ಇದ್ದಿದ್ದು ಇದ್ದಂಗೆ – 4 : ಹಿಟ್ ಚಿತ್ರಕ್ಕೆ ಹತ್ತು ಸೂತ್ರಗಳು

Published on November 20, 2008 by admin   ·   No Comments

"ಧರ್ಮ… ಯಮ ಧರ್ಮ"… ಹೊಗಳುಭಟ್ಟಂಗಿಗಳ ಬೋಪರಾಕ್‌ಗಳ ನಡುವೆ ಆಗತಾನೇ ಸಭೆಗೆ ಆಗಮಿಸಿ ಸಿಂಹಾಸನವೇರಿದ ಯಮ ಘರ್ಜಿಸಿದ. ಆ ಘರ್ಜನೆಗೆ ಇಡೀ ನರಕವೇ ನೀರವ ಮೌನಕ್ಕೆ ಜಾರಿತ್ತು… ಆದರೆ ಯಮನ ವಾಹನ ಕೋಣ ಮಾತ್ರ ನಿಶ್ಚಿಂತೆಯಿಂದ ಮೂಲೆಯಲ್ಲಿ ಮೇಯುತ್ತಾ ನಿಂತಿತ್ತು..

"ಚಿತ್ರಗುಪ್ತರೇ ಶುರುವಾಗಲಿ ಇಂದಿನ ಸಭೆ"… ಮೀಸೆ ತಿರುವುತ್ತಾ ಆಜ್ಞೆ ಹೊರಡಿಸಿದ ಯಮ.

ದೊಡ್ಡದೊಂದು ಕಡತದೊಂದಿಗೆ ಬಂದಿದ್ದ ಚಿತ್ರಗುಪ್ತ ಯಮನ ಬಲ ಭಾಗಕ್ಕೆ ತನ್ನ ಜಾಗದಲ್ಲಿ ಆಸೀನನಾದ. ಕಡತದ ಕೆಲವು ಪುಟಗಳನ್ನು ತಿರುವಿ, ಪಕ್ಕದಲ್ಲಿದ್ದ ಯಮಕಿಂಕರರಿಗೆ ತಲೆಯಲ್ಲಾಡಿಸಿ ಏನೋ ಸನ್ನೆ ಮಾಡಿದ. ಕೂಡಲೇ ಆ ಯಮಕಿಂಕರರು ಅಂದಿನ ದಿನದ "ನರಕಕ್ಕೆ ಹೊಸ ಸೇರ್ಪಡೆ" ಸಾಲಿನಿಂದ ಒಬ್ಬ ಮಾನವನನ್ನು ಎಳೆದು ತಂದರು. ಆತನ ಬಾಯಿಗೆ ಬಲವಾಗಿ ಬಟ್ಟೆ ತುರುಕಿ ಮಾತಾಡದಂತೆ  ಮಾಡಲಾಗಿತ್ತು. ಯಮನ ಮುಂದೆ ಆತನನ್ನು ತಂದು ನಿಲ್ಲಿಸುತ್ತಿದ್ದಂತೆ ಚಿತ್ರಗುಪ್ತನ ವಿವರಣೆ ಮೊದಲುಗೊಂಡಿತು…

"ಪ್ರಭುಗಳೇ ಈ ಮಾನವ ಕನ್ನಡ ಚಿತ್ರ ನಿರ್ದೇಶಕ. ನಿಮ್ಮ ಆದೇಶದ ಮೇರೆಗೆ ಮೊನ್ನೆ ಯಮಕಿಂಕರರು ಈತನನ್ನು ಕರೆತಂದಿದ್ದಾರೆ. ನೆನ್ನೆ ಮಕ್ಕಳದಿನಾಚರಣೆಯ ಪ್ರಯುಕ್ತ ನಿಮ್ಮ ಸಭೆಗೆ ರಜವಿದ್ದುದರಿಂದ ಈತನ ಶಿಕ್ಷೆ ನಿರ್ಧರಿಸಲಾಗಲಿಲ್ಲ. ಅಂದಿನಿಂದ ನಮಗೆ ಈತನ ಉಪಟಳ ಹೆಚ್ಚಾಗಿದೆ. ಒಂದೇ ಸಮನೆ ತನ್ನನ್ನು ಸ್ವರ್ಗಕ್ಕೆ ಕಳಿಸಬೇಕೆಂದು ಹಠ ಹಿಡಿದಿದ್ದಾನೆ"

ಇಷ್ಟು ಹೇಳಿದ ಚಿತ್ರಗುಪ್ತ ಆತನ ಬಾಯಿಗೆ ತುರುಕಿದ್ದ ಬಟ್ಟೆ ತೆಗೆಯುವಂತೆ ಸನ್ನೆ ಮಾಡಿದ.

ಬಟ್ಟೆ ತೆಗೆಯುತ್ತಿದ್ದಂತೆ ಮಾನವ ಏರು ಧ್ವನಿಯಲ್ಲಿ ಕೂಗಾಡಲು ಶುರುವಿಟ್ಟುಕೊಂಡ… "ನಾನಿದನ್ನು ಸಹಿಸಲಾರೆ… ನಾನು ಸ್ವರ್ಗಕ್ಕೆ ಹೋಗಬೇಕಾಗಿತ್ತು… ನಿಮ್ಮಿಂದ ಏನೋ ತಪ್ಪಾಗಿ ನಾನು ನರಕಕ್ಕೆ ಬಂದಿದ್ದೇನೆ.. ಕೂಡಲೇ ನನ್ನನ್ನು ಸ್ವರ್ಗಕ್ಕೆ ಸ್ಥಳಾಂತರಿಸಿ.. ಇಲ್ಲದಿದ್ದರೆ ಪರಿಣಾಮ ಚೆನ್ನಾಗಿರುವುದಿಲ್ಲ…"

ಇದನ್ನು ಕೇಳುತ್ತಿದ್ದಂತೆ ಯಮನ ಕೋಪ ತಾರಕಕ್ಕೇರಿತು.. ಯಮ ಮತ್ತೊಮ್ಮೆ ಘರ್ಜಿಸಿದ.. "ಎಲವೋ ಹುಲುಮಾನವ ಈ ಅಖಂಡ ವಿಶ್ವದ ಸಕಲ ಚರಾಚರ ಅಣುರೇಣುತೃಣಕಾಷ್ಟಾದಿಗಳಿಂದ ಹಿಡಿದು ನರರಾಕ್ಷಸ ಸುರಾಸುರ ಯಕ್ಷಕಿನ್ನರ ಕಿಂಪುರುಷ ದೇವ ಗಂಧರ್ವರಾದಿಯಾಗಿ ಮೊದಲ್ಗೊಂಡು ಯಾರೂ ನನ್ನ ಸಭೆಯಲ್ಲಿ ಏರು ಧ್ವನಿಯಲ್ಲಿ ಮಾತಾಡುವುದಿಲ್ಲ. ನೀನು ಕೂಗಾಡುವುದಲ್ಲದೆ ನಮ್ಮ ಮೇಲೆ ತಪ್ಪು ಹೊರಿಸುತ್ತಿರುವೆಯಾ? ಚಿತ್ರಗುಪ್ತರೇ ತಕ್ಷಣ ಈತನ ಪಾಪಗಳನ್ನು ಪಟ್ಟಿ ಮಾಡಿ ಈತನಿಗೆ ಅತ್ಯಂತ ಕಠಿಣ ಶಿಕ್ಷೆ ವಿಧಿಸುವೆ"

ಯಮನ ಕೋಪ ನೋಡಿದ ಮಾನವ ಕೊಂಚ ಗಾಬರಿಗೊಂಡು ಮೌನವಾದ. ಚಿತ್ರಗುಪ್ತ ಆ ಮಾನವ ನಿರ್ದೇಶಕನ ಪಾಪಗಳ ಪಟ್ಟಿ ಓದತೊಡಗಿದ…

"ಯಮಧರ್ಮ, ಈ ನಿರ್ದೇಶಕ ಸಹಾಯಕನಾಗಿದ್ದ ಕಾಲದಿಂದ ಕಥೆಗಳನ್ನು ಕದಿಯುತ್ತಿದ್ದಾನೆ. ಮುಗ್ಧ ಹುಡುಗಿಯರಿಗೆ ಅವಕಾಶ ಕೊಡುವುದಾಗಿ ನಂಬಿಸಿ ಮೋಸ ಮಾಡಿದ್ದಾನೆ. ಈತ ಮಾಡಿರುವುದೆಲ್ಲ ಫ್ಲಾಪ್ ಚಿತ್ರಗಳೇ. ಈತನಿಂದ ಎಷ್ಟೋ ಜನ ನಿರ್ಮಾಪಕರು ಬಹಳ ಹಣ ಕಳೆದುಕೊಂಡಿದ್ದಾರೆ. ಇವಿಷ್ಟೇ ಅಲ್ಲದೇ ನನ್ನ ಹಾಗೂ ನಿಮ್ಮ ಬಗ್ಗೆಯೂ ಒಂದು ಚಿತ್ರ ಮಾಡಿ ನಮ್ಮನ್ನು ಭೂಲೋಕದಲ್ಲಿ ನಗೆಪಾಟಲಿಗೆ ಗುರಿಮಾಡಿದ್ದಾನೆ. ನಮ್ಮ ತೇಜೋವಧೆ ಮಾಡಿದ್ದಾನೆ. ನೆನ್ನೆ ರಜಾದಿನ ನಾನು ಪರಿವಾರದೊಂದಿಗೆ ಮತ್ತೊಮ್ಮೆ "ಮುಂಗಾರು ಮಳೆ" ನೋಡಲು ಹೋದಾಗ ಹುಲುಮಾನವರೆಲ್ಲಾ ನಮಗೆ ಸ್ವಲ್ಪವೂ ಗೌರವ ಕೊಡಲಿಲ್ಲ…"

ಚಿತ್ರಗುಪ್ತ ಮತ್ತೆ ಮುಂದುವರೆಸಿದ.. "ಆದರೆ ಈತನಿಂದ ನಮಗೆ ಒಂದು ಲಾಭವೂ ಆಗಿದೆ.. ನರಕದಲ್ಲಿ ಪಾಪಿಗಳು ಅತಿ ಉಗ್ರ ಶಿಕ್ಷೆಗಳಿಗೂ ಕಿರುಕುಳಗಳಿಗೂ ಬಗ್ಗದಿದ್ದಾಗ ಈತನ ಚಿತ್ರಗಳನ್ನು ತೋರಿಸಲಾಗುತ್ತದೆ… ಅವುಗಳಿಗೆ ಮೊಂಡಾತಿಮೊಂಡ ಕೈದಿಗಳೂ ತತ್ತರಿಸಿ ಹೋಗಿದ್ದಾರೆ…"

ಮಾನವ ಮತ್ತೊಮ್ಮೆ ಚೀರಾಡಲು ಪ್ರಾರಂಭಿಸಿದ… "ಸುಳ್ಳು ಸುಳ್ಳು… ಶುಧ್ಧ ಸುಳ್ಳು… ನನ್ಯಾವ ಚಿತ್ರಗಳೂ ಫ್ಲಾಪ್ ಆಗಿಲ್ಲ… ಟಾರ್ಚರ್ ಅಂತೂ ಮೊದಲೇ ಅಲ್ಲ.. ಬೇಕಿದ್ದರೆ "ಆರ್.ಜೀ.ವಿ" ಎಂಬ ಅತ್ಯಂತ ನಿಷ್ಪಕ್ಷಪಾತಿ ವಿಮರ್ಶಕ ಬರೆದಿರುವ ವಿಮರ್ಶೆಗಳನ್ನೇ ನೋಡಿ…"

ಒಲ್ಲದ ಮನಸ್ಸಿನಿಂದ ಯಮ ಒಮ್ಮೆ ಪರಿಶೀಲಿಸುವಂತೆ ಚಿತ್ರಗುಪ್ತನಿಗೆ ಆದೇಶಿಸಿದ. ಕಡತದಲ್ಲಿ ಮತ್ತೆ ಕೆಲ ಪುಟಗಳನ್ನು ತಿರುವಿದ ಚಿತ್ರಗುಪ್ತ ಅವಾಕ್ಕಾದ..

"ಆಶ್ಚರ್ಯ… ಹೌದು ಪ್ರಭುಗಳೇ ಆರ್.ಜಿ.ವಿ ಎಂಬ ವಿಮರ್ಶಕ ಈತನ ಎಲ್ಲಾ ಚಿತ್ರಗಳನ್ನೂ ಸಿಕ್ಕಾಪಟ್ಟೆ ಹಾಡಿ ಹೊಗಳಿದ್ದಾನೆ.. ಎಲ್ಲಾ ಚಿತ್ರಗಳನ್ನೂ ಹಿಟ್ ಎಂದು ಬರೆದಿದ್ದಾನೆ…"

ಇಷ್ಟು ಕೇಳುತ್ತಿದ್ದಂತೆ ನಿರ್ದೇಶಕ ಮತ್ತೆ ಶುರುಮಾಡಿದ… "ನೋಡಿ ನೋಡಿ ಎಲ್ಲಾ ನಿಮ್ಮದೇ ತಪ್ಪು.. ನನಿಗಾದ ಈ ಅನ್ಯಾಯ ಕೂಡಲೇ ಸರಿಪಡಿಸಿ.. ನನ್ನನ್ನೀಗಲೇ ಸ್ವರ್ಗಕ್ಕೆ ಕಳಿಸಿ.."

ಯಮ ಏನೂ ತೋಚದೇ ಸ್ವಲ್ಪ ತಣ್ಣಗಾದ. ಮನಸ್ಸಿನಲ್ಲೇ ಅಂದುಕೊಂಡ.."ಅಬ್ಬಬ್ಬಾ ಎಲ್ಲ ಹಿಟ್ ಚಿತ್ರಗಳೇ.. ಈತ ಭಾರೀ ನಿರ್ದೇಶಕನೇ ಇರಬೇಕು.."

ಇದೇ ಸರಿಯಾದ ಸಮಯ ಎಂದರಿತ ನಿರ್ದೇಶಕ ತನ್ನ ಬುಧ್ಧಿ ಓಡಿಸಿ ಯಮನ ಮುಂದೆ ಒಂದು ಆಫರ್ ಇಟ್ಟ… "ಯಮಧರ್ಮ ನೀನೇನು ನನ್ನನ್ನು ಪುಕ್ಕಟೆಯಾಗಿ ಸ್ವರ್ಗಕ್ಕೆ ಕಳಿಸಬೇಡ..ಇದೋ ನಿನಗೊಂದು ಆಫರ್ ಕೊಡುವೆ… ನೀನು ನನ್ನನ್ನು ಸ್ವರ್ಗಕ್ಕೆ ಕಳಿಸು ಬದಲಾಗಿ ನಾನು ನಿನಗೆ ಹಿಟ್ ಚಿತ್ರ ಮಾಡುವ ಹತ್ತು ಫಾರ್ಮುಲಾಗಳನ್ನು ಹೇಳಿಕೊಡುವೆ.. ಬೋನಸ್ ರೂಪದಲ್ಲಿ ನಿನ್ನನ್ನೇ ಹೀರೋ ಮಾಡಿ ರಂಭೆ, ಊರ್ವಶಿಯರನ್ನೇ ಹಾಕಿಕೊಂಡು ಇಲ್ಲೇ ಒಂದು ಚಿತ್ರ ಮಾಡುವೆ…"

ಯಮನಿಗೆ ತನ್ನ ಕಿವಿಗಳನ್ನು ತಾನೇ ನಂಬಲಾಗಲಿಲ್ಲ… ಆಲ್ಲೇ ಡ್ಯೂಯಟ್‍ಗಳ ಕಲ್ಪನೆಗೆ ಜಾರಿದ ಯಮನ ಚಂಚಲ ಮನಸ್ಸು ಸಂತಸದಿಂದ ಪುಟಿಯುತ್ತಿತ್ತು.. ಯಮ ಮತ್ತೊಮ್ಮೆ ಸೋತಿದ್ದ.. ಚಿತ್ರಗುಪ್ತ ಹಿಟ್ ಚಿತ್ರಗಳ ಫಾರ್ಮುಲಾ ತಿಳಿದುಕೊಂಡು ದೊಡ್ಡ ನಿರ್ಮಾಪಕನಾಗುವ ಕನಸು ಕಾಣತೊಡಗಿದ.. ಭೋಲೋಕದಂತೆ ಯಮಲೋಕದಲ್ಲೂ ನಿರ್ದೇಶಕ ಮಹಾಶಯ ಕನಸು ಮಾರುವುದರಲ್ಲಿ ಯಶಸ್ವಿಯಾಗಿದ್ದ…ತನ್ನ ಜಾಣ್ಮೆಗೆ ತಾನೇ ಬೆನ್ನು ತಟ್ಟಿಕೊಂಡು ಬೀಗುತ್ತಿದ್ದ.

ಕೊಂಚವೂ ತಡಮಾಡದೇ ತನ್ನ ಮಾತಿನ ಕಂತೆ ಬಿಚ್ಚಿದ ನಿರ್ದೇಶಕ ಮಹಾಶಯ .. "ಎಲವೋ ಯಮಧರ್ಮನೇ ಕೇಳುವಂತವನಾಗು… ಹಿಟ್ ಚಿತ್ರಕ್ಕೆ ಹತ್ತು ಸೂತ್ರಗಳು

1. 6+5+4+3+2+1 = ಹಿಟ್

ಅತಿ ಮುಖ್ಯ : ಆರು ಹಾಡು, ಐದು ಫೈಟು, ನಾಲ್ಕು ಕಾಮಿಡಿ ಸೀನ್ಸ್, ಮೂರು ಸೆಂಟಿಮೆಂಟಲ್ ಸೀನ್ಸ್, ಇಬ್ರು ಹೀರೋಯಿನ್, ಒಂದು ಸಡನ್ ಟ್ವಿಸ್ಟು.

ಇದೆಲ್ಲಾ ಹಾಕಿ ಕಥೆಗೆ ಜಾಗ ಇದ್ರೆ ಕಥೆನೂ ಸೇರಿಸ್ಬಹುದು… ಬೇಕೇ ಬೇಕು ಅಂತೇನೂ ಇಲ್ಲ… ಐದರಲ್ಲಿ ಕನಿಷ್ಟ ನಾಲ್ಕು ಹಾಡುಗಳನ್ನಾದರೂ ಫಾರಿನ್ ಲೊಕೇಷನ್‍ನಲ್ಲಿ ಶೂಟ್ ಮಾಡಬೇಕು..

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ಡಿರಾಬಾಬು@ಹಳೇವೈನುಹೊಸಾಬಾಟ್ಲು.ಕಾಂ

2. ಲಾಂಗು-ಮಚ್ಚು

ಅತಿ ಮುಖ್ಯ : length of ಲಾಂಗು directly proportional to no. of weeksu, ಜಾಸ್ತಿ ಬ್ಲಡ್ ಬಂದ್ರೆ ಜಾಸ್ತಿ ಜನ ಬರ್ತಾರೆ…

ಮೊದಲಾರ್ಧ ಸಾಧ್ಯವಾದಷ್ಟು ಲಾಂಗ್ ಝಳುಪಿಸಬೇಕು. ಸೆಕೆಂಡ್ ಹಾಫಲ್ಲಿ ಅತ್ಯಂತ ಸಭ್ಯನಾದ, ಮೆದು ಸ್ವಭಾವದವನಾದ ನಾಯಕ ಯಾಕೆ ಲಾಂಗ್‍ಗೆ ಶರಣಾದ ಅನ್ನೋದನ್ನ ತೋರಿಸಬೇಕು. ಬಲವಾದ ಕಾರಣ ಏನೂ ಬೇಕಿಲ್ಲ.. ಇದು ಕೇವಲ ಸೆನ್ಸಾರ್ ಮಂಡಳಿಯನ್ನು ಮೆಚ್ಚಿಸಲು ಮಾತ್ರ.. 

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ಚಾಲೆಂಜಿಂಗ್‍ಸ್ಟಾರ್@ಮಚ್ಚ್ ಮಚ್ಚ್ ಮೋರ್.ಕಾಂ

3. ಭಾವನಾತ್ಮಕ ಬಲಾತ್ಕಾರ/ಎಮೋಶನಲ್ ಅತ್ಯಾಚಾರ

ಅತಿ ಮುಖ್ಯ : ಚಿತ್ರದ ಹೆಸರಲ್ಲಿ ಈ ಕೆಳಕಂಡ ಪದಗಳಲ್ಲಿ ಕನಿಷ್ಠ ಒಂದಾದರೂ ಇರಲೇಬೇಕು. "ಕರುಳು", "ಸೀರೆ", "ತವರು", "ತಂಗಿ/ತಾಯಿ", "ಹೆತ್ತವರು", "ಹೆಣ್ಣು", "ಕಣ್ಣೀರು", "ಮಗಳು", "ಮಡಿಲು"

ಈ ರೀತಿಯ ಚಿತ್ರಗಳ ನೇರ ಗುರಿ ಹೆಂಗಳೆಯರು. ಮುಖ್ಯಪಾತ್ರ ಕಡ್ಡಾಯವಾಗಿ ಹೆಣ್ಣಾಗಿರಬೇಕು. ಕಥೆ ಆಕೆಯ ಸುತ್ತಲೇ ಸುತ್ತಬೇಕು. ಆಕೆಗೆ ಹೆಚ್ಚು ಹೆಚ್ಚು ಕಷ್ಟ ಕೊಟ್ಟಷ್ಟೂ ಸಿನಿಮಾ ಹಿಟ್ ಆಗುವ ಸಾಧ್ಯತೆಗಳೂ ಹೆಚ್ಚು. ಜಗತ್ತಿನ ಎಲ್ಲಾ ಕಷ್ಟಗಳೂ ಈಕೆಗೇ ಮೀಸಲು. ಚಿತ್ರದ ತುಂಬಾ ಕ್ಲೀಷೆಗಳಿಂದ ತುಂಬಿದ  ಸೆಂಟಿಮೆಂಟಲ್ ಸೀನ್‍ಗಳಿರಬೇಕು. ನೋಡುವವರೆಲ್ಲಾ ಗಳಗಳನೆ ಲೀಟರ್‍ಗಟ್ಲೆ ಕಣ್ಣೀರು ಹರಿಸಬೇಕು. ನೆನಪಿನಲ್ಲಿಡಿ ಸಿನಿಮಾ ಕಡ್ಡಾಯವಾಗಿ ಸುಖಾಂತ್ಯವಾಗಬೇಕು. ಇಲ್ಲವಾದಲ್ಲಿ ಸಕಲ ಹೆಣ್ಣುಕುಲದ ಪಾಪ ತಮಗೆ ತಗಲುವ ಸಾಧ್ಯತೆಗಳಿವೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ಅಜಯ್‍ಕುಮಾರ್@ಕರುಳ್‍ಚುರ್ರ್.ಕಾಂ, ಮಹೇಂದ್ರು@ಕಣ್ಣೀರ್‌ಹೊಳೆ.ಕಾಂ

4. ಅಣ್ಣ-ತಂಗಿ / ಮದರ್ ಸೆಂಟಿಮೆಂಟು

ಹೆಸರೇ ಹೇಳುವಂತೆ ಅಣ್ಣ ತಂಗಿಯ ಸುತ್ತ ಕಥೆ ಸುತ್ತಬೇಕು. ಹಳ್ಳಿಗಾಡಿನಲ್ಲಿ ನಡೆಯುವ ಕಥೆ ಇದು. ಬಹಳಷ್ಟು ಸಲ ತಂದೆ ಇಲ್ಲದ ಪರಿವಾರ ಇದು. ಅಣ್ಣನೇ ತಂದೆ ಸ್ಥಾನದಲ್ಲಿ ನಿಂತು ಜವಾಬ್ದಾರಿಗಳನ್ನು ನಿಭಾಯಿಸಬೇಕು. ಆತ ಮಾಡುವ ತ್ಯಾಗಗಳು ಜನರು ಊಹಿಸಲೂ ಸಾಧ್ಯವಾಗದಂತಹವಿರಬೇಕು. ಇದು ತುಂಬಾ ಫ್ಲೆಕ್ಸಿಬಲ್ ಫಾರ್ಮುಲಾ. ಅಣ್ಣನ ಜಾಗದಲ್ಲಿ ಮಗನನ್ನೂ, ತಂಗಿಯ ಜಾಗದಲ್ಲಿ ತಾಯಿಯನ್ನೂ ಹಾಕಿ.. ಇನ್ನೊಂದು ಹಿಟ್ ಚಿತ್ರ ರೆಡಿ.. ಇನ್ನೂ ಸ್ವಲ್ಪ ಥ್ರಿಲ್ ಬೇಕಾ? ತಾಯಿ ಮಗನನ್ನು ಕೊನೇ ಸೀನ್ ವರೆಗೂ ಮೀಟ್ ಮಾಡಿಸ್ಬೇಡಿ.. ಅವರು ಕ್ಲೈಮಾಕ್ಸಲ್ಲೇ ಮೀಟ್ ಆಗ್ಬೇಕು.. ಚಿತ್ರ ಸಿಲ್ವರ್ ಜುಬಿಲೀ…

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ಸಾಯಿಗಾರು@ಹೆಗ್ಲುಮೇಲ್‍ಟವಲ್.ಕಾಂ

5. ನಾಯಕ ಪ್ರಧಾನ

ಅತಿ ಮುಖ್ಯ : ನಾಯಕನ ಚಿತ್ರದಲ್ಲಿನ ಹೆಸರನ್ನೇ ಚಿತ್ರಕ್ಕೂ ಇಡಬೇಕು. ನಾಯಕನ ಆಪ್ತಮಿತ್ರ ಶುಧ್ಧ ಪೆದ್ದಪ್ಪನಾಗಿರಬೇಕು.

ಚಿತ್ರದ ಮೊದಲು ಒಂದು ಘಂಟೆ ನಾಯಕನನ್ನು ಬರೀ ನಾಯಕನನ್ನು ಪರಿಚಯಿಸುವ ಆತನ ಒಳ್ಳೆ ಗುಣಗಳನ್ನು ತೋರಿಸುವ ಸೀನ್‍ಗಳಿರಬೇಕು. ಹೀರೋಗೆ ಹೆಜ್ಜೆ ಹೆಜ್ಜೆಗೂ ಅಡ್ಡಗಾಲು ಹಾಕೋ ಒಬ್ಬ ವಿಲನ್. ಹೀರೋನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸೋ ಹೀರೋಯಿನ್. ಸೆಂಟಿಮೆಂಟ್‍ಗಾಗಿ ಒಂದು ಫಾಮಿಲಿ. ಒಂದ್ ಸ್ವಲ್ಪ ಹೊಡೆದಾಟ, ಒಂದಿಷ್ಟು ಹಾಡುಗಳು (ಫಾರಿನ್ ಲೊಕೇಶನ್‍ಗಳಲ್ಲಿ) ಅಷ್ಟೇ… ಸಿನಿಮಾ ಮಿನಿಮಮ್ ಗಾರಂಟಿ..  

6. ತ್ರಿಕೋನ ಪ್ರೇಮ

ಒಬ್ಬ ಹುಡುಗ ಇಬ್ಬರು ಹುಡುಗಿಯರು ಅಥವಾ ಒಬ್ಬಳು ಹುಡುಗಿ ಇಬ್ಬರು ಹುಡುಗರು. ಸಾಮಾನ್ಯವಾಗಿ ಒಬ್ಬಳು ಹುಡುಗಿ ಇಬ್ಬರು ಹುಡುಗರು ಇದ್ದರೆ ಒಳ್ಳೆಯದು. ಇಬ್ಬ್ರು ಹೀರೋಗಳ ಪಾತ್ರಕ್ಕೂ ಫೇಮಸ್ ನಟರನ್ನ ಹಾಕಿಬಿಟ್ಟರೆ ಚಿತ್ರ ಸಿಲ್ವರ್ ಜುಬಿಲೀ. ಇಬ್ಬರೂ ಹುಡುಗೀನ ಸಿಕ್ಕಾಪಟ್ಟೆ ಪ್ರೀತಿಸಬೇಕು ಆದರೆ ಒಬ್ಬರಿಗೊಬ್ಬರು ತೋರಿಸಿಕೊಳ್ಳಬಾರದು. ಈ ಪ್ರೀತಿಯ ಗುಟ್ಟು ಹೊರಬೀಳುತ್ತಿದ್ದಂತೆ ಇಬ್ಬರೂ ಹುಡುಗಿಯನ್ನು ತ್ಯಾಗ ಮಾಡಲು ಸಿಧ್ಧರಾಗಬೇಕು… ಕೊನೆಗೆ ತ್ಯಾಗರಾಜನಾಗೋದು ಒಬ್ಬನೇ… 

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ರಮೇಶ್@ತ್ಯಾಗರಾಜು.ಕಾಂ

7. ಫಾಮಿಲಿ ಡ್ರಾಮಾ

ಅತಿ ಮುಖ್ಯ : ದೊಡ್ಡ ಕುಟುಂಬ. ಕುಟುಂಬದ ಯಜಮಾನನಿಗೆ ಫಾಮಿಲಿ ಪ್ಲಾನಿಂಗ್ ಬಗ್ಗೆ ನೋ ವರೀಸ್. ಆತನಿಗೆ ಕನಿಷ್ಠ ನಾಲ್ಕು ಮಕ್ಕಳಾದರೂ ಇರಬೇಕು. ಪ್ರತಿ ನಾಲ್ಕು ಮಕ್ಕಳಲ್ಲಿ ಕನಿಷ್ಠ ಒಂದಾದರೂ ಹೆಣ್ಣು ಸಂತಾನ ಇರಲೇತಕ್ಕದ್ದು. ಇದಲ್ಲದೇ ಒಬ್ಬ ಸಾಕುಮಗ ಕಡ್ಡಾಯವಾಗಿ ಇರಲೇಬೇಕು.

ಪ್ರಾರಂಭದಲ್ಲಿ "ಆನಂದ ಸಾಗರ"ವಾಗಿದ್ದ ಸಂಸಾರದಿಂದ ಮಧ್ಯಂತರದ ವೇಳೆಗೆ ಎಲ್ಲಾ ಮಕ್ಕಲೂ ಬೇರಾಗಬೇಕು. ಹೆತ್ತ ಮಕ್ಕಳು ಮೂಲೆಗುಂಪು ಮಾಡಿದಾಗ ತಂದೆ ತಾಯಿಯ ಕೈ ಹಿಡಿಬೇಕು ನೋಡಿ ಸಾಕುಮಗ. ಈ ಪಾತ್ರಕ್ಕೆ ಯಾರಾದರೂ ದೊಡ್ಡ ನಟರನ್ನು ಅಥಿತಿ ನಟರನ್ನಾಗಿ ತೆಗೆದುಕೊಂಡರೆ ಒಳ್ಳೇದು. ಕ್ಲೈಮಾಕ್ಸ್ ವೇಳೆಗೆ ಮತ್ತೆ ಒಂದಾಗಬೇಕು ಈ ಒಡೆದುಹೋದ ಸಂಸಾರ. ಕುಟುಂಬದ ಎಲ್ಲರೂ ಸೇರಿ ಕುಣಿಯುವ ಒಂದು ಹಾಡು ಕಡ್ಡಾಯ.. ಮರೆತೀರ ಜೋಕೆ… 

8. ಸೀಡಿ ನೋಡಿ… ಸಿನಿಮಾ ಮಾಡಿ

ಅತಿ ಮುಖ್ಯ : ಪರಭಾಷಾ ಕಥೆಗಾರನೊಬ್ಬನನ್ನು ಕರೆಸಿ, ಆತನಿಗೆ ಅಶೋಕ ಹೋಟೆಲ್‍ನಲ್ಲಿ ರೂಮ್ ಮಾಡಿಕೊಡಬೇಕು.

ನೀವೇನು ತಲೆ ಕೆಡಿಸಿಕೊಳ್ಳಬೇಡಿ.. ಆತ ಆಗಲೇ ಹಲವಾರು ಸೀಡಿಗಳನ್ನು ನೋಡಿಕೊಂಡು, ಇನ್ನು ಕೆಲವನ್ನು ತೆಗೆದುಕೊಂಡೂ ಬಂದಿರ್ತಾನೆ . ಜಸ್ಟ್ ನೀವು ನೋಡಿ ಯಾವ್ ಯಾವ್ ಸೀಡಿಯಿಂದ ಯಾವ್ ಯಾವ್ ಸೀನ್ ಬೇಕು ಅಂತ ಹೇಳಿದ್ರೆ ಸಾಕು. ಕದ್ದಿದ್ದು ಎದ್ದು ಕಾಣದ ಹಾಗೆ "ಹೊಸ ತರ" ಕಥೆ ಮಾಡಿಕೊಡ್ತಾನೆ. ಇಲ್ಲ ಎಲ್ಲಾ ಅವನಿಗೇ ಬಿಟ್ರೂ ಆಯ್ತು.. ಅವನೇ ಸೀನ್ಗಳನ್ನ ಸೆಲೆಕ್ಟ್ ಮಾಡಿ ಕಥೆ ಮಾಡ್ತಾನೆ.. ಆಮೇಲೆ ಒಬ್ಬ ಒಳ್ಳೇ ಅಸ್ಸಿಸ್ಟೆಂಟ್ ಇಟ್ಕೊಂಡ್ರೆ ಆಗೋಯ್ತು.. ಹಿಟ್ ಸಿನಿಮಾ ರೆಡಿ…

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ಜನಾರ್ಧನಮಹರ್ಷಿ@ಎಲ್ಲಾರನ್ನೂಯಾಮಾರ್ಸಿ.ಕಾಂ

9. ರಿಮೇಕೋ ರಿಮೇಕು

ಬೇರೆ ಭಾಷೆಲಿ ಹಿಟ್ ಆಗಿರೋ ಒಂದು ಚಿತ್ರದ ಹಕ್ಕುಗಳನ್ನು ತೊಗೊಳ್ಳಿ… ಡೈಲಾಗ್ಸ್ ಮಾತ್ರ ಕನ್ನಡಾನುವಾದ ಮಾಡಿ.. ಉಳಿದಿದ್ದೆಲ್ಲಾ ಮಕ್ಕಿ ಕಾ ಮಕ್ಕಿ ಕಾಪಿ ಮಾಡಿ… ಇದು ಅತ್ಯಂತ ಸರಳ ಸೂತ್ರ. ಎಲ್ಲಾ ಆದಮೇಲೆ, ಇದರಲ್ಲಿ ಸಿಕ್ಕಾಪಟ್ಟೆ ಚೆಂಜಸ್ ಮಾಡಿದೀವಿ, ಕನ್ನಡ ಪ್ರೇಕ್ಷಕರಿಗೆ ಇಷ್ಟ ಆಗೋಹಾಗೆ ಬದಲಾವಣೆಗಳನ್ನ ಮಾಡಿದೀವಿ, ಅದೂ ಇದೂ ಅಂತೆಲ್ಲಾ ಕಾಗೆ ಹಾರ್ಸಿ… ಟಿ-ಜಂಕ್ಷನ್‍ಲಿ ಒಂದು ದೊಡ್ಡ ಪೋಸ್ಟರ್ ಹೊಡ್ಸಿ.. ಎಫ್.ಎಂ ಲಿ ದಿನಕ್ಕೆ ನೂರ್ಸಲ ಹಾಡು ಹಾಕ್ಸಿ.. ಸಿನಿಮಾ ಹಿಟ್ಟಾಗ್ದಿದ್ರೆ ಕೇಳಿ..

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ನಾಗಣ್ಣ@ನಾನಿರುವುದೆರಿಮೇಕ್‍ಗಾಗಿ.ಕಾಂ

ಇಷ್ಟು ಹೇಳಿದ ಮೇಲೆ ಮತ್ತೆ ಮಾನವ ಬುಧ್ಧಿ ಕೆಲಸ ಮಾಡಲು ಶುರು ಮಾಡಿತು.."ಅಕಸ್ಮಾತ್ ನಾನು ಎಲ್ಲಾ ಸೂತ್ರಗಳನ್ನು ಹೇಳಿಕೊಟ್ಟಮೇಲೆ ಇವರಿಬ್ಬರೇನಾದ್ರೂ ಕೈ ಎತ್ತಿಬಿಟ್ರೆ? ಯಾತಕ್ಕೂ ಒಂದ್ ಫಾರ್ಮುಲಾ ನನ್‍ಹತ್ರಾನೇ ಇರ್ಲಿ" ಅಂದುಕೊಂಡ.. ಯಮನಿಗೆ ಹೇಳಿದ… "ಹತ್ತನೇ ಫಾರ್ಮುಲಾ ಬಹಳ ಪರಿಣಾಮಕಾರಿ ಫಾರ್ಮುಲ.. ಗಾರಂಟಿ ಹಿಟ್" ಬಟ್ ಅದನ್ನ ಮಾತ್ರ ನಾನು ನೀನು ನನ್ನನ್ನ ಸ್ವರ್ಗಕ್ಕೆ ಕಳಿಸಿದ ಮೇಲೆ ನಿನಗೆ ಪತ್ರಮುಖೇನ ಕಳಿಸುತ್ತೇನೆ.. ಜಸ್ಟ್ ಫಾರ್ ಸೇಫ್ಟಿ"

ಯಮ ಪಾಪ ಇನ್ನೇನು ಹೆಳ್ತಾನೆ? ಸರಿ ಅಂದ… "ಅಂದಹಾಗೆ ನನ್ನ ಹೀರೋ ಮಾಡೋ ಸಿನಿಮಾ ಯಾವಾಗ?" ಯಮ ಕೇಳಿದ…

ತಲೆ ಮೇಲೆ ಟೋಪಿ ಹಾಕಿಕೊಳ್ಳುತ್ತಾ ಹೇಳಿದ ನಿರ್ದೇಶಕ… "ನಾಳೇನೇ ಮುಹೂರ್ತ… ಅತೀ ಶೀಘ್ರದಲ್ಲಿ ನಿರೀಕ್ಷಿಸಿ …""ಯಮ ಲೋಕದಲ್ ಒಂದಿನಾ…" 

Readers Comments (0)




Please note: Comment moderation is enabled and may delay your comment. There is no need to resubmit your comment.

Author Info