇ ಶ್ರೀಮಂತವಾಗಿವೆ. ಕನ್ನಡ ಚಿತ್ರರಂಗ ಸಾಗಿ ಬಂದ ಹಾದಿಯಲ್ಲಿ ಅದೆಷ್ಟೋ ಚಿತ್ರಗಳು ಮೈಲಿಗಲ್ಲುಗಳಾಗಿವೆ. ಜನ ಮಾನಸದಲ್ಲಿ ಇಂದಿಗೂ ಹಸಿರಾಗಿರುವ ಹಲವಾರು ಚಿತ್ರರತ್ನಗಳಿವೆ. ಅವುಗಳಲ್ಲಿ ಕೆಲವು ಅನರ್ಘ್ಯ ರತ್ನಗಳತ್ತ ಮತ್ತೊಮ್ಮೆ ಅವಲೋಕಿಸುವ ಕಿರು ಪ್ರಯತ್ನವೇ ಈ "ಗಂಧದಗುಡಿ ಫ್ಲಾಶ್ ಬ್ಯಾಕ್". ಪ್ರತೀ ಬಾರಿಯೂ ಒಂದೊಂದು ಮರೆಯಲಾಗದ ಚಿತ್ರದ ಬಗ್ಗೆ ಮಾತಾಡೋಣ.
ಇಂದಿನ ಚಿತ್ರ – "ರಂಗ ನಾಯಕಿ"
ಕಿರು ಮಾಹಿತಿ:
- ಚಿತ್ರ ನಿರ್ಮಾಣ ಸಂಸ್ಥೆ:ಮಂಗಳಾ ಮೂವೀಸ್
- ಬಿಡುಗಡೆಯಾದ ವರ್ಷ: 1981
- ಪಾತ್ರವರ್ಗ: ಆರತಿ, ಅಶೋಕ್, ಅಂಬರೀಶ್, ರಾಮಕೃಷ್ಣ, ರಾಜಾನಂದ್
- ಸಂಗೀತ: ಎಂ.ರಂಗರಾವ್
- ಮೂಲ ಕಥೆ: ಅಶ್ವತ್ಥ
- ಗೀತ ಸಾಹಿತ್ಯ:ಕಣಗಾಲ್ ಪ್ರಭಾಕರ ಶಾಸ್ತ್ರಿ, ಎಂ.ಎನ್.ವ್ಯಾಸರಾವ್, ದೊಡ್ಡರಂಗೇ ಗೌಡ
- ಹಿನ್ನೆಲೆ ಗಾಯಕರು: ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ, ಎಸ್.ಪಿ.ಶೈಲಜಾ, ಪಿ.ಜಯಚಂದ್ರನ್
- ನಿರ್ಮಾಪಕ:ತಿಮ್ಮಣ್ಣ ಬಿ.
- ನಿರ್ದೇಶಕ:ಪುಟ್ಟಣ್ಣ ಕಣಗಾಲ್
ಆರತಿ ಕನ್ನಡ ಚಿತ್ರರಂಗ ಕಂಡ ಅತ್ಯದ್ಭುತ ನಟಿ. ಆರತಿ ಎಂದೊಡನೆ ಥಟ್ಟನೆ ನೆನಪಿಗೆ ಬರುವ ಚಿತ್ರ"ರಂಗ ನಾಯಕಿ". ಆರತಿಯವರಿಗಾಗಿಯೇ ಈ ಪಾತ್ರ ಸೃಷ್ಟಿಯಾಯಿತೋ, ಅಥವಾ ಈ ಪಾತ್ರಕ್ಕಾಗಿಯೇ ಆರತಿ ಜನ್ಮಿಸಿದರೋ ಎಂದರೆ ಅತಿಶಯೋಕ್ತಿಯಾಗಲಾರದು. ಆ ಮಟ್ಟದಲ್ಲಿ ಆರತಿ ರಂಗನಾಯಕಿಯ ಪಾತ್ರಕ್ಕೆ ಜೀವ ತುಂಬಿದ್ದಾರೆ. ನನ್ನ ಪ್ರಕಾರ ಇದು ಪುಟ್ಟಣ್ಣ ಕಣಗಾಲ್ – ಆರತಿಯವರ ಕಾಂಬಿನೇಷನ್‍ನಲ್ಲಿ ಬಂದ ಅತ್ಯುತ್ತಮ ಚಿತ್ರ.
ರಂಗನಾಯಕಿ ಚಿತ್ರದ ಕಥೆ ಮನೋಜ್ಞವಾಗಿದೆ. ಕನ್ನಡದ ಖ್ಯಾತ ಕಾದಂಬರಿಕಾರರಲ್ಲಿ ಒಬ್ಬರಾದ ಅಶ್ವತ್ಥರ "ರಂಗನಾಯಕಿ" ಕಾದಂಬರಿಯನ್ನಾಧರಿಸಿ ಪುಟ್ಟಣ್ಣ ಈ ಚಿತ್ರವನ್ನು ದಿಗ್ದರ್ಶಿಸಿದ್ದಾರೆ.
ಹೆಸರೇ ಹೇಳುವಂತೆ ಚಿತ್ರದಲ್ಲಿ ಆರತಿಯವರದ್ದು ರಂಗ ಕಲಾವಿದೆಯ ಪಾತ್ರ. ಪೌರಾಣಿಕ, ಸಾಮಾಜಿಕ, ಐತಿಹಾಸಿಕ ಯಾವುದೇ ಪಾತ್ರವಾದರೂ ಸರಿ ರಂಗು ಪಾತ್ರಮಾಡುತ್ತಾಳೆಂದರೆ ಜನ ಕಿಕ್ಕಿರುದು ಸೇರುವುದು ಗ್ಯಾರಂಟಿ. ಶ್ರೀಮಂತನೊಬ್ಬ ಈಕೆಯ ಸೌಂದರ್ಯಕ್ಕೆ ಮಾರುಹೋಗಿ ಮದುವೆಯಾಗುತ್ತಾನೆ. ಒಬ್ಬ ಮುದ್ದಾದ ಮಗನೂ ಹುಟ್ಟುತ್ತಾನೆ. ರಂಗುವಿನ ಗಂಡ ಆಕೆಯ ಸೌಂದರ್ಯವನ್ನು ಮೆಚ್ಚಿದ್ದನೇ ಹೊರತು ಆಕೆಯಲ್ಲಿರುವ ಅಧ್ಭುತ ಕಲಾವಿದೆಯನ್ನಲ್ಲ. ತನ್ನ ಪತ್ನಿ ನಾಟಕಗಳಲ್ಲಿ ನಟಿಸುವುದು ಸಮಾಜದಲ್ಲಿ 'ಪ್ರತಿಷ್ಠಿತ' ಸ್ಥಾನದಲ್ಲಿರುವ ತನಗೆ ಅವಮಾನಕಾರಿ ವಿಚಾರ ಎಂದು ಭಾವಿಸುತ್ತಾನೆ. ರಂಗಭೂಮಿಯತ್ತ ಆಕೆ ಮತ್ತೆಂದೂ ಮುಖ ಹಾಕಬಾರದೆಂದು ತಾಕೀತು ಮಾಡುತ್ತಾನೆ. ಕಲೆಯನ್ನು ಆರಾಧಿಸುವ ರಂಗುವನ್ನು ಕಲೆಯ ಗಂಧಗಾಳಿಯೂ ಗೊತ್ತಿದರ ಆಕೆಯ ಗಂಡ ಅಕ್ಷರಷಃ ಪಂಜರದ ಗಿಳಿಯನ್ನಾಗಿಸಲು ಯತ್ನಿಸುತ್ತಾನೆ. ಆದರೆ ಆಕೆ ಮಾಡುತ್ತಿದ್ದ ನಟನಾ ವೃತ್ತಿ ಮದುವೆಯ ನಂತರವೂ ರಂಗಭೂಮಿಯ ಸೆಳೆತದಿಂದ ಸಂಪೂರ್ಣ ಹೊರಬರಲು ಆಗುವುದಿಲ್ಲ. ಕೆಲವೊಂದು ಅನಿವಾರ್ಯ ಪರಿಸ್ಥಿತಿಗಳಲ್ಲಿ ಆಕೆ ಮತ್ತೆ ಬಣ್ಣ ಹಚ್ಚಬೇಕಾಗುತ್ತದೆ. ಇದನ್ನು ತಿಳಿದ ರಂಗುವಿನ ಗಂಡ ಆಕೆಯನ್ನು ತೀವ್ರವಾಗಿ ಅವಮಾನಿಸುತ್ತಾನೆ. ಅಲ್ಲದೇ ರಂಗಭೂಮಿಯಲ್ಲಿ ನಟಿಸುವ ಆಕೆಯನ್ನು ವೇಶ್ಯೆಗೆ ಹೋಲಿಸುತ್ತಾನೆ. ಕಲೆಯನ್ನು ಆರಾಧಸಲು ಆಗದಿದ್ದರೂ ಸರಿ, ಅವಮಾನಿಸಬೇಡಿ, ತನಗೂ ಸ್ವಲ್ಪ ಸ್ವಾತಂತ್ರ್ಯ ಕೊಡಿ ಎಂದು ರಂಗು ಬೇಡಿಕೊಳ್ಳುತ್ತಾಳೆ. ಆದರೆ ಇದಾವುದನ್ನೂ ತಿಳಿದುಕೊಳ್ಳುವ ಮನಸ್ಥಿತಿಯಲ್ಲಿರದ ಆಕೆಯ ಪತಿರಾಯ ರಾತ್ರೋ ರಾತ್ರಿ ಪುಟ್ಟ ಮಗುವನ್ನು ಕರೆದುಕೊಂಡು ರಂಗುವಿನಿಂದ ದೂರ ಹೋಗುತ್ತಾನೆ. ಒಂದರ್ಥದಲ್ಲಿ ರಂಗುವಿಗೆ ಸಂಪೂರ್ಣ "ಸ್ವಾತಂತ್ರ್ಯ"ವನ್ನು ನೀಡುತ್ತಾನೆ.
ಗಂಡ, ಮಗನಿಂದ ದೂರವಾಗಿ ನೊಂದಿದ್ದ ರಂಗನಾಯಕಿ ಮತ್ತೆ ಬಣ್ಣ ಹಚ್ಚುತ್ತಾಳೆ. ಅವಳಲ್ಲಿದ್ದ ಅಗಾಧ ಪ್ರತಿಭೆ ಆಕೆಗೆ ಚಲನಚಿತ್ರ ರಂಗದಲ್ಲೂ ಅವಕಾಶವನ್ನು ತಂದುಕೊಡುತ್ತದೆ. ರಂಗ ಭೂಮಿಯ ನಟಿ ರಂಗನಾಯಕಿ ಚಿತ್ರರಂಗದಲ್ಲಿ ಮಾಲಾ ಎಂಬ ಹೆಸರಿನಿಂದ ಮಹಾನ್ ನಟಿಯಾಗುತ್ತಾಳೆ. ಶ್ರೀಧರ್ ಎಂಬ ಸಹ ನಟನೊಬ್ಬ ಆಕೆಯ ಬಗ್ಗೆ ಕೇವಲವಾಗಿ ಮಾತಾಡಿದ್ದಕ್ಕೆ ಅವನನ್ನು ಮಾಲಾ ಚೆನ್ನಾಗಿ ಬಯ್ಯುತ್ತಾಳೆ. ಶೇಖರ್ ಎಂಬ ಶ್ರೀಧರ್ ಅಭಿಮಾನಿ ಯುವಕನೊಬ್ಬ ಮಾಲಾಳಿಗೆ ಆಸಿಡ್ ಎರಚಿ ಬುದ್ಧಿ ಕಲಿಸುವುದಾಗಿ ಬೆದರಿಸುತ್ತಾನೆ. ಆ ಕಾರಣಕ್ಕೆ ಮಾಲಾಳ ಮನೆಗೂ ಹೋಗುತ್ತಾನೆ. ಮಾಲಾಳ ಅಣ್ಣ ರಂಗಣ್ಣನಿಂದ ಪೆಟ್ಟೂ ತಿನ್ನುತ್ತಾನೆ. ಅವನನ್ನು ಮಾಲಾಳೇ ಬಚಾವು ಮಾಡಿ ಸಮಾಧಾನ ಪಡಿಸುತ್ತಾಳೆ. ಕ್ರಮೇಣ ಆ ಹುಡುಗ ಮಾಲಾಳನ್ನು ತುಂಬಾ ಹಚ್ಚಿಕೊಳ್ಳುತ್ತಾನೆ. ವಯಸ್ಸಿನಲ್ಲಿ ತನಗಿಂತಲೂ ತುಂಬಾ ದೊಡ್ಡವಳಾಗಿರುವ ಮಾಲಾಳನ್ನು ಒಳಗೊಳಗೇ ಪ್ರೇಮಿಸತೊಡಗುತ್ತಾನೆ!.
ಮಾಲಾಳಿಂದ ಅವಮಾನಿತನಾಗಿದ್ದ ಶ್ರೀಧರ್ ಆಕೆಯ ಮೇಲಿನ ಸೇಡಿಗಾಗಿ ಆಕೆಗೆ ಚಿತ್ರರಂಗದಲ್ಲಿ ಅವಕಾಶಗಳು ಸಿಗದಂತೆ ಸಂಚು ಮಾಡುತ್ತಾನೆ. ತನ್ನ ತಂದೆಯ ಸ್ಮಾರಕ ಭವನವನ್ನು ಕಟ್ಟಿಸಲು ಹಣದ ಅವಶ್ಯಕತೆಯಲ್ಲಿದ್ದ ಮಾಲಾ ರಂಗನಾಯಕಿಯಾಗಿ ಮತ್ತೆ ರಂಗಭೂಮಿಗೆ ಮರಳಲು ನಿಸ್ಚಯಿಸುತ್ತಾಳೆ. ಮುದಿವಯಸ್ಸಿನ ಗಂಡನಿಂದ ಬೇಸರಗೊಂಡ ಮಲತಾಯಿಯೊಬ್ಬಳು ತನ್ನ ಮಲ ಮಗನನ್ನೇ ಕಾಮಿಸುವ ಕಥೆಯುಳ್ಳ "ಸಾರಂಗಧರ" ಎಂಬ ನಾಟಕವನ್ನಾಡಲು ನಿರ್ಧರಿಸುತ್ತಾರೆ. ಸಾರಂಗನ ಪಾತ್ರ ಮಾಡಲು ಮಾಲಾ ಶೇಖರನನ್ನು ಕೇಳಿಕೊಳ್ಳುತ್ತಾಳೆ. ನಾಟಕದ ಪ್ರಕಾರ ತನ್ನನ್ನು ಕಾಮಿಸಲು ಬರುವ ಮಲತಾಯಿಯನ್ನು ಸಾರಂಗ ದೂರತಳ್ಳಬೇಕು. ಆಕೆಯನ್ನು ಸ್ವತಃ ತಾಯಿಯಂತೆಯೇ ಕಾಣಬೇಕು. ಆದರೆ ಮಾಲಾಳನ್ನು ಮನಸ್ಸಿನಲ್ಲೇ ಪ್ರೇಮಿಸುತ್ತಿರುವ ಶೇಖರ್ ಮಲತಾಯಿಯ ಪಾತ್ರದಲ್ಲಿರುವ ಮಾಲಾಳನ್ನು ತಾಯಿಯಂತೆ ಕಾಣದೇ ಪ್ರೇಮಿಯಂತೆ ನೋಡುತ್ತಾನೆ. ಕೋಪಗೊಂಡ ಮಾಲಾ ಅವನಿಗೆ ಹೊಡೆಯುತ್ತಾಳೆ.ಬೇಸರಗೊಂಡ ಶೇಖರ ತಾನು ಆ ಪಾತ್ರ ಮಾಡಲು ಸಾಧ್ಯವಿಲ್ಲವೆಂದು ಹೇಳಿ ಹೊರಟು ಹೋಗುತ್ತಾನೆ. ತಂದೆಗೆ ಮಾಲಾಳನ್ನು ತಾನು ಮದುವೆಯಾಗುವ ವಿಚಾರ ತಿಳಿಸಿ ಅವರನ್ನು ಒಪ್ಪಿಸಲು ನಿರ್ಧರಿಸುತ್ತಾನೆ.
ಯಾವುದೋ ಕೆಲಸದ ಮೇಲೆ ಮುಂಬೈನಿಂದ ಬೆಂಗಳೂರಿಗೆ ಬಂದಿದ್ದ ಮಾಲಾಳ ಗಂಡ ಆಕೆಯನ್ನು ಯಾವುದೋ ಸಮಾರಂಭದಲ್ಲಿ ನೋಡುತ್ತಾನೆ. ಆಕೆಯ ಮನೆಗೆ ಬರುತ್ತಾನೆ. "ರಂಗು" ಎಂಬ ತನ್ನ ಪೂರ್ವಾಶ್ರಮದ ಹೆಸರಿನಿಂದ ಕರೆದ ಧ್ವನಿಯತ್ತ ಮಾಲಾ ಮುಖಮಾಡುತ್ತಾಳೆ. ಅನೇಕ ವರ್ಷಗಳ ನಂತರ ತನ್ನೆದುರು ನಿಂತ ತನ್ನ ಗಂಡನನ್ನು ಕಂಡು ಅಚ್ಚರಿಗೊಳ್ಳುತ್ತಾಳೆ. ಆದರೆ ಈತ ಈಗ ಬೇರೊಬ್ಬಳ ಗಂಡ ಎಂಬ ವಿಚಾರ ತಿಳಿದು ಒಳಗೊಳಗೇ ನೊಂದುಕೊಳ್ಳುತ್ತಾಳೆ. ತಮ್ಮ ಮಗ ಚಂದ್ರು ಹೇಗಿದ್ದಾನೆ, ಅವನನ್ನು ಒಮ್ಮೆ ತನಗೆ ಪರಿಚಯಿಸಿ ಕೊಡಲು ಕೇಳುತ್ತಾಳೆ. ಚಂದ್ರು ತನ್ನ ಎರಡನೇ ಹೆಂಡತಿಯನ್ನೇ ತನ್ನ ನಿಜವಾದ ತಾಯಿ ಎಂದು ತಿಳಿದುಕೊಂಡಿರುವುದಾಗಿ ಹೇಳಿದಾಗ ರಂಗು ಕುಸಿದು ಹೋಗುತ್ತಾಳೆ. ಹೋಗಲಿ ದೂರದಿಂದಲಾದರೂ ಅವನನ್ನು ಒಮ್ಮೆ ತೋರಿಸಿ, ಒಂದೇ ಒಂದು ಸಲ ಕಣ್ಣಲ್ಲಿ ನೋಡಿ ತೃಪ್ತಿ ಪಡುವುದಾಗಿ ಬೇಡಿಕೊಳ್ಳುತ್ತಾಳೆ. ಸರಿ, ಮರುದಿನ ದೂರದಿಂದ ತೋರಿಸುವುದಾಗಿ ಹೇಳಿದಾಗ ಮತ್ತೆ ಮಗನನ್ನು ಪಡೆದಷ್ಟೇ ಸಂತೋಷ ಪಡುತ್ತಾಳೆ. ಅಂಬೆಗಾಲಿಡುತ್ತ ಪುಟ್ಟ ಮಗು ಚಂದ್ರು ತನ್ನತ್ತ ಬರುವುದನ್ನೆ ಎಣಿಸಿಕೊಂಡು ಸಂಭ್ರಮಿಸುತ್ತಾಳೆ. ವಿಮಾನ ನಿಲ್ದಾಣಕ್ಕೆ ಬಾ, ಅಲ್ಲಿಯೇ ನಿನ್ನ ಮಗನನ್ನು ತೋರಿಸುತ್ತೇನೆಂದು ಫೋನ್ ಬಂದಾಗಲಂತೂ ಆಕಾಶವೇ ಕೈಗೆಟಕಿದಷ್ಟು ಖುಷಿಪಟ್ಟ ಮಾಲಾ ತನ್ನ ಕಾರಿನಲ್ಲಿ ವಿಮಾನ ನಿಲ್ದಾಣದ ಕಡೆ ಹೊರಡುತ್ತಾಳೆ. ತಾನೊಂದು ಬಗೆದರೆ ವಿಧಿ ಮತ್ತಿನ್ನೇನನ್ನೋ ಬಗೆಯುತ್ತದೆಂಬ ಮಾತು ಮಾಲಾಳ ವಿಷಯದಲ್ಲಿ ನಿಜವಾಗುತ್ತದೆ. ಯಾವುದೋ ಅಪಘಾತದಿಂದಾಗಿ ರಸ್ತೆಯಲ್ಲಿ ಟ್ರಾಫಿಕ್ ಸಮಸ್ಯೆಯಾಗುತ್ತದೆ. ನಿಗದಿತ ಸಮಯಕ್ಕೆ ವಿಮಾನ ನಿಲ್ದಾಣ ತಲುಪಲು ಆಗುವುದಿಲ್ಲ! ಆಕೆಯ ಪತಿ ಮತ್ತು ಮಗನನ್ನು ಹೊತ್ತ ವಿಮಾನ ಬಾನಿಗೆ ಜಿಗಿಯುತ್ತದೆ. ತನ್ನ ಮಗನನ್ನು ದೂರದಿಂದಲಾದರೂ ನೋಡಬೇಕೆಂಬ ತಾಯಯ ಆಸೆ ಮಣ್ಣು ಪಾಲಾಗುತ್ತದೆ. ಮಾಲಾ ವಿಚಲಿತಳಾಗುತ್ತಾಳೆ. ಮೌನವಾಗಿ ಮನೆಗೆ ಹಿಂದಿರುಗುತ್ತಾಳೆ. ನಿದ್ರೆ ಗುಳಿಗೆಯ ಬಾಟಲಿಯನ್ನು ಕೈಗೆತ್ತಿಕೊಳ್ಳುತ್ತಾಳೆ…..
ಇತ್ತ ವಿಮಾನದಲ್ಲಿ ಮಾಲಾಳ ಗಂಡ ತನ್ನ ಮಗ ಶೇಖರ್(ಚಂದ್ರು)ಗೆ ಆತನ ಮದುವೆಯ ಪ್ರಸ್ತಾಪವನ್ನು ಹೇಳಿತ್ತಾನೆ! ಆದರೆ ತಾನೊಬ್ಬ ಹೆಂಗಸನ್ನು ಪ್ರೀತಿಸುತ್ತಿರುವುದಾಗಿ ಶೇಖರ್ ಹೇಳುತ್ತಾನೆ. ಕೋಪಗೊಂಡ ತಂದೆ ಆಕೆ ಯಾರೆಂದು ಕೇಳಿದಾಗ, ಚಿತ್ರನಟಿ ಮಾಲಾ ಎನ್ನುತ್ತಾನೆ. ಮಗನಿಂದ ಆತನ ಹೆತ್ತ ತಾಯಿಯ ವಿಚಾರ ಮುಚ್ಚಿಟ್ಟ ಮಹಾಪರಾಧಕ್ಕೆ ಇಂತಹುದೊಂದು ಕಟು ಶಿಕ್ಷೆ ತನಗೆ ಬಂದೊದಗಲಿದೆ ಎಂದು ಆತ ಪ್ರಾಯಷಃ ಕನಸಲ್ಲೂ ಎಣಿಸಿರಲಿಕ್ಕಿಲ್ಲ. ಮಾತು ಗದ್ಗದಿತವಾಗುತ್ತದೆ. ಎದೆ ಬಡಿತ ಜೋರಾಗುತ್ತದೆ… ದೇಹ ಕಂಪಿಸತೊಡಗುತ್ತದೆ… "ಮಗನೇ.. ನೀನು ಪ್ರೀತಿಸುತ್ತಿರುವ ಆ ಹೆಂಗಸು ಮತ್ಯಾರೂ ಅಲ್ಲ.. ನಿನ್ನ ಹೆತ್ತ ತಾಯಿ!!" ಎನ್ನುತ್ತಾನೆ… ತನ್ನ ಸ್ವಾರ್ಥಕ್ಕಾಗಿ ತನ್ನ ತಾಯಿಯ ವಿಚಾರವನ್ನೇ ಮುಚ್ಚಿಟ್ಟು ತನ್ನಿಂದ ಹೆತ್ತ ತಾಯಿಯನ್ನೇ ಮೋಹಿಸುವಂತಹ ಮಾಹಾಪರಾಧ ಮಾಡಿಸಿದ ಅಪ್ಪನನ್ನು ಮಗ ಛೀತ್ಕರಿಸುತ್ತಾನೆ. ತನ್ನ ತಾಯಿಯ ಕಾಲಿಗೆ ಬಿದ್ದು ತನ್ನ ಪಾಪವನ್ನು ತೊಳೆದುಕೊಳ್ಳಲು ಬಯಸಿ ಆಕೆಯ ಮನೆಗೆ ಧಾವಿಸುತ್ತಾನೆ…. ಆದರೆ ಆತ ಕಂಡಿದ್ದೇನು.. ರಂಗನಾಯಕಿಯ ಶವ! ಕನ್ನಡ ನಾಡಿನ ರಸಿಕರ ಮನವ ಸೂರೆಗೊಂಡ ರಂಗನಾಯಕಿಯ ಬದುಕು ಆತ್ಮಹತೆಯಲ್ಲಿ ಕೊನೆಗೊಳ್ಳುತ್ತದೆ. ರಂಗಭೂಮಿ, ಚಿತ್ರರಂಗದ ಮಹಾನ್ ತಾರೆಯೊಬ್ಬಳು ಕೊನೆಗೂ ತನ್ನ ಕೊನೆಯ ಆಸೆ ನೆರವೇರದೇ ದಾರುಣ ಅಂತ್ಯ ಕಾಣುತ್ತಾಳೆ!
ಮೊದಲೇ ಹೇಳಿದಂತೆ ಇದು ಆರತಿಯವರ ವೃತ್ತಿ ಜೀವನದ ಅತ್ಯಮೂಲ್ಯ ಪಾತ್ರ. ಆ ಪಾತ್ರವನ್ನು ಅವರು ನಿರ್ವಹಿಸಿದ್ದನ್ನು ವರ್ಣಿಸಲು ಪದಗಳು ಸಾಲವು.. ಆಕೆಯ ಪತಿಯಾಗಿ ಅಶೋಕ್, ಮಗನಾಗಿ ರಾಮಕೃಷ್ಣ, ತಂದೆಯಾಗಿ ರಾಜಾನಂದ್ ಮತ್ತು ಆಕೆಯ ಹಿತೈಷಿ ಮತ್ತು ಅಣ್ಣನ ಸ್ಥಾನದಲ್ಲಿರುವ ರಂಗಣ್ಣನಾಗಿ ಅಂಬರೀಶ್ ಅಭಿನಯವೂ ಅಮೋಘ! ಚಿತ್ರಕಥೆ-ನಿರೂಪಣೆ-ನಿರ್ದೇಶನದ ಬಗ್ಗೆ ಏನು ಹೇಳಲು ಸಾಧ್ಯ… ಪುಟ್ಟಣ್ಣ ಕಣಗಾಲ್ ಎಂಬ ಹೆಸರೇ ಎಲ್ಲವನ್ನೂ ಹೇಳುತ್ತದೆ!
ಎಂ. ರಂಗರಾವ್ ಸಂಗೀತದಲ್ಲಿ ಆರು ಅತ್ಯುತ್ತಮ ಹಾಡುಗಳು ಮೂಡಿಬಂದಿವೆ.
೧. ಕನ್ನಡ ನಾಡಿನ ರಸಿಕರ ಮನವ ಸೂರೆಗೊಂಡ ನಾಯಕಿ ರಂಗ ನಾಯಕಿ (ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಪಿ.ಶೈಲಜಾ) – ಹಸೆಮಣೆಯೇರುತ್ತಿರುವ ತಂಗಿ ರಂಗನಾಯಕಿಯನ್ನು ಬೀಳ್ಕೊಡಲು ರಂಗಣ್ಣ ಹೇಳುವ ಭಾವಪೂರ್ಣ ಹಾಡು.
೨. ಜೈ ಜಗದಂಬೆ (ಎಸ್. ಜಾನಕಿ) – ದೇವಿಯನ್ನು ಭಜಿಸುವ ಸುಶ್ರಾವ್ಯವಾದ ಹಾಡು
೩. ಮಂದಾರ ಪುಷ್ಪವು ನೀನು (ಪಿ.ಜಚಂದ್ರನ್, ಎಸ್.ಪಿ.ಶೈಲಜ) – ಇಂದಿಗೂ ಜನಪ್ರಿಯತೆಯನ್ನು ಕಾಯ್ದುಕೊಂಡಿರುವ ಯುಗಳ ಗೀತೆ.
೪. ಜೈ ಹೃದಯ ಝೇಂಕಾರ (ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ) – ಮತ್ತೊಂದು ಉತ್ತಮ ಗೀತೆ.
೫. ಪ್ರೇಮದಲ್ಲಿ ಸ್ನೇಹದಲ್ಲಿ ಕೋಪ (ಎಸ್.ಪಿ.ಬಾಲಸುಬ್ರಹ್ಮಣ್ಯಂ) – ಲಯಪ್ರಧಾನ ಗೀತೆ!
೬. ಹಣ್ಣು ತಿಂದರೆ ಬಾಯಿ (ಎಸ್.ಪಿ.ಬಾಲಸುಬ್ರಹ್ಮಣ್ಯಂ, ಲಲಿತಾ, ರಮೋಲ) – ಮತ್ತೊಂದು ಲಯಪ್ರಧಾನ ಗೀತೆ.
ಆದರೆ ವಿಪರ್ಯಾಸವೆಂದರೆ ರಂಗನಾಯಲಿ ಬಾಕ್ಸ್ ಆಫೀಸ್ ದೃಷ್ಟಿಯಿಂದ ಅಷ್ಟೊಂದು ಯಶಸ್ಸನ್ನು ಗಳಿಸಲಿಲ್ಲ! ಅದಕ್ಕೆ ಕಾರಣಗಳು ಏನೇ ಇರಬಹುದು.. ಆದರೆ ಕನ್ನಡ ನಾಡಿನ ಸಹೃದಯ ರಸಿಕರ ಮನಸ್ಸಿನಲ್ಲಿ ಸ್ಥಾನಗಳಿಸಿದೆ. ಆರತಿಯವರಿಗೆ ಚಿತ್ರರಂದದಲ್ಲಿ ಒಂದು ದೊಡ್ಡ ಮಟ್ಟದ ಹೆಸರು ತಂದು ಕೊಟ್ಟಿದೆ. ಪುಟ್ಟಣ್ಣನವರ ಮಹಾನ್ ಚಿತ್ರಗಳ ಸಾಲಿನಲ್ಲಿ ಸ್ಥಾನ ಪಡೆದಿದೆ! ಆ ಮಟ್ಟಿಗೆ ಇದೊಂದು ಮಹಾನ್ ಯಶಸ್ವೀ ಚಿತ್ರ!
ರಂಗನಾಯಕಿ ಚಿತ್ರದ VCD/DVDಗಳು ಮಾರುಕಟ್ಟೆಯಲ್ಲಿ ಲಭ್ಯ. ಕಲಾಸಕ್ತರು ಕೊಂಡು ನೋಡಿ ಆನಂದಿಸಬಹುದು.
ಮತ್ತೊಂದು ಅತ್ಯುತ್ತಮ ಚಿತ್ರದೊಡನೆ ಅತೀ ಶೀಘ್ರದಲ್ಲೇ ಮತ್ತೆ ಭೇಟಿಯಾಗೋಣ,
ತಮ್ಮವ,
akumar
akumar.reach@gmail.com
ಈ ಹಿಂದಿನ ಫ್ಲ್ಯಾಶ್ ಬ್ಯಾಕ್ ಲೇಖನಗಳು -
- ಹೊಂಬಿಸಿಲು
- ಸನಾದಿ ಅಪ್ಪಣ್ಣ
- ಭೂತಯ್ಯನ ಮಗ ಅಯ್ಯು
- ಕಸ್ತೂರಿ ನಿವಾಸ
- ನಾಗರಹಾವು