ಗಂಧದಗುಡಿ ಆಡಿಯೋ ವಿಮರ್ಶೆ…
ಚಿತ್ರ: ನನ್ನುಸಿರೇ (2008)
ತಾರಾಗಣ: ರಾಹುಲ್, ಮನಿಷಾ
ಸಂಗೀತ: ಪ್ರೇಮ್‍ಜೀ ಗಂಗೈ ಅಮರನ್
ಕನ್ನಡ ಚಿತ್ರಗಳಲ್ಲಿ ಹೊಸ ಸಂಗೀತದ ಶಕೆ ಆರಂಭವಾಗಿದೆ. ಕನ್ನಡ ಹಾಡುಗಳನ್ನು ಪ್ರಸಾರ ಮಾಡದೇ ಉಡಾಫೆ ಮಾಡುತ್ತಿದ್ದ ಖಾಸಗಿ ಎಫ್.ಎಂ.ವಾಹಿನಿಗಳೆಲ್ಲ ಈಗ ಸಂಪೂರ್ಣ ಕನ್ನಡ ಮಯ. ಕನ್ನಡ ಹಾಡುಗಳನ್ನು ಕೇಳಿಸಿ ಕೊಳ್ಳಲು ಅಸಡ್ಡೆ ಪಡುತ್ತಿದ್ದ ಸಾಫ್ಟ್ ವೇರ್ ಕಾಲ್ ಸೆಂಟರ್ ಯುವ ಜನತೆ ಬಾಯಲ್ಲಿ ಈಗ ಸದಾ ಕನ್ನಡ ಹಾಡುಗಳದ್ದೇ ಗುನುಗಾಟ. ಕೇವಲ ಕನ್ನಡದವರೇ ಅಲ್ಲ, ಮಳೆಯಾಳಿ ನಾಯರ್, ತಮಿಳುನಾಡು ಅಯ್ಯರ್, ಆಂಧ್ರದ ರೆಡ್ಡಿಗಾರು, ಮಹಾರಾಷ್ಟ್ರದ ಶಿಂಧೆಗಾರು, ಪಂಜಾಬಿ ಸರ್ದಾರ, ಬಂಗಾಳಿ ಠಾಕೂರ ಎಲ್ಲರ ಬಾಯಲ್ಲೂ ಕನ್ನಡ ಹಾಡುಗಳು! ಹೀಗಿರುವಾದ ಕೇವಲ ಇಲ್ಲಿಯವರಲ್ಲದೇ ಹೊರ ನಾಡಿನಿಂದ ಕೂಡ ಹೊಸ ಹೊಸ ಪ್ರತಿಭೆಗಳು ಸಂಗೀತ ನಿರ್ದೇಶಕರಾಗಿ ಪರಿಚಿತರಾಗುತ್ತಿದ್ದಾರೆ. ಅಲ್ಲದೇ ತಮ್ಮ ಹೊಸ ಬಗೆಯ ಸಂಗೀತದಿಂದ ಯಶಸ್ಸನ್ನು ಕೂಡ ಕಾಣುತ್ತಿದ್ದಾರೆ. ಇವರ ಸಾಲಿಗೆ ಹೊಸ ಸೇರ್ಪಡೆ ದಕ್ಷಿಣ ಭಾರತದ ವಿಖ್ಯಾತ ಸಂಗೀತ ನಿರ್ದೇಶಕ ಇಳೆಯರಾಜಾ ಅವರ ಸೋದರನ ಮಗ (ತಮಿಳು ಚಿತ್ರ ನಿರ್ದೇಶಕ ಗಂಗೈ ಅಮರನ್ ಅವರ ಮಗ) ಪ್ರೇಂಜೀ ಗಂಗೈ ಅಮರನ್ ಕೂಡ! ಚಿತ್ರದ ಹೆಸರು ನನ್ನುಸಿರೇ!
ಇನ್ನೊಂದೆಡೆ ಗಣೇಶ ಕಿರುತೆರೆಯಿಂದ ಹಿರಿತೆರೆಗೆ ಬಂದು ಯಶಸ್ವಿ ಆಗಿದ್ದೇ ತಡ, ಕಿರು ತೆರೆಯ ನಿರೂಪಕರ, ಕಲಾವಿದರು ಒಬ್ಬರಾದ ಮೇಲೆ ಒಬ್ಬರಂತೆ ಕನ್ನಡ ಬೆಳ್ಳಿ ತೆರೆಯ ಮೇಲೆ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗುತ್ತಿದ್ದಾರೆ. ಈಗ ಇವರ ಸಾಲಿಗೆ ಹೊಸ ಸೇರ್ಪಡೆ ಉದಯ ಟಿವಿ ನಿರೂಪಕ ರಾಹುಲ್! ಚಿತ್ರದ ಹೆಸರು ನನ್ನುಸಿರೇ!
ಹೀಗೆ ಹೊಸ ಸಂಗೀತ ನಿರ್ದೇಶಕರ, ಹೊಸ ಕಲಾವಿದರ ಸಂಗಮದ ನನ್ನುಸಿರೇ ಚಿತ್ರದ ಹಾಡುಗಳು ಹೊಸತನದಿಂದ ಕೂಡಿರುವುದಂತೂ ಸತ್ಯ!
ಒಟ್ಟು ಹಾಡುಗಳು – 6
1. ನಿನಗಾಗಿಯೇ ನಿನಗಾಗಿಯೇ (ಚಿತ್ರಾ, ಶ್ರೀರಾಮ್; ಸಾಹಿತ್ಯ- ಜಯಂತ್ ಕಾಯ್ಕಿಣಿ) : ಚಿತ್ರಾ ಅವರ ಇಂಪಾದ ಕಂಠದಲ್ಲಿ ಮಾಧುರ್ಯ ಪ್ರಧಾನ ಸಂಗೀತಕ್ಕೆ ಜಯಂತ್ ಕಾಯ್ಕಿಣಿ ಸಾಹಿತ್ಯ ಇದ್ದರೆ ಕೇಳಲು ಹೇಗಿರುತ್ತದೆ? ಹೋಳಿಗೆ ಮೇಲೆ ತುಪ್ಪ ಹಾಕಿ ಸವಿದಂತಿರುತ್ತದೆ! 8/10
2. ಸಂಜೆ ಬೀಚಿನಲಿ (ಪ್ರೇಂಜಿ ಗಂಗೈ ಅಮರನ್, ವಸುಂಧರಾ ದಾಸ್; ಸಾಹಿತ್ಯ- ಹೃದಯ ಶಿವ) : ಹಾಡು ಶುರುವಾಗುವಾಗ 60ರ ದಶಕದ ಹಾಡಿನ ಸಂಗೀತವನ್ನು ನೆನಪಿಸುತ್ತದೆ… ಬರ್ತಾ ಬರ್ತಾ ಇದು ಫುಲ್ ರಾಪ್ ಸ್ಟೈಲ್ ಪಡೆದುಕೊಂಡು ವಿಭಿನ್ನ ಅನುಭವವನ್ನು ಕೊಡುತ್ತದೆ. THE BEST SONG OF THE ALBUM. ಮುಂಬರುವ ದಿನಗಳಲ್ಲಿ ಸೂಪರ್ ಹಿಟ್ ಹಾಡಾಗುವ ಎಲ್ಲ ಲಕ್ಷಣಗಳಿವೆ! 9/10
3. ನೀನು ನನಗಾಗಿ (ಕಾರ್ತಿಕ್, ಶ್ರೀನಿವಾಸ್; ಸಾಹಿತ್ಯ-ಕವಿರಾಜ್ ) : ಕೇಳಲು ಹಿತವಾಗಿದೆ. ಹಿನ್ನೆಲೆ ಸಂಗೀತದ ಬೀಟ್ಸ್ ಕೂಡ ಚೆನ್ನಾಗಿದೆ. 8/10
4. ನನ್ನುಸಿರು ನನ್ನೊಳಗಿರೊವರೆಗೂ (ನವೀನ್, ಶ್ವೇತಾ; ಸಾಹಿತ್ಯ- ಹೃದಯಶಿವ) : ಪಾಶ್ಚಾತ್ಯ ಶೈಲಿಯ ಫಾಸ್ಟ್ ಸಾಂಗ್. ಸುಮಾರಾದ ಹಾಡು. 6/10
5. ಮುಂಜಾನೆ ಸೂರ್ಯನಾಣೆ (ಸುಜಾತಾ; ಸಾಹಿತ್ಯ- ಕವಿರಾಜ್) : ಅಂತಹ ವಿಶೇಷವೇನೂ ಇರದ ಸುಮಾರಾದ ಹಾಡು. 6/10
6. ಹೆಸರಿನ ಮೇಲೂ ಪ್ರೀತಿ (ನಂದಿತಾ, ರಾಜೇಶ್ ಕೃಷ್ಣನ್; ಸಾಹಿತ್ಯ-ವಿ. ನಾಗೇಂದ್ರ ಪ್ರಸಾದ್) – ಕೇಳಲು ಹಿತವಾದ ಇಂಪಾದ ಯುಗಳ ಗೀತೆ. ಸೂಪರ್ ಅಲ್ಲದಿದ್ದರೂ ಉತ್ತಮ ಗೀತೆ. 7/10
ಒಟ್ಟಿನಲ್ಲಿ ನನ್ನುಸಿರೇ ಒಂದು ವಿಭಿನ್ನ ಪ್ರಯತ್ನ. ಎರಡು ಮೂರು ಹಾಡುಗಳು ಗಮನ ಸೆಳೆಯುವುದಂತೂ ನಿಜ! ದಯವಿಟ್ಟು ಕ್ಯಾಸೆಟ್/ಸಿಡಿ ಕೊಂಡು ಕೇಳಿ.. ಆನಂದಿಸಿ.
akumar.reach@gmail.com