ಮಳೆ ನಿಂತು ಹೋದ ಮೇಲೆ ಖುಷಿ ಮತ್ತೆ ಬಂದಿದೆ…

Published on August 31, 2008 by admin   ·   No Comments
ಕಳೆದ ವರ್ಷವಿಡೀ ಬೆಂಗಳೂರಿನ ಪಿವಿಆರ್ ಎಂಬ ಕಾಸ್ಮೋ ಚಿತ್ರಮಂದಿರದಲ್ಲಿ ಕನ್ನಡದ ಮುಂಗಾರು ಮಳೆ ಧಾರಾಕಾರವಾಗಿ ಸುರಿದು ಇಡೀ ದೇಶವೇ ಅಚ್ಚರಿ ಪಡುವಂತೆ ಮಾಡಿತ್ತು. ಮಲ್ಟಿಪ್ಲೆಕ್ಸ್ ಚಿತ್ರಮಂದಿರದಲ್ಲಿ ಒಂದು ವರ್ಷಕ್ಕೂ ಹೆಚ್ಚು ಕಾಲ ಸತತವಾಗಿ ಪ್ರದರ್ಶನಗೊಂಡ ದೇಶದ ಮೊಟ್ಟ ಮೊದಲ ಚಿತ್ರವೆಂಬ ಹೆಗ್ಗಳಿಕೆಗೆ ಮುಂಗಾರು ಮಳೆ ಪಾತ್ರವಾಗಿದ್ದು ಈಗ ಇತಿಹಾಸ. ಇದೀಗ ಮತ್ತೊಂದು ಚಿತ್ರ ಅದೇ ಹಾದಿಯಲ್ಲಿದೆ. ಅದೂ ಕೂಡ ಕನ್ನಡ ಚಿತ್ರವೇ ಎನ್ನುವುದು ಕನ್ನಡಿಗರು ಹೆಮ್ಮೆ ಪಡುವ ವಿಚಾರ! ಹೌದು.. ಕಳೆದ ವರ್ಷ ಸಪ್ಟೆಂಬರ್‍ನಲ್ಲಿ ತೆರೆಕಂಡ ಮಿಲನ ಇದೇ ಪಿವಿಆರ್‍ನಲ್ಲಿ ಇನ್ನೆರಡು ವಾರಗಳಲ್ಲಿ ಒಂದು ವರ್ಷ ಪೂರೈಸಲಿದೆ. ಮಳೆ ನಿಂತು ಹೋದರೇನಂತೆ ಕನ್ನಡ ಚಿತ್ರಗಳ ದಾಖಲೆಯ ಪ್ರದರ್ಶನ ಮಾತ್ರ ಪಿವಿಆರ್‍ನಲ್ಲಿ ನಿಂತಿಲ್ಲ.
ಮುಂಗಾರು ಮಳೆ ಮತ್ತು ಮಿಲನ – ಎರಡೂ ಚಿತ್ರಗಳ ಹಿಂದಿನ ಯಶಸ್ಸಿನಲ್ಲಿ ಸಿಂಹಪಾಲು ಸಂಗೀತಕ್ಕೆ. ಎರಡೂ ಚಿತ್ರಗಳಿಗೂ ಮನೋಮೂರ್ತಿಯವರೇ ಸಂಗೀತ ನಿರ್ದೇಶಕರು! ಅಲ್ಲಿಗೆ ಮನೋಮೂರ್ತಿಯವರದು ಡಬಲ್ ಸಾಧನೆ. ಅವರ ಎರಡು ಚಿತ್ರಗಳು ಒಂದು ವರ್ಷದ ಪ್ರದರ್ಶನ ಕಂಡಂತಾಗುತ್ತದೆ. ಸಾಹಿತಿ ಜಯಂತ್ ಕಾಯ್ಕಿಣಿ, ಗಾಯಕರಾದ ಸೋನು ನಿಗಂ ಮತ್ತು ಶ್ರೇಯಾ ಗೋಶಲ್ ಕೂಡ ಈ ಎರಡೂ ಚಿತ್ರಗಳ ಯಶಸ್ವೀ ರೂವಾರಿಗಳು. ಮಿಲನ ಚಿತ್ರದ ಹಾಡುಗಳು ಇಂದಿಗೂ ಅತ್ಯಂತ ಬೇಡಿಕೆಯ ಹಾಡುಗಳು. ನಿನ್ನಿಂದಲೇ ನಿನ್ನಿಂದಲೇ ಮತ್ತು ಮಳೆ ನಿಂತು ಹೋದ ಮೇಲೆ ಚಿತ್ರದ ಅತ್ಯಂತ ಬೇಡಿಕೆಯ ಹಾಡುಗಳು.
ಒಟ್ಟಿನಲ್ಲಿ ಎರಡನೇ ಕನ್ನಡ ಚಿತ್ರವೊಂದು ಪಿವಿಆರ್‍ನ ಪುಟಗಳಲ್ಲಿ ದಾಖಲೆಯಾಗಿ ನೆಲೆಯೂರುತ್ತಿದೆ. ಗಂಧದಗುಡಿ ತಂಡ ಈ ಸಂದರ್ಭದಲ್ಲಿ ಮಿಲನ ಚಿತ್ರಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತದೆ. ಪುನೀತ್, ಪಾರ್ವತಿ, ನಿರ್ದೇಶಕ ಪ್ರಕಾಶ್ ಮತ್ತು ಚಿತ್ರದ ಸಮಸ್ತ ತಾಂತ್ರಿಕ ವರ್ಗಕ್ಕೂ ಶುಭಾಶಯಗಳು!
Readers Comments (0)




Please note: Comment moderation is enabled and may delay your comment. There is no need to resubmit your comment.

Author Info