ಗಂಧದಗುಡಿ ಫ್ಲಾಶ್ ಬ್ಯಾಕ್ 5 : ನಾಗರಹಾವು !

Published on September 16, 2008 by admin   ·   1 Comment
“ಹಳೆ ಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು” ಎಂಬ ಮಾತು ಕನ್ನಡಚಿತ್ರರಂಗದ ಮಟ್ಟಿಗೆ ಅಕ್ಷರಷಃ ನಿಜ. “ಸತೀ ಸುಲೋಚನಾ” ಟಾಕಿ ಚಿತ್ರದಿಂದ ಆರಂಭಗೊಂಡ ಯಾತ್ರೆ ಇಂದಿನವರೆಗೂ  ನಿರಾತಂಕವಾಗಿ ಸಾಗಿದೆ. ಬದಲಾದ ಕಾಲಕ್ಕೆ ತಕ್ಕಂತೆ ಹೊಸ ಆಯಾಮಗಳನ್ನು, ಹೊಸತನಗಳನ್ನು ಮೈಗೂಡಿಸಿಕೊಂಡು ನಳನಳಿಸುತ್ತಿರುವ ಕನ್ನಡ ಚಿತ್ರರಂಗದ ಇತಿಹಾಸದ ಪುಟಗಳು ಕೂಡ ಅಷ್ಟೇ ಶ್ರೀಮಂತವಾಗಿವೆ. ಕನ್ನಡ ಚಿತ್ರರಂಗ ಸಾಗಿ ಬಂದ ಹಾದಿಯಲ್ಲಿ ಅದೆಷ್ಟೋ ಚಿತ್ರಗಳು ಮೈಲಿಗಲ್ಲುಗಳಾಗಿವೆ. ಜನ ಮಾನಸದಲ್ಲಿ ಇಂದಿಗೂ ಹಸಿರಾಗಿರುವ ಹಲವಾರು ಚಿತ್ರರತ್ನಗಳಿವೆ. ಅವುಗಳಲ್ಲಿ ಕೆಲವು ಅನರ್ಘ್ಯ ರತ್ನಗಳತ್ತ ಮತ್ತೊಮ್ಮೆ ಅವಲೋಕಿಸುವ ಕಿರು ಪ್ರಯತ್ನವೇ ಈ “ಗಂಧದಗುಡಿ ಫ್ಲಾಶ್ ಬ್ಯಾಕ್”. ಪ್ರತೀ ವಾರ ಒಂದೊಂದು ಮರೆಯಲಾಗದ ಚಿತ್ರದ ಬಗ್ಗೆ ಮಾತಾಡೋಣ.

ಇಂದಿನ ಚಿತ್ರ – “ನಾಗರಹಾವು

sa2

ಕಿರು ಮಾಹಿತಿ:

  • ಚಿತ್ರ ನಿರ್ಮಾಣ ಸಂಸ್ಥೆ: ಈಶ್ವರಿ ಪ್ರೊಡಕ್ಷನ್ಸ್
  • ಬಿಡುಗಡೆಯಾದ ವರ್ಷ: 1972
  • ಪಾತ್ರವರ್ಗ: ವಿಷ್ಣುವರ್ಧನ್, ಅಶ್ವಥ್, ಆರತಿ, ಜಯಂತಿ,ಅಂಬರೀಶ್, ಶಿವರಾಂ,ಶುಭ, ಲೀಲಾವತಿ, ಲೋಕನಾಥ್,ಧೀರೇಂದ್ರ ಗೋಪಾಲ್, ಲಕ್ಷ್ಮೀದೇವಿ
  • ಕಥೆ: ತ.ರಾ.ಸು.
  • ಸಂಗೀತ: ವಿಜಯಭಾಸ್ಕರ್
  • ಗೀತ ಸಾಹಿತ್ಯ: ವಿಜಯ ನಾರಸಿಂಹ, ಆರ್.ಎನ್.ಜಯಗೋಪಾಲ್
  • ಚಿತ್ರಕಥೆ: ಪುಟ್ಟಣ್ಣ ಕಣಗಾಲ್
  • ಸಂಕಲನ: ವಿ.ಪಿ.ಕೃಷ್ಣ
  • ನೃತ್ಯ: ಉಡುಪಿ ಬಿ. ಜಯರಾಂ
  • ಹಿನ್ನೆಲೆ ಗಾಯಕರು: ಪಿ.ಬಿ.ಶ್ರೀನಿವಾಸ್, ಪಿ.ಸುಶೀಲ, ಎಸ್.ಪಿ.ಬಾಲಸುಬ್ರಹ್ಮಣ್ಯಂ
  • ಛಾಯಾಗ್ರಹಣ: ಚಿಟ್ಟಿಬಾಬು
  • ನಿರ್ಮಾಪಕರು: ಎನ್.ವೀರಾಸ್ವಾಮಿ
  • ನಿರ್ದೇಶಕ: ಪುಟ್ಟಣ್ಣ ಕಣಗಾಲ್

d

ವಿಷ್ಣುವರ್ಧನ್ ಮತ್ತು ಅಂಬರೀಶ್ ಎಂಬಿಬ್ಬರು ಮಹಾನ್ ತಾರೆಯರನ್ನು ಕನ್ನಡ ಚಿತ್ರರಂಗಕ್ಕೆ ಕೊಡುಗೆಯಾಗಿ ನೀಡಿದ ಹೆಗ್ಗಳಿಕೆ 1972 ರಲ್ಲಿ ತೆರೆಕಂಡ ನಾಗರಹಾವು ಚಿತ್ರದ್ದು. ನಾಗರಹಾವು ಚಿತ್ರದ ನಿರ್ದೇಶಕರು ಯಾರೆಂದು ಗೊತ್ತು ತಾನೇ? ಭಾರತೀಯ ಚಿತ್ರರಂಗದವೇ ಕನ್ನಡ ಚಿತ್ರರಂಗದತ್ತ ಬೆರಗಾಗಿ ನೋಡುವಂತೆ ಮಾಡಿದ ಸ್ಟಾರ್ ನಿರ್ದೇಶಕ ಪುಟ್ಟಣ್ಣ ಕಣಗಾಲ್! ತ.ರಾ.ಸುಬ್ಬರಾಯರ ಸುಪ್ರಸಿದ್ಧ ಕಾದಂಬರಿ ನಾಗರಹಾವು ಪುಟ್ಟಣ್ಣನವರ ದಿಗ್ದರ್ಶನದಲ್ಲಿ ಅದೇ ಹೆಸರಿನ ಚಲನಚಿತ್ರವಾಯಿತು.

ಚಿತ್ರದ ಪ್ರಮುಖ ಪಾತ್ರಗಳು ರಾಮಾಚಾರಿ (ವಿಷ್ಣುವರ್ಧನ್), ಚಾಮಯ್ಯ ಮೇಷ್ಟ್ರು (ಅಶ್ವಥ್), ಅಲಮೇಲು (ಆರತಿ), ಜಲೀಲ್ (ಅಂಬರೀಶ್) ಮತ್ತು ಮಾರ್ಗರೆಟ್ (ಶುಭ).  ನಾಯಕ ರಾಮಾಚಾರಿ ನಾಗರಹಾವಿನಂತೆ ರೋಷವುಳ್ಳ ಬಿಸಿರಕ್ತದ ಹುಡುಗ. ಯಾರ ಮಾತನ್ನೂ ಕೇಳದ, ತನ್ನದೇ ಆದರ್ಶ, ಧ್ಯೇಯಗಳನ್ನು ಹೊಂದಿರುವ ಕೆಚ್ಚೆದೆಯ ತರುಣ. ಹಿಡಿದ ಹಠವನ್ನು ಮಾಡಿಯೇ ತೀರುವ ಛಲಗಾರ!  ಪರೀಕ್ಷೆಯಲ್ಲಿ ಕಾಪಿ ಹೊಡೆದಕ್ಕಾಗಿ ಸಸ್ಪೆಂಡ್ ಮಾಡಿದ ಕಾಲೇಜು ಪ್ರಿಸ್ನಿಪಾಲರ ಮನೆಗೇ ಕಲ್ಲು ಎಸೆದು ನಂತರ ಅವರನ್ನೇ ಕಟ್ಟಿ ಹಾಕಿ ಸೇಡು ತೀರಿಸಿಕೊಳ್ಳುವಷ್ಟು ಕೋಪಿಷ್ಠ!  ಚಿತ್ರದುರ್ಗಕ್ಕೆ ಬರುವ ಪ್ರವಾಸಿಗರಿಗೆ ಗಂಡುಭೂಮಿ ಚಿತ್ರದುರ್ಗದ ನಾಯಕರ ಕಥೆಯನ್ನು, ವೀರ ವನಿತೆ ಓಬವ್ವಳ ಸಾಹಸ ಗಾಥೆಯನ್ನು ಕಣ್ಣಿಗೆ ಕಟ್ಟುವಂತೆ ಹೇಳುವುದರಲ್ಲಿ  ಎತ್ತಿದ ಕೈ. ಇಂತಹ ರಾಮಾಚಾರಿಯ ಬದುಕಿನಲ್ಲಿ ಅಲಮೇಲು ಎಂಬ ಹುಡುಗಿಯ ಪ್ರವೇಶವಾಗುತ್ತದೆ. ಕಾಲೇಜಿಗೆ ಹೋಗುವಾಗ ಜಲೀಲ ಎಂಬ ಬೀದಿ ಕಾಮಣ್ಣನಿಂದ ತೊಂದರೆಗೊಳಪಡುವ ಅಲಮೇಲುವನ್ನು ಜಲೀಲನಿಂದ ಕಾಪಾಡುವ ರಾಮಾಚಾರಿ ಆಕೆಯ ಪ್ರೇಮಪಾಶದಲ್ಲಿ ಬೀಳುತ್ತಾನೆ. ತನ್ನ ತಂಗಿಯನ್ನು ಕಾಪಾಡಿದ್ದಕ್ಕಾಗಿ ಅಲಮೇಲುವಿನ ಅಣ್ಣ ವರದ ಅಲಮೇಲುವನ್ನು ರಾಮಾಚಾರಿಗೆ ಕೊಟ್ಟು ಮದುವೆ ಮಾಡುವುದಾಗಿ ವಚನವನ್ನೂ ಕೊಟ್ಟಿರುತ್ತಾನೆ. ಜಾತಿ ಮತ್ತಿತರ ಸಾಮಾಜಿಕ ಕಟ್ಟುಪಾಡುಗಳು ರಾಮಾಚಾರಿ-ಅಲಮಲು ಮದುವೆಗೆ ಅಡ್ಡಿಯಾಗಿ ನಿಲ್ಲುತ್ತವೆ. ಅಲಮೇಲು ಬೇರೊಬ್ಬನನ್ನು ಮದುವೆಯಾಗಿ ದೂರದ ಪಟ್ಟಣ ಸೇರುತ್ತಾಳೆ.  ಈ ಜಾತಿ ಧರ್ಮಗಳೆಂಬ ಕಟ್ಟುಪಾಡುಗಳು ಅಮಾಯಕ ಅಲಮೇಲುವಿನ ಬದುಕನ್ನು ಛಿದ್ರ ಮಾಡುತ್ತವೆ. ಆಕೆಯ ನೀಚ ಪತಿ ಆಕೆಯನ್ನು ವೇಶ್ಯಾವಾಟಿಕೆಗೆ ತಳ್ಳುತ್ತಾನೆ.

33

ಇತ್ತ ಅಲಮೇಲುವಿನಿಂದ ದೂರವಾಗಿ ಬರಡಾಗಿದ್ದ ರಾಮಾಚಾರಿಯ ಬದುಕಿನಲ್ಲಿ ಹಲವು ವರ್ಷಗಳ ನಂತರ ಮತ್ತೊಮ್ಮೆ ತಂಗಾಳಿ ಬೀಸುತ್ತದೆ. ಮಾರ್ಗರೆಟ್ ಎಂಬ ಕ್ರಿಶ್ಚಿಯನ್ ಹುಡುಗಿ ರಾಮಾಚಾರಿಗೆ ಆಪ್ತಳಾಗುತ್ತಾಳೆ.ಆದರೆ ಇವರಿಬ್ಬರ ಮದುವೆಗೆ ಮತ್ತದೇ  ಜಾತಿ-ಧರ್ಮದ ಅಡ್ಡಿ. ರಾಮಾಚಾರಿ ಜೀವನದಲ್ಲಿ ಅತ್ಯಂತ ಹೆಚ್ಚು ಗೌರವಿಸುವ ಚಾಮಯ್ಯ ಮೇಷ್ಟ್ರು ಕೂಡಾ ರಾಮಾಚಾರಿ ಮತ್ತು ಮಾರ್ಗರೇಟ್ ಮದುವೆಯನ್ನು ವಿರೋಧಿಸುತ್ತಾರೆ. ಯಾರ ಮಾತಿಗೂ ಬೆಲೆಕೊಡದ ರಾಮಾಚಾರಿ ಕೇಳುತ್ತಿದ್ದುದು ಈ ಚಾಮಯ್ಯ ಮೇಷ್ಟ್ರ ಮಾತನ್ನು ಮಾತ್ರ! ಅಂತಹ ಚಾಮಯ್ಯ  ಮೇಷ್ಟ್ರೇ ಸಾಮಾಜಿಕ ಕಟ್ಟುಪಾಡುಗಳಿಗೆ ಹೆಚ್ಚಿನ ಪ್ರಾಧಾನ್ಯ ಕೊಟ್ಟು  ತಮ್ಮಿಬ್ಬರ ಮದುವೆಗೆ ಒಪ್ಪದಾಗ  ಗುರು-ಶಿಷ್ಯರ ನಡುವೆ ಯಾವುದು ಸರಿ ಯಾವುದು ತಪ್ಪು ಎಂಬುದರ ಬಗ್ಗೆ ವಾಕ್ಸಮರ ನಡೆಯುತ್ತದೆ. ಅದು ರಾಮಾಚಾರಿಯ ಬದುಕು ಅಂತಿಮ ಘಟ್ಟವಾಗುತ್ತದೆ. ಮೈ ನವಿರೇಳಿಸುವ ಕ್ಲೈಮ್ಯಾಕ್ಸ್ ದೃಷ್ಯದಲ್ಲಿ ಗುರು-ಶಿಷ್ಯರಿಬ್ಬರೂ ಬೆಟ್ಟದ ಮೇಲಿನಿಂದ ಕೆಳಗುರುಳಿ ಅಂತ್ಯಕಾಣುತ್ತಾರೆ. ಇದು ದೃಶ್ಯ ಇಡೀ ಚಿತ್ರದ ಹೈ ಲೈಟ್. ಇಂದಿಗೂ ನಾಗರಹಾವು ಚಿತ್ರದ ಚಿತ್ರದ ಗುರು-ಶಿಷ್ಯರ ಸಂಭಾಷಣೆಯನ್ನು ಜನ ನನೆಸಿಕೊಳ್ಳುತ್ತಾರೆ.

“ನಾಗರಹಾವು” ಎಂದ ಕೂಡಲೇ ನೆನಪಿಗೆ ಬರುವುದು ರಾಮಾಚಾರಿಯ ಆವೇಶ ಭರಿತ ಅಭಿನಯ! ಚಿತ್ರ ಬಿಡುಗಡೆಯಾಗುವ ಮೊದಲು ಯಾರಿಗೂ ಗೊತ್ತಿರದ ಮೈಸೂರಿನ ಯುವಕನೊಬ್ಬ ಚಿತ್ರ ಯಶಸ್ವಿಯಾಗುತ್ತಲೇ ಸ್ಟಾರ್ ಆಗಿಬಿಟ್ಟಿದ್ದ! ಅಲ್ಲಿಂದ ಇಲ್ಲಿಯವರೆಗೆ ಆತ ಹಿಂದಿರುಗಿ ನೋಡಲೇ ಇಲ್ಲ. ಕನ್ನಡ ಚಿತ್ರರಂಗದಲ್ಲಿ ಸೂಪರ್ ಸ್ಟಾರ್  ಆಗಿ ಮೆರೆದ! ಅದು ಮತ್ಯಾರೂ ಅಲ್ಲ ನಮ್ಮ ನಿಮ್ಮೆಲ್ಲರ  ಅಚ್ಚು ಮೆಚ್ಚಿನ ಸಾಹಸಸಿಂಹ ಡಾ. ವಿಷ್ಣುವರ್ಧನ್!

66

ಚಿತ್ರದಲ್ಲಿ ವಿಷ್ಣುವರ್ಧನ್ ಜೊತೆಗೆ ಅಭಿನಯದಲ್ಲಿ ಪೈಪೋಟಿ ನೀಡಿದವರು ಅಶ್ವಥ್. ಚಾಮಯ್ಯ ಮೇಷ್ಟ್ರ ಪಾತ್ರ ಚಿತ್ರದ ಮತ್ತೊಂದು ಕೇಂದ್ರ ಪಾತ್ರ. ಜಾತಿ, ಧರ್ಮಗಳೆಂಬ ಸಾಮಾಜಿಕ ನಂಬಿಕೆಗಳ ದ್ವನಿಯಾಗುವ ಚಾಮಯ್ಯ ಮೇಷ್ಟ್ರ ಪಾತ್ರ ಕೊನೆಯಲ್ಲಿ ರಾಮಾಚಾರಿ ಕೇಳುವ ಪ್ರಶ್ನೆಗಳಿಗೆ ನಿರುತ್ತರವಾಗುತ್ತದೆ. ಕ್ರೂರ ಸಮಾಜದ ಹತ್ತು ಹಲವು ಮುಖಗಳ ಪರಿಚಯವನ್ನು ಈ ಚಿತ್ರ ಮನೋಜ್ಞವಾಗಿ ಮಾಡಿಸುತ್ತದೆ.  ವಿಷ್ಣುವರ್ಧನ್ ಮತ್ತು ಅಶ್ವಥ್ ಇಬ್ಬರಿಗೂ ಈ ಚಿತ್ರ ಅತ್ಯಂತ ಮಹತ್ವದ ಚಿತ್ರ, ಅದರಲ್ಲೂ ವಿಷ್ಣು ಪಾಲಿಗಂತೂ ಮೊದಲ ಚಿತ್ರವೇ ಇಡೀ ಚಿತ್ರ ಬದುಕಿನಲ್ಲೇ ಮೈಲಿಗಲ್ಲಾಗುವಂತಹ ಶ್ರೇಷ್ಠಚಿತ್ರ ಸಿಕ್ಕಿದ್ದು ಅವರ ಅದೃಷ್ಟವೇ ಸರಿ!

ಅಂಬರೀಶ್‍ಗೂ ಇದು ಮೊದಲ ಚಿತ್ರ!  ಪುಟ್ಟ ಪಾತ್ರವಾದರೂ ಗಮನ ಸೆಳೆಯುವ ಪಾತ್ರ. ಕ್ಯಾ ಮೇರಿ ಬುಲ್ ಬುಲ್ ಎಂದು ಅವರು ಆರತಿಯನ್ನು ಚುಡಾಯಿಸುವ ಸಂಭಾಷಣೆ ಬಹಳ ಜನಪ್ರಿಯವಾಯಿತು! ಆಶ್ಚರ್ಯವೆಂದರೆ ಜಲೀಲನ ಪಾತ್ರಕ್ಕೆ ಪುಟ್ಟಣ್ಣ ಕಣಗಾಲ್ ಮೊದಲು ಆರಿಸಿದ್ದು ಯಾರನ್ನು ಗೊತ್ತಾ? ರಜನೀಕಾಂತ್!! ಆಗ ರಜನಿ ತಮಿಳು ಚಿತ್ರರಂಗವನ್ನು ಪ್ರವೇಶಿಸಿರಲಿಲ್ಲ.  ರಜನಿಕಾಂತ್ ಅಭಿನಯದಲ್ಲಿ ಹಲವಾರು ದೃಶ್ಯಗಳನ್ನು ಚಿತ್ರೀಕರಿಸಲಾಗಿತ್ತು. ಆದರೆ ಕಾರಣಾಂತರಗಳಿಂದ ರಜನಿ ಈ ಚಿತ್ರದಿಂದ ಹೊರನಡೆದರು. ಹಾಗಾಗಿ ಆ ಪಾತ್ರಕ್ಕೆ ಹೊಸ ಪ್ರತಿಭೆಯೊಂದನ್ನು ಹುಡುಕಿದರು ಪುಟ್ಟಣ್ಣ, ಕೊನೆಗೆ ಅದು ಮಂಡ್ಯದ ಯುವಕ ಅಮರನಾಥ್ ಪಾಲಾಯಿತು! ಅಮರನಾಥ್ ಅಂಬರೀಶ್ ಆದರು! ಮುಂದೆ ರೆಬೆಲ್ ಸ್ಟಾರ್ ಆದರು! ಆರತಿ, ಲೀಲಾವತಿ ಶುಭ ಕೂಡ ಅತ್ಯುತ್ತಮ ಅಭಿನಯದಿಂದ ಮನ ಸೆಳೆಯುತ್ತಾರೆ. ಆದರೆ ಇಡೀ ಚಿತ್ರದಲ್ಲಿ ಕೇವಲ ಒಂದು ಹಾಡಿನಲ್ಲಿ ಬರುವ ಜಯಂತಿಯವರು ತಾನು ಏಕೆ ಅಭಿನಯ ಶಾರದೆ ಎಂಬುನ್ನು ಸಾಬೀತುಪಡಿಸುತ್ತಾರ. ಅವರು ತೆರೆಯ ಮೇಲೆ ಬರುವ ಆ ಹದಿನೈದು ನಿಮಿಷಗಳ ಕಾಲ ಅವರು ಜಯಂತಿಯಾಗಿರುವುದಿಲ್ಲ, ಸಾಕ್ಷಾತ್ ಒನಕೆ ಓಬವ್ವಳೇ ಕಣ್ಣ ಮುಂದೆ ಬಂದ ಅನುಭವವಾಗುತ್ತದೆ. ಅದು ಜಯಂತಿಯವರ ಅಭಿನಯದ ವೈಖರಿ!

22

ನಾಗರಹಾವು ಚಿತ್ರದ ಅಂದಿನ ನಟರ ಇಂದಿನ ಚಿತ್ರ – ಎಡದಿಂದ – ಡಾ.ವಿಷ್ಣುವರ್ಧನ್,ಆರತಿ, ಜಯಂತಿ, ಕೆ.ಎಸ್.ಅಶ್ವಥ್ ಮತ್ತು ಅಂಬರೀಶ್

ಇನ್ನು ಚಿತ್ರಕಥೆ ನಿರ್ದೇಶನದ ಬಗ್ಗೆ ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಇದು ಪುಟ್ಟಣ್ಣ ಕಣಗಾಲ್ ಅವರ ಚಿತ್ರರತ್ನಗಳಲ್ಲಿ ಪ್ರಮುಖವಾದದ್ದು. ಅಮೋಘ ಕಥೆ, ಅಮೋಘ ನಟನೆ, ಸುಮಧುರ ಅರ್ಥಗರ್ಭಿತ ಹಾಡುಗಳು, ಸುಂದರ ಚಿತ್ರೀಕರಣದ ಜೊತೆ ಅತ್ಯುತ್ತಮ ನಿರೂಪಣೆ, ನಿರ್ದೇಶನವೂ ಜೊತೆಗೂಡಿದರೆ ನಾಗರಹಾವಿನಂತಹ ಮಾಸ್ಟರ್ ಪೀಸ್ ಸಿದ್ಧವಾಗಿತ್ತದೆ. ಪುಟ್ಟಣ್ಣ ಕಣಗಾಲ್ ಸರ್ ನಿಮಗೆ HATS OFF.

ಮತ್ತೊಂದು ಆಶ್ಚರ್ಯವೆಂದರೆ ಚಲನಚಿತ್ರವನ್ನು ನೋಡಿದಾಗ ತರಾಸು ಅವರಿಗೆ ಅಷ್ಟಾಗಿ ಹಿಡಿಸಿರಲಿಲ್ಲವಂತೆ.  ಪುಟ್ಟಣ್ಣನವರು ನಾಗರಹಾವು ಮಾಡಲು ಹೋಗಿ ಕೇರೆಹಾವು ಮಾಡಿದ್ದಾರೆ ಎಂದು ಅಸಮಧಾನ ಪಟ್ಟಿದ್ದರಂತೆ! ಆದರೂ ಆದದ್ದಾಗಲಿ ಎಂದು ಚಿತ್ರವನ್ನು ಬಿಡುಗಡೆ ಮಾಡಿದರು ಪುಟ್ಟಣ್ಣ. ಚಿತ್ರ ಯಶಸ್ವಿಯಾಯಿತು. ಜನ ರಾಮಾಚಾರಿಯ ಪಾತ್ರವನ್ನು ಹುಚ್ಚೆದ್ದು ನೋಡಿದರು, ವಿಷ್ಣು ಎಂಬ ಮಹಾನ್ ನಟನ ಉದಯವಾಗಲು ನಾಂದಿ ಹಾಡಿದರು!

55

ಚಿತ್ರದ ಯಶಸ್ಸಿನ ಪಾಲುದಾರಲ್ಲಿ ಕೆಲವರು – (ಎಡದಿಂದ) – ನಿರ್ದೇಶಕ ದಿ! ಪುಟ್ಟಣ್ಣ ಕಣಗಾಲ್, ಡಾ.ಪಿ.ಬಿ.ಶ್ರೀನಿವಾಸ್, ಪಿ.ಸುಶೀಲಾ, ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ

ನಾಗರಹಾವು ಚಿತ್ರದಲ್ಲಿ ಒಟ್ಟು 6 ಅತ್ಯುತ್ತಮ ಸಾರ್ವಕಾಲಿಕ ಸೂಪರ್ ಹಿಟ್ ಹಾಡುಗಳಿವೆ:

೧. ಬಾರೇ ಬಾರೇ ಚಂದದ ಚಲುವಿನ (ಪಿ.ಬಿ.ಶ್ರೀನಿವಾಸ್) : ಈ ಹಾಡನ್ನು ಸಂಪೂರ್ಣವಾಗಿ ಸ್ಲೋ ಮೋಷನ್ನಿನಲ್ಲಿ ಚಿತ್ರೀಕರಿಸಲಾಗಿದೆ. ಇದು ಇಡೀ ಚಿತ್ರದ ಮತ್ತೊಂದು ಹೈಲೈಟ್. ಪಿಬಿಎಸ್ ಹಾಡು ಇಂದಿಗೂ ಅತ್ಯಂತ ಜನಪ್ರಿಯ!

http://in.youtube.com/watch?v=Ued_wyG3st0

೨. ಕರ್ಪೂರದ ಗೊಂಬೆ ನಾನು ಮಿಂಚಂತೆ ಬಳಿಬಂದೆ ನೀನು (ಪಿ.ಸುಶೀಲ) : ಹೆಣ್ಣಿನ ಮನದಾಳದ ಮಾತನ್ನು ವರ್ಣಿಸುವ ಸುಶ್ರಾವ್ಯ ಗೀತೆ.

೩. ಹಾವಿನ ದ್ವೇಷ ಹನ್ನೆರಡು ವರುಷ(ಎಸ್.ಪಿ.ಬಾಲಸುಬ್ರಹ್ಮಣ್ಯಂ): ವಿಷ್ಣುವರ್ಧನ್ಅಮೋಘ ಅಭಿನಯ, ಎಸ್ಪಿಬಿಯವರ ಅಮೋಘ ಗಾಯನ!  ನಾಯಕನನ್ನು ನಾಗರಹಾವಿಗೆ ಹೋಲಿಸುವ ಸಾಹಿತ್ಯ ಸೊಗಸಾಗಿದೆ.

http://in.youtube.com/watch?v=tI1Poz5pEUU

೪. ಕಥೆ ಹೇಳುವೆ ನನ್ನ ಕಥೆ ಹೇಳುವೆ (ಪಿ.ಸುಶೀಲ) : ಮದುವೆಯಾಗಿ ಗಂಡನಿಂದ ಅನ್ಯಾಯಕ್ಕೊಳಗಾಗುವ ಹೆಣ್ಣಿನ ಆರ್ತನಾದವನ್ನು ಬಣ್ಣಿಸುವ ಭಾವಪೂರ್ಣ ಹಾಡು.

೫.  ಕನ್ನಡ ನಾಡಿನ ವೀರ ವನಿತೆಯ (ಪಿ.ಬಿ.ಶ್ರೀನಿವಾಸ್) : ಚಿತ್ರದುರ್ಗದ ಇತಿಹಾಸವನ್ನು ಕಣ್ಣಿಗೆ ಕಟ್ಟುವಂತೆ ಬಣ್ಣಿಸುವ ಹಾಡು. ಓಬವ್ವನಾಗಿ ಜಯಂತಿಯವರ ಅಭಿನಯ ಚಿರಸ್ಮರಣೀಯ.

http://in.youtube.com/watch?v=b_RmkeG-Y5g&feature=related


೬. ಸಂಗಮ ಸಂಗಮ (ಪಿ.ಬಿ.ಶ್ರೀನಿವಾಸ್, ಪಿ.ಸುಶೀಲ) : ವಿಷ್ಣು-ಶುಭಾ ಅಭಿನಯದ ಸುಂದರ ಯುಗಳ ಗೀತೆ.

http://in.youtube.com/watch?v=jK6VsiNxxyA&feature=related

ನಾಗರಹಾವು ಚಿತ್ರದ ಕ್ಲೈಮ್ಯಾಕ್ಸ್

http://in.youtube.com/watch?v=AT3ltxGrk6U

ನಾಗರಹಾವು ಚಿತ್ರದ DVD ಗಳು ಲಭ್ಯ. ಕಲಾಭಿಮಾನಿಗಳು ಕೊಂಡು ನೋಡಿ ಆನಂದಿಸಬಹುದು.

ಮುಂದಿನ ವಾರ ಮತ್ತೊಂದು ಉತ್ತಮ ಚಿತ್ರದೊಂದಿಗೆ ಮತ್ತೆ ಭೇಟಿಯಾಗೋಣ,

ತಮ್ಮವ,

akumar

akumar.reach@gmail.com

Readers Comments (1)
  1. Manjunatha H J says:

    Very nice… thanks for u r flash back…





Please note: Comment moderation is enabled and may delay your comment. There is no need to resubmit your comment.

Author Info