| ಕನ್ನಡದ ವರನಟ ರಾಜಣ್ಣನವರು ನಮ್ಮನ್ನಗಲಿದ ಆ ಕರಾಳ ದಿನದಂದು ತಮಗಾದ ಅನುಭವವನ್ನು ನಿಮ್ಮ ಮುಂದೆ ಬಿಚ್ಚಿಡುತ್ತಿದ್ದಾರೆ ಗಂಧದಗುಡಿಯ ಹೆಮ್ಮೆಯ ಸದಸ್ಯ ದೀಪಕ್ ಅವರು.. |
ಗಂಧದಗುಡಿ ಗೆಳೆಯರಿಗೆಲ್ಲ ನನ್ನ ನಮಸ್ಕಾರಗಳು. ನಾನು ಗಂಧದಗುಡಿ ಬಳಗವನ್ನು ಸೇರಿ ಸಾಧಾರಣ ೧ ವರ್ಷವೇ ಆಯಿತು ಆದರೆ ಇಲ್ಲಿಯವರೆಗೆ ಎಲ್ಲಾ ಅಂಕಣಗಳನ್ನು ಓದುತ್ತಾ ಹೆಚ್ಚುವರಿ ಮೂಕ-ಪ್ರೆಕ್ಷಕನಾಗಿಯೇ ಉಳಿದಿದ್ದೆ. ಆದರೆ ಮೊನ್ನೆ ಒಮ್ಮೆ "PERSONALITY INTERVIEW'S OUTPUT" ಎಂಬ ಅಂಕಣವನ್ನು ನೋಡಿದೆ, ನನ್ನ ಬಗ್ಗೆ ಇಲ್ಲಿರುವ ಎಲ್ಲಾ ಮಿತ್ರರಿಗೆ ಪರಿಚಯಿಸಿಕೊಳ್ಳಲು ಇದು ಒಂದು ಒಳ್ಳೆ ಅವಕಾಶ ಎಂದು ಅನಿಸಿತು. ಆ ಅನಿಸಿಕೆಯಂತೆಯೇ ನನ್ನ ಪರಿಚಯ ಮಾಡಿಕೊಂಡೆ. ಆ ದಿನ ಸಂಜೆಯಾಗುವಷ್ಟರಲ್ಲೇ ಬಹುದೇಕ ಸದಸ್ಯರು ನನ್ನ ಪರಿಚಯವನ್ನು ಮೆಚ್ಚಿ ಅವರವರ ಅನಿಸಿಕೆಯನ್ನು ಬರೆದರು. ಇದರಿಂದ ನನಗೆ ತುಂಬಾ ಸಂತೋಷವೂ ಆಯಿತು, ಒಳ್ಳೆಯ ಅಂಕಣವನ್ನು ಬರೆದರೆ ಇಲ್ಲಿ ಪ್ರೋತ್ಸಾಹ ದೊರೆಯುವುದು ಎಂಬ ಮನವರಿಕೆಯೂ ಆಯಿತು. ಇದನ್ನು ನಾನು ಇಲ್ಲಿ ಏಕೆ ವ್ಯಕ್ತಪಡಿಸಿದೆ ಎಂದರೆ, ನಾನು ಈ ಅಂಕಣ ಬರೆಯಲು ನೀವು ತೋರಿಸಿದ ಆ ಪ್ರೋತ್ಸಾಹವೇ ಕಾರಣ.
ಅಂದು ತಾರೀಕು ೧೨/೦೪/೨೦೦೬. ಚಿತ್ರರಂಗ ಸೇರಿದಂತೆ ಎಲ್ಲಾ ಕನ್ನಡಿಗರಿಗೂ ಒಂದು ಕರಾಳ ದಿನ. ಕನ್ನಡದ ಕಣ್ಮಣಿ ಕಣ್ಣು ಮುಚ್ಚಿದ ದಿನ ಅದು. ಇಂತಹ ಒಂದು ಆಘಾತಕಾರಿ ಸುದ್ದಿಯನ್ನು ಎದುರು ನೋಡಿರದ ಜನರಿಗೆ ಇದೊಂದು ನುಂಗಲಾರದ ತುತ್ತಾಗಿತ್ತು. ಇಡೀ ಕರ್ನಾಟಕಕ್ಕೇ ಆ ದಿನ ಸೂತಕದ ಛಾಯೆ ಬಂದಂತೆ ಭಾಸವಾಗಿತ್ತು!
ಆ ದಿನಗಳಲ್ಲಿ ನಾನು ಮತ್ತು ನನ್ನ ಎರಡು ಗೆಳೆಯರು ಒಂದು ಬಹುರಾಷ್ಟ್ರೀಯಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದೆವು. ಇಂಜಿನಿಯರಿಂಗ್ ಮಾಡಿ ಆ ಕ್ಷೇತ್ರದಲ್ಲಿ ಕೆಲಸ ಸಿಗದೆ ಬೇಸತ್ತು, ಹಣದ ಅವಶ್ಯಕತೆಗೊಸ್ಕರ Call Center ಉದ್ಯೋಗಕ್ಕೆ ಶರಣಾದವರಲ್ಲಿ ನಾವೂ ಒಬ್ಬರು. ನಾವು ಮೂವರೂ ಒಂದೇ PG ಅಲ್ಲಿ ವಾಸಿಸುತ್ತಿದ್ದೆವು. ಆ ದಿನಗಳಲ್ಲಿ ನನ್ನದು Day Shift ಆಗಿದ್ದರೆ, ಅವರಿಬ್ಬರು Night Shift ಅಲ್ಲಿ ಕೆಲಸ ಮಾಡುತ್ತಿದ್ದರು.
ಸಮಯ – ಮಧ್ಯಾನ್ನ ಸುಮಾರು ೩:೩೦ ಆಗಿತ್ತು. ಎಂದಿನಂತೆ ನಾನು office ನಲ್ಲಿ ಕುಳಿತುಕೊಂಡು ವಿದೇಶಿಗರು ಎದುರಿಸುತ್ತಿರುವ Computer ಸಂಬಂಧಿತ ತೊಂದರೆಗಳಿಗೆ E-mail ಮುಖಾಂತರ ಉತ್ತರಿಸುತ್ತಿದ್ದೆ. ಕಂಪೆನಿಯ ನಿಯಮದ ಪ್ರಕಾರ ನಾನು ನನ್ನ ಮೊಬೈಲನ್ನು Silent Mode ಅಲ್ಲಿ ಇಟ್ಟಿದ್ದೆ. ಯಾರಾದರು ನನಗೆ ಕರೆ ಮಾಡಿದ್ದಾರೆಯೇ ಎಂದು ನೋಡಲು ಮೊಬೈಲನ್ನು ನೋಡಿದಾಗ ನನ್ನ ಗೆಳೆಯನ SMS ಒಂದಿತ್ತು. ತೆರೆದು ನೋಡಿದಾಗ " Maga, annavru teerkondrappa" ಎಂದಿತ್ತು! ಕೆಲಸದಿಂದ ಬೇಸತ್ತ ನನ್ನ ನಿದ್ದೆ ಕಂಗಳು ಎಚ್ಚೆತ್ತವು. ನನ್ನ ಗೆಳೆಯನಿಗೆ ಉತ್ತರಿಸಿದೆ – "Lo, hingella tamashe madbeda" ಅಂತ. ಗೆಳೆಯನ ಉತ್ತರ ಬಂತು – "illa maga, devranegu nija, room alliddini… ella TV channel allu ide news bartide…. bekidre cafeteria ge hogi TV nodu" ಅಂತ. ಒಂದೆರಡು ನಿಮಿಷ ಏನೂ ತೋಚಲಿಲ್ಲ… ಮಂಕುಕವಿದಂತಿತ್ತು. ನನ್ನ ಸಹುದ್ಯೋಗಿಗಳನ್ನು ಕೇಳೋಣ ಎಂದು ಅತ್ತ ಇತ್ತ ನೋಡಿದಾಗ ಪರಭಾಷಿಗರೇ ಕಂಡರು. ದೂರದಲ್ಲಿ ಕನ್ನಡಿಗ ಸಹುದ್ಯೋಗಿಯೊಬ್ಬ ಕಂಡ. ಅವನತ್ತ ಹೋಗಿ ನನಗೆ ಈ ವಿಷಯ ಸಿಕ್ಕಿತು, ನಿಜಾನಾ? ಅಂತ ಕೇಳಿದೆ. ಆವಾಗ ಅವನು "ಹೌದಪ್ಪಾ, ನನಗೂ ನನ್ನಮ್ಮ Phone ಮಾಡಿ ಹೇಳಿದ್ರು" ಅಂತ ಅಂದ. ಅದಾಗಲೇ ನಮ್ಮ Logout Time(ಮನೆಗೆ ತೆರಳುವ ಸಮಯ) ಆಗಿತ್ತು. ನನ್ನ ಸಹುದ್ಯೋಗಿ ಘಂಟೆ ನೋಡಿ " ಸರಿ ನಡಿ ಮಗಾ, Log out ಆಗಿ ಬಾ… Parking Lot ಅಲ್ಲಿ ಸಿಗೋಣ" ಎಂದ.
ನಾನು ಕೆಲಸ ಮುಗಿಸಿ ಪಾರ್ಕಿಂಗ್ ಲೋಟ್'ಗೆ ಹೋದೆ. ನಾನು ತಲುಪುವುದು ತಡವಾಗಿದ್ದರಿಂದ ನನ್ನ ಸಹುದ್ಯೋಗಿ ಆಗಲೇ ಯಾರೋ ದ್ವಿಚಕ್ರ ವಾಹನದಲ್ಲಿ ಹೋಗುವವರ ಜೊತೆ ಮನೆಗೆ ತೆರಳಿದ್ದ. ಆಗಿನ್ನೂ ನನಗೆ ಹೊರಗಿನ ಪರಿಸ್ತಿತಿ ಗೊತ್ತಿರಲಿಲ್ಲ. ನನ್ನನ್ನು ಯಾವಾಗಲು ಮನೆಗೆ ಕರೆದುಕೊಂಡು ಹೋಗುವ Cab Driver (ವಾಹನ ಚಾಲಕ) ನೋಡಲು ಸಿಗಲಿಲ್ಲ. ಇವತ್ತು ಬಹುಷಃ ನಮ್ಮ Area ಗೆ ಬೇರೆ ವಾಹನ ಇರಬಹುದೆಂದು ತೆಪ್ಪಗಾದೆ. ವಾಹನಗಳ ಆಡಳಿತಗಾರ ಕೊಂಚ ದೂರದಲ್ಲಿ ನಿಂತಿದ್ದ. ಅವನಲ್ಲಿ ಹೋಗಿ "ಸಾರ್ ಮತ್ತಿಕೆರೆ ಕಡೆಗೆ ಯಾವ ಗಾಡಿ ಹೋಗುತ್ತೆ?" ಅಂತ ಕೇಳಿದೆ. ಅದಕ್ಕೆ ಆತ – "ಸಾರ್, ಆ ಕಡೆ ತುಂಬಾ ಗಲಾಟೆ ಅಂತೆ, ಯಾವ Driver’ಗಳೂ ಹೋಗಕ್ಕೆ ಕೇಳ್ತಾ ಇಲ್ಲ. Car’ನ glass ಎಲ್ಲ ಹುಡಿ ಮಾಡ್ತಿದ್ದಾರಂತೆ. ನೀವು ಸ್ವಲ್ಪ ಹೊತ್ತು ಇಲ್ಲೇ ನಿಲ್ಲಿ, ಯಾರದ್ರು ಹೋಗಕ್ಕೆ ಒಪ್ಕೊಳ್ತಾರೋ ನೋಡ್ತೀನಿ" ಅಂದ. ಆಗಲೇ ನನಗೆ ಮನೆಗೆ ಹೆಂಗಪ್ಪಾ ಹೋಗೋದು ಅನ್ನೋ ಆತಂಕ ಶುರುವಾಯಿತು! ಅಷ್ಟರಲ್ಲಿಯೇ ನನ್ನನ್ನು ದಿನನಿತ್ಯ ಮನೆಗೆ ಬಿಡುತ್ತಿದ್ದ ಚಾಲಕ ಗಾಡಿ ತಂದು ನನ್ನ ಪಕ್ಕ ನಿಲ್ಲಿಸಿ, "ಸಾರ್ ಹೋಗೋಣ?" ಎಂದು ಕೇಳಿದ. ಮನೆಗೆ ಹೇಗೆ ಹೋಗುವುದೆಂದು ಆತಂಕಕ್ಕೊಳಗಾಗಿದ್ದ ನಾನು ಬೇಗನೆ ಬಾಗಿಲು ತೆಗೆದು ಆತನ ಎಡಗಡೆಯಲ್ಲಿ ಕೂತೆ. ನಾನು ಹತ್ತುವುದನ್ನು ನೋಡಿ ದಿನ ನಿತ್ಯ ನನ್ನ ಜೊತೆ ಮತ್ತಿಕೆರೆ ಹಾಗು ಅಕ್ಕಪಕ್ಕದ ಜಾಗಗಳಿಗೆ ಹೋಗುವ ೪ ಜನ ಉದ್ಯೋಗಿಗಳೂ ಹತ್ತಿಕೊಂಡರು.
ವಾಹನ ಹೊರಟಿತು. ಕಂಪೆನಿಯಿಂದ ಹೊರಬಂದು ರಸ್ತೆಗೆ ಬಂದ ನಮಗೆ ದಾರಿಯಲ್ಲಿ ಹಲವು ವಾಹನಗಳು ಕಾಣಸಿಗುತ್ತಿದ್ದವು. ಅದರಲ್ಲಿ ಕೆಲವು ವಾಹನಗಳ ಮೇಲೆ ಕಣ್ಣು ಹಾಯಿಸಿ ನೋಡಿದಾಗ ಆ ವಾಹನಗಳ ಮುಂದಿನ ಗಾಜಿನ ಮೇಲೆ ಅಣ್ಣಾವ್ರ ಚಿತ್ರವನ್ನು ಅಂಟಿಸಿದ್ದರು. ಅಭಿಮಾನದಿಂದ ಅಂದುಕೊಂಡರಾ? ಇಲ್ಲ, ತಮ್ಮ ವಾಹನದ ಗಾಜುಗಳ ಮೇಲೆ ಯಾರೂ ಕಲ್ಲು ತೂರದಿರಲಿ ಎಂಬ ಮುಂಜಾಗರೂಕತೆಯಿಂದ! ರಸ್ತೆಯ ಇಕ್ಕೆಲಗಳಲ್ಲಿ ಕಣ್ಣು ಹಾಯಿಸಿದರೆ ಗಾಜಿನಿಂದಲೇ ಕಟ್ಟಲಾಗಿದೆಯೇನೋ ಎಂಬಂತೆ ಭಾಸವಾಗುವ ಕಟ್ಟಡಗಳ ಮುಂದೆ ಕನ್ನಡ ಧ್ವಜ ರಾರಾಜಿಸುತ್ತಿದ್ದವು! ಆಹಾ! ಇಂಥ ಸನ್ನಿವೇಶ ಬಂದಾಗ ಮಾತ್ರ ಇವರಿಗೆ ಕನ್ನಡ ಧ್ವಜದ ನೆನಪಾಗುವುದೋ ಎಂದು ಅನಿಸಿತು! ಹಾಗೆ ಮುಂದೆ ಸಾಗುತ್ತಾ, ಬೆಂಗಳೂರಿನ ಹೊರವಲಯದಲ್ಲಿ ಇರುವ ನಮ್ಮ ಕಂಪೆನಿಯಿಂದ ಕೊಂಚ ದೂರ ನಿರಾತಂಕದಿಂದ ಬಂದೆವು. ಆಗ ತಾನೇ ನಾವು ಸುಲ್ತಾನ್ ಪಾಳ್ಯದ ಬಳಿ ಇರುವ ಅಂಬೇಡ್ಕರ್ ವಿದ್ಯಾ ಸಂಸ್ಥೆಯನ್ನು ಸಮೀಪಿಸುತ್ತಿದ್ದೆವು, ಅಲ್ಲಿ ನಮಗೆ ಒಂದು ಅಚ್ಚರಿ ಹುಟ್ಟಿಸುವ ದೃಶ್ಯ ಕಾದಿತ್ತು! ರಸ್ತೆಯ ಎಡ ಬದಿಯಲ್ಲಿ ನೋಡಿದಾಗ ೧೦-೧೨ ಜನರ ಗುಂಪೊಂದು ಎಲ್ಲಾ ಅಂಗಡಿಗಲ್ಲನ್ನು ಮುಚ್ಚುವಂತೆ ಬೆದರಿಸುತ್ತಿರುವುದನು ನೋಡಿದೆವು. ಎಲ್ಲಾ ಅಂಗಡಿಯ ಮಾಲೀಕರು ನಾಮುಂದು ತಾಮುಂದು ಎಂದು ಅಂಗಡಿಗಳನ್ನು ಮುಚ್ಚುತಿದ್ದರು. ಅಲ್ಲಿನ ಜನರಲ್ಲಿ ಏನೋ ಒಂದು ಆತಂಕ! ಇಲ್ಲಿಯವರೆಗೆ ಬರೇ ಚಲನಚಿತ್ರಗಳಲ್ಲಿ ಇಂತಹ ದೃಶ್ಯಗಳನ್ನು ನೋಡಿದ್ದ ನನಗೆ ಒಮ್ಮೆ ಮೈ ಝಂ ಎಂದಿತು. ನಾನು ಬಲಕ್ಕೆ ತಿರುಗಿ ಚಾಲಕನನ್ನು ನೋಡಿದೆ. ಆತನೂ ನನ್ನತ್ತ ಹಾಗೂ ಹಿಂದೆ ಕುಳಿತಿದ್ದ ಇತರರನ್ನು ನೋಡಿದ. ಎಲ್ಲರ ಮುಖದಲ್ಲೂ ಆತಂಕ ಕಂಡಿತೋ ಏನೋ! ವಾಹನದ ವೇಗವನ್ನು ಹೆಚ್ಚಿಸಿದ. ಅಲ್ಲಿಂದ ಹೊರಟ ನಾವು ಮುಂದೆ ನಿಂತಿದ್ದು R.T.ನಗರದಲ್ಲಿ. ಗಾಡಿಯಿಂದ ಇಬ್ಬರು ಇಳಿದುಕೊಂಡರು. ಎಂದೂ ಅವರು ಇಳಿಯುವಾಗ bye, c ya… ಅನ್ನುತ್ತಿದ್ದ ನನ್ನ ಮುಖದಲ್ಲಿ ಇಂದು ಬರೇ ಒಂದು ಮಂದಹಾಸ ಬೀರಲು ಸಾಧ್ಯವಾಯಿತು! ತಡಮಾಡದೆ ನಾವು ಮುಂದೆ ಸಾಗಿದೆವು. CBI ರಸ್ತೆ ದಾಟಿದ ನಾವು ಸಂಜಯ್ ನಗರದ ಕಡೆಯಿಂದ ಮತ್ತಿಕೆರೆಯ ಕಡೆಗೆ ಹೋಗುವ ರಸ್ತೆಯಲ್ಲಿ ಹೋದೆವು. ಆ ಹೆಚ್ಚು ಅಗಲವಿಲ್ಲದ ರಸ್ತೆಯನ್ನು ಪ್ರವೇಶಿಸುತ್ತಿದ್ದಂತೆಯೇ ನಾವು ಮುಂದೆ ನೋಡಿದಾಗ ನಡುರಸ್ತೆಯಲ್ಲಿ ಯಾರೋ ಕಿಡಿಗೇಡಿಗಳು Tyre’ಗೆ (ಚಕ್ರ) ಬೆಂಕಿ ಕೊಟ್ಟಿದ್ದರು! ಇನ್ನೇನು ಕಾದಿದೆಯೋ ಅಂದುಕೊಂಡು ನಾವು ಮುಂದೆ ಹೋದೆವು. ರಸ್ತೆಯ ಮಧ್ಯದಲ್ಲಿ ಚಕ್ರವು ಹೊತ್ತಿ ಉರಿಯುತ್ತಿದ್ದ ಕಾರಣ ನಮಗೆ ಅದರ ಹತ್ತಿರದಿಂದ ವಾಹನವನ್ನು ತೆಗೆದುಕೊಂಡು ಹೋಗಬೇಕಾಯಿತು. ಅದು ಹೇಗೋ ಗೊತ್ತಿಲ್ಲ, ನಮ್ಮ ವಾಹನದ ಚಕ್ರ ರಸ್ತೆಯಲ್ಲಿ ಸುಡುತ್ತಿದ್ದ ಚಕ್ರಕ್ಕೆ ತಗುಲಿತು. ಆ ರಭಸಕ್ಕೆ ಅದರಲ್ಲಿದ್ದ ಬೆಂಕಿ ಕೊಂಚ ಆರಿ ಹೋಯಿತು. ಸಧ್ಯ ನಮ್ಮ ಗಾಡಿಗೆ ಎನಾಗಲಿಲ್ಲವಲ್ಲ ಅಂದುಕೊಂಡು ನಿಟ್ಟುಸಿರು ಬಿಡುವಷ್ಟರಲ್ಲೇ ಅದೆಲ್ಲೋ ಅಡಗಿ ಕುಳಿತಿದ್ದ ೪-೫ ಜನ ಬಂದು ನಮ್ಮ ವಾಹನವನ್ನು ಅಡ್ಡಗಟ್ಟಿದರು. ಧಾವಿಸಿ ನಾನು ಕುಳಿತಿದ್ದಂತಹ ಎಡಬದಿಯ ಗಾಜಿನ ಹತ್ತಿರ ಬಂದು ನಮ್ಮ ಚಾಲಕನನ್ನು ಬೆದರಿಸಲು ಶುರು ಮಾಡಿದರು. ನಾನು, ಚಾಲಕ ಹಾಗು ಹಿಂದೆ ಕುಳಿತಿದ್ದ ಇಬ್ಬರೂ ಸೇರಿ ಅವರನ್ನು ಸಮಜಾಯಿಸಲು ಪ್ರಯತ್ನಿಸಿದಾಗ ಅವರಲ್ಲೋಬ್ಬನಿಗೆ ಏನು ಅನಿಸಿತೋ ಏನೋ! "ಬಿಡ್ರೋ ಅವ್ರನ್ನ ಹೋಗ್ಲಿ ಬಿಡು" ಅಂದನು! ಅದು ಕೇಳಿದ್ದೇ ತಡ, ನಾವು ಅಲ್ಲಿಂದ ಬೇಗ ಜಾಗ ಖಾಲಿ ಮಾಡಿದೆವು. ಎಲ್ಲವೂ ಕ್ಷಣಮಾತ್ರದಲ್ಲೇ ಮುಗಿದು ಹೋಯಿತು! ಇನ್ನೂ ನಡೆದ ಘಟನೆಯಿಂದ ಚೆತರಿಸಿಕೊಳ್ಳುತ್ತಿದ್ದ ನನ್ನನ್ನು ಕಂಡು ಚಾಲಕ "ಏನ್ ಸಾರ್, ಹಂಗೂ ಯೋಚನೆ ಮಾಡ್ತಿದ್ದೀರ? ಭಯ ಆಯ್ತಾ?" ಎಂದು ಜೋರಾಗಿ ನಗಲು ಶುರು ಮಾಡಿದ. "ಹಂಗೇನಿಲ್ಲ ಗುರು" ಎಂದು ನಾನೂ ನಕ್ಕೆನು. ಹಾಗೆಯೇ ಅಣ್ಣಾವ್ರ ನಿಧನದ ಬಗ್ಗೆ ಮಾತಾಡುತ್ತಾ ನಾವು ಮತ್ತಿಕೆರೆ ತಲುಪಿದೆವು. ಎಂದೂ ನಾನೂ ವಾಹನದಿಂದ ಇಳಿದು ಚಾಲಕನಿಗೆ "Thanks guru" ಎನ್ನುತ್ತಿದ್ದೆ, ಆದರೆ ಇವತ್ತು ನಾನು ಮಾಡಿದ ವಂದನೆ ನೇರ ಹೃದಯದಿಂದ ಬಂದಿತ್ತು. ಏಕೆಂದರೆ ಇವತ್ತು ಮನೆಗೆ ಹೆಂಗಪ್ಪಾ ತಲುಪೋದು ಎಂದು ಚಿಂತಿಸುತ್ತಿದ್ದ ನನ್ನನ್ನು ಮನೆವರೆಗೂ ತಂದು ಬಿಟ್ಟವನೀತ! ಹಾಗೆಯೇ ವಾಹನದಿಂದ ಇಳಿದು ನಾನು ಎಡಕ್ಕೆ ನೋಡಿದೆ, ನಾನು ದಿನನಿತ್ಯ ಊಟ ಮಾಡುತ್ತಿದ್ದ "ಗಣೇಶ ದರ್ಶಿನಿ" ಹಾಗು ಆ ರಸ್ತೆಯಲ್ಲಿ ಇದ್ದ ಎಲ್ಲಾ ಉಪಹಾರ ಗೃಹಗಳು ಮುಚ್ಚಿದ್ದವು, ಮನೆಯಲ್ಲಿ ಗೆಳೆಯರು (ಯಶವಂತ್ ಹಾಗೂ ರೆಹಮಾನ್) ತಿನ್ನಲು ಏನಾದರು ತಂದಿರಬಹುದು ಎಂದುಕೊಂಡು ಮನೆಯ ಕಡೆ ಹೆಜ್ಜೆ ಹಾಕಿದೆ.
ಆಗಲೇ ನನ್ನ ಬಗ್ಗೆ ಕಾಳಜಿ ವಹಿಸಿ ೩-೪ ಸರಿ ನನ್ನ ಮೊಬೈಲ್ ಗೆ ಕರೆ ಮಾಡಿದ್ದ ನನ್ನ ೨ ಸ್ನೇಹಿತರು ನನ್ನನ್ನು ನೋಡಿ ರೆಹಮಾನ್ – "ಸಧ್ಯ ಗುರು, ಮನೆಗೆ ಬಂದ್ಯಲ್ಲ!" ಅಂದರೆ ಯಶವಂತ್ – "ಏನ್ ಗುರು ಹಿಂಗಾಗ್ ಹೋಯ್ತು" ಎಂದ. ಆಮೇಲೆ ಮೂವರೂ ಕುಳಿತು TV ನೋಡುತ್ತಾ, ಅಣ್ಣಾವ್ರ ಬಗ್ಗೆ ಮಾತನಾಡುತ್ತಾ, ಕಾಲ ಕಳೆದೆವು. ಅದಾಗಲೇ ಸುಮಾರು ೭:೩೦ ಆಗಿತ್ತು. ನಮ್ಮ ಮಾತು ಹಾಗೆ ಮುಂದುವರಿಯುತ್ತ, ಊಟದ ವಿಷಯಕ್ಕೆ ಬಂತು. ಯಶವಂತ್ ನನ್ನ ಕೇಳಿದ – "ಗುರು! ಊಟ ಮಾಡಿದ್ಯಾ?". ಅದಕ್ಕೆ ನಾನು – "ಇಲ್ಲ ಮಗಾ, Office ಅಲ್ಲಿ ಊಟ ಮಾಡಕ್ಕೆ time ಸಿಗ್ಲಿಲ್ಲ, ಇಲ್ಲಿ ಬಂದು ನೋಡಿದ್ರೆ ನಮ್ ಮಾಮೂಲಿ Hotel ಎಲ್ಲಾ close ಆಗಿತ್ತು. ನೀವು ತಿನ್ನಕ್ಕೇನಾದ್ರೂ ತಂದಿರ್ತೀರ ಅಂದ್ಕೊಂಡೆ!" ಅಂದೆ. ಅದಕ್ಕೆ ಅವನಂದ – "ಇಲ್ಲ ಮಗಾ, ನಾವಿಬ್ರೂ ನಿದ್ದೆ ಮಾಡಿದ್ದೆವು, ಪಕ್ಕದ room ಹುಡುಗ್ರು ಬಂದು news ಹೇಳಿದ್ರು. ನಿಂಗೆ message ಮಾಡಿದ್ನಲ್ಲ, ಆಗ್ಲೇ ಎದ್ದಿದ್ದು ನಾನು." ಅಂದ. ಅದಕ್ಕೆ ರೆಹಮಾನ್ ಅಂದ – "ಸರಿ ನಡೀರಿ, ಒಂದು round ಹೋಗಿ ಏನಾದ್ರು ಸಿಗುತ್ತಾ ನೋಡೋಣ. ಇಲ್ಲಾಂದ್ರೆ ನಿನ್ನೆ ತಂದಿದ್ದ ಒಂದು packet "Good Day" Biscuit ಇದೆ. ಅದೇ ಇವತ್ತಿಗೆ ನಮ್ಮ lunch, dinner ಎಲ್ಲ!" ಎಂದ. ಎಲ್ಲಾರು ಜೋರಾಗಿ ನಕ್ಕೆವು!
ನಮ್ಮ ಮನೆಯಿಂದ ರಾಮಯ್ಯ ಕಾಲೇಜು ಬಸ್ ನಿಲ್ದಾಣದ ಕಡೆಗೆ ಹೋದೆವು. ಅಲ್ಲಿ ತಲುಪಿ ಮತ್ತಿಕೆರೆ ಬಸ್ ನಿಲ್ದಾಣದ ಕಡೆಗೆ ಹೋಗುವ ದಾರಿಯನ್ನು ನೋಡಿದೆವು. ಯಾವಾಗಲು ಜನನಿಭಿಡವಾಗಿರುತ್ತಿದ್ದ ಆ ರಸ್ತೆ ಇಂದು ಯಾಕೋ ಬಿಕೂ ಅನ್ನುತ್ತಿತ್ತು. ಉಪಹಾರ ಗೃಹಗಳು ಹೇಗೂ ಮಧ್ಯಾನ್ನದ ಮೇಲೆ ತೆರೆದೇ ಇರಲಿಲ್ಲ. ರಸ್ತೆ ಬದಿಯಲ್ಲಿ ಯಾವಾಗಲೂ ಕಾಣಿಸಿಕೊಳ್ಳುತ್ತಿದ್ದ ತಿಂಡಿ ತಿನಿಸುಗಳ ಗಾಡಿಗಳದ್ದೂ ಅಂದು ಸುಳಿವಿರಲಿಲ್ಲ!
ಸರಿ, ಇವತ್ತು ನಮಗೆ ಊಟ ಮಾಡೋ ಯೋಗವಿಲ್ಲ ಅನ್ನುವುದು ನಮಗೆ ಅರಿವಾಯಿತು! ಯಶವಂತ್ ರೆಹಮನಾನ ಕಡೆ ನೋಡಿ, ನಗುತ್ತಾ – "ಗುರು, Biscuit ಒಂದೇ packet ಇರೋದಾ? ಇನ್ನೊಂದೆರಡು ತಗೊಬರಕ್ಕಾಗಿಲ್ವ?" ಎಂದ! ಅದಕ್ಕೆ ರೆಹಮಾನ್ ಅಂದ – "ಒಂದು packet ಆದರೂ ಇದ್ಯಲ್ವಾ, ಖುಷಿ ಪಡು" ಎಂದ. ಎಲ್ಲಾರು ಮತ್ತೆ ಮನೆಯ ಕಡೆಗೆ ಹೊರಟಾಗ ಯಶವಂತ್ ನ ಕಣ್ಣು ಅಲ್ಲೇ ಇರುವ ಒಂದು ಧ್ವಜಸ್ಥಂಬದ ಮೇಲೆ ಯಾರೋ ಅಭಿಮಾನಿಗಳು ತಂದಿಟ್ಟಿದ್ದ ಅಣ್ಣಾವ್ರ ಹೂವುಹಾರ ಹಾಕಿದ್ದಂತ ಚಿತ್ರದ ಮೇಲೆ ಬಿತ್ತು! ನಾನದನ್ನು ಗಮನಿಸಿದೆ. ಯಶವಂತ್ ನನ್ನತ್ತ ನೋಡಿದ. ಕೂಡಲೇ ಅವನ ಉದ್ದೇಶ ನನಗೆ ಅರ್ಥವಾಯಿತು. ನಾನು "ಬೇಡ ಮಗಾ. ನಿಂಗೆ ಏನ್ idea ಬಂದಿದೆ ಅಂತ ಗೊತ್ತು ನಂಗೆ. ಮುಚ್ಕೊಂಡು ಮನೆಗೆ ನಡಿ" ಅಂದೆ. ಅದಕ್ಕೆ ಅವನು – "ಮಗಾ, ಹೆಂಗೂ ಇವತ್ತು ಊಟ ಇಲ್ಲ. At least ಅಣ್ಣಾವ್ರ photo ನ room ಗೆ ತಗೊಂಡು ಹೋಗಿ ಇಟ್ಕೊಳೋಣ, please ಕಣೋ" ಅಂದ. ಆ ಚಿತ್ರವೇ ಹಂಗಿತ್ತು, ಅಣ್ಣಾವ್ರ ಆ ನಗುಮುಖದ ಆ ಚಿತ್ರವನ್ನು ನೋಡಿದವರಿಗೆ ಯಾರಿಗಾದರು ಆ ಭಾವನೆ ಬರುವುದು ಸಹಜವೇ! ನಾನು ಯಶವಂತ್ ನ ಕೇಳಿದೆ – "ನಿಜವಾಗಲು ಕೇಳ್ತಾ ಇದ್ಯೇನೋ?". ಅದಕ್ಕೆ ಅವ್ನು ನಗುತ್ತಾ – "ಇಲ್ಲ ಮಗಾ, ಸುಮ್ನೆ ಕೇಳ್ದೆ… ಆ photo ನೋಡಿದಾಗ ತಗೊಂಡು ಹೋಗೋಣ ಅನ್ಸುತ್ತೆ. ಅಷ್ಟು ಚೆನ್ನಾಗಿದೆ" ಎಂದ. ಅಷ್ಟು ಹೊತ್ತು ಸುಮ್ಮನಿದ್ದು ನಮ್ಮ ಮಾತು ಕೇಳಿ ನಗುತ್ತಿದ್ದ ರೆಹಮಾನ್ – "ಸರಿ ಕಣ್ರೋ, ನಡೀರಿ ರೂಮ್ ಗೆ" ಎಂದ. ಅದಕ್ಕೆ ಯಶವಂತ್ – "ಹೇಯ್ ನಿಲ್ರೋ ಸ್ವಲ್ಪ ಹೊತ್ತು, ಯಾರು ಇಲ್ಲ, ಇಲ್ಲೇ bus stop ಅಲ್ಲಿ ಸ್ವಲ್ಪ ಹೊತ್ತು ಕೂತ್ಕೊಂಡು ಆಮೇಲೆ ಹೋಗೋಣ room ಗೆ" ಎಂದ. ಅಷ್ಟರಲ್ಲೇ ಮತ್ತಿಕೆರೆ ರಸ್ತೆಯ ಕಡೆಯಿಂದ ಪೋಲಿಸ್ ವಾಹನದ ಸೈರನ್ ಕೇಳಿಸಿತು. ನಾವು ಬೇಗ ನಮ್ಮ ಕಾಲಿಗೆ ಬುದ್ಧಿ ಹೇಳಿದೆವು.
ಮನೆಗೆ ಹೋಗಿ ಇದ್ದ biscuit ತಿಂದು ಸ್ವಲ್ಪ ಹೊತ್ತು ಹರಟೆ ಹೊಡೆದು ನಿದ್ದೆ ಮಾಡಿದೆವು. ಆವತ್ತು ಯಶವಂತ್, ರೆಹಮಾನ್ ಇಬ್ಬರೂ cab ಬರಲಿಲ್ಲ ಎಂದು ಕೆಲಸಕ್ಕೆ ಹೋಗದೆ ಮನೆಯಲ್ಲೇ ಉಳಿದುಕೊಂಡರು. ಮರುದಿನ ಪಕ್ಕದ ಕೋಣೆಯ ಹುಡುಗರು ಬಂದು ಹತ್ತಿರದಲ್ಲೆ ಯಾರೋ ಅವರ ಮನೆಯಲ್ಲಿ ಇಡ್ಲಿ ವಡೆ ಮಾಡಿ ಮಾರುತ್ತಿದ್ದಾರೆ, ಬೇಗ ಹೋದ್ರೆ ಸಿಗಬಹುದು ಅಂದ. ನಾವು ಬೇಗನೆ ಹೋಗಿ ಹೊಟ್ಟೆ ತುಂಬಾ ತಿಂದೆವು. ಹಾಗೆಯೇ ಮಧ್ಯಾನ ತಿನ್ನಲು ಸ್ವಲ್ಪ ಇಡ್ಲಿ ಕಟ್ಟಿಕೊಂಡು ಬಂದೆವು. ಇದು ನನ್ನ ಹಾಗೂ ಇಬ್ಬರು ಗೆಳೆಯರ ಒಂದು ದಿನದ ಅನುಭವ.
ಇದು ನನ್ನ ಎಂದಿಗೂ ಮರೆಯಲಾಗದ ಅನುಭವವಾದರೆ ಇನ್ನು ಒಂದು ವಿಷಯ ಎಂದಿಗೂ ನನ್ನ ಚಿತ್ತ ಕಾಡುತ್ತಿರುತ್ತದೆ. ಅದು ಯಾವುದೆಂದರೆ TV ಪರದೆಯಲ್ಲಿ ನೋಡಿದ ಅಣ್ಣಾವ್ರ ಅಂತ್ಯಕ್ರಿಯೆಯ ಆ ತುಣುಕುಗಳು. ಅಲ್ಲಿ ನೆರೆದಿದ್ದ ಜನರು ನಾಗರೀಕತೆ ಮರೆತವರಂತೆ ಕಂಡರು. ಆ ನೂಕುನುಗ್ಗಲಿನಲ್ಲಿ ಶಿವಣ್ಣ, ರಾಘಣ್ಣ, ಅಪ್ಪು… ಅಗಲಿದ ತಮ್ಮ ತಂದೆಯ ಅಂತ್ಯಕ್ರಿಯೆ ಮಾಡಲು ಒದ್ದಾಡುತ್ತಿದ್ದ ದೃಶ್ಯಗಳು ನನಗೆ ಮಾತ್ರವಲ್ಲದೆ, ನೋಡಿದವರೆಲ್ಲರಿಗೂ ಬೇಸರ ಮೂಡಿಸಿದ್ದಂತೂ ಸತ್ಯ. ಅಲ್ಲಿ ನೆರೆದಿದ್ದ ಜನರು ಕ್ಯಾಮೆರಗಳತ್ತ ಮುಖ ಮಾಡಿ, ಕೇಕೆ ಹಾಕುತ್ತ, ಕೈಬೇಸುತ್ತಿದ್ದ ದೃಶ್ಯ ಕಂಡವರಿಗೆಲ್ಲ ಎಲ್ಲಿಲ್ಲದ ಸಿಟ್ಟು ತರುವಂತಹದ್ದಾಗಿತ್ತು. ಇಂದಿಗೂ ನನಗೆ "ದಯವಿಟ್ಟು ಸಹಕರಿಸಿ" ಎಂದು ರೋಧಿಸುತ್ತಿರುವ ಶಿವಣ್ಣನ ಕಂಗಳು ನೆನಪಾದಾಗ ಮನಸ್ಸಿಗೆ ತುಂಬಾ ಬೇಜಾರಾಗುತ್ತದೆ. ಒಬ್ಬ ಮಗನು ತನ್ನ ತಂದೆಯ ಅಂತ್ಯಕ್ರಿಯೆ ಮಾಡುತ್ತಿರುವಾಗ ಆತನ ಮನಸ್ಸಿನಲ್ಲಿ ಮೂಡುವ ಆ ದುಃಖ, ಆ ಭಾವನೆಗಳು ಎಂಥವು ಎಂಬುವುದು ಅನುಭವಿಸಿದವನಿಗೇ ಗೊತ್ತು. ವಿಷಾದಕರ ಸಂಗತಿಯೆಂದರೆ ಅಂತಹ ಭಾವನೆಗಳಿಗೆ ಅಂದು ಅಲ್ಲಿ ನೆರೆದಿದ್ದ ಜನರು ಬೆಲೆಯೇ ಕೊಡಲಿಲ್ಲ! ಬೆಂಗಳೂರಿನಾಧ್ಯಂತ ಅಂದು ನಡೆದ ಗಲಭೆ, ಗಲಾಟೆ… ಕೊನೆಯಲ್ಲಿ ಅಂತ್ಯಕ್ರಿಯೆಯ ಸಮಯದಲ್ಲಿ ಜನರ ಆ ವರ್ತನೆ! ಡಾ|| ರಾಜ್ ರಂತಹ ಸಹಜೀವಿ, ಶಾಂತಿ ಪ್ರಿಯ ಕಲಾವಿದನಿಗೆ, ಇದೇನಾ ನಾವು ಸಲ್ಲಿಸಿದ ಗೌರವ? ಎಂದು ಅನಿಸುತ್ತದೆ.
- ದೀಪಕ್ ಎಸ್.