ವಂಶಿ – ತಾಯಿ ಮಗನ ಬಾಂಧವ್ಯದ ಚಿತ್ರಣ! ಪುನೀತ್-ಲಕ್ಷ್ಮಿ ಅಮೋಘ ಅಭಿನಯವೇ ಜೀವಾಳ!
Published on October 2, 2008 by admin · No Comments
ಕಥೆ…
ತಾಯಿಗೆ (ಲಕ್ಷ್ಮಿ) ಒಬ್ಬನೇ ಮಗ. ಹೆಸರು ವಂಶಿ (ಪುನೀತ್ ರಾಜ್ ಕುಮಾರ್).ಅಪ್ಪ?.. ಊಹೂಂ .. ಅಪ್ಪನ ವಿಷಯ ಮಾತ್ರ ಎತ್ತಬೇಡಿ.. ಮಗನಿಗೆ ಎಲ್ಲಿಲ್ಲದ ಕೋಪ ಬರುತ್ತದೆ ಹುಷಾರ್! ಮಗನ ಅತ್ಯಂತ ದೊಡ್ಡ ವೀಕ್‍ನೆಸ್ ಎಂದರೆ ಮೂಗಿನ ತುದಿಯಲ್ಲಿರುವ ಕೋಪ! ಮಗ ಪೋಲಿಸ್ ಆಗಬೇಕೆಂಬುದು ತಾಯಿಯ ಕನಸು. ಮಗನಿಗೂ ಅದು ಜೀವನದ ಮಹದಾಸೆ. ಪೋಲೀಸ್ ಟ್ರೈನಿಂಗ್ ಮುಗಿಸಿ ಇಂಟರ್ವ್ಯೂ ನಡೆದು ಇನ್ನೇನು ಪೋಲೀಸ್ ಹುದ್ದೆ ಸಿಗಬೇಕು ಎನ್ನುವಷ್ಟರಲ್ಲಿ ವಿಘ್ನ! ಕಾರಣ..? ಈತ ನಗರದ ಅತ್ಯಂತ ದೊಡ್ಡ ರೌಡಿಯಾಗಿ ಎಲ್ಲರ ಎದೆಯಲ್ಲಿ ನಡುಕ ಹುಟ್ಟಿಸಿ ಕೊನೆಗೆ ಆತನ ಎದುರಾಳಿ ಜಯಚಂದ್ರನಿಂದ ಬರ್ಬರವಾಗಿ ಕೊಲೆಯಾಗಿದ್ದ ಕೊತ್ನಾಲ್ ರಾಮಣ್ಣನ ಮಗ ಎಂಬ ವಿಷಯ! ಆ ವಿಷಯ ಪೋಲೀಸ್ ಆಗಬೇಕೆಂಬ ವಂಶಿಯ ಜೀವನದ ಮಹದಾಸೆಯನ್ನು ನುಚ್ಚು ನೂರು ಮಾಡುತ್ತದೆ. ಪೋಲೀಸ್ ಇಲಾಖೆಯಲ್ಲಿದ್ದುಕೊಂಡೇ ರೌಡಿ ಜಯಣ್ಣನಿಗೆ ಸಹಾಯ ಮಾಡುತ್ತಿದ್ದ ಇನ್ಸ್‍ಪೆಕ್ಟರ್ (ರವಿ ಕಾಳೆ) ವಂಶಿ ಪೋಲೀಸ್ ಆಗಲು ಅಡ್ಡಗಾಲಾಗುತ್ತಾನೆ. ಮಾಜಿ ರೌಡಿಯೊಬನ ಮಗ ಎಂಬ ಒಂದೇ ಕಾರಣಕ್ಕೆ ವಂಶಿಗೆ ಖುಷಿಯಿರದಿದ್ದರೂ ರೌಡಿಯ ಪಟ್ಟ ಬರುತ್ತದೆ. ಜನ ಕೊತ್ನಾಲ್ ರಾಮಣ್ಣನ ಮಗನನ್ನಾಗಿಯೇ ಗುರುತಿಸುತ್ತಾರೆ. ವಿಧಿಯಿಲ್ಲದೇ ಕೈಗೆ ಮಚ್ಚು ಬರುತ್ತದೆ. ಪರಿಸ್ಥಿತಿಯ ಕೈಗೊಂಬೆಯಾಗಿ ಒಂದೆರಡು ಮರಿ ರೌಡಿಗಳ ಕೊಲೆಯನ್ನೂ ಮಾಡುತ್ತಾನೆ. ಇವೆಲ್ಲ ವಂಶಿಯನ್ನು ಬೆಂಗಳೂರಿನ ನಂಬರ್ ವನ್ ರೌಡಯ ಹುದ್ದೆಗೇರಿಸುತ್ತವೆ. ಮುಂದೆ???… ತಂದೆಯ ನೆರಳು ಕೂಡ ಮಗನ ಮೇಲೆ ಬೀಳಬಾರದು.. ಮಗ ತಂದೆಯಂತೆ ಮಚ್ಚು ಹಿಡಿಯದೇ ಮಚ್ಚು ಹಿಡಿದವರನ್ನು ಹಿಡಿದು ಶಿಕ್ಷಿಸಿ ಸರಿದಾರಿಗೆ ತರುವ ಪೋಲೀಸ್ಆಗಬೇಕೆಂದು ಕನಸು ಕಂಡಿದ್ದ ತಾಯಿಯ ಗತಿ? ಆಕೆ ಇದನ್ನೆಲ್ಲ ಹೇಗೆ ಸ್ವೀಕರಿಸುತ್ತಾಳೆ? ಪೋಲೀಸ್ ಆಗಿ ತಾಯಿಯ ಮುಂದೆ ನಿಲ್ಲಬೇಕಾಗಿದ್ದ ಮಗ ರೌಡಿಯಾಗಿ ತಾಯಿಯನ್ನು ಹೇಗೆ ಎದುರಿಸುತ್ತಾನೆ? ಬೆಳ್ಳಿ ತೆರೆಯ ಮೇಲೆ ವೀಕ್ಷಿಸಿ….
ತಾಂತ್ರಿಕ ವರ್ಗಗಳ ವಿಶ್ಲೇಷಣೆ…
ನಿರೂಪಣೆ: ದ್ವಿತೀಯಾರ್ಧದಲ್ಲಿ ಒಂದೆರಡು ಕಡೆ ಬಿಟ್ಟರೆ ಚಿತ್ರದ ನಿರೂಪಣೆ ವೇಗವಾಗಿದೆ. ಪ್ರಕಾಶ್ ಹಿಂದಿನ ಚಿತ್ರಗಳಲ್ಲಿ ಹೆಚ್ಚಾಗಿ ಕಾಣಿಸುತ್ತಿದ್ದ ಆಮೆಗತಿಯ ನಿರೂಪಣೆ ಇಲ್ಲಿಲ್ಲ.
-
ಕಥೆ: ಇದುವರೆಗೆ ಎಲ್ಲಿಯೂ ಕಂಡರಿಯದ ಕೇಳರಿಯದ ವಿಶಿಷ್ಠ ಕಥೆಯೇನೂ ಅಲ್ಲ. ಇಷ್ಟವಿರದಿದ್ದರೂ ಪರಿಸ್ಥಿತಿಯ ಒತ್ತಡದಿಂದಾಗಿ ಯಾರನ್ನೋ ಕೊಲ್ಲುವುದು, ಅದರಿಂದಾಗಿ ರೌಡಿಪಟ್ಟ ಬರುವುದು, ರೌಡಿ ಸಾಮ್ರಾಜ್ಯದ ಅಧಿಪತಿಯಾಗುವುದು, ಇವೆಲ್ಲ ಅನೇಕ ಚಿತ್ರಗಳಲ್ಲಿ ಬಂದಿರುವ ಕಥೆ. ವಂಶಿಯ ಕಥೆಯೂ ಇದಕ್ಕೆ ಹೊರತಾಗಿಲ್ಲ. ಹಾಗಂತ ಇದು ಸಂಪೂರ್ಣ ರೌಡಿಸಂ ಚಿತ್ರವಲ್ಲ. ಇದರಲ್ಲಿ ತಾಯಿ-ಮಗನ ಬಾಂಧವ್ಯದ ಕಥೆಯೂ ಇದೆ.
- ಸಂಭಾಷಣೆ: ಕೆಲವೊಂದು ಸಂಭಾಷಣೆಗಳು ಉತ್ತಮವಾಗಿದ್ದು ಪ್ರೇಕ್ಷಕರ ಶಿಳ್ಳೆ ಗಿಟ್ಟಿಸುತ್ತವೆ.
-
ಹಾಡುಗಳ ಚಿತ್ರೀಕರಣ: ಜೊತೆ ಜೊತೆಯಲಿ ಮತ್ತು ಅಮಲು ಅಮಲು ಹಾಡುಗಳನ್ನು ಸುಂದರ ತಾಣಗಳಲ್ಲಿ ಚಿತ್ರೀಕರಿಸಲಾಗಿದೆ.
-
ಛಾಯಾಗ್ರಹಣ: ಛಾಯಾಗ್ರಹಣವೇ ಚಿತ್ರದ ಪ್ರಧಾನ ಆಕರ್ಷಣೆಯಂತೆ ಕಾಣದಿದ್ದರೂ ಎರಡು ಫೈಟ್, ಎರಡು ಹಾಡುಗಳನ್ನು ಸುಂದರವಾಗಿ ಚಿತ್ರಿಸಲಾಗಿದೆ.
-
ಸಾಹಸ: ಚಿತ್ರದಲ್ಲಿ ಸಾಹಸ ದೃಶ್ಯಗಳಿಗೇನೂ ಕೊರತೆಯಿಲ್ಲ. ತರಕಾರಿ ಮಾರ್ಕೆಟ್ ಫೈಟಿಂಗ್ ಅದ್ಭುತವಾಗಿ ಬಂದಿದೆ.ಇನ್ನೊಂದು ಫೈಟಿಂಗಲ್ಲಿ ಉರಿಯುತ್ತಿರುವ ಟಯರ್‍ಗಳನ್ನು ಬಳಸಿದ್ದು ಅದು ಕೂಡ ಚೆನ್ನಾಗಿ ಮೂಡಿ ಬಂದಿದೆ.
-
ಸಂಗೀತ: ಆರ್.ಪಿ.ಪಟ್ನಾಯಕ್ ಸಂಗೀತದಲ್ಲಿ ಭುವನಂ ಗಗನಂ, ಜೊಜೆ ಜೊತೆಯಲಿ ಮತ್ತು ಡಾ. ರಾಜ್ ಕುಮಾರ್ ಹಾಡಿರುವ ಹೂವು ಹಣ್ಣು ಚಿತ್ರದ ತಾಯಿ ತಾಯಿ ಹಾಡುಗಳು ಉತ್ತಮವಾಗ ಬಂದಿವೆ. ಮಾಯಗಾತಿ ನಿಂಗವ್ವ ಹಾಡು ಅನವಶ್ಯಕ. ಆದರೂ ಮಿಲನ ಚಿತ್ರದ ಹಾಡುಗಳಲ್ಲಿದ್ದ ಆಕರ್ಷಣೆ ವಂಶಿಯ ಹಾಡುಗಳಲ್ಲಿ ಅಷ್ಟಾಗಿ ಕಾಣುವುದಿಲ್ಲ!
ಅಭಿನಯ…
-
ಲಕ್ಷ್ಮಿ: ಪುನೀತ್ ತಾಯಿಯ ಪಾತ್ರದಲ್ಲಿ ಲಕ್ಷ್ಮಿಯವರದ್ದು ಪ್ರಬುದ್ಧ ಭಾವಪೂರ್ಣ ಅಭಿನಯ.ಎಂತಹ ಪಾತ್ರವನ್ನೂ ಲೀಲಾಜಾಲವವಾಗಿ ಅಭಿನಯಿಸಬಲ್ಲ ಹಿರಿಯ ನಟಿ ಲಕ್ಷ್ಮಿಯವರ ಅಭಿನಯಕ್ಕೆ ಎಂತಹವರೂ ತಲೆ ಬಾಗಲೇ ಬೇಕು.ಸೆಂಟಿಮೆಂಟಲ್ ದೃಶ್ಯಗಳಲ್ಲಿ ಲಕ್ಷ್ಮಿಯವರ ಅಭಿನಯಕ್ಕೆ HATS OFF!
-
ಪುನೀತ್ ರಾಜ್ ಕುಮಾರ್:
ನನ್ನ ಪ್ರಕಾರ ಇದುವರೆಗಿನ ಪುನೀತ್ ಚಿತ್ರಗಳ ಪೈಕಿ ಅಭಿನಯದ ವಿಚಾರದಲ್ಲಿ ಇದು ಮೊದಲ ಸ್ಥಾನದಲ್ಲಿ ನಿಲ್ಲಬಹುದಾದ ಚಿತ್ರ. ಪುನೀತ್ ಅಭಿನಯದಲ್ಲು ತುಂಬಾ ಪಕ್ವತೆ ಎದ್ದು ಕಾಣುತ್ತದೆ.ಲಕ್ಷ್ಮಿಯಂತಹ ಹಿರಿಯ ನಟಿಯ ಅಭಿನಯದ ಜೊತೆ ಹೋಲಿಸುವುದು ತರವಲ್ಲ.ಅಂಥವರೆದುರು ನಿಂತು ಅಭಿನಯಿಸುವುದೂ ಒಂದು ರೀತಿಯ ಸವಾಲೇ ಸರಿ! ಪುನೀತ್ ಆ ಪ್ರಯತ್ನದಲ್ಲಿ ಗೆಲ್ಲುತ್ತಾರೆ! ಆಕ್ಷನ್ ದೃಶ್ಯಗಳ ಜೊತೆಗೆ ಈ ಬಾರಿ ಸೆಂಟಿಮೆಂಟಲ್ ಪಾತ್ರವನ್ನೂ ಕೂಡ ಉತ್ತಮವಾಗಿಯೇ ನಿಭಾಯಿಸಿರುವುದು ಅಭಿನಯದಲ್ಲಿ ಅವರು ಮಾಗಿರುವುದಕ್ಕೆ ಸಾಕ್ಷಿ.
-
ಚಿತ್ರದ ಕಥೆಗೆ ನಾಯಕಿ ಪಾತ್ರ ಬೇಕೇ ಬೇಕು ಎನ್ನುವಂತಿಲ್ಲ. ನಾಯಕಿ ಪಾತ್ರಕ್ಕೆ ಹೆಚ್ಚು ಒತ್ತು ಕೊಡುವುದಕ್ಕಾಗಿಯೇ ಕೆಲವೊಂದು ದೃಶ್ಯಗಳನ್ನು ಅನವಶ್ಯಕವಾಗಿ ತುರುಕಲಾಗಿದೆ. ನಿಖಿತಾ ಅಭಿನಯ ಅತ್ಯುತ್ತಮವಲ್ಲದಿದ್ದರೂ ಕಳಪೆಯಂತೂ ಅಲ್ಲ. ತಕ್ಕ ಮಟ್ಟಿಗೆ ಅಭಿನಯಿಸಿದ್ದಾಳೆ.
-
ಕೋಮಲ್ ಕುಮಾರ್ :ಚಿತ್ರದಲ್ಲಿ ಕೋಮಲ್ ಹಾಸ್ಯ ಅಲ್ಲಲ್ಲಿ ಕಚಗುಳಿಯಿಡುತ್ತದೆ. ತಾನೊಬ್ಬ ದೊಡ್ಡ ರೌಡಿ ಎಂದು ತೋರಿಸಲು ಹೋಗಿ ನಗೆಪಾಟಲಿಗೀಡಾಗುವ ಅವರ ಪಾತ್ರ ಜನರನ್ನು ನಗಿಸುವಲ್ಲಿ ಯಶಸ್ವಿಯಾಗುತ್ತದೆ! ಆದರೆ ಅವರ ಪಾತ್ರಕ್ಕೆ ಅಂತಹ ದೊಡ್ಡ ಅವಕಾಶವೇನೂ ಇಲ್ಲ.
- ಖಳ ಪೋಲೀಸ್ ಅಧಿಕಾರಿಯಾಗಿ ರವಿ ಕಾಳೆ, ರೌಡಿ ಜಯಚಂದ್ರನಾಗಿ ರಾಜೇಂದ್ರ ಕಾರಂತ್ ಅಭಿನಯ ಕೂಡ ಉತ್ತಮವಾಗಿದೆ. ಉಳಿದಂತೆ ಸುಂದರ್ ರಾಜ್, ವಿದ್ಯಾ ಮೂರ್ತಿ, ಅವಿನಾಶ್ ಓಕೆ.
ಹಾಗಾದ್ರೆ ಚಿತ್ರದಲ್ಲಿ ನೆಗೆಟಿವ್ ಅಂಶಗಳೇ ಇಲ್ಲವೇ?…
- ಯಾಕಿಲ್ಲ.. ಇವೆ. ನಿರ್ದೇಶಕರು ಚಿತ್ರದ ಕ್ಲೈಮ್ಯಾಕ್ಸನ್ನ ಚಿತ್ರಿಸಿರುವ ರೀತಿ ಅಷ್ಟೊಂದು ಸಮಂಜಸವಾಗಿಲ್ಲ. ಕ್ಲೈಮ್ಯಾಕ್ಸನ್ನು ಇನ್ನಷ್ಟು ಸಮರ್ಥವಾಗಿ ನಿಭಾಯಿಸಬಹುದಿತ್ತೇನೋ ಅನ್ನಿಸುತ್ತದೆ. ಚಿತ್ರದ ಕೊನೆಯ ದೃಶ್ಯಗಳು ಭಾವನಾತ್ಮಕವಾಗಿದ್ದರೂ ಕೂಡ ಪ್ರೇಕ್ಷಕರ ಮೇಲೆ ಅಂತಹ ಗಾಢ ಪ್ರಭಾವವನ್ನೇನೂ ಬೀರುವುದಿಲ್ಲ. ಜನ ಮಾಮೂಲಾಗಿಯೇ ಕ್ಲೈಮ್ಯಾಕ್ಸನ್ನೂ ನೋಡುತ್ತಾರೆ.. ಮಾಮೂಲಾಗಿಯೇ ಹೊರಬರುತ್ತಾರೆ. ಸಾಮಾನ್ಯವಾಗಿ ತುಂಬಾ ಸೆಂಟಿಮೆಂಟಲ್ ಕ್ಲೈಮ್ಯಾಕ್ಸ್ ಇರುವ ಚಿತ್ರ ಮುಗಿಸಿ ಹೊರಬರುವಾಗ ಒಂದು ಹ್ಯಾಂಗ್ ಓವರ್ ಇರುತ್ತದೆ. ಆದರೆ ಆ ರೀತಿಯ ಹ್ಯಾಂಗ್ ಓವರ್ ಅಥವಾ ಫೀಲ್‍ನ ಕೊರತೆ ಈ ಚಿತ್ರದಲ್ಲಿ ಎದ್ದು ಕಾಣುತ್ತದೆ.
- ಮಾಯಗಾತಿ ಹಾಡು ಚಿತ್ರಕ್ಕೆ ಬೇಕಿತ್ತಾ?
- ನಾಯಕ ನಾಯಕಿ ನಡುವೆ ಪ್ರೇಮಾಂಕುರವಾಗುವುದನ್ನು ಇನ್ನಷ್ಟು ಸಮರ್ಥವಾಗಿ ತೋರಿಸಬಹುದಿತ್ತು. ಝಟಾ ಪಟ್ ಲವ್,ಝಟಾ ಪಟ್ ಒಂದರ ಹಿಂದೊಂದರಂತೆ ಎರಡು ಡ್ಯೂಯೆಟ್‍ಗಳು!
- ಸುಂದರ್ ರಾಜ್-ವಿದ್ಯಾ ಮೂರ್ತಿ (ನಾಯಕಿಯ ಅಪ್ಪ ಅಮ್ಮ) ಪಾತ್ರಗಳನ್ನು ಒಮ್ಮೊಮ್ಮೆ ಹಾಸ್ಯ ಪಾತ್ರಗಳನ್ನಾಗಿ ತೋರಿಸಿದ್ದು ಇನ್ನೊಂದಿಷ್ಟು ಕಡೆ ತೀರಾ ಗಂಭೀರವಾಗಿ ತೋರಿಸಲಾಗಿದೆ. ಇದರಿಂದಾಗಿ ವೀಕ್ಷಕರಲ್ಲಿ ಈ ಎರಡು ಪಾತ್ರಗಳ ಮೂಲ ಸ್ವಭಾವ / ಆಶಯದ ಬಗ್ಗೆ ಕೊಂಚ ಗೊಂದಲವಾಗುತ್ತದೆ.
- ಅಭಿನಯ ಬಿಟ್ಟರೆ EXTRA ORDINARY ಅನ್ನೋ ರೀತಿ ಯಾವುದೂ ಇಲ್ಲ. ಎಲ್ಲವೂ ತಕ್ಕ ಮಟ್ಟಿಗೆ ಚೆನ್ನಾಗಿದೆ. ಇನ್ನೂ ಚೆನ್ನಾಗಿರಬಹುದಿತ್ತು ಅನ್ನಿಸುತ್ತದೆ! ಚಿತ್ರವನ್ನು ಇನ್ನೂ ಉತ್ತಮ ರೀತಿಯಲ್ಲಿ ನಿಭಾಯಿಸಬಹುದಿತ್ತು ಅಂತ ಅನಿಸುವುದು ಮಾತ್ರ ಸತ್ಯ!
ಒಟ್ಟಿನಲ್ಲಿ ಚಿತ್ರದಲ್ಲಿ ಲಕ್ಷ್ಮಿ – ಪುನೀತ್ ಕಾಂಬಿನೇಷನ್ ಚೆನ್ನಾಗಿ ವರ್ಕ್ ಔಟ್ ಆಗಿದೆ. ಅವರಿಬ್ಬರ ಅಮೋಘ ಅಭಿನಯವಿದೆ. ನಿರೂಪಣೆ ಚುರುಕಾಗಿದೆ, ಒಂದಿಷ್ಟು ಹಾಸ್ಯ ದೃಶ್ಯಗಳಿವೆ. ಭಾವನಾತ್ಮಕ ದೃಶ್ಯಗಳು, ತಾಯಿ-ಮಗನ ಬಾಂಧವ್ಯದ ದೃಶ್ಯಗಳು ಹೇರಳವಾಗಿವೆ.ಎರಡು ಮೂರು ಹಾಡುಗಳು ಸುಂದರವಾಗಿ ಮೂಡಿ ಬಂದಿವೆ. ವಂಶಿ ಒಂದು ಒಳ್ಳೆಯ ಚಿತ್ರ ಎನ್ನಬಹುದು! ಒಳ್ಳೆಯ ಅಭಿನಯಕ್ಕಾದರೂ ಒಮ್ಮೆ ಧಾರಾಳವಾಗಿ ನೋಡಬಹುದು.
Overall 7/10