Akumar, the member of gg forum has a take on the film preethi eke bhoomi melide. He has given his views in Kannada. You need to have unicode kannada enabled in your system to read this.
ಪ್ರೀತಿ ಯಾಕೆ ಭೂಮಿ ಮೇಲಿದೆಯೋ ಗೊತ್ತಿಲ್ಲ… ಆದರೆ ನಾನ್ಯಕೆ ಇಲ್ಲಿ ಇದ್ದೇನೆ (ಥಿಯೇಟರ್ ನಲ್ಲಿ) ಅಂತ ಹಲವಾರು ಸಲ ಅಂದುಕೊಳ್ಳುವಂತೆ ಮಾಡಿದ ಕೀರ್ತಿ ಪ್ರೇಂ ನಟನೆ ಮತ್ತು ನಿರ್ದೇಶನದ "ಮಹೋನ್ನತ" (?) ಚಿತ್ರ ಪ್ರೀತಿ ಏಕೆ ಭೂಮಿ ಮೇಲಿದೆಗೆ ಸಲ್ಲುತ್ತದೆ.
ಒಳ್ಳೆಯ ಚಿತ್ರವಾದರೆ ಹೊಗಳಿ ಬರೆಯಬಹುದು… ಕೆಟ್ಟ ಚಿತ್ರವಾದರೆ ಬಾಯಿಗೆ ಬಂದಂತೆ ಉಗುಳಿ ಬರೆಯಬಹುದು.. ಆದರೆ ಪ್ರೀತಿ ಏಕೆ ಭೂಮಿ ಮೇಲಿದೆ ಇವೆರಡೂ ಅಲ್ಲ! ಇದೊಂದು ಹುಂಬುತನದ ಪರಮಾವಧಿಯ ಚಿತ್ರ. ತಲೆಬುಡವಿಲ್ಲದ, ಮೂಢ ನಂಬಿಕೆಗಳ ಭ್ರಮಾ ಲೋಕದಲ್ಲೇ ಸುತ್ತುತ್ತಾ ಜೊತೆಗೆ ಪ್ರೇಕ್ಷಕರ ತಲೆಯನ್ನೂ ಚಿಟ್ಟು ಹಿಡಿಸುವ ಅಪರೂಪದ ಚಿತ್ರವೇ ಪ್ರೀ.ಏ.ಭೂ.
ಸ್ವಲ್ಪ ಕಥಾ ಶ್ರವಣವನ್ನು ಮಾಡಿ ಸಾರ್ಥಕರಾಗೋಣ ಬನ್ನಿ..
ಪ್ರೀತಿ ಏಕೆ ಈ ಭೂಮಿ ಮೇಲಿದೆ?? ಈ ಪ್ರಶ್ನೆಗೆ ಹಲವಾರು ಮಂದಿ ತಮ್ಮದೇ ಉತ್ತರ ಕೊಡುವುದರೊಂದಿಗೆ ಕಥೆ ಆರಂಭ
ಕುಮಾರಸ್ವಾಮಿ, ಬಾಲಗಂಗಾಧರನಾಥ ಸ್ವಾಮೀಜಿಗಳು, ಕ.ರಾ.ವೇ ನಾರಾಯಣ ಗೌಡ್ರು, ರಕ್ಷಿತಾ ಹೀಗೆ ಎಲ್ಲರೂ ವ್ಯಾಖ್ಯಾನಿಸುತ್ತಾರೆ.. ಹೆಣ ಸುಡುವವರೂ(ಅಂಬರೀಶ್, ವಿನಯಾ ಪ್ರಸಾದ್) ಪ್ರೀತಿಯಾಕೆ ಇದೆ ಎಂದು ತಲೆ ಕೆರೆದುಕೊಳ್ಳುತ್ತಾರೆ… ಆದರೂ ಸಮರ್ಪಕ ಉತ್ತರ ಸಿಗುವುದಿಲ್ಲ… ಸರಿ ನಮ್ಮ ಕಥಾ ನಾಯಕನ (ಪ್ರೇಂ) ವೃತ್ತಾಂತ ಆರಂಭಿಸುವುದರೊಂದಿಗೆ ಪ್ರೇಕ್ಷಕರ ಮೆದುಳಿಗೆ ಕೈ ಹಾಕಿ ಪರ ಪರ ಅಂತ ಕೆರೆಯಲು ಆರಂಭಿಸುತ್ತಾರೆ….
ಪ್ರೀತಿ ಏಕೆ ಈ ಭೂಮಿ ಮೇಲಿದೆ ????
1.
ನಿಮಗೆ ಬಿಕ್ಕಳಿಕೆ ಬರುತ್ತಿದೆಯೇ? ನಿಮಗಾಗಿಯೇ ಎಲ್ಲೋ ಹುಟ್ಟಿರುವ, ನೀವಿನ್ನೊ ಕಂಡಿರದ ಕೇಳಿರದ ನಿಮ್ಮ ಭಾವೀ ಪತ್ನಿ ನಿಮ್ಮನ್ನು ನೆನೆಸುತ್ತಿರುತ್ತಾಳೆ.. ಪರಮಾಶ್ಚರ್ಯವೆಂದರೆ ಅದೇ ಸಮಯಕ್ಕೆ ಅವಳಿಗೂ ಅಲ್ಲಿ ಅದೇ ರೀತಿ ಬಿಕ್ಕಳಿಕೆ ಬರುತ್ತದೆ.. ಕಾರಣ ಅವಳು ಇನ್ನೂ ನೋಡಿರದ ಅವಳಿಗಾಗಿಯೇ ಹುಟ್ಟಿ ಬಂದಿರುವ ಎಲ್ಲೋ ಇರದ ಅವಳ ಭಾವೀ ಪತಿ ಅಂದರೆ ನೀನು ಅವಳನ್ನು ನೆನೆಸುತ್ತಿರುತ್ತೀರಲ್ಲಾ ಅದಕ್ಕೇ!!!!!
2.
ನಾಯಕ ಆಕಾಶ ನೋಡ್ತಾ ಹೇಳ್ತಾನೆ "ಅವಳು ನನಗೋಸ್ಕರ ಬಂದೇ ಬರ್ತಾಳೆ.. ಅವಳು ಬಂದಾಗ ಅವಳೇ ನನ್ನ ಹುಡುಗಿ ಅಂತ ಗೊತ್ತಾಗಲು ಏನಾದರೂ ಶಕುನ, ಸೂಚನೆ ಆಗುತ್ತದೆ".. ಅತ್ತ ನಾಯಕಿ ಕೂಡಾ ಆಕಾಶ ನೋಡ್ತಾ ಹೇಳ್ತಾಳೆ.. "ಅ ಚಂದಮಾಮ ನನಗೋಸ್ಕರ ಧರೆಗಿಳಿದು ಬಂದೇ ಬರುತ್ತಾನೆ" ತನ್ನನ್ನು ನೋಡಲು ಯಾರಾದರೂ ಹುಡುಗ ಬಂದರೆ ಆಕೆ ಆಕಾಶ ನೋಡುತ್ತಾಳೆ.. ಚಂದ್ರ ಅವಳೆದುರು ಬಂದು ಇವನೇ ನಿನ್ನ ಹುಡುಗ, ಮದುವೆ ಆಗು ಅಂತ ಹೇಳದಿದ್ರೆ ಆ ಹುಡುಗನನ್ನು ಬೇಡ ಅಂತಾಳೆ!!!!!!! ಅವಳ ಈ ನಂಬಿಕೆಗೆ ಸದಾ ಪುಷ್ಟಿಕೊಡುವ ಅಪ್ಪ (ರಮೇಶ್ ಭಟ್).. ಆದರೆ ಅವಳಪ್ಪ ಹೇಳಿದಂತೆ ಆಗದಿದ್ದಾಗ ಸುಳ್ಳೇ ಸುಳ್ಳು ಎಂದು ಕುಣಿದಾಡುವ ಅವಳ ಚಿಕ್ಕಪ್ಪ!!!
3.
ಈ ನಡುವೆ ಮತ್ತೊಂದು ಹುಡುಗಿ ನಮ್ಮ ನಾಯಕನನ್ನು ಪ್ರೀತಿಸಲು ಶುರು ಮಾಡ್ತಾಳೆ.. ನಿಮಗೇನಾದರೂ ಅಪಘಾತವೋ, ಪೆಟ್ಟೋ ಆದರೆ, ಅಲ್ಲಿ ನಿಮಗಾಗಿಯೇ ಹುಟ್ಟಿರುವ ನಿಮ್ಮ ಹುಡುಗಿಗೂ ಹಾಗೆಯೇ ಆಗುತ್ತದೆ ಅನ್ನೋದು ನಾಯಕನ ನಂಬಿಕೆ.. ಈ ನಂಬಿಕೆಯ ಲಾಭ ಪಡೆಯಲು ನಾಯಕನ ಮೈಗೆ ಬಸ್ಸು ಕೆಸರು ಹಾರಿಸಿದರೆ ತನ್ನ ಮೈಗೂ ಕೆಸರು ಮೆತ್ತಿಕೊಂಡು ನಾನೇ ನಿನ್ನ ಹುಡುಗಿ ಎಂದು ನಂಬಿಸಲು ಪ್ರಯತ್ನ !!!!!
ಈ ಮೇಲಿನ ಕಥಾಮೃತಕ್ಕೆ ಸ್ವಲ್ಪ ತಾಯಿ ಮಗನ ಸೆಂಟಿಮೆಂಟ್, ಅಗತ್ಯವಿಲ್ಲದಿದ್ದರೂ ತಲಾ 20 ನಿಮಿಷಗಳ ಮೂರು ಫೈಟ್‍ಗಳು ಮತ್ತು ಗೌರಿ ಪಾಳ್ಯದ ಮಲ್ಲಿಕಾ ಶೆರಾವತ್ ಕ್ಯಾಬರೆ ಸೇರಿಸಿಬಿಟ್ಟರೆ ಪ್ರೀತಿ ಏಕೆ ಭೂಮಿ ಮೇಲಿದೆ ಮಹಾಕಾವ್ಯ ಸಿದ್ಧ!!
ಚಿತ್ರದಲ್ಲಿ ಶರಣ್ ಹಾಸ್ಯ ಮತ್ತು ಅರ್ಚನಾರ ಭಾವಪೂರ್ಣ ಅಭಿನಯ ಮಾತ್ರ ಪ್ಲಸ್ ಪಾಯಿಂಟ್! ಪ್ರೇಂ ಅಭಿನಯಿಸಲು ಪ್ರಯತ್ನಿಸಿದ್ದಾರೆ..ಆದರೆ ಅವರನ್ನು ನಾಯಕನಾಗಿ ನೋಡುವುದು ಕಷ್ಟ.. ನಾಯಕಿಯರಿಬ್ಬರಲ್ಲಿ ಒಬ್ಬಳೂ ನೆನಪಿನಲ್ಲಿ ಉಳಿಯುವಂತಿಲ್ಲ…
ನೀನೇನೇ ಮತ್ತು ಚಂದಮಾಮ ಬಾ ಬಾ ಹಾಡುಗಳ ಚಿತ್ರೀಕರಣ ಚೆನ್ನಾಗಿದೆ..ಉಳಿದ ಹಾಡುಗಳ ಚಿತ್ರೀಕರಣದಲ್ಲಿ ಅಂತಹ ವಿಶೇಷವೇನೂ ಇಲ್ಲ.. ನಾಯಕಿರರಿಗೆ ಕಂಠದಾನ ಮಾಡಿದವರಿಗೆ ಕಿರುಚಾಟ ಸ್ಪರ್ಧೆಯಲ್ಲಿ ಓಲಂಪಿಕ್ ಪದಕ ಗ್ಯಾರಂಟಿ!!!
ಪ್ರೆಂ…. ಏನಾಗಿದೆ ತಮಗೆ?? ಇಷ್ಟೋಂದು ದೀರ್ಘ ಕಾಲ ತೆಗೆದುಕೊಡು ಇಂತಹ ಚಿತ್ರ ಕೊಡುವುದೇ? .. 3 ತಾಸು ಕೂತರೂ ಪ್ರೀತಿ ಏಕೆ ಭೂಮಿ ಮೇಲಿದೆ ಪ್ರಶ್ನೆಗೆ ಉತ್ತರ ಕೊಡುವಲ್ಲಿ ಪ್ರೇಂ ಸಂಪೂರ್ಣ ವಿಫಲರಾಗಿದ್ದಾರೆ…
ಪ್ರೀತಿ ಏಕೆ ಭೂಮಿ ಮೇಲಿದೆ ಹುಂಬತನದ ಪ್ರಲಾಪ!!!!!!
Comments are closed.