ಗಂಧದಗುಡಿ ಫ್ಲ್ಯಾಶ್ ಬ್ಯಾಕ್ 3: ಭೂತಯ್ಯನ ಮಗ ಅಯ್ಯು

By | August 20, 2008

"ಹಳೆ ಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು" ಎಂಬ ಮಾತು ಕನ್ನಡಚಿತ್ರರಂಗದ ಮಟ್ಟಿಗೆ ಅಕ್ಷರಷಃ ನಿಜ. "ಸತೀ ಸುಲೋಚನಾ" ಟಾಕಿ ಚಿತ್ರದಿಂದ ಆರಂಭಗೊಂಡ
ಯಾತ್ರೆ ಇಂದಿನವರೆಗೂ ನಿರಾತಂಕವಾಗಿ ಸಾಗಿದೆ. ಬದಲಾದ ಕಾಲಕ್ಕೆ ತಕ್ಕಂತೆ ಹೊಸ
ಆಯಾಮಗಳನ್ನು, ಹೊಸತನಗಳನ್ನು ಮೈಗೂಡಿಸಿಕೊಂಡು ನಳನಳಿಸುತ್ತಿರುವ ಕನ್ನಡ ಚಿತ್ರರಂಗದ
ಇತಿಹಾಸದ ಪುಟಗಳು ಕೂಡ ಅಷ್ಟೇ ಶ್ರೀಮಂತವಾಗಿವೆ. ಕನ್ನಡ ಚಿತ್ರರಂಗ ಸಾಗಿ ಬಂದ
ಹಾದಿಯಲ್ಲಿ ಅದೆಷ್ಟೋ ಚಿತ್ರಗಳು ಮೈಲಿಗಲ್ಲುಗಳಾಗಿವೆ. ಜನ ಮಾನಸದಲ್ಲಿ ಇಂದಿಗೂ
ಹಸಿರಾಗಿರುವ ಹಲವಾರು ಚಿತ್ರರತ್ನಗಳಿವೆ. ಅವುಗಳಲ್ಲಿ ಕೆಲವು ಅನರ್ಘ್ಯ ರತ್ನಗಳತ್ತ
ಮತ್ತೊಮ್ಮೆ ಅವಲೋಕಿಸುವ ಕಿರು ಪ್ರಯತ್ನವೇ ಈ "ಗಂಧದಗುಡಿ ಫ್ಲಾಶ್ ಬ್ಯಾಕ್". ಪ್ರತೀ ವಾರ ಒಂದೊಂದು ಮರೆಯಲಾಗದ ಚಿತ್ರದ ಬಗ್ಗೆ ಮಾತಾಡೋಣ.

ಇಂದಿನ ಚಿತ್ರ – "ಭೂತಯ್ಯನ ಮಗ ಅಯ್ಯು"

sa2

ಕಿರು ಮಾಹಿತಿ:

  • ಚಿತ್ರ ನಿರ್ಮಾಣ ಸಂಸ್ಥೆ:ಜೈನ್ ಕಂಬೈನ್ಸ್
  • ಬಿಡುಗಡೆಯಾದ ವರ್ಷ: 1974
  • ಪಾತ್ರವರ್ಗ:ವಿಷ್ಣುವರ್ಧನ್, ಲೋಕೇಶ್, ಎಂ.ಪಿ.ಶಂಕರ್, ಎಲ್.ವಿ.ಶಾರದಾ, ಭವಾನಿ, ಲೋಕನಾಥ್
  • ಕಥೆ: ಗೋರೂರು ರಾಮಸ್ವಾಮಿ ಅಯ್ಯಂಗಾರ್
  • ಸಂಗೀತ: ಜಿ.ಕೆ.ವೆಂಕಟೇಶ್
  • ಗೀತ ಸಾಹಿತ್ಯ:ಆರ್.ಎನ್.ಜಯಗೋಪಾಲ್
  • ಹಿನ್ನೆಲೆ ಗಾಯಕರು: ಡಾ. ಪಿ.ಬಿ.ಶ್ರೀನಿವಾಸ್, ಎಸ್.ಜಾನಕಿ, ವಾಣಿ ಜಯರಾಂ ಮತ್ತು ಜಿ.ಕೆ.ವೆಂಕಟೇಶ್
  • ಛಾಯಾಗ್ರಹಣ:ಡಿ.ವಿ.ರಾಜಾರಾಂ
  • ನಿರ್ಮಾಪಕರು: ಚಂದೂಲಾಲ್ ಜೈನ್,ಎಸ್.ಪಿ.ವರದರಾಜ್, ಎನ್.ವೀರಾಸ್ವಾಮಿ
  • ನಿರ್ದೇಶಕ: ಸಿದ್ಧಲಿಂಗಯ್ಯ

ಕನ್ನಡ ಚಿತ್ರರಂಗದ ಅತ್ಯುತ್ತಮ ಚಿತ್ರಗಳನ್ನು ಪಟ್ಟಿಮಾಡಿದರೆ ಅದರಲ್ಲಿ ಭೂತಯ್ಯನ ಮಗ ಅಯ್ಯು ಚಿತ್ರ ಮೊದಲ ಸಾಲಿನಲ್ಲಿರುತ್ತದೆ. 1974 ರಲ್ಲಿ ತೆರೆಕಂಡ ಈ ಚಿತ್ರ ಒಂದು ಮಾದರಿ ಚಿತ್ರ ಹೇಗಿರಬೇಕು ಎಂಬುದಕ್ಕೆ ಈಗಲೂ ಒಳ್ಳೆಯ ಉದಾಹರಣೆಯಾಗಿ. ಖ್ಯಾತ ಸಾಹಿತಿ ಗೋರೂರು ರಾಮಸ್ವಾಮಿ ಅಯ್ಯಂಗಾರರ ಕಾದಂಬರಿಯನ್ನು ಆಧರಿಸಿ ಸಿದ್ಧಲಿಂಗಯ್ಯನವರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಚಿತ್ರದಲ್ಲಿ ಮೂರು ಪ್ರಮುಖ ಪಾತ್ರಗಳು – ಭೂತಯ್ಯ (ಎಂ.ಪಿ.ಶಂಕರ್), ಅಯ್ಯು (ಲೋಕೇಶ್) ಮತ್ತು ಗುಲ್ಲ(ವಿಷ್ಣುವರ್ಧನ್). ಭೂತಯ್ಯ ಊರಿನ ಶ್ರೀಮಂತ ಜಮೀಂದಾರ. ಈತ ಕಡು ಜಿಪುಣ ಮತ್ತು ಮಹಾನ್ ನಿರ್ದಯಿ. ತನ್ನಲ್ಲಿ ಸಾಲ ಪಡೆದುಕೊಂಡು ಸಕಾಲಕ್ಕೆ ಹಿಂತಿರುಗಿಸಲಾಗದ ಊರಿನ ಬಡ ರೈತರ ಜಮೀನನ್ನು ನಿರ್ದಯವಾಗಿ ಅವರಿಂದ ಕಿತ್ತುಕೊಂಡು ಮೆರೆಯುವಂತಹ ಆಸಾಮಿ. ಹೆಸರಿಗೆ ತಕ್ಕಂತೆ ಈತ ಇಡೀ ಊರಿನವರಿಗೆ ಭೂತ ಸದೃಶನೇ ಸರಿ! ಈತನ ಸಕಲ ಗುಣಗಳನ್ನೂ ಮೈಗೂಡಿಸಿಕೊಂಡಿರುವ ತಂದೆಗೆ ತಕ್ಕ ಮಗನೇ ಅಯ್ಯು. ಊರಿನ ಜನ ಭೂತಯ್ಯ ಮತ್ತವನ ಮಗ ಅಯ್ಯುವನ್ನು ಎಷ್ಟರ ಮಟ್ಟಿಗೆ ದ್ವೇಷಿಸುತ್ತಾರೆಂದರೆ ಭೂತಯ್ಯ ಸತ್ತಾಗ ಆತನ ಶವವನ್ನು ಸ್ಮಶಾನಕ್ಕೆ ಸಾಗಿಸಲು ಕೂಡ ಯಾರೂ ಮುಂದೆ ಬರುವುದಿಲ್ಲ. ಬದಲಿಗೆ ಖುಷಿಯಿಂದ ಸಂಭ್ರಮಿಸುತ್ತದೆ. ಅಯ್ಯುವೊಬ್ಬನೇ ಏಕಾಂಗಿಯಾಗಿ ಹೆಣವನ್ನು ರುದ್ರಭೂಮಿಗೆ ಸಾಗಿಸಬೇಕಾಗುತ್ತದೆ. ಇದು ಅಯ್ಯು ಗ್ರಾಮಸ್ಥರ ಮೇಲೆ ಮತ್ತಷ್ಟು ಕಿಡಿಕಾರುವಂತೆ ಮಾಡುತ್ತದೆ.
ಭೂತಯ್ಯ ಮತ್ತವನ ಮಗನಿಂದ ನೊಂದ ಗ್ರಾಮಸ್ಥರ ಪ್ರತಿನಿಧಿಯಾಗಿ ಗುಲ್ಲ ಎಂಬ ಯುವಕ ಸಿಡಿದೇಳುತ್ತಾನೆ. ಗುಲ್ಲನ ತಂದೆ ಭೂತಯ್ಯನಿಂದ ರೈತನೊಬ್ಬ ಪಡೆದ ಸಾಲಕ್ಕೆ ಜಾಮೀನು ಹಾಕಿರುತ್ತಾನೆ. ಆದರೆ ಆ ರೈತ ಹಣವನ್ನು ಹಿಂದಿರುಗಿಸುವಲ್ಲಿ ಅಶಕ್ತನಾಗಿರುತ್ತಾನೆ. ಸಾಲ ವಸೂಲಿಗಾಗಿ ಅಯ್ಯ ಗುಲ್ಲನ ಮನೆಗೆ ತನ್ನ ಆಳುಗಳೊಂದಿಗೆ ಹೋಗಿ ಮನೆ ಖಾಲಿ ಮಾಡಿಸಲು ಯತ್ನಿಸುತ್ತಾನೆ. ಆಗ ಗುಲ್ಲ ಮತ್ತು ಅಯ್ಯು ಮಧ್ಯೆ ಘರ್ಷಣೆ ನಡೆದು ಗುಲ್ಲ ಅಯ್ಯುವಿನ ಮೇಲೆ ಕೈ ಎತ್ತುತ್ತಾನೆ. ರೊಚ್ಚಿಗೆದ್ದ ಅಯ್ಯು ಗುಲ್ಲನ ವಿರುದ್ಧ ಪೋಲೀಸರಿಗೆ ದೂರು ಕೊಟ್ಟು ಗುಲ್ಲ ಜೈಲು ಸೇರುವಂತೆ ಮಾಡುತ್ತಾನೆ. ಇದರಿಂದ ಆಘಾತಕ್ಕೊಳಗಾದ ಗುಲ್ಲನ ತಂದೆ ಸಾವನ್ನಪ್ಪುತ್ತಾನೆ. ಇದು ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ಗುಲ್ಲ-ಅಯ್ಯು ನಡುವೆ ದೊಡ್ಡ ಕಂದಕವನ್ನೇ ಸೃಷ್ಟಿಸುತ್ತದೆ. ಗುಲ್ಲ ಮತ್ತು ಅಯ್ಯ ಪರಮ ವೈರಿಗಳಾಗುತ್ತಾರೆ. ಅಯ್ಯುವಿಗೆ ಪಾಠ ಕಲಿಸುವುದಾಗಿ ಪಣತೊಡುವ ಗುಲ್ಲ ಒಬ್ಬ ವಕೀಲನನ್ನು ಹಿಡಿಯುತ್ತಾನೆ. ತನ್ನೀ ಕಾನೂನು ಸಮರಕ್ಕಾಗಿ ಆಸ್ತಿ ಮನೆಯನ್ನೆಲ್ಲ ಅಡವಿಡುತ್ತಾನೆ. ಅಯ್ಯುವನ್ನು ಕೊಲ್ಲುವುದೇ ತನ್ನ ಗುರಿ ಎಂದು ಕೂಗಾಡುತ್ತಾನೆ. ತಮ್ಮ ಗಂಡಂದಿರ ಈ ರೀತಿಯ ಹಗೆತನದಿಂದ ಗುಲ್ಲ ಮತ್ತು ಅಯ್ಯು ಇಬ್ಬರ ಪತ್ನಿಯರು ಕಂಗಾಲಾಗುತ್ತಾರೆ. ತನ್ನ ಗಂಡ ಗುಲ್ಲ ಮಾಡಿದ ಪ್ರತಿಜ್ಞೆಯಿಂದ ಹೆದರಿದ ಗುಲ್ಲನ ಪತ್ನಿ (ಭವಾನಿ) ಆ ವಿಚಾರವನ್ನು ಅಯ್ಯುವಿನಲ್ಲಿ ಹೇಳಿಕೊಂಡು ತನ್ನ ಗಂಡನನ್ನು ಕ್ಷಮಿಸುವಂತೆ ಬೇಡಿಕೊಳ್ಳುತಾಳೆ. ಇದಕ್ಕೆ ಒಪ್ಪದ ಅಯ್ಯು ತಾನೇ ಗುಲ್ಲನನ್ನು ಕೊಲ್ಲುವುದಾಗಿ ಮರು ಪ್ರತಿಜ್ಞೆ ಮಾಡುತ್ತಾನೆ.
3
ಈ ಕಡೆ ಗುಲ್ಲನ ಮೇಲೆ ಈ ರೀತಿ ದ್ವೇಷ ಸಾಧಿಸುವುದನ್ನು ಕೈ ಬಿಟ್ಟು ಒಳ್ಳೆಯವನಾಗುವಂತೆ ಅಯ್ಯನ
ಹೆಂಡತಿ (ಎಲ್.ವಿ.ಶಾರದ) ಸಹ ತನ್ನ ಗಂಡನನ್ನು ಬೇಡಿಕೊಳ್ಳುತ್ತಾಳೆ. ಇಡೀ ಊರಿನ ಅತ್ಯಂತ ಶ್ರೀಮಂತ ಜಮೀಂದಾರನಾದ ಭೂತಯ್ಯ ಸತ್ತಾಗ ಆತನ ಶವವನ್ನು ಸಾಗಿಸಲು ನರಪಿಳ್ಳೆಯೂ ಬರದೇ ಇದ್ದುದನ್ನೂ ಹಾಗೂ ಕಡು ಬಡವನಾದ ಗುಲ್ಲನ ತಂದೆ ಸತ್ತಾಗ ಊರಿಗೆ ಊರೇ ಕಣ್ಣೀರು ಹಾಕುತ್ತಾ ಆತನ ಶವಯಾತ್ರೆಯಲ್ಲಿ ಪಾಲ್ಗೊಂಡದನ್ನೂ ಅಯ್ಯುವಿಗೆ ನೆನಪಿಸುತ್ತಾಳೆ. ದ್ವೇಷದಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ, ದಯಮಾಡಿ ತನ್ನೆಲ್ಲಾ ದ್ವೇಷ ಹಗೆತನವನ್ನು ಬಿಟ್ಟು ಬಿಡುವಂತೆ ಕೇಳಿಕೊಳ್ಳುತ್ತಾಳೆ. ಇದು ಅಯ್ಯುವಿನ ಮನಸ್ಸಿನ ಮೇಲೆ ಪರಿಣಾಮವನ್ನು ಬೀರುತ್ತದೆ. ಇದೇ ವೇಳೆ ತನ್ನ ಗಂಡ ಮತ್ತು ಅಯ್ಯು ಮಾಡಿರುವ ಪ್ರತಿಜ್ಜೆಯಿಂದ ದಿಕ್ಕು ತೋಚದಂತಾದ ಗುಲ್ಲನ ಹೆಂಡತಿ ಬಾವಿಗೆ ಹಾರಿ ಪ್ರಾಣ ಕಳೆದುಕೊಳ್ಳಲು ಯತ್ನಿಸುತ್ತಾಳೆ. ಯಾರೋ ಹೆಣ್ಣುಮಗಳು ನೀರಿಗೆ ಹಾರುತ್ತಿರುವುದನ್ನು ಕಂಡ ಅಯ್ಯು ಬಾವಿಗೆ ಹಾರಿ ಆಕೆಯ ಪ್ರಾಣವನ್ನು ಕಾಪಾಡುತ್ತಾನೆ. ಅದು ಗುಲ್ಲನ ಪತ್ನಿ ಎಂದು ತಿಳಿದಾಗ ಅಯ್ಯುವಿಗೆ ಆಘಾತವಾಗುತ್ತದೆ. ತನ್ನಿಂದ ಈಕೆ ಪ್ರಾಣ ಕಳೆದುಕೊಳ್ಳಲು ಹೊರಟ ವಿಚಾರದಿಂದ ಮನನೊಂದ ಅಯ್ಯು ಆತ್ಮಾವಲೋಕನ ಮಾಡಿಕೊಳ್ಳುತ್ತಾನೆ.ಹಗೆತನದಿಂದ ಏನೂ ಸಾಧ್ಯವಿಲ್ಲ ಎಂಬ ತನ್ನ ಹೆಂಡತಿಯ ಮಾತುಗಳು ಸರಿ ಎನಿಸುತ್ತದೆ. ತನ್ನ ತಂದೆ ಭೂತಯ್ಯನಲ್ಲಿದ್ದ ರಾಕ್ಷಸೀ ಗುಣಗಳನ್ನೆಲ್ಲ ಕಳೆದುಕೊಂಡು ಅಯ್ಯು ಮಾನವನಾಗುತ್ತಾನೆ. ಗುಲ್ಲನ ಮೇಲಿದ್ದ ದ್ವೇಷವನ್ನೆಲ್ಲ ಮರೆತು ಆತನ ಸಾಲವನ್ನೆಲ್ಲ ತೀರಿಸುತ್ತಾನೆ. ಆದರೆ ಗುಲ್ಲ ಮಾತ್ರ ಇನ್ನೂ ಅಯ್ಯುವನ್ನು ಕಂಡರೆ ಮೊದಲಿನಂತೆ ಹರಿಹಾಯುತ್ತಾನೆ. ಅಯ್ಯುವಿನ ಋಣ ತನಗೆ ಬೇಕಾಗಿಲ್ಲ ಎಂದೂ, ಆತನ ಮನೆಯಲಿ ಕೆಲಸದಾಳಾಗಿ ದುಡಿದು ಆತನ ಋಣವನ್ನು ತೀರಿಸುವುದಾಗಿಯೂ ಹೇಳುತ್ತಾನೆ. ಸ್ನೇಹಕ್ಕಾಗಿ ಕೈಚಾಚಿದ ಅಯ್ಯುವನ್ನು ಬೈದು ನಿನ್ನ ಸ್ನೇಹ ನನಗೆ ಬೇಡ ನಾನೇದ್ದರೂ ನಿನ್ನ ಋಣ ತೀರುವ ವರೆಗೂ ನಿನ್ನ ಮನೆಯ ನಿಷ್ಠೆಯ ಆಳು ಮಾತ್ರ ಎನ್ನುವ ಮೂಲಕ ಅಯ್ಯುವಿನ ಸ್ನೇಹವನ್ನು ತಿರಸ್ಕರಿಸುತ್ತಾನೆ.
f
ಭೂತಯ್ಯ ಮತ್ತವನ ಮಗನ ಮೇಲಿನ ಸಿಟ್ಟಿನಿಂದ ಊರಿನ ಜನ ಗುಲ್ಲನ ನೇತೃತ್ವದಲ್ಲಿ ಅಯ್ಯುವಿನ ಮನೆಗೆ ನಡುರಾತ್ರಿಯಲ್ಲಿ ದಾಳಿ ಮಾಡಿ ಮನೆಯನ್ನು ಕೊಳ್ಳೆಹೊಡೆದು ನಂತರ ಮನೆಗೆ ಬೆಂಕಿ ಹಚ್ಚುತ್ತಾರೆ. ಆದರೆ ಆಗಲೇ ಬದಲಾಗಿದ್ದ ಅಯ್ಯು ಮಾತ್ರ ಇದೊಂದು ಆಕಸ್ಮಿಕ ಅವಘಡ, ಯಾರೂ ಮಾಡಿದ್ದಲ್ಲ ಎಂದು ಹೇಳುವ ಮೂಲಕ ಗುಲ್ಲ ಮತ್ತು ಊರಿನವರನ್ನೆಲ್ಲ ಪೋಲೀಸರಿಂದ ರಕ್ಷಿಸುತ್ತಾನೆ. ಇದು ಊರಿನವರೆಲ್ಲರ ಕಣ್ತೆರೆಸುತ್ತದೆ. ತಾವು ಮಾಡಿದ ತಪ್ಪಿಗೆ ನೊಂದು ತಾವು ಕಳವು ಮಾಡಿದ ವಸ್ತುಗಳನ್ನೆಲ್ಲ ಹಿಂದಿರುಗಿಸಿ ಅಯ್ಯುವಿನ ಕ್ಷಮೆ ಕೇಳುತ್ತಾರೆ. ಇಲ್ಲಿ ನಟ ಲೋಕನಾಥ್ ಮಾಡಿದ ಒಂದು ಪುಟ್ಟ ಪಾತ್ರ ಇಂದಿಗೂ ಜನ ಮಾನಸದಲ್ಲಿ ಹಸಿರಾಗಿದೆ. ಉಪ್ಪಿನ ಕಾಯಿಗಾಗಿ ಸದಾ ಹಾತೊರೆಯುವ ಈತ ಅಯ್ಯುವಿನ ಮನೆಯಿಂದ ಉಪ್ಪಿನ ಕಾಯಿ ಭರಣಿನ್ನುಅಪಹರಿಸುವುದು; ಎಲ್ಲರೂ ತಾವು ಕದ್ದ ವಸ್ತುಗಳನ್ನು ಹಿಂದಿರುಗಿಸುವಾಗ ತಾನು ಮಾತ್ರ ಕದ್ದು ತಿಂದ ಉಪ್ಪಿನ ಕಾಯಿಯನ್ನು ಹಿಂದಿರುಗಿಸಲಾಗದೆ ಮರುಗುವುದು ಮನೋಜ್ಞವಾಗಿ ಮೂಡಿಬಂದಿದೆ!
ಚಿತ್ರದ ಕ್ಲೈಮ್ಯಾಕ್ಸ್ ಅವಿಸ್ಮರಣೀಯ. ಕನ್ನಡ ಚಿತ್ರರಂಗದಲ್ಲಿ ಬಂದ ಅತ್ಯುತ್ತಮ ಕ್ಲೈಮ್ಯಾಕ್ಸ್‍ಗಳಲ್ಲೊಂದು.ಮನೆಯನ್ನು ಕಳೆದುಕೊಂದ ಅಯ್ಯು ಮತ್ತವನ ಕುಟುಂಬ ಊರ ಹೊರಗಿನ ನದಿಯ ಸಮೀಪದ ಮನೆಯಲ್ಲಿ ವಾಸಿಸುತ್ತಿರುತ್ತಾರೆ. ಒಂದು ದಿನ ಅಯ್ಯು ಪಟ್ಟಣಕ್ಕೆ ಹೋದ ಸಂದರ್ಭ.ಧಾರಾಕಾವಾದ ಮಳೆಗೆ ನದಿ ಉಕ್ಕಿ ಹರಿಯತೊಡಗುತ್ತದೆ. ನೀರಿನ ರಭಸಕ್ಕೆ ಅಣೆಕಟ್ಟು ಒಡೆದು ಅಯ್ಯುವಿನ ಮನೆಯ ಸುತ್ತ ಮುತ್ತಲಿನ ಪ್ರದೇಶ ಜಲಾವೃತವಾಗುತ್ತದೆ. ಮನೆ ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡು ಅಯ್ಯುವಿನ ಹೆಂಡತಿ ಮಕ್ಕಳು ಭಯಭೀತರಾಗುತ್ತಾರೆ. ಗುಲ್ಲ ಪ್ರಾಣಾಪಾಯವನ್ನು ತೊರೆದು ಚಿಕ್ಕ ತೆಪ್ಪವೊಂದನ್ನು ತೆಗೆದುಕೊಂಡು ನೀರಿನಲ್ಲಿ ಹೋಗಿ ಅಯ್ಯುವಿನ ಹೆಂಡತಿ ಮತ್ತು ಮಕ್ಕಳನ್ನು ಕಾಪಾಡುತ್ತಾನೆ. ಅಯ್ಯು ಮತ್ತು ಗುಲ್ಲ ಸ್ನೇಹಿತರಾಗುತ್ತಾರೆ. ಹಳ್ಳಿಯ ಜನರೆಲ್ಲ ಸೇರಿ ಅಯ್ಯುವಿಗೆ ಮನೆ ಕಟ್ಟಿಕೊಡುತ್ತಾರೆ. ಇಡೀ ಹಳ್ಳಿ ನೆಮ್ಮದಿಯಿಂದ ಸಹಬಾಳ್ವೆಗೆ ನಾಂದಿ ಹಾಡುತ್ತದೆ.
11
ಚಿತ್ರದ ಪ್ರಮಖ ಕಲಾವಿದರು (ಎಡದಿಂದ) – ಎಂ.ಪಿ.ಶಂಕರ್, ಲೋಕೇಶ್, ಎಲ್.ವಿ.ಶಾರದ, ವಿಷ್ಣುವರ್ಧನ್ ಮತ್ತು ಭವಾನಿ
"ಭೂತಯ್ಯನ ಮಗ ಅಯ್ಯು" ಕನ್ನಡ ಚಿತ್ರರಂಗದ ಅತ್ಯದ್ಭುತ ಚಿತ್ರವಾಗಲು ಅಯ್ಯುವಿನ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿ ಮನೋಜ್ಞ ಅಭಿನಯ ನೀಡಿದ ಲೋಕೇಶ್ ಪ್ರಮುಖ ಕಾರಣ. ಇಡೀ ಚಿತ್ರದ ಪ್ರಮುಖ ಆಕರ್ಷಣೆಯೇ ಲೋಕೇಶ್. 1974ರ ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿಯನ್ನು ಲೋಕೇಶ್ ಪಡೆದರು. ಸತ್ಯ ಹರಿಶ್ಚಂದ್ರ ಚಿತ್ರದ ವೀರಬಾಹು ಪಾತ್ರದ ನಂತರ ಜನ ಎಂ.ಪಿ.ಶಂಕರ್ ಅವರನ್ನು ಗುರುತಿಸುವುದೇ ಭೂತಯ್ಯನ ಪಾತ್ರದಲ್ಲಿ. ಈ ಪಾತ್ರ ಎಷ್ಟರ ಮಟ್ಟಿಗೆ ಜನಪ್ರಿಯವೆಂದರೆ ಈಗಲೂ ಕೂಡ ಜನ ಕಡು ಜಿಪುಣತನ ಮಾಡುವವರಿಗೆ "ನೀವೇನು ಭೂತಯ್ಯನ ವಂಶದವರಾ" ಎಂದು ಕೇಳುತ್ತಾರೆ. ಪಾತ್ರವೊಂದರ ನಿಜವಾದ ಗೆಲುವೆಂದರೆ ಇದೇ ಅಲ್ಲವೇ? ಇನ್ನು ವಿಷ್ಣುವರ್ಧನ್ ಪಾಲಿಗಂತೂ ಇದು ಅದೃಷ್ಟದ ಚಿತ್ರ. ನಾಗರಹಾವು ನಂತರ ವಿಷ್ಣು ಮತ್ತೊಮ್ಮೆ ಬಿಸಿರಕ್ತದ ಯುವಕನ ಪಾತ್ರದಲ್ಲಿ ಮತ್ತೆ ವಿಜೃಂಭಿಸಿದ್ದಾರೆ. ಚಿತ್ರದ ಛಾಯಾಗ್ರಹಣ ಮತ್ತೊಂದು ಆಕರ್ಷಣೆ. ಕನ್ನಡದ ಅತ್ಯುತ್ತಮ ಛಾಯಾಗ್ರಹಣಗಳಲ್ಲಿ ಈ ಚಿತ್ರವೂ ಒಂದಾಗಿದ್ದು ಛಾಯಾಗ್ರಾಹಕ ಡಿ.ವಿ.ರಾಜಾರಾಂ ಕೂಡ ರಾಜ್ಯ ಪ್ರಶಸ್ತಿಗೆ ಪಾತ್ರರಾದರು. ಎಲ್.ವಿ.ಶಾರದ, ಲೋಕನಾಥ್,ಭವಾನಿ ಕೂಡ ಅತ್ಯುತ್ತಮ ಅಭಿನಯ ನೀಡಿದ್ದಾರೆ.
ಚಿತ್ರ 1974ರ ಯಶಸ್ವೀ ಚಿತ್ರವಾಯಿತು. ಶತದಿನೋತ್ಸವವನ್ನಾಚರಿತು. ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡಿತು.

ಹಾಡುಗಳು:

2

ಚಿತ್ರದ ಯಶಸ್ಸಿನಲ್ಲಿ ಪಾಲುದಾರದಾದ ಕೆಲವು
ತಂತ್ರಜ್ಞರು (ಎಡದಿಂದ) – ಡಾ.ಗೊರೂರು ರಾಮಸ್ವಾಮಿ ಅಯ್ಯಂಗಾರ್, ಜಿ.ಕೆ.ವೆಂಕಟೇಶ್,
ಆರ್.ಎನ್.ಜಯಗೋಪಾಲ, ಡಾ.ಪಿ.ಬಿ.ಶ್ರೀನಿವಾಸ್ ಮತ್ತು ಎಸ್. ಜಾನಕಿ

ಚಿತ್ರದಲ್ಲಿ ನಾಲ್ಕು ಹಾಡಗಳಿವೆ.

೧. ಮಲೆನಾಡ ಹೆಣ್ಣ ಮೈ ಬಣ್ಣ ಆ ನಡು ಸಣ್ಣ ಹಾಡು ಇಂದಿಗೂ ಬಹಳ ಜನಪ್ರಿಯ. ಪಿ.ಬಿ.ಶ್ರೀನಿವಾಸ್ ಮತ್ತು ಎಸ್.ಜಾನಕಿಯವರು ಹಾಡಿರುವ ಈ ಯುಗಳ ಗೀತೆಯನ್ನು ಮಲೆನಾಡಿನ ರಮಣೀಯ ತಾಣದಲ್ಲಿ ಚಿತ್ರಿಸಲಾಗಿದೆ.

http://in.youtube.com/watch?v=UbVc8a7WjtA

೨. ವಿರಸವೆಂಬ ವಿಷಕೆ ಬಲಿಯಾದೆ ಏತಕೆ (ಜಿ.ಕೆ.ವೆಂಕಟೇಶ್) -ದ್ವೇಷ, ಹಗೆತನದ ಬೇಗೆಯಲ್ಲಿ ನಲುಗುವುದರಿಂದಾಗುವ ಪರಿಣಾಮಗಳನ್ನು ವಿವರಿಸುವ ಅರ್ಥಪೂರ್ಣ ಗೀತೆ.

೩. ಶೋಬಾನ ಶೋಬಾನ (ವಾಣಿ ಜಯರಾಂ)- ಆಗತಾನೇ ಮದುವೆಯಾದ ಹೆಣ್ಣಿನ ಕುರಿತ ಗೀತೆ.

೪. ಮಾರಿಯೇ ಗತಿಯಾಯ್ತು (ಜಿ.ಕೆ.ವೆಂಕಟೆಶ್ ಮತ್ತು ಪಿ.ಬಿ.ಶ್ರೀನಿವಾಸ್) ಕೂಡ ಒಂದು ಉತ್ತಮ ಗೀತೆ.

ಭೂತಯ್ಯನ ಮಗ ಅಯ್ಯು ಚಿತ್ರದ DVD ಗಳು ಲಭ್ಯ. ಕಲಾಭಿಮಾನಿಗಳು ಕೊಂಡು ನೋಡಿ ಆನಂದಿಸಬಹುದು.

 

ಮುಂದಿನ ವಾರ ಮತ್ತೊಂದು ಉತ್ತಮ ಚಿತ್ರದೊಂದಿಗೆ ಮತ್ತೆ ಭೇಟಿಯಾಗೋಣ,

ತಮ್ಮವ,

akumar

akumar.reach@gmail.com