ಗಂಧದಗುಡಿ ಫ್ಲಾಶ್ ಬ್ಯಾಕ್ 4 : ಕಸ್ತೂರಿ ನಿವಾಸ!

Published on September 2, 2008 by admin   ·   No Comments

ಇಂದಿನ ಚಿತ್ರ – “ಕಸ್ತೂರಿ ನಿವಾಸ

sa2

ಕಿರು ಮಾಹಿತಿ:

  • ಚಿತ್ರ ನಿರ್ಮಾಣ ಸಂಸ್ಥೆ: ಅನುಪಮ ಮೂವೀಸ್
  • ಬಿಡುಗಡೆಯಾದ ವರ್ಷ: 1971
  • ಪಾತ್ರವರ್ಗ:ಡಾ.ರಾಜ್ ಕುಮಾರ್, ಜಯಂತಿ, ಆರತಿ, ಅಶ್ವಥ್, ರಾಜಾಶಂಕರ್, ಬಾಲಕೃಷ್ಣ, ನರಸಿಂಹರಾಜು, ಬೇಬಿ ರೇಖ, ಬೇಬಿ ಲಲಿತಾ
  • ಕಥೆ: ಜಿ.ಬಾಲಸುಬ್ರಹ್ಮಣ್ಯಂ
  • ಸಂಗೀತ: ಜಿ.ಕೆ.ವೆಂಕಟೇಶ್
  • ಗೀತ ಸಾಹಿತ್ಯ: ಚಿ. ಉದಯಶಂಕರ್, ವಿಜಯ ನಾರಸಿಂಹ, ಆರ್.ಎನ್.ಜಯಗೋಪಾಲ್
  • ಕಲೆ: ಬಿ. ಚಲಂ
  • ಸಂಕಲನ: ವೆಂಕಟರಾಂ
  • ನೃತ್ಯ: ಉಡುಪಿ ಬಿ. ಜಯರಾಂ
  • ಹಿನ್ನೆಲೆ ಗಾಯಕರು: ಡಾ. ಪಿ.ಬಿ.ಶ್ರೀನಿವಾಸ್, ಪಿ.ಸುಶೀಲ, ಎಲ್.ಆರ್.ಈಶ್ವರಿ, ಜಿ.ಕೆ.ವೆಂಕಟೇಶ್
  • ಛಾಯಾಗ್ರಹಣ: ಬಿ.ದೊರೈ ರಾಜ್
  • ನಿರ್ಮಾಪಕರು: ಎಸ್.ಕೆ.ಭಗವಾನ್
  • ನಿರ್ದೇಶಕ: ಬಿ.ದೊರೈ ರಾಜ್-ಎಸ್.ಕೆ.ಭಗವಾನ್ (ದೊರೆ-ಭಗವಾನ್)

2006ರಲ್ಲಿ ಡಾ.ರಾಜ್ ನಮ್ಮನ್ನಗಲಿದ ದಿನ ಯಾವುದೇ ಟಿ.ವಿ. ಚಾನೆಲ್ ಹಾಕಿದರೂ ಒಂದೇ ಹಾಡು… “ಆಡಿಸಿದಾತ ಬೇಸರ ಮೂಡಿ ಆಟ ಮುಗಿಸಿದ! ಸೂತ್ರವ ಹರಿದ ಬೊಂಬೆಯ ಮುರಿದು ಮಣ್ಣಾಗಿಸಿದ…“ಇದು ಡಾ. ರಾಜ್ ಕುಮಾರ್ ಅಭಿನಯದ ಕಸ್ತೂರಿ ನಿವಾಸ ಚಿತ್ರದ ಅಜರಾಮರ ಹಾಡು. ಕನ್ನಡದ ಮೇರು ನಟ ಡಾ. ರಾಜ್ ಕುಮಾರ್ ಚಿತ್ರ ಬದುಕಿನ ಅವಿಸ್ಮರಣೀಯ ಚಿತ್ರಗಳಲ್ಲಿ 1971ರಲ್ಲಿ ತೆರೆಕಂಡ ಕಸ್ತೂರಿ ನಿವಾಸ ಅತ್ಯಂತ ಪ್ರಮುಖವಾದ ಮೈಲಿಗಲ್ಲು.
8

ಕಸ್ತೂರಿ ನಿವಾಸ ಚಿತ್ರಆರಂಭವಾದುದರ ಹಿಂದೆ ಸ್ವಾರಸ್ಯಕರವಾದ ವಿಚಾರಗಳಿವೆ. 1970ರಲ್ಲಿ ಖ್ಯಾತ ತಮಿಳು ಕಥೆಗಾರ ಜಿ. ಬಾಲಸುಬ್ರಹ್ಮಣ್ಯಂ ಅವರು ತಮಿಳು ಸೂಪರ್ ಸ್ಟಾರ್ ಶಿವಾಜಿ ಗಣೇಶನ್ ‍ಗೋಸ್ಕರ ಒಂದು ಕಥೆಯನ್ನು ಬರೆದರು.ಕಥೆಯ ಹೆಸರು “ಕಸ್ತೂರಿ ನಿವಾಸಂ”ಎಂದು.ಈ ಕಥೆಯನ್ನು ನೂರ್ ಸಾಹೇಬ್ ಎಂಬ ನಿರ್ಮಾಪಕರೊಬ್ಬರು 25,000 ರೂಪಾಯಿಗೆ ಖರೀದಿಸಿದರು.ಕೆ.ಶಂಕರ್ ಚಿತ್ರದ ನಿರ್ದೇಶನದ ಹೊಣೆಯನ್ನು ಹೊತ್ತರು.ಶಂಕರ್ಈ ಕಥೆಯನ್ನು ಶಿವಾಜಿ ಗಣೇಶನ್‍ಗೆ ವಿವರಿಸಿದಾಗ, ದುರಂತ ನಾಯಕನ ಈ ಕಥೆಯನ್ನು ತಮಿಳು ನಾಡು ಜನತೆ ಸ್ವೀಕರಿಸುವುದು ಕಷ್ಟವೆಂದು ಭಾವಿಸಿದ ಶಿವಾಜಿ ಚಿತ್ರದಲ್ಲಿ ನಟಿಸಲು ನಿರಾಕರಿಸಿದರು.ಕಥೆಯ ಹಕ್ಕು ನೂರ್ ಸಾಹೇಬರಲ್ಲೇ ಉಳಿಯಿತು.ಇಷ್ಟೊಂದು ಅದ್ಭುತ ಕಥೆ ಚಿತ್ರವಾಗದೇ ಹೋಗುತ್ತದೆಂಬ ಕೊರಗಿನಿಂದ ಕಥೆಗಾರ ಬಾಲು ಈ ಕಥೆಯನ್ನು ಕನ್ನಡದ ಖ್ಯಾತ ಚಿತ್ರ ಸಾಹಿತಿ ಚಿ. ಉದಯಶಂಕರ್ ಮತ್ತು ಡಾ. ರಾಜ್ ಕುಮಾರ್ ಸೋದರ ವರದರಾಜ್ ಅವರಿಗೆ ವಿವರಿಸಿದರು. ಕಥೆಯನ್ನು ಮೆಚ್ಚಿದ ವರದರಾಜ್ ದೊರೈ-ಭಗವಾನ್ ಬಳಿ ಈ ಪ್ರಸ್ತಾಪವನ್ನಿಟ್ಟರು.ಡಾ. ರಾಜ್ ನಟಿಸಲು ಒಪ್ಪುವುದಾದರೆ ತಾನು ಈ ಚಿತ್ರವನ್ನು ನಿರ್ದೇಶಿಸಲು ಸಿದ್ಧ ಎಂದರು ದೊರೈ-ಭಗವಾನ್. ಡಾ. ರಾಜ್ ಕುಮಾರ್ ಅವರಲ್ಲಿ ಈ ಪ್ರಸ್ತಾಪವನ್ನಿಡಲಾಯಿತು. ಡಾ. ರಾಜ್ ಕೂಡ ಕಥೆಯನ್ನು ಮೆಚ್ಚಿ ನಟಿಸಲು ಸಂತೋಷದಿಂದ ಒಪ್ಪಿದರು! ಸರಿ ಇನ್ನೇಕೆ ತಡ ಎಂದು ದೊರೈ-ಭಗವಾನ್ ತಾವೇ ಚಿತ್ರದ ಕಥೆಯ ಹಕ್ಕನ್ನುನೂರ್ ಸಾಹೇಬ್ರಿಂದ 38,000 ರೂ.ಗಳಿಗೆ ಖರೀದಿಸಿಯೇ ಬಿಟ್ಟರು! ಹೀಗಾಗಿ ಶಿವಾಜ್ ಗಣೇಶನ್ ಅಭಿನಯದಲ್ಲಿ ತಮಿಳು ಚಿತ್ರವಾಗಬೇಕಾಗಿದ್ದ ಕಸ್ತೂರಿ ನಿವಾಸಂ ಕನ್ನಡದಲ್ಲಿ ಡಾ. ರಾಜ್ ನಾಯಕತ್ವದಲ್ಲಿ “ಕಸ್ತೂರಿ ನಿವಾಸ”ವಾಯಿತು.
    ಚಿತ್ರಕ್ಕೆ ಆ ಕಾಲದಲ್ಲೇ ಸುಮಾರು ನಾಲ್ಕು ಲಕ್ಷ ರೂಪಾಯಿ ಖರ್ಚು ಮಾಡಲಾಯಿತು! ಬೆಂಗಳೂರಿನ ಕಂಠೀರವ ಸ್ಟೂಡಿಯೋದಲ್ಲಿ ಚಿತ್ರಕ್ಕಾಗಿ ಒಂದೂವರೆ ಲಕ್ಷ ರೂಪಾಯಿಯ ವೆಚ್ಚದಲ್ಲಿ ಭಾರೀ ಬಂಗಲೆಯ ಸೆಟ್ ಹಾಕಿದ್ದರು! ವಿತರಕ ಕೆ.ಸಿ.ಎನ್. ಚಂದ್ರು ಚಿತ್ರಕ್ಕೆ ಫೈನಾನ್ಸ್ ಮಾಡಿದರು. ಚಂದ್ರು ಅವರಿಗೆ ಇನ್ನೂ ಒಂದಷ್ಟು ಹಣವನ್ನು ವ್ಯಯಿಸಿ ಈಸ್ಟ್ ಮನ್ ಕಲರ್ ಚಿತ್ರ ಮಾಡುವ ಆಸೆಯಿತ್ತಾದರೂ ತಕ್ಷಣದಲ್ಲಿ ಅಷ್ಟೊಂದು ಹಣವನ್ನು ಹೊಂದಿಸಲು ಸಾಧ್ಯವಾಗದ ಕಾರಣ ಕಪ್ಪು-ಬಿಳುಪು ಚಿತ್ರವನ್ನು ತಯಾರಿಸಲಾಯಿತು.
      4

      ಮೊದಲೇ ಹೇಳಿದಂತೆ ಕಸ್ತೂರಿ ನಿವಾಸ ದುರಂತ ನಾಯಕನೊಬ್ಬನ ಕಥೆ. ಕಸ್ತೂರಿ ನಿವಾಸ – ಒಂದು ಭವ್ಯ ಬಂಗಲೆಯ ಹೆಸರು. ಅಷ್ಟೇ ಅಲ್ಲ, ಇದೇ ಹೆಸರಿನಲ್ಲಿ ಶಿಕ್ಷಣ ಸಂಸ್ಥೆ, ಷಿಪಿಂಗ್ ಕಂಪನಿ, ದಾನ-ಧರ್ಮ ಸಂಸ್ಥೆ, ಇಂಪೋರ್ಟ್-ಎಕ್ಸ್ ಪೋರ್ಟ್, ಆಸ್ಪತ್ರೆ, ಮೈನ್ಸ್ & ಮಿನರಲ್ ಕಂಪನಿ ಹೀಗೆ ಹತ್ತು ಹಲವು ಕಂಪನಿಗಳಿವೆ! ಈ ಸಮಸ್ತ “ಕಸ್ತೂರಿ ನಿವಾಸ” ಸಂಸ್ಥೆಗಳಿಗೂ ಏಕೈಕ ಒಡೆಯ ರವಿ. (ಡಾ. ರಾಜ್ ಕುಮಾರ್). ಅತ್ಯಂತ ಸ್ನೇಹಮಯಿ. ತನ್ನೆಲ್ಲ ಕಾರ್ಮಿಕರನ್ನು ಹೆತ್ತ ಮಕ್ಕಳಂತೆ ಕಾಣುವಷ್ಟು ಸಹೃದಯಿ. ಕಷ್ಟದಲ್ಲಿರುವವರಿಗೆ ಸದಾ ಸಹಾಯ ಮಾಡುವ ಕೊಡುಗೈ ದಾನಿ. ಅನಾಥರಿಗೆ ಆಶ್ರಯವನ್ನೂ ಉದ್ಯೋಗವನ್ನೂ ಕೊಟ್ಟು ಸಲಹುತ್ತಿರುವ ದೇವತಾ ಮನುಷ್ಯ. ಹೀಗೆ ಎಲ್ಲರೆದುರು ಸದಾ ಹಸನ್ಮುಖಿಯಾಗಿರುವ ರವಿಯ ನಗುಮೊಗದ ಹಿಂದೆ ಒಂದು ನೋವಿನ ಕಥೆಯೂ ಇದೆ. ಪ್ರೀತಿಯ ಹೆಂಡತಿ ಲಕ್ಷ್ಮಿ (ಆರತಿ) ಮತ್ತು ಪುಟ್ಟ ಮಗಳು ಬೇಬಿಯ ಸಾವಿನ ನೋವು ಸದಾ ರವಿಯನ್ನು ಕಾಡುತ್ತಿರುತ್ತದೆ. ಬೇರೆ ಮದುವೆಯಾಗಲೊಪ್ಪದ ರವಿ ಸದಾ ಹೆಂಡತಿ ಮತ್ತು ಮಗುವಿನ ನೆನಪಿನಲ್ಲೇ ಕಾಲ ಕಳೆಯುತ್ತಿರುತ್ತಾನೆ.

      ರವಿಯ ಆಫೀಸಿನ ನೌಕರ ಚಂದ್ರು ಒಮ್ಮೆ ಕೆಲಸದ ಮೇಲೆ ಅಮೇರಿಕಾಕ್ಕೆ ತೆರಳಬೇಕಾಗುತ್ತದೆ. ಆತನಿಗೊಬ್ಬಳು ಪುಟ್ಟ ಮಗಳು. ಹೆಸರು ರಾಣಿ. ಆಕೆಗೆ ತಾಯಿಯಿಲ್ಲ. ಪುಟ್ಟ ಮಗಳೊಬ್ಬಳನ್ನೇ ಬಿಟ್ಟು ದೂರದ ಪರದೇಶಕ್ಕೆ ಹೋಗಲು ಚಂದ್ರು ನಿರಾಕರಿಸಿದಾಗ, ಚಂದ್ರುವಿನ ಮಗಳು ರಾಣಿಯನ್ನು ಆತ ಬರುವವರೆಗೂ ಸ್ವತಃ ತಾನೇ ನೋಡಿಕೊಳ್ಳುವುದಾಗಿ ಹೇಳಿ ಚಂದ್ರುವನ್ನು ರವಿ ಅಮೇರಿಕಾಕ್ಕೆ ಕಳಿಸುತ್ತಾನೆ. ರಾಣಿ ಹೆಚ್ಚು ಕಡಿಮೆ ರವಿಯ ಮಗಳು ಬೇಬಿಯ ವಯಸ್ಸಿನವಳೇ. ಹಾಗಾಗಿ ರವಿ ರಾಣಿಯಲ್ಲಿ ಮೃತಪಟ್ಟಿರುವ ತನ್ನ ಮಗಳು ಬೇಬಿಯನ್ನು ಕಾಣುತ್ತಾನೆ. ತನ್ನ ಮಗಳಷ್ಟೇ ಮುದ್ದಾಗಿ ನೋಡಿಕೊಳ್ಳುತ್ತಾನೆ.
      ರವಿಯಲ್ಲಿ ಆಶ್ರಯ ಪಡೆದು ಆತನ ಆಫೀಸಿನಲ್ಲಿ ಕೆಲಸಮಾಡುತ್ತಿರುವವರಲ್ಲಿ ನೀಲಾ (ಜಯಂತಿ) ಕೂಡ ಒಬ್ಬಳು. ಆಕೆಗೆ ರವಿಯೆಂದರೆ ಅಪಾರ ಗೌರವ. ಚಂದ್ರುವಿನ ಮಗಳು ರಾಣಿಯ ಲಾಲನೆಯಲ್ಲಿ ನೀಲಾ ರವಿಗೆ ನೆರವಾಗುತ್ತಾಳೆ. ತಾಯಿಯಿಲ್ಲದ ಮಗು ನೀಲಾಳನ್ನು “ಅಮ್ಮಾ” ಎಂದು ಕರೆಯುತ್ತದೆ. ನೀಲಾ-ರಾಣಿಯರ ಮಧ್ಯೆ ತಾಯಿ ಮಗಳ ಸಂಬಂಧ ಬೆಳೆಯುತ್ತದೆ.
      ವಿದೇಶದಿಂದ ಮರಳಿದ ಚಂದ್ರು ಮಗಳನ್ನು ತನ್ನ ಮನೆಗೆ ಕರೆದೊಯ್ಯುಲು ನೋಡುತ್ತಾನೆ. ಆದರೆ ನೀಲಾಳನ್ನು ಬಿಟ್ಟಿರಲು ರಾಣಿ ಒಪ್ಪುವುದಿಲ್ಲ. ಅಮ್ಮ(ನೀಲಾ) ತಮ್ಮ ಜೊತೆಯೇ ಬರಬೇಕೆಂದು ಹಠ ಹಿಡಿಯುತ್ತಾಳೆ. ರಾಣಿಯ ಖುಷಿಗಾಗಿ ರಾಣಿಯ ಜೊತೆ ನೀಲಾಳನ್ನು ಚಂದ್ರುವಿನ ಮನೆಗೆ ರವಿ ಕಳಿಸುತ್ತಾನೆ. ಅಪ್ಪ, ಅಮ್ಮ ಇಬ್ಬರೂ ಸದಾ ತನ್ನ ಜೊತೆಯೇ ಇರಬೇಕೆಂದು ರಾಣಿ ಬಯಸುತ್ತಾಳೆ. ಚಂದ್ರು ನೀಲಾಳನ್ನು ಮದುವೆಯಾಗಿ ರಾಣಿಯ ತಾಯಿಯ ಸ್ಥಾನವನ್ನು ತುಂಬುವಂತೆ ಕೇಳಿಕೊಳ್ಳುತ್ತಾನೆ. ನೀಲಾ ಕೂಡ ಒಪ್ಪುತ್ತಾಳೆ. ಇದೇ ಸಂದರ್ಭದಲ್ಲಿ ರವಿ ಕೂಡ ನೀಲಾಳನ್ನು ಮದುವೆಯಾಗಲು ಬಯಸಿರುತ್ತಾನೆ. ಇದನ್ನರಿಯದ ನೀಲಾ ತಾನು ಚಂದ್ರುವನ್ನು ಮದುವೆಯಾಗುವ ವಿಚಾರವನ್ನು ರವಿಗೆ ಹೇಳುತ್ತಾಳೆ. ರವಿಗೆ ಆಘಾತವಾಗುತ್ತದೆ. ಆದರೂ ತೋರಿಸಿಕೊಳ್ಳದೇ ಅವರಿಬ್ಬರ ಮದುವೆಯನ್ನು ತಾನೇ ಮುಂದೆ ನಿಂತು ನಡೆಸಿಕೊಡುತ್ತಾನೆ. ಅವರಿಗೆ ಒಂದು ಬಂಗಲೆ, ಕಾರು ಎಲ್ಲವನ್ನೂ ಉಡುಗೊರೆಯನ್ನಾಗಿ ಕೊಡುತ್ತಾನೆ. ರವಿ ಮತ್ತೊಮ್ಮೆ ಮಹಾನ್ ತ್ಯಾಗಿಯಾಗುತ್ತಾನೆ.
      ಕಾಲ ಕಳೆದಂತೆ ಚಂದ್ರು ಬದಲಾಗತೊಡಗುತ್ತಾನೆ. ರವಿಯ ಆಸರೆಯಲ್ಲೇ ಬೆಳೆದು, ದೊಡ್ಡ ಉದ್ಯೋಗ ಬಂಗಲೆ ಎಲ್ಲವನ್ನೂ ಪಡೆದ ಚಂದ್ರು ರವಿಯ ಎದುರಾಳಿ ಭೋಜರಾಜಯ್ಯ (ಬಾಲಕೃಷ್ಣ) ತೋರಿಸಿದ ಲಾಭದ ಆಮಿಶಕ್ಕೆ ಒಳಗಾಗಿ ರವಿಯ ಕಂಪನಿ ತೊರೆದು ಅವನ ಎದುರಾಳಿಯಾಗಿ ತಾನೇ ಒಂದು ಕಂಪೆನಿ ಆರಂಭಿಸುತ್ತಾನೆ. ಆಗಲೂ ರವಿ ಚಂದ್ರುವಿಗೆ ಒಳ್ಳೆಯದಾಗಲಿ ಎಂದು ಶುಭ ಹಾರೈಸುತ್ತಾನೆ. ಆದರೆ ಭೋಜರಾಜಯ್ಯನ ಸಂಚಿಗೆ ಕಸ್ತೂರಿ ನಿವಾಸ ಬಲಿಯಾಗುತ್ತದೆ. ಕಸ್ತೂರಿ ನಿವಾಸ ಬಂಗಲೆ ಹರಾಜಿನ ಸ್ಥಿತಿಗೆ ಬರುತ್ತದೆ. ಆ ಹೊತ್ತಿಗಾಗಲೇ ಶ್ರೀಮಂತನಾಗಿದ್ದ ಚಂದ್ರುವೇ ಕಸ್ತೂರಿ ನಿವಾಸವನ್ನು ಖರೀದಿಸುತ್ತಾನೆ. ನೀಲಾಳ ಮತ್ತು ರಾಣಿಯ ಒತ್ತಾಯಕ್ಕೆ ಮಣಿದು ರವಿ ಕಸ್ತೂರಿ ನಿವಾಸದ ಔಟ್ ಹೌಸಿನಲ್ಲಿ ಉಳಿಯಲು ಒಪ್ಪುತ್ತಾನೆ. ಆದರೆ ಮಹಾನ್ ಸ್ವಾಭಿಮಾನಿ ರವಿ ಚಂದ್ರುವಿನಿಂದ ಯಾವುದೇ ಹಣವನ್ನೂ ಪಡೆಯದೇ ಬಡತನದ ಬದುಕಿಗೆ ಅಡಿಯಿಡುತ್ತಾನೆ.ಬದಲಾದ ಚಂದ್ರುವಿನ ಮನೋಭಾವವನ್ನು ನೀಲಾ ವಿರೋಧಿಸುತ್ತಾಳೆ. ನೀಲಾ- ಚಂದ್ರು ನಡುವೆ ರವಿಯ ವಿಚಾರದಲ್ಲಿ ದಿನಾ ದಿನಾ ಮನಸ್ತಾಪಗಳು ಹೆಚ್ಚುತ್ತವೆ. ಚಂದ್ರು ಮೃಗವಾಗುತ್ತಾನೆ. ತನ್ನ ಕುಡಿತದ ಅಮಲಿನಲ್ಲಿ ಹೆಂಡತಿ ಮತ್ತು ಮಗುವಿನ ಮೇಲೆ ಕೈ ಮಾಡುತ್ತಾನೆ. ರವಿ ಇನ್ನೆಂದೂ ಕಸ್ತೂರಿ ನಿವಾಸಕ್ಕೆ ಬರುವುದಿಲ್ಲ ಎಂದು ನೋವಿನಿಂದ ಪ್ರತಿಜ್ಞೆ ಮಾಡಿ ಹೊರ ನಡೆಯುತ್ತಾನೆ. ತಲೆಗೆ ಬಲವಾದ ಪೆಟ್ಟು ಬಿದ್ದು ಪುಟ್ಟ ಬಾಲಕಿ ರಾಣಿ ಸಾವನ್ನಪ್ಪುತ್ತಾಳೆ. ಆಡಿಸಿದಾತ ಬೇಸರ ಮೂಡಿ ಆಟ ಮುಗಿಸುತ್ತಾನೆ… ರಾಣಿಯನ್ನು ಮಣ್ಣಾಗುತ್ತಾಳೆ. ಎರಡನೇ ಬಾರಿ ರವಿ ಮಗಳನ್ನು ಕಳೆದುಕೊಳ್ಳುತ್ತಾನೆ.

      ಸಕಲ ಆಸ್ತಿ, ಮನೆಯ ಜೊತೆಗೆ ಪ್ರಾಣವನ್ನೇ ಇಟ್ಟಿದ್ದ ರಾಣಿಯನ್ನೂ ಮಣ್ಣು ಮಾಡಿದ ಬಳಿಕ ರವಿ ತನ್ನ ಆಳು ರಾಮಯ್ಯನ ಗುಡಿಸಲಿನಲ್ಲಿ ಉಳಿದುಕೊಳ್ಳುತ್ತಾನೆ. ರವಿಯ ಬಳಿ ಈಗ ಏನೇನೂ ಇಲ್ಲ. ಇರುವುದೆಂದರೆ ಆತ ಮೊದಲಿನಿಂದಲೂ ಮುದ್ದಾಗಿ ಸಾಕಿದ್ದ ಒಂದು ಪಾರಿವಾಳ ಮಾತ್ರ. ರವಿಯನ್ನು ನೋಡಲು ನೀಲಾ ಒಮ್ಮೆ ರವಿಯ ಗುಡಿಸಲಿಗೆ ಬರುತ್ತಾಳೆ. ಆಕೆಗೆ ಊಟಮಾಡಿಕೊಂಡು ಹೋಗುವಂತೆ ಕೇಳಿಕೊಂಡಾಗ ಆಕೆ ಒಪ್ಪುತ್ತಾಳೆ. ಊಟವಾದ ಬಳಿಕ ನೀಲಾ ನಿಮ್ಮಿಂದ ನನಗೊಂದು ವಸ್ತು ಬೇಕೆಂದು ಬೇಡುತ್ತಾಳೆ. ಯಾವತ್ತೂ ಯಾರನ್ನೂ ಬರಿಗೈಯಲ್ಲಿ ಕಳಿಸದಿದ್ದ ರವಿಗೆ ಈ ಬಾರಿ ಅಗ್ನಿಪರೀಕ್ಷೆ. ನೀಲಾ ಕೇಳಿದ್ದು ರವಿಯ ಹತ್ತಿರ ಇದ್ದ ಪಾರಿವಾಳವನ್ನ! ಅಡುಗೆ ಮಾಡಲು ಮನೆಯಲ್ಲಿ ಏನೇನೂ ಇರದ ಕಾರಣ ಆ ಪಾರಿವಾಳವನ್ನೇ ಅಡುಗೆ ಮಾಡಿ ಬಡಿಸಿದ್ದ ರವಿ ಅದನ್ನು ಹೇಳಲಾಗದೇ ಒದ್ದಾಡುವ ದೃಷ್ಯ ಹೃದಯ ವಿದ್ರಾವಕವಾಗಿದೆ. ಜೀವನದಲ್ಲಿ ಇದುವರೆಗೂ ಯಾರು ಏನು ಕೇಳಿದ್ದರೂ ಮರು ಮಾತಾಡದೇ ದಾನ ಮಾಡುತ್ತಾ ಬಂದಿದ್ದ ರವಿ ಈಗ ಇಲ್ಲ ಎಂದು ಹೇಳಬೇಕಾದ ಸ್ಥಿತಿ ಬಂದಾಗ ಎದೆಯೊಡೆದು ಸಾಯುತ್ತಾನೆ. ಸತ್ತರೂ ರವಿ ಅಮರನಾಗುತ್ತಾನೆ.ರವಿಯ ಹೆಸರಿನ ಜೊತೆ ಕಸ್ತೂರಿ ನಿವಾಸದ ಹೆಸರೂ ಅಜರಾಮರವಾಗುತ್ತದೆ.

      3
      ಡಾ. ರಾಜ್ ಕುಮಾರ್ ಅಭಿನಯ ಇಡೀ ಚಿತ್ರದ ಜೀವಾಳ. ರಾಣಿಯ ಸಾವಿನ ನಂತರ ಚಿತ್ರದಲ್ಲಿ ಕೊನೆಯ ಅರ್ಧಗಂಟೆಗಳ ಕಾಲ ರಾಜ್ ಅಭಿನಯವನ್ನು ನೆನೆಸಿಕೊಂಡರೆ ಈಗಲೂ ರೋಮಾಂಚನವಾಗುತ್ತದೆ. ಆಡಿಸುವಾತ ಬೇಸರ ಮೂಡಿ ಆಟ ಮುಗಿಸಿದ ಹಾಡನ್ನು ನೆನಪಿಸಿಕೊಂಡಾಗಲೆಲ್ಲ ಡಾ. ರಾಜ್ ಅವರ ಅಮೋಘ ಅಭಿನಯ ಕಣ್ಣೆದುರು ಬರುತ್ತದೆ. ಅದರ ಬೆನ್ನಲ್ಲೇ ನಮ್ಮನಗಲಿದ ಡಾ.ರಾಜ್ ನೆನಪಾಗಿ ಕಣ್ಣು ತೇವಗೊಳ್ಳುತ್ತದೆ. ಅಭಿನಯ ಶಾರದೆ ಜಯಂತಿ , ಅಶ್ವಥ್ ಅವರದು ಕೂಡ ಅತ್ಯುತ್ತಮ ಅಭಿನಯ. ಆರತಿ ಅತಿಥಿ ನಟಿ. ಬಾಲಣ್ಣ-ನರಸಿಂಹ ರಾಜು ಜೋಡಿ ನಗಿಸುತ್ತದೆ.
      ಚಿತ್ರ ಮೊದಲ ಬಾರಿ ಬಿಡುಗಡೆಗೊಂಡಾಗ ಬೆಂಗಳೂರಿನಲ್ಲಿ ಕೇವಲ ನಾಲ್ಕು ವಾರಗಳ ಕಾಲ ಓಡಿತು! ಇದಕ್ಕೆ ಕಾರಣ ಚಿತ್ರಮಂದಿರದ ಮಾಲೀಕರು ಮೊದಲೇ ಬೇರೆ ಚಿತ್ರವೊಂದರ ಜೊತೆ ಮಾಡಿಕೊಂಡಿದ್ದ ಒಪ್ಪಂದದಿಂದಾಗಿ ಚಿತ್ರಮಂದಿರ ತೊರೆಯಬೇಕಾಯಿತು. ನಂತರ ಚಿತ್ರ ಸಾಗರ್ ಚಿತ್ರಮಂದಿರದಲ್ಲಿ ಮರು ಬಿಡುಗಡೆಯಾಗಿ ಶತದಿನೋತ್ಸವವನ್ನಾಚರಿಸಿತು! ಬೆಂಗಳೂರು ಮಾತ್ರವಲ್ಲದೇ ರಾಜ್ಯದ ಹದಿನೈದಕ್ಕೂ ಹೆಚ್ಚು ಕೇಂದ್ರಗಳಲ್ಲಿ ಶತದಿನೋತ್ಸವವನ್ನಾಚರಿಸಿ ಭರ್ಜರಿ ಯಶಸ್ಸನ್ನು ಕಂಡಿತು! ಚಿತ್ರದ ಯಶಸ್ಸು ಯಾವ ಮಟ್ಟದಲ್ಲಿತ್ತೆಂದರೆ, ಮೊದಲು ನಟಿಸಲು ನಿರಾಕರಿಸಿದ್ದ ಶಿವಾಜಿ ಗಣೇಶನ್ ಪುನಃ ತಾವು ಇದೇ ಚಿತ್ರದ ತಮಿಳು ಅವತಣಿಕೆಯಲ್ಲಿ ನಟಿಸಲು ಇಚ್ಚಿಸಿದರು. ದೊರೈ ಭಗವಾನ್ ಅವರಿಂದ ಚಿತ್ರದ ಹಕ್ಕನ್ನು ಎರಡೂವರೆ ಲಕ್ಷಕ್ಕೆ ಕೊಂಡುಕೊಂಡು “ಅವಂದಾನ್ ಮನಿದನ್” ಎಂಬ ಹೆಸರಿನಲ್ಲಿ ಚಿತ್ರ ಮಾಡಲಾಯಿತು! ಇದು ಶಿವಾಜಿ ಗಣೇಶನ್ ಅವರ ೧೦೦ ನೇ ಚಿತ್ರವಾಯಿತು. ಚಿತ್ರ ಅಲ್ಲಿಯೂ ಭರ್ಜರಿ ಯಶಸ್ವಿಯಾಯಿತು! ಕಸ್ತೂರಿ ನಿವಾಸ ಹಿಂದಿಯಲ್ಲಿಯೂ ನಿರ್ಮಾಣವಾಯಿತು. ಅಲ್ಲಿ ಡಾ.ರಾಜ್ ಮಾಡಿದ ಪಾತ್ರವನ್ನು ಸಂಜೀವ್ ಕುಮಾರ್ ನಿರ್ವಹಿಸಿದರು.

      ಹಾಡುಗಳು:

      ಚಿತ್ರದಲ್ಲಿ ಒಟ್ಟು 6 ಹಾಡಗಳಿವೆ.ಚಿತ್ರದ ಹಾಡುಗಳು ಸಾರ್ವಕಾಲಿಕ ಸೂಪರ್ ಹಿಟ್! ಅದರಲ್ಲೂ ಆಡಿಸಿ ನೋಡು ಬೀಳಿಸಿ ನೋಡು ಮತ್ತು ಆಡಿಸುವಾತ ಬೇಸರ ಮೂಡಿ ಆಟ ಮುಗಿಸಿದ ಹಾಡುಗಳು ಡಾ. ಪಿ.ಬಿ.ಎಸ್. ಕಂಠಸಿರಿಯಲ್ಲಿ ಡಾ. ರಾಜ್ ಅಮೋಘ ಅಭಿನಯಕ್ಕಾಗೆ ಕನ್ನಡಿಗರು ಸದಾ ನೆನೆಸಿಕೊಳ್ಳುವ ಹಾಡುಗಳು.

      ೧. ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು – ಬೊಂಬೆಯ ಬಗ್ಗೆ ಹೇಳುತ್ತಾ ಜೀವನದ ನೀತಿಪಾಠ ಹೇಳುವ ಹಾಡು ಇಂದಿಗೂ ಬಹಳ ಜನಪ್ರಿಯ.

      http://www.youtube.com/watch?v=aarmm52sYl4

      ೨. ಎಲ್ಲೇ ಇರು ಹೇಗೇ ಇರು ಎಂದೆಂದೂ ಮನದಲ್ಲಿ ನೀ ತುಂಬಿರು (ಪಿ. ಸುಶೀಲಾ) – ಸುಶೀಲಾ ಕಂಠದಲ್ಲಿ ಹೊರ ಹೊಮ್ಮಿರುವ ಸುಶ್ರಾವ್ಯ ಗೀತೆ.

      http://www.youtube.com/watch?v=2NhWqxG6b1o

      ೩. ಆಡೋಣ ನೀನು ನಾನು (ಪಿ.ಬಿ.ಶ್ರೀನಿವಾಸ್)- ಮಗುವನ್ನು ಆಡಿಸುವ ಸುಮಧುರ ಗೀತೆ.

      http://www.youtube.com/watch?v=C5NbY-KIwkM&feature=related

      ೪. ನೀ ಬಂದು ನಿಂತಾಗ ನಿಂತು ನೀ ನಕ್ಕಾಗ (ಪಿ.ಬಿ,ಶ್ರೀನಿವಾಸ್, ಪಿ.ಸುಶೀಲಾ) – ಡಾ. ರಾಜ್ ಆರತಿ ಅಭಿನಯದ ಯುಗಳ ಗೀತೆ.

      http://www.youtube.com/watch?v=dZjen3-el2s&feature=related

      ೫. ಆಡಿಸಿದಾತ ಬೇಸರ ಮೂಡಿ ಆಟ ಮುಗಿಸಿದ! ಸೂತ್ರವ ಹರಿದ ಬೊಂಬೆಯ ಮುರಿದು ಮಣ್ಣಾಗಿಸಿದ – ಚಿತ್ರದ ಅತ್ಯುತ್ತಮ.. ಅಲ್ಲಲ್ಲ ಇಡೀ ಕನ್ನಡ ಚಿತ್ರರಂಗದ ಅತ್ಯುತ್ತಮ ಭಾವನಾತ್ಮಕ ಹಾಡು! ಈ ಹಾಡನ್ನು ಹಾಡಿದ ಜಿ.ಕೆ.ವೆಂಕಟೇಶ್ ಮತ್ತು ಬರೆದ ಉದಯಶಂಕರ್, ಅಭಿನಯಿಸಿದ ರಾಜಣ್ಣ ಎಲ್ಲರಿಗೂ HATS OFF ಎಂಬ ಪದ ತುಂಬಾ ಚಿಕ್ಕದು. ನನಲ್ಲಿ ಪದಗಳಿಲ್ಲ.

      http://www.youtube.com/watch?v=UCq4f0Rjcqg&feature=related

      ೬. ಓ ಗೆಳೆಯ.. ಈ ದಾರಿ ಮರೆತೆಯ.. (ಎಲ್. ಆರ್. ಈಶ್ವರಿ) – ಕ್ಲಬ್ ಡ್ಯಾನ್ಸ್. ಎಲ್. ಆರ್. ಈಶ್ವರಿಯವರ ಸುಪ್ರಸಿದ್ಧ ಗೀತೆಗಳಲ್ಲೊಂದು!


      ಕಸ್ತೂರಿ ನಿವಾಸ ಚಿತ್ರದ DVD ಗಳು ಲಭ್ಯ. ಕಲಾಭಿಮಾನಿಗಳು ಕೊಂಡು ನೋಡಿ ಆನಂದಿಸಬಹುದು.

      ಮುಂದಿನ ವಾರ ಮತ್ತೊಂದು ಉತ್ತಮ ಚಿತ್ರದೊಂದಿಗೆ ಮತ್ತೆ ಭೇಟಿಯಾಗೋಣ,

      ತಮ್ಮವ,

      akumar

      akumar.reach@gmail.com

      Readers Comments (0)




      Please note: Comment moderation is enabled and may delay your comment. There is no need to resubmit your comment.

      Author Info